ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ: ಇಸ್ರೇಲ್ ಕಳೆದುಕೊಂಡ ಅವಕಾಶ

Last Updated 16 ಜೂನ್ 2018, 9:27 IST
ಅಕ್ಷರ ಗಾತ್ರ

ಇಸ್ರೇಲ್, ಪ್ಯಾಲೆಸ್ಟೇನ್ ಜತೆ 1999ರಿಂದ 2010ರವರೆಗೆ ನಡೆಸಿದ ಸಂಧಾನ ಮಾತುಕತೆಗಳ ರಹಸ್ಯ ವಿವರಗಳನ್ನು ಓದಿದಾಗ, ಶಾಂತಿಯುತ ಸಹಬಾಳ್ವೆಯ ಸದವಕಾಶವನ್ನು ಇಸ್ರೇಲ್ ಕಳೆದುಕೊಂಡಿದೆ ಎಂದೇ ನನಗೆ ಭಾಸವಾಯಿತು. ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಶಾರ್ಜಾದಲ್ಲಿ ನಾನು ಇದ್ದಾಗ ಈ ಮಾತುಕತೆಗಳ ವಿವರಗಳು ನನಗೆ ಲಭ್ಯವಾಗಿದ್ದವು.

ಪ್ಯಾಲೆಸ್ಟೇನ್, ತನಗೆ ಸೇರಿದ ಭೂಪ್ರದೇಶವನ್ನು ಏಕಪಕ್ಷೀಯವಾಗಿ ಇಸ್ರೇಲ್ ವಶಕ್ಕೆ ಒಪ್ಪಿಸುವ ನಿರ್ಧಾರಕ್ಕೆ ಬಂದಾಗ ಅರಬ್ ದೇಶಗಳಿಗೆಲ್ಲ ಸಹಜವಾಗಿಯೇ ಆಘಾತ ಉಂಟಾಗಿತ್ತು. ಇಸ್ರೇಲ್, ಪ್ಯಾಲೆಸ್ಟೇನ್ ಜತೆಗಷ್ಟೆ ಅಲ್ಲದೇ, ಒಟ್ಟಾರೆ ಪಶ್ಚಿಮ ಏಷ್ಯಾ ದೇಶಗಳ ಜತೆ ಶಾಂತಿ ಸೌಹಾರ್ದತೆಯಿಂದ ಇರಬಹುದಾದ ಅತಿ ದೊಡ್ಡ ಅವಕಾಶ ಕಳೆದುಕೊಂಡಿದ್ದನ್ನು ಕಂಡು ನನಗೂ ತೀವ್ರ ನಿರಾಶೆಯಾಗಿತ್ತು.

ಕಟ್ಟಾವಾದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಈಗಾಗಲೇ ಸೋತು ಸುಣ್ಣವಾಗಿದೆ ಎಂದು ತಾವು ಭಾವಿಸಿರುವ ಪ್ಯಾಲೆಸ್ಟೇನ್ ಜತೆಗಿನ ಒಪ್ಪಂದವನ್ನು ಅಂತಿಮಗೊಳಿಸಿದ್ದರು. ತಮ್ಮ ರಾಜಕೀಯ ಬದುಕಿನ ಉದ್ದಕ್ಕೂ ಪ್ಯಾಲೆಸ್ಟೇನಿಯನ್ನರ ವಿರುದ್ಧ ದ್ವೇಷ ಸಾಧಿಸುತ್ತಲೇ ಅಧಿಕಾರದ ಮೆಟ್ಟಲು ಏರುತ್ತ ಬಂದಿರುವ ನೇತನ್ಯಾಹು, ತಮ್ಮ ಬದ್ಧ ವೈರಿಗಳ ಜೊತೆ ಸಂಧಾನದ ಹಸ್ತಲಾಘವ ಮಾಡುವ ಸಾಧ್ಯತೆಗಳೇ ಇದ್ದಿರಲಿಲ್ಲ. ಆದರೆ, ಶಾಂತಿಗೆ ಪರ್ಯಾಯವೇ ಇಲ್ಲ ಎಂಬ ಸತ್ಯ, ಸೂರ್ಯನ ಬೆಳಕಿನಷ್ಟೇ ಪ್ರಖರವಾಗಿರುವಾಗ ಅನಿವಾರ್ಯವಾಗಿ ಅವರು ರಾಜಿಗೆ ಮನಸ್ಸು ಮಾಡಿರಬೇಕಷ್ಟೆ.

ಸಂಧಾನಕ್ಕೆ ಮುಂದಾಗದಿದ್ದರೆ, ಇಸ್ರೇಲ್ ದ್ವೇಷದ ಪರಿಸರದಲ್ಲಿಯೇ ರಾಜಿಗೆ ಯಾವತ್ತೂ ಸಿದ್ಧವಿಲ್ಲದ ದೇಶವಾಗಿಯೇ ಇರಬೇಕಾಗಿ ಬರುತ್ತದೆ ಎಂಬ ಕಟು ಸತ್ಯ ನೇತನ್ಯಾಹು ಅವರಿಗೆ ಮನದಟ್ಟಾಗಿರಬೇಕು. ದ್ವೇಷವು ತನ್ನಷ್ಟಕ್ಕೆ ತಾನೇ ಕೊನೆಯಾಗಲಾರದು. ಅಂತಿಮವಾಗಿ ಶಾಂತಿ ನೆಲೆಸಲೇಬೇಕಾಗುತ್ತದೆ.

ಬಂದೂಕು ಅಥವಾ ಹಿಂಸೆ ಯಾವುದೇ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎನ್ನುವ ಸತ್ಯ ಕೊನೆಗೂ ಇಸ್ರೇಲ್‌ಗೆ ಮನವರಿಕೆಯಾದಂತೆ ಕಾಣುತ್ತದೆ.

ತನ್ನ ವಿರುದ್ಧ ತಲೆ ಎತ್ತುವ ಹುಚ್ಚು ಸಾಹಸ ಮಾಡುವ ಯಾವುದೇ ಅರಬ್ ದೇಶವನ್ನು ಸದೆಬಡಿಯುವ ಸಾಮರ್ಥ್ಯ ಇಸ್ರೇಲ್‌ಗೆ ಇದೆ. ಆದರೆ, ಒಂದಲ್ಲ ಒಂದು ದಿನ ಪಶ್ಚಿಮ ಏಷ್ಯಾದ ದೇಶಗಳೆಲ್ಲ ಇಸ್ರೇಲ್ ವಿರುದ್ಧ ಒಂದಾಗಿ ನಿಲ್ಲುವ ಸಾಧ್ಯತೆಗಳೂ ಇದ್ದೇ ಇವೆ.

ಸದ್ಯಕ್ಕೆ ಮಾತ್ರ ಅರಬ್ ದೇಶಗಳ ಮಧ್ಯೆ ಹೊಂದಾಣಿಕೆ ಕಾಣುತ್ತಿಲ್ಲ. ಅತಿ ದೊಡ್ಡ ಗಂಡಾಂತರ ಮತ್ತು ತಮ್ಮ ಅಸ್ತಿತ್ವಕ್ಕೇನೆ ಅಪಾಯ ಒಡ್ಡುವ ದಳ್ಳುರಿ ಎದುರಾದರೆ ಅದನ್ನು ಎದುರಿಸುವ ಸಾಮರ್ಥ್ಯ ಅವುಗಳಲ್ಲಿ ಇದೆ. ಕಾಲ ಅವರ ಪರವಾಗಿಯೇ ಇರಲಿದೆ.

ಮೂರು ದಶಕಗಳ ಹಿಂದೆ ನಾನು ಇಸ್ರೇಲ್‌ಗೆ ಭೇಟಿ ಕೊಟ್ಟಿದ್ದು ನನಗೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ನಾನು ಆಗ ಅರಬ್ ದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದೆ. ಅಲ್ಲಿಯ ಜನರು ಬಿಸಿ ಬಿಸಿ ಕಾಫಿ ಹೀರುತ್ತ, ಪ್ರತಿ ಮಾತಿಗೂ ಅಲ್ಲಾನನ್ನು ಸ್ಮರಿಸುತ್ತ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಇಸ್ರೇಲ್‌ನ ಕೈಯಲ್ಲಿ 1967ರಲ್ಲಿ ಹೀನಾಯ ಸೋಲು ಅನುಭವಿಸಿದ್ದಕ್ಕೆ ಪ್ರತೀಕಾರ ಕೈಗೊಳ್ಳುವ ತೋರಿಕೆಯ ದ್ವೇಷಭಾವವೂ ಅವರಲ್ಲಿ ಕಂಡು ಬರುತ್ತಿರಲಿಲ್ಲ.

ಈಗಲೂ ಅವರು ಹಿಂದಿನ ಸಂಘರ್ಷ ಮರೆತಿಲ್ಲ. ಕೆಲ ವರ್ಷಗಳ ನಂತರ ಅವರಲ್ಲಿಯೂ, ಅದರಲ್ಲಿಯೂ ವಿಶೇಷವಾಗಿ ಈಜಿಪ್ಟ್‌ನಲ್ಲಿ ಯುದ್ಧ ದಾಹ ಕಂಡುಬಂದಿತ್ತು. ಎಂದಿಗೂ ಮುಗಿಯದ ಯುದ್ಧ ನಡೆಯುವ ಸಾಧ್ಯತೆಗಳು ಇವೆ ಎಂದೇ ನನಗೆ ಆ ಹೊತ್ತಿನಲ್ಲಿ ಅನಿಸಿತ್ತು. ಅದೇ ಚಡಪಡಿಕೆಯಿಂದಲೇ ನಾನು ಇಸ್ರೇಲ್‌ಗೆ ಭೇಟಿ ನೀಡಿದ್ದೆ.

ಇಸ್ರೇಲ್ ಜನರ ಮನೋಭಾವ ಹೇಗಿದೆ ಮತ್ತು ಕಿಚ್ಚು ಯಾವ ಮಟ್ಟದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಅವರು ತಮ್ಮ ದೇಶ ಕಟ್ಟಲು ಪರಿಶ್ರಮ ಪಡುತ್ತಿದ್ದ ಪರಿ ನನ್ನ ಮೇಲೆ ಗಾಢ ಪ್ರಭಾವ ಬೀರಿತ್ತು. ಎಲ್ಲರೂ ಒಗ್ಗಟ್ಟಿನಿಂದ ಇರುವ ಅವರ ಧೋರಣೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.

ಟೆಲ್‌ಅವೀವ್‌ನಲ್ಲಿ ಕುಟುಂಬವೊಂದು ನನಗೆ ರಾತ್ರಿ ಊಟಕ್ಕೆ ಆಹ್ವಾನಿಸಿತ್ತು. ಅವರ ಜೊತೆ ಮಾತಿಗೆ ಕುಳಿತಾಗ ನಾನು ನನ್ನ ಭಯ ಮತ್ತು ಆತಂಕಗಳನ್ನು ಹಂಚಿಕೊಂಡಿದ್ದೆ. ಅವರು ನಿದ್ರಿಸುತ್ತಿದ್ದ ತಮ್ಮ ಮುದ್ದು ಮಗುವನ್ನೇ ದಿಟ್ಟಿಸುತ್ತ, ‘ನಾವು ಶಾಂತಿ ನೆಮ್ಮದಿಯಿಂದ ಜೀವಿಸಲು ಬಯಸುತ್ತೇವೆ. ಅವರು (ಅರಬ್) ಈಗಲೂ ನಮ್ಮನ್ನೂ ಬೆದರಿಸುತ್ತಿದ್ದಾರೆ. ಎಲ್ಲ ಯಹೂದಿಗಳನ್ನು ಸಮುದ್ರಕ್ಕೆ ಬೀಸಾಕುವುದಾಗಿ ಹೆದರಿಸುತ್ತಿದ್ದಾರೆ’ ಎಂದು ಹೇಳಿದ್ದರು.

ಅಲ್ಲಿಂದಾಚೆಗೆ ನಾನು ಜೆರುಸಲೇಂ ಮತ್ತು ಗಾಜಾ ಪಟ್ಟಿಯಲ್ಲಿನ ಪ್ಯಾಲೆಸ್ಟೇನಿಯನ್ನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುವೆ. ಅವರ ದಿನನಿತ್ಯದ ಬವಣೆಯನ್ನು ನಾನು ಊಹಿಸಬಲ್ಲೆ. ಮನೆಯ ನೆಮ್ಮದಿ ಮತ್ತು ಹೊರಗಿನ ಅಗ್ನಿಕುಂಡದ ಮಧ್ಯೆಯೇ ಅವರು ಬದುಕುತ್ತಿದ್ದಾರೆ. ತಮಗೂ ತಮ್ಮದೇ ಆದ ಸ್ವಂತ ದೇಶ ಇರಬೇಕು, ಅದರಿಂದ ತಮಗೊಂದು ಪ್ರತ್ಯೇಕ ಅಸ್ತಿತ್ವ ಸಿಗಲಿದೆ ಎನ್ನುವುದು ಅವರ ಮನದ ತುಡಿತವಾಗಿದೆ. ಶಾಂತಿ ಮತ್ತು ಘನತೆಯಿಂದ ಜೀವಿಸಲು ಸ್ವಂತದ ತಾಯ್ನಾಡು ಬೇಕು ಎನ್ನುವುದು ಬಹು ದಿನಗಳ ಕನಸಾಗಿದೆ.

ವಿಶ್ವಸಂಸ್ಥೆಯು 1948ರಲ್ಲಿ ಗುರುತಿಸಿದ ಭೂ ಪ್ರದೇಶದ ಹೊರಗೆ ಯಹೂದಿಗಳ ನೆಲೆಸುವಿಕೆ ಬಗ್ಗೆ ಅವರು ಯಾವತ್ತೂ ಸಂಧಾನಕ್ಕೆ ಮುಂದಾಗುವುದಿಲ್ಲ ಎನ್ನುವುದನ್ನು ನಾನು ಊಹಿಸಬಲ್ಲೆ.

ಆದರೆ, ಅವರ ನಿಲುವಿನಲ್ಲಿ ಇತ್ತೀಚೆಗೆ ಭಾರಿ ಬದಲಾವಣೆ ಆಗಿದೆ. ಇಸ್ರೇಲ್ ತನ್ನ ಮೂಲ ಗಡಿಗೆ ಮರಳಿದ್ದೇ ಆದರೆ, ಇಸ್ರೇಲ್ ದೇಶದ ಅಸ್ತಿತ್ವವನ್ನು ಮಾನ್ಯ ಮಾಡಲು ಅರಬ್ ದೇಶಗಳು ಮುಂದೆ ಬರುವ ಸಾಧ್ಯತೆಗಳಿವೆ.

ಬಹಳ ಹಿಂದಿನಿಂದಲೂ ಯಹೂದಿಗಳ ವಿರುದ್ಧ, ಭಾರತ ಹೊರತುಪಡಿಸಿ ವಿಶ್ವದಾದ್ಯಂತ ತಾರತಮ್ಯ ಧೋರಣೆ ಅನುಸರಿಸುತ್ತಲೇ ಬರಲಾಗಿದೆ. 1990ರಲ್ಲಿ ನಾನು ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದಾಗ, ನನ್ನ ಭೇಟಿಗೆ ಆಗಮಿಸಿದ್ದ ಉನ್ನತ ಮಟ್ಟದ ಯಹೂದಿಗಳ ನಿಯೋಗವು, ಭಾರತದಲ್ಲಿ ತಮ್ಮ ವಿರುದ್ಧ ಯಾವುದೇ ಬಗೆಯ ಪಕ್ಷಪಾತ ಧೋರಣೆ ಇಲ್ಲದಿರುವುದರ ಬಗ್ಗೆ ತನ್ನ ಸಂತಸ ಮತ್ತು ಕೃತಜ್ಞತೆ ವ್ಯಕ್ತಪಡಿಸಿತ್ತು.

ದಿನಗಳು ಉರುಳಿದಂತೆ ಇಸ್ರೇಲ್ ಕೂಡ ಸಾಕಷ್ಟು ಬದಲಾಗಿದೆ. ರಕ್ತ ಮತ್ತು ಮರಳಿನಲ್ಲಿ ಜನ್ಮ ತಳೆದ ಇಸ್ರೇಲ್‌ಗೆ ಪ್ರತ್ಯೇಕ ಭವಿಷ್ಯ ಇದೆ ಎಂದೇ ನನ್ನ ಭಾವನೆ. ಭವಿಷ್ಯದಲ್ಲಿ ಅರಬ್ ದೇಶಗಳಿಗೆಲ್ಲ ತಂತ್ರಜ್ಞಾನ ಮತ್ತು ಆಧುನಿಕ ವಿಜ್ಞಾನದ ನೆರವು ನೀಡುವ ಮೂಲಕ ಅವುಗಳ ಅಭಿವೃದ್ಧಿಗೂ ನೆರವಾಗಬಹುದು.

ಯಾವುದೇ ಒಂದು ದೇಶ ಸದಾ ಕಾಲ ಅಭದ್ರತೆಯ ಭಾವನೆಯಲ್ಲಿ ಸಿಲುಕಿ ಒದ್ದಾಡುವಾಗ, ಅದು ಇತರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುತ್ತದೆ. ಪ್ಯಾಲೆಸ್ಟೇನಿಯನ್ನರ ಬಗ್ಗೆ ಇಸ್ರೇಲ್‌ನಲ್ಲಿ ಇಂತಹದ್ದೇ ಧೋರಣೆ ಕಂಡು ಬರುತ್ತಿದೆ.

ಕಳೆದ ಮೂರು ದಶಕಗಳಿಂದ ನಡೆಯುತ್ತಿರುವ ಶಾಂತಿ - ಸಂಧಾನ ಮಾತುಕತೆಗಳು ವಿಫಲಗೊಳ್ಳುತ್ತಲೇ ಇವೆ. ವಿವಾದ ಇತ್ಯರ್ಥಕ್ಕೆ ಪ್ಯಾಲೆಸ್ಟೇನ್ ಮುಖಂಡ ಮಹಮೌದ್ ಅಬ್ಬಾಸ್ ರಾಜಿಗೆ ಮುಂದಾಗುತ್ತಲೇ ಇದ್ದಾರೆ. ಒಂದು ಕಾಲದಲ್ಲಿ ಭಾರತ, ಇಸ್ರೇಲ್ ಮತ್ತು ಪ್ಯಾಲೆಸ್ಟೇನಿಯನ್ನರ ಮಿತ್ರ ದೇಶವಾಗಿತ್ತು. ಆದರೆ ಈಗ ಉಭಯ ಬಣಗಳಲ್ಲೂ ಭಾರತವನ್ನೂ ಸಂಶಯದಿಂದ ನೋಡಲಾಗುತ್ತಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೂ ಯಹೂದಿಗಳ ಬಗ್ಗೆ ಆತಂಕ ಹೊಂದಿದ್ದಾರೆ. ಎರಡನೇ ಬಾರಿಗೆ ಚುನಾವಣೆಗೆ ನಿಲ್ಲುವ ಸಂದರ್ಭ ಎದುರಾದರೆ ಯಹೂದಿಗಳನ್ನು ಎದುರು ಹಾಕಿಕೊಳ್ಳುವ ಧೈರ್ಯ ಅವರಿಗೆ ಇಲ್ಲ.

ಪ್ಯಾಲೆಸ್ಟೇನಿಯನ್ನರ ಮುಸ್ಲಿಂ ಮೂಲಭೂತವಾದಿ ಬಣವಾಗಿರುವ ಹಮಾಸ್, ಮಹಮೌದ್ ಅಬ್ಬಾಸ್ ಅವರನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ. ಈ ತೀವ್ರ ಪ್ರತಿರೋಧದ ಮಧ್ಯೆಯೂ ಅವರು ತಮ್ಮ ನಿಲುವಿಗೆ ದೃಢವಾಗಿ ಅಂಟಿಕೊಂಡಿದ್ದಾರೆ.

ಅಮೆರಿಕವು, ಶಾಂತಿ ಸಂಧಾನ ಪ್ರಕ್ರಿಯೆಯಲ್ಲಿ ಅಬ್ಬಾಸ್ ಕೈಬಿಟ್ಟ ಎಳೆ ಹಿಡಿದು ಮುಂದುವರೆದರೆ ನಂತರದ ಘಟನೆಗಳು ಫಲಪ್ರದವಾಗುವ ಸಾಧ್ಯತೆಗಳಿವೆ. ನೇತನ್ಯಾಹು ತಮ್ಮ ಬಿಗಿ ಧೋರಣೆ ಸಡಿಲಿಸುವ ಸಾಧ್ಯತೆಗಳು ಕಡಿಮೆ ಇವೆ. 120 ಸಂಸದರ ಬಲ ಇರುವ ಇಸ್ರೇಲ್ ಸಂಸತ್ತಿನಲ್ಲಿ ನೇತನ್ಯಾಹು ಅವರ ಸಮ್ಮಿಶ್ರ ಸರ್ಕಾರದ ಬಹುಮತವು ಈಗ 74ರಿಂದ 66ಕ್ಕೆ ಇಳಿದಿದೆ.

ಇಸ್ರೇಲ್ ಎದುರಿಗೆ ಶಾಂತಿ ಮಂತ್ರ ಜಪಿಸುವುದೊಂದೇ ಇರುವ ಏಕೈಕ ಮಾರ್ಗ ಎಂದು ಭಾವಿಸುವವರು, ಶಾಂತಿ ಮಾತುಕತೆ ಪ್ರಕ್ರಿಯೆ ಮುಂದುವರೆಸಲು ಸಮ್ಮಿಶ್ರ ಸರ್ಕಾರಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಲೂ ಬಯಸಬಹುದು.

ಈಜಿಪ್ಟ್‌ನಲ್ಲಿನ ಸದ್ಯ ಉದ್ಭವಿಸಿರುವ ಅರಾಜಕತೆ ಇಸ್ರೇಲ್ ಪಾಲಿಗೂ ಆತಂಕಕಾರಿ ಬೆಳವಣಿಗೆ. ಟ್ಯುನಿಷಿಯಾದಲ್ಲಿ ಹಳೇ ಸರ್ಕಾರವನ್ನು ಕಿತ್ತೊಗೆದಂತೆ ಮುಸ್ಲಿಂ ಮೂಲಭೂತವಾದಿಗಳ ಕೈ ಮೇಲಾದರೆ, ಪ್ಯಾಲೆಸ್ಟೇನ್ ಮುಂದಿಟ್ಟಿದ್ದ ಶಾಂತಿ ಪ್ರಸ್ತಾವ ಒಪ್ಪಿಕೊಳ್ಳದೇ ಪ್ರಮಾದ ಎಸಗಿರುವುದಕ್ಕೆ ಇಸ್ರೇಲ್ ತುಂಬ ಪಶ್ಚಾತ್ತಾಪ ಪಡಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT