ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರುಖ್ ಫ್ಲ್ಯಾಷ್‌ಬ್ಯಾಕ್

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

`ದೀವಾನಾ' ಸಿನಿಮಾ ಬಿಡುಗಡೆಯಾಗಿ ಕೆಲವು ವಾರಗಳಾಗಿದ್ದವು. ಸಿನಿಮಾ ಗೆದ್ದಿತು. ನಿರ್ಮಾಪಕ, ನಿರ್ದೇಶಕ ಬಂದು ಶಾರುಖ್ ಖಾನ್‌ಗೆ ಐದು ಲಕ್ಷ ರೂಪಾಯಿ ಸಂಭಾವನೆಯ ಚೀಲ ಕೊಟ್ಟರು. ಅದನ್ನು ಕಂಡದ್ದೇ ಶಾರುಖ್ ಆನಂದತುಂದಿಲರಾದರು. ಚೀಲವನ್ನು ತೆಗೆದುಕೊಂಡು ಹೋಗಿ ಹೆಂಡತಿ ಗೌರಿ ಕೈಗಿತ್ತರು.

ತಾವೆಷ್ಟು ಶ್ರೀಮಂತ ಎಂದು ಬೀಗಿದ್ದೇ ಬೀಗಿದ್ದು. ಮಧ್ಯಮವರ್ಗದ ಗೃಹಿಣಿ ಗೌರಿ ಮುಖದಲ್ಲಿ ಅಂಥ ಸಂತೋಷವೇನೂ ಇರಲಿಲ್ಲ. ಬದಲಿಗೆ ಸಣ್ಣ ಅನುಮಾನ. ಅದನ್ನು ಕಂಡಿದ್ದೇ ಶಾರುಖ್‌ಗೆ ಜ್ಞಾನೋದಯವಾಯಿತು. ಹಣ ಸಿಕ್ಕ ಖುಷಿಯಲ್ಲಿ ಸಿನಿಮಾದ ಕತೆ ಏನು ಎಂದೇ ಅವರು ಕೇಳಿರಲಿಲ್ಲ. ತಕ್ಷಣ ಆ ಚೀಲ ಹೊತ್ತು ಅದನ್ನು ಪಡೆದ ಜಾಗಕ್ಕೆ ಬಂದರು. ನಿರ್ದೇಶಕ, ನಿರ್ಮಾಪಕ ಇನ್ನೂ ಅಲ್ಲೇ ಇದ್ದರು. ಶಾರುಖ್ ಆ ಹಣ ಹಿಂದಿರುಗಿಸಿದರು. ಕತೆ ಕೇಳಿದ ಮೇಲೆ ಮತ್ತೆ ಹಣ ಪಡೆಯುವ ಮನಸ್ಸಾಗಲಿಲ್ಲ. ಸಿನಿಮಾಗೆ ಸಹಿ ಹಾಕಲೆಂದು ಮುಂಗಡ ಹಣ ಪಡೆಯುವುದಿಲ್ಲ ಎಂದು ಅವರು ಅಂದು ಮಾಡಿದ ಸಂಕಲ್ಪ ಇಂದೂ ಮುಂದುವರಿದಿದೆ.

ಒಂದೂವರೆ ಸಾವಿರ ರೂಪಾಯಿಯನ್ನು ಜೇಬಲ್ಲಿ ಇಟ್ಟುಕೊಂಡು ಅಭಿನಯದ ಕನಸು ಕಾಣುತ್ತಾ ದೆಹಲಿಯಿಂದ ಮುಂಬೈಗೆ ಎರಡೂವರೆ ದಶಕದ ಹಿಂದೆ ಬಂದಿದ್ದ ಶಾರುಖ್‌ಗೆ ತಮ್ಮ ಬದುಕಿನ ಒಂದೊಂದೂ ದಿನ ನೆನಪಿದೆ. ಅಪ್ಪ ಆಸ್ಪತ್ರೆಗೆ ಸೇರಿದ್ದಾಗ 20 ಇಂಜೆಕ್ಷನ್‌ಗಳನ್ನು ಕೊಡಿಸುವ ಅಗತ್ಯವಿತ್ತು. ಅಷ್ಟು ಹಣ ಇರಲಿಲ್ಲ. ಲಂಡನ್‌ನಲ್ಲಿ ಇದ್ದ ಸಂಬಂಧಿಯೊಬ್ಬರು ಕಳುಹಿಸಿದ ಹಣದಲ್ಲಿ ಕೊಳ್ಳಲು ಆಗಿದ್ದು ಎಂಟು ಇಂಜೆಕ್ಷನ್‌ಗಳನ್ನು ಮಾತ್ರ. ಅಪ್ಪ ಅಗಲಿದಾಗ ಹಣ ಹೊಂದಿಸಲಾಗದ್ದಕ್ಕೆ ಅವರು ತೀರಿಕೊಂಡರೋ ಅಥವಾ ಅವರ ಆಯುಸ್ಸು ಇದ್ದದ್ದೇ ಅಷ್ಟೋ ಎಂಬ ಸಂಗತಿ ಕಾಡಿತ್ತು. ಬಾಡಿಗೆ ಕಟ್ಟಲಾಗದ್ದಕ್ಕೆ ಎರಡು ಸಲ ಶಾರುಖ್ ಬೀದಿಗೆ ಬಿದ್ದ ಅನುಭವ ಇದೆ. ಶಾಲೆಗೆ ಸಕಾಲದಲ್ಲಿ ಶುಲ್ಕ ಕಟ್ಟಲಿಲ್ಲವೆಂದು ನೋಟಿಸ್ ಬಂದಾಗ, ಅಪ್ಪ-ಅಮ್ಮ ಹಾಸಿಗೆಯ ಕೆಳಗೆ ಕೂಡಿಟ್ಟಿದ್ದ ಬಿಲ್ಲೆ ಕಾಸುಗಳನ್ನು ಒಟ್ಟುಮಾಡಿ ಮಗ ಓದಲು ಅನುವು ಮಾಡಿಕೊಟ್ಟ ಸಂದರ್ಭವಿನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ.

ಶಾರುಖ್ ಬಂಗಲೆಯ ಹೆಸರು `ಮನ್ನತ್'. ಅದೀಗ ಪ್ರವಾಸಿ ಕೇಂದ್ರವೂ ಹೌದು. ವಿಶ್ವದ ಕೆಲವು ಪ್ರಮುಖ ನಗರಗಳಲ್ಲಿ ಶಾರುಖ್ ಆಸ್ತಿ ಮಾಡಿದ್ದಾರೆ. ಮಗಳು ರೈಟರ್ ಆಗಲಿ ಎಂದು ಕನಸು ಕಾಣುವ ಅವರಿಗೆ ಅವಳಿಷ್ಟದ ಸಿನಿಮಾಗಳನ್ನು ಮಾಡುವ ಬಯಕೆ. ಮಗನಿಗೆ ಮೆಚ್ಚಾಗದೆ ಇರುವ ಚಿತ್ರವನ್ನು ಯಾಕೆ ಮಾಡಬೇಕು ಎಂಬ ಪ್ರಶ್ನೆಯೂ ಆಗಾಗ ಎದುರಾಗುತ್ತದೆ. ಚಿತ್ರಕ್ಕೆ ಸಹಿ ಹಾಕಿ, ಹಣ ಪಡೆಯುವ ಪರಿಪಾಠ ಬೆಳೆಸಿಕೊಂಡಿದ್ದರೆ ಶಾರುಖ್ ಇನ್ನೂ ಶ್ರೀಮಂತರಾಗುತ್ತಿದ್ದರು ಎಂದು ಅವರ ಆಪ್ತೇಷ್ಟರು ಹೇಳುತ್ತಿರುತ್ತಾರಂತೆ. ಆದರೆ ಶಾರುಖ್ ಪ್ರಕಾರ ಅದು ಸುಳ್ಳು.

`ನಾನು ಸಿನಿಮಾ ರಂಗವನ್ನು ವೃತ್ತಿ ಎಂದು ಭಾವಿಸಿಲ್ಲ. ಅದು ಮನಃತೃಪ್ತಿಯಿಂದ ಅನೂಚಾನವಾಗಿ ನಾನು ಮಾಡಲೇಬೇಕಾದ ಕೆಲಸ. ಹಣ ನನ್ನ ಆದ್ಯತೆ ಅಲ್ಲ. ಎಂದೂ ನಾನು ನನಗೆ ಸಿನಿಮಾ ಕೊಡಿ ಎಂದು ಕೇಳಿದವನಲ್ಲ. ಕೆಲಸ ಮಾಡುತ್ತಾ ಹೋದೆ. ಅದನ್ನು ಕಂಡು ಮೆಚ್ಚಿದವರು ನನ್ನತ್ತ ಬಂದರು. ಆರು ವರ್ಷ ಅಭಿನಯದ ಸಾಣೆಗೆ ಒಡ್ಡಿಕೊಂಡ ಮೇಲೆ ಸುಭಾಷ್ ಘಾಯ್ ನನ್ನನ್ನು ನೆಚ್ಚಿಕೊಂಡು 30 ಕೋಟಿ ರೂಪಾಯಿ ಸುರಿದರು.

ಯಾರೋ ಒಬ್ಬ ದಿಢೀರನೆ ಮೂರು ಕೋಟಿ ಸಂಭಾವನೆಯನ್ನು ನೀಡಲು ಮುಂದಾದಾಗ ನಾನು ಅನುಮಾನಿಸಿ ಅದನ್ನು ಒಪ್ಪಿಕೊಳ್ಳಲಿಲ್ಲ. ಅದು ಈಗಿನ ಮೂವತ್ತು ಕೋಟಿಗೆ ಸಮ. ಸಿನಿಮಾ ನನಗೆ ಬ್ರೆಡ್ ಅಂಡ್ ಬಟರ್ ಅಲ್ಲ. ಅದು ಬದುಕು. ನಟಿಸುತ್ತಲೇ ಸಾಯಬೇಕೆಂಬುದು ನನ್ನ ಬಯಕೆ. ಹೆಂಡತಿ, ಮಕ್ಕಳು ಕೂಡ ಅದನ್ನೇ ಇಷ್ಟಪಡುತ್ತಾರೆ' ಎಂದೆಲ್ಲಾ ಮಾತನಾಡುವ ಶಾರುಖ್ ಸ್ವಭಾವದ ಕುರಿತು ಬಿ-ಟೌನ್‌ನಲ್ಲಿ ಹಲವು ಚರ್ಚೆಗಳಾಗಿವೆ.

`ಥ್ರೀ ಈಡಿಯಟ್ಸ್' ಚಿತ್ರದ ಆಫರನ್ನು ಹಿಂದುಮುಂದೂ ನೋಡದೆ ನಿರಾಕರಿಸಿದ್ದ ಅವರು `ಭಾಗ್ ಮಿಲ್ಖಾ ಭಾಗ್' ಸಿನಿಮಾ ಅವಕಾಶಕ್ಕೂ ಬೆನ್ನುಮಾಡಿದ್ದರು. ಯಶ್ ಚೋಪ್ರಾ ತರಹದ ದಿಗ್ಗಜ ನಿರ್ದೇಶಕರನ್ನು ಕತೆ ಹೇಳುವಂತೆ ಕೇಳಿ ದಂಗುಬಡಿಸಿದ್ದರು.
ಹಳೆಯ ಬದುಕಿನ ಬಡತನದ ಇಂಚಿಂಚನ್ನೂ ಮಕ್ಕಳ ಎದುರು ನೆನಪಿಸಿಕೊಂಡು ಊಟಕ್ಕೆ ಕೂರುವ ಶಾರುಖ್‌ಗೆ ಚಿತ್ರದ ಗೆಲುವು-ಸೋಲಿಗಿಂತ ಬದುಕಿನ ಗೆಲುವು-ಸೋಲು ಮುಖ್ಯವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT