ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಎದುರು ಶವವಿಟ್ಟು ಪ್ರತಿಭಟನೆ

ವಿದ್ಯಾರ್ಥಿ ಮನೀಷ್‌ ಸಾವಿನ ಪ್ರಕರಣ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಲ್ಸನ್‌ಗಾರ್ಡನ್‌ ಸಮೀಪದ ಔಟ್‌ರೀಚ್‌ ಶಾಲೆ ಆವರಣ­ದಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ವಿದ್ಯಾರ್ಥಿ ಮನೀಷ್‌ನ ಕುಟುಂಬ ಸದಸ್ಯರು ಹಾಗೂ  ಇತರೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಎದುರು ಗುರುವಾರ ಶವವಿಟ್ಟು ಪ್ರತಿಭಟನೆ ಮಾಡಿದರು.

ಬೌರಿಂಗ್‌ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮನೀಷ್‌ನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸ­ಲಾಯಿತು. ಬಳಿಕ ಪೋಷಕರು ಆಂಬುಲೆನ್ಸ್‌­ನಲ್ಲಿ ಶಾಲೆಯ ಬಳಿಗೆ ಶವ ತೆಗೆದುಕೊಂಡು ಬಂದು ಪ್ರತಿಭಟನೆ ನಡೆಸಿದರು.

ಮನೀಷ್‌ ಸಾವಿಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಹಿನ್ನೆಲೆ­ಯಲ್ಲಿ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿತ್ತು.

‘ಮನೀಷ್‌ ಮತ್ತೆ ಬದುಕಿ ಬರು­ವುದಿಲ್ಲ. ಆದರೆ, ಈ ರೀತಿಯ ಘಟನೆ­ಗಳು ಮರುಕಳಿಸದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕು. ಇತರೆ ಶಾಲೆಗಳು ಸಹ ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನೀಷ್‌ನ ಚಿಕ್ಕಪ್ಪ ವೆಂಕಟೇಶ್‌ ಹೇಳಿದರು.

ಡಿಸಿಪಿ ಆದೇಶ: ಶಾಲಾ ವಾಹನಗಳನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಯ ಆವರಣದೊಳಗೆ ತೆಗೆದು­ಕೊಂಡು ಹೋಗ­ದಂತೆ ನಗರದ ಪೂರ್ವ ಸಂಚಾರ ವಿಭಾಗದ ಡಿಸಿಪಿ ಎಂ.ಎನ್‌.ಬಾಬು ರಾಜೇಂದ್ರಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

‘ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನ­ದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ’ ಎಂದು ಬಾಬು ರಾಜೇಂದ್ರಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಗಳ ಪ್ರವೇಶದ್ವಾರದಲ್ಲೇ ಮಕ್ಕಳನ್ನು ವಾಹನಕ್ಕೆ ಹತ್ತಿಸಿಕೊಳ್ಳ­ಬೇಕು. ಯಾವುದೇ ಕಾರಣಕ್ಕೂ ಆ ವಾಹನ­ಗಳು ಶಾಲೆಯ ಆವರಣ ಅಥವಾ ಆಟದ ಮೈದಾನ ಪ್ರವೇಶಿಸಲು ಅವಕಾಶ ನೀಡಬಾರದು. ವಾಹನ­ಗಳನ್ನು ಶಾಲೆಯ ಹೊರ ಭಾಗದಲ್ಲೇ ನಿಲ್ಲಿಸಲು ವ್ಯವಸ್ಥೆ ಮಾಡಬೇಕು ಎಂದು ಶಾಲೆಗಳ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿಯವರು ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಆದೇಶಿಸ­ಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT