ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ವೈ. ಸಂಪಂಗಿಗೆ ನ್ಯಾಯಾಂಗ ಬಂಧನ

Last Updated 28 ಅಕ್ಟೋಬರ್ 2011, 11:15 IST
ಅಕ್ಷರ ಗಾತ್ರ

ಬೆಂಗಳೂರು:  ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಉದ್ಯಮಿ ಹುಸೇನ್ ಮೊಯಿನ್ ಫರೂಕ್ ಅವರಿಂದ 2009ರಲ್ಲಿ ಶಾಸಕರ ಭವನದಲ್ಲಿ ಲಂಚ ಪಡೆದು, ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರ ಜಾಮೀನನ್ನು ಶುಕ್ರವಾರ ರದ್ದುಪಡಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿಯುವ ವರೆಗೂ ಸಂಪಂಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ನಂತರ ಸಂಪಂಗಿ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ಫರೂಕ್ ಅವರು ತಾವು ನೀಡಿರುವ ದೂರಿನ ಅನ್ವಯ ಸಂಪಂಗಿ ಅವರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ, ತಮಗೆ ಸಂಪಂಗಿ ಅವರಿಂದ ಜೀವ ಬೆದರಿಕೆ ಇದೆ.ಆದ್ದರಿಂದ ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಲೋಕಾಯುಕ್ತರು ವಿಶೇಷ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಫರೂಕ್ ಅವರು ಈ ಕುರಿತು ಹೈಕೋರ್ಟ್ ಗೆ ಮೋರೆ ಹೋಗಿದ್ದರಲ್ಲದೇ, ತಮ್ಮ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿ ಸೇರಿದಂತೆ  ಸುಪ್ರೀಂ ಕೋರ್ಟ್, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ರಿಜಿಸ್ಟ್ರಾರ್ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಧೀಶರುಗಳಿಗೆ ಮನವಿ ಸಲ್ಲಿಸಿದ್ದರು.


ಪ್ರಕರಣದ ವಿವರ: ತಾವು ಕೆಜಿಎಫ್‌ನಲ್ಲಿ ಹೊಂದಿರುವ ನಿವೇಶನವನ್ನು ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರು ದಾಖಲಿಸಲು ಫರೂಕ್ ಅಂಡರ್‌ಸನ್ ಪೇಟೆ ಠಾಣೆಗೆ ಹೋಗಿದ್ದರು. ಕೆಜಿಎಫ್ ಎಸ್‌ಪಿಯವರ ಆದೇಶದ ಮೇರೆಗೆ ಈ ದೂರನ್ನು ಪೊಲೀಸರು ಸ್ವೀಕರಿಸಿದ್ದರು. ಬಳಿಕ ಫರೂಕ್ ವಿರುದ್ಧವೇ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು.

ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಯಾರನ್ನೂ ಬಂಧಿಸಿರಲಿಲ್ಲ. ಇತ್ಯರ್ಥಕ್ಕೆ ಸಂಪಂಗಿ ಅವರನ್ನು ಸಂಪರ್ಕಿಸುವಂತೆ ಅಲ್ಲಿನ ಇನ್ಸ್‌ಪೆಕ್ಟರ್ ಸೂಚನೆ ಮೇರೆಗೆ ಫರೂಕ್ ಅವರ ಬಳಿ ಹೋಗಿದ್ದರು.

ಮೊಬೈಲ್‌ನಲ್ಲಿ ರೆಕಾರ್ಡ್: ‘ನಿಮ್ಮ ವಿರುದ್ಧದ ಮೊಕದ್ದಮೆ ಬಗೆಹರಿಸಬೇಕಾದರೆ 5 ಲಕ್ಷ ರೂಪಾಯಿ ನೀಡಿ. ಹಾಗಾದರೆ ನಾನು ನಿಮಗೆ ತೊಂದರೆ ಕೊಡದಂತೆ ಪೊಲೀಸರಿಗೆ ಹೇಳುತ್ತೇನೆ’ ಎಂದು ಸಂಪಂಗಿ ಭೇಟಿಯ ಸಮಯದಲ್ಲಿ ಒತ್ತಾಯಿಸಿದ್ದನ್ನು ಫರೂಕ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.

ಇದನ್ನು ಅರಿತ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತ ಅವರು ತಮ್ಮೆದುರೇ ಫರೂಕ್ ಅವರಿಂದ ಶಾಸಕರಿಗೆ ದೂರವಾಣಿ ಕರೆ ಮಾಡಿಸಿದ್ದರು. ‘ನನ್ನ ಬಳಿ ಐದು ಲಕ್ಷ ಹಣವಿಲ್ಲ. ರೂ 50 ಸಾವಿರ ಮಾತ್ರ ಇದೆ’ ಎಂದು ಫರೂಕ್ ಹೇಳಿದ್ದರು.

‘ಬಾಕಿ 4.5 ಲಕ್ಷ ರೂಪಾಯಿ ಮೊತ್ತಕ್ಕೆ ಚೆಕ್ ನೀಡು’ ಎಂದು ಸಂಪಂಗಿ ಸೂಚಿಸಿದ್ದರು. ಬಳಿಕ ಶಾಸಕರ ಭವನದಲ್ಲಿರುವ ತಮ್ಮ ಕೊಠಡಿಗೆ ಹಣದೊಂದಿಗೆ ಬರುವಂತೆ ಹೇಳಿದ್ದ ಅವರು ಸಾಕ್ಷಿ ಸಹಿತ ಸಿಕ್ಕಿಬಿದ್ದಿದ್ದರು ಎಂಬುದು ಅವರ ವಿರುದ್ಧದ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT