ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕಿಯರ ಜಗಳ: ಗ್ರಾಮಸ್ಥರ ಪ್ರತಿಭಟನೆ

Last Updated 1 ಜೂನ್ 2013, 11:10 IST
ಅಕ್ಷರ ಗಾತ್ರ

ಗುಬ್ಬಿ: ಶಿಕ್ಷಕಿಯರಿಬ್ಬರ ಹಲ ದಿನಗಳ ಒಳಜಗಳ ಪಾಠ ಪ್ರವಚನಕ್ಕೆ ಅಡ್ಡಿಯಾಗಿದ್ದು, ಶಾಲಾ ಆರಂಭೋತ್ಸವ ದಿನವು ಗ್ರಾಮಸ್ಥರಿಂದ ಪ್ರತಿಭಟನೆಗೆ ನಾಂದಿಯಾದ ಘಟನೆ ತಾಲ್ಲೂಕಿನ ಗಡಿಭಾಗದ ಹರೇನಹಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಘಟಿಸಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಳ್ಳಿ ಮತ್ತು ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ಮಾರ್ಗದಲ್ಲಿ ಹಾದು ಹೋದರೆ ಕಣ್ಣಂಚಿನ ದೂರದಲ್ಲಿರುವ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಎದುರಿಗೆ ಶಿಕ್ಷಕಿಯರಿಬ್ಬರ ಒಳ ಜಗಳ ಮಕ್ಕಳ ಎದುರಲ್ಲೇ ರಂಪಾಟವಾಯಿತು.

ಹಬ್ಬದ ವಾತಾವರಣದಲ್ಲಿ ಶಾಲೆಗಳನ್ನು ಆರಂಭಿಸಿ ಎಂದು ಸರ್ಕಾರ ಸುತ್ತೋಲೆ ಜಾರಿಗೆ ತಂದಿದೆ. ಎಲ್ಲೆಡೆ ಶಾಲೆಗಳು ಸಮವಸ್ತ್ರ, ಪುಸ್ತಕ ವಿತರಣೆ, ಅಕ್ಷರ ದಾಸೋಹಕ್ಕೆ ಚಾಲನೆ ನೀಡುತ್ತಿದ್ದರೆ ಇತ್ತ ಹರೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಮುಖ್ಯ ಶಿಕ್ಷಕಿ ಮತ್ತು ಸಹಶಿಕ್ಷಕಿಯರಿಬ್ಬರನ್ನು ಬದಲಾಯಿಸಿ ಎಂದು ಪ್ರತಿಭಟಿಸಿದರು.

22 ವಿದ್ಯಾರ್ಥಿಗಳಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದು ವರ್ಷದಿಂದಲೂ ನಡೆಯುತ್ತಿದ್ದ ಶೀತಲ ಸಮರ ಮಕ್ಕಳ ಮತ್ತು ಗ್ರಾಮಸ್ಥರ ಎದುರಲ್ಲಿ ಅನಾವರಣಗೊಂಡಿದೆ. ಕಳೆದ ಹಲ ತಿಂಗಳಿನಿಂದ ಸಣ್ಣಪುಟ್ಟ ವಿಷಯಕ್ಕೆ ಜಗಳ ನಡೆದು ಶೈಕ್ಷಣಿಕ ವಿಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಖಾಸಗಿ ಶಾಲೆ ಮತ್ತು ಬೇರೊಂದು ಊರಿನ ಶಾಲೆಗಳಿಗೆ ಈಗಾಗಲೇ ದಾಖಲಿಸಲು ಪ್ರಯತ್ನಿಸಿದ್ದರು. ಆದರೆ ಬಡವರು ಸರ್ಕಾರಿ ಶಾಲೆ ಮೊರೆ ಹೋಗೋಣ ಎಂದರೆ ಶಿಕ್ಷಕಿಯರಿಬ್ಬರ ಜಗಳ. ಇದನ್ನು ಇಲ್ಲಿಗೆ ಬಿಟ್ಟರೆ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಇಬ್ಬರು ಶಿಕ್ಷಕಿಯರನ್ನು ಅಮಾನತು ಅಥವಾ ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಗಣಿಗಾರಿಕೆಯಿಂದ ಮಕ್ಕಳು ಈಗಾಗಲೇ ಮದ್ಯಪಾನ ಮತ್ತು ಮಾದಕ ಚಟಗಳಿಗೆ ಬಲಿಯಾಗಿ ಶಾಲೆ ಬಿಡುತ್ತಿದ್ದು, ಅಧಿಕಾರಿಗಳು ಗಡಿ ಶಾಲೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಈ ರೀತಿಯ ಶಿಕ್ಷಕಿಯರು ಯಾವ ಮಕ್ಕಳಿಗೂ ಸಿಗಬಾರದು ಎಂದು ಶಪಿಸಿದರು.

ಸ್ಥಳಕ್ಕೆ ಆಗಮಿಸಿದ ಬಿಇಒ ಪಿ.ಬಿ.ಬಸವರಾಜು ಮಕ್ಕಳ ಹಾಜರಾತಿ ಇದ್ದು, ಶಾಲಾ ಆರಂಭದ ದಿನ ಸಲ್ಲದ ಕಾರಣ ಮುಂದಿಟ್ಟುಕೊಂಡು ಕಿತ್ತಾಟ ನಡೆಸಿದ ಶಿಕ್ಷಕಿಯರ ವಿರುದ್ಧ ಈ ಕೂಡಲೇ ಕ್ರಮ ಜರುಗಿಸುವುದಾಗಿ ತಿಳಿಸಿದರು. ಈ ಸಂದರ್ಭ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT