ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವಿರೋಧಿ ಸರ್ಕಾರ: ನವೀನ್‌ಕುಮಾರ್‌ಟೀಕೆ

Last Updated 21 ಜನವರಿ 2011, 9:05 IST
ಅಕ್ಷರ ಗಾತ್ರ

ಬಳ್ಳಾರಿ: ‘ಯುವಜನರನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಬೇಕಾದರೆ ಅವರಿಗೆ ಅಗತ್ಯವಿರುವ ಶಿಕ್ಷಣ ಒದಗಿಸುವುದು ಜವಾಬ್ದಾರಿಯುತ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ, ಶಿಕ್ಷಣ ವಿರೋಧಿಯಾಗಿ ವರ್ತಿಸುತ್ತಿವೆ’ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್ ಆಪಾದಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಈ ಕಾರಣಕ್ಕಾಗಿಯೇ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮ್ರಾಜ್ಯಶಾಹಿ ಹಾಗೂ ಬಂಡವಾಳ ಶಾಹಿಗಳ ಪರ ಶಿಕ್ಷಣ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದು ದೂರಿದರು.

‘ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಎಲ್ಲ ಹಂತದ ಪ್ರವೇಶ ಶುಲ್ಕವನ್ನು ಹೆಚ್ಚಿಸಿರುವ ಕ್ರಮ ಕೈಬಿಡಬೇಕು. ರಾಜ್ಯ ಮುಂಗಡ ಪತ್ರದಲ್ಲಿ ಶಿಕ್ಷಣಕ್ಕೆ ಶೇ.30ರಷ್ಟು ಹಣ ಮೀಸಲಿಡಬೇಕು. ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ, ಹೆಚ್ಚಿಸಬೇಕು. ಬಸ್‌ಪಾಸ್ ದರ ಶೇ.40ರಷ್ಟು ಹೆಚ್ಚಿಸಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಹಣ ಐದಾರು ತಿಂಗಳಾದರೂ ಮರುಪಾವತಿ ಮಾಡಿಲ್ಲ, ಕೂಡಲೇ ಮರುಪಾವತಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆಯನ್ನು ಕೇರಳ ಮಾದರಿಯಲ್ಲಿ ತಿಂಗಳಿಗೆ ರೂ.1500 ಹೆಚ್ಚಿಸಬೇಕು. ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ಶಿಕ್ಷಕ ಮತ್ತು ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು. ಅಗತ್ಯ ಇರುವ ಕಡೆ ಸರ್ಕಾರಿ ಶಾಲಾ-ಕಾಲೇಜುಗಳನ್ನು ಸ್ಥಾಪಿಸಬೇಕು’ ಎಂದು ಅವರು ಆಗ್ರಹಿಸಿದರು.

ರಾಜ್ಯ ಘಟಕದ ಕಾರ್ಯದರ್ಶಿ ಅನಂತ್ ನಾಯಕ್, ಉಪಾಧ್ಯಕ್ಷ ಹುಳ್ಳಿ ಉಮೇಶ್, ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ್ ಚೌಹಾಣ್, ಅಧ್ಯಕ್ಷ ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT