ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣವೆಂದರೆ ಬರೀ ಅಕ್ಷರ ಕಲಿಕೆ ಅಲ್ಲ- ಡಾ.ಜಾಮದಾರ

Last Updated 28 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಶಿಕ್ಷಣವೆಂದರೆ ಬರೀ ಅಕ್ಷರ ಕಲಿಯುವುದು ಅಷ್ಟೇಅಲ್ಲ. ಇದಲ್ಲದೆ ಮೌಲೀಕ ಶಿಕ್ಷಣವೆಂದರೆ ಧಾರ್ಮಿಕ ಶಿಕ್ಷಣ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿ ಮೂಡಿದೆ ಎಂದು ರಾಜ್ಯ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿಗಳಾದ ಡಾ.ಶಿವಾನಂದ ಎಂ.ಜಾಮದಾರ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನದ 18 ನೇ ದಿನವಾದ ಭಾನುವಾರ ಹಮ್ಮಿಕೊಂಡ ಶೈಕ್ಷಣಿಕ ಚಿಂತನಗೋಷ್ಠಿ ಮತ್ತು ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪಾಶ್ಚಿಮಾತ್ಯ ರಾಷ್ಟ್ರಗಳ ಮತ್ತು ನಮ್ಮ ಶಿಕ್ಷಣಕ್ಕೆ ಅಜಗಜಾಂತರ ಅಂತರವಿದೆ. ತಾವು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದು ಹಲವಾರು ದೇಶಗಳ ವಿದ್ಯಾ ಸಂಸ್ಥೆಗಳಿಗೆ ಭೇಟಿ ಕೊಟ್ಟಿದ್ದೇನೆ. ನಮ್ಮಲ್ಲಿನ ಶಿಕ್ಷಣ ಅಲ್ಲಿನಂತೆ ಸುಧಾರಣೆಯಾಗಲು ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಶಾಶ್ವತವಾದ ಜೀವನ ಮೌಲ್ಯಗಳ ಬಗ್ಗೆ ಹೇಳಿಕೊಟ್ಟು ಅವರನ್ನು ಸರ್ವರೀತಿಯಿಂದ ಸದೃಢರನ್ನಾಗಿಸಬೇಕು. ಸಕಲ ಸೌಕರ್ಯ ಒದಗಿಸಿ ಪರಿಪೂರ್ಣ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದರು. ಅಭಿವೃದ್ಧಿ ಮಂಡಳಿಯಿಂದ ಇಲ್ಲಿ ಆರಂಭಿಸಲಾದ ಗ್ರಂಥಾಲಯದಲ್ಲಿ ಮೌಲೀಕ ಗ್ರಂಥಗಳ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಿಷಯಗಳ ಪುಸ್ತಕಗಳನ್ನು ಸಹ ಇಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ ಸಿಬಿಎಸ್‌ಸಿ ಶಾಲೆ ಆರಂಭಿಸುವುದು ದೊಡ್ಡ ಕೆಲಸವಲ್ಲ. ಶಾಲೆಯಲ್ಲಿ ಉನ್ನತ ಶಿಕ್ಷಣ ಪಡೆದ ಶಿಕ್ಷಕರನ್ನು ನೇಮಿಸಬೇಕು ಎಂದರು. ಬೇರೆ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಲು ಒತ್ತಾಯಿಸುವ ಬದಲು ನಾವೇ ದೊಡ್ಡ ವಿದ್ಯಾಸಂಸ್ಥೆ ಸ್ಥಾಪಿಸುವುದು ಒಳಿತು ಎಂದರು.

ವಿಜಾಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಶಂಕುಸ್ಥಾಪನೆ ನೆರವೆರಿಸಿದರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಮುಚಳಂಬ ಪ್ರಣವಾನಂದ ಸ್ವಾಮಿ, ನಿಜಗುಣಾನಂದ ಸ್ವಾಮಿ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ಉಪಸ್ಥಿತರಿದ್ದರು. ಪ್ರೊ.ವಿಜಯಲಕ್ಷ್ಮಿ ಗಡ್ಡೆ ಸ್ವಾಗತಿಸಿದರು. ವಿಶ್ವನಾಥ ಮುಕ್ತಾ ನಿರೂಪಿಸಿದರು. ಸೂರ್ಯಕಾಂತ ಶೀಲವಂತ ವಂದಿಸಿದರು. ಸಾವಿರಾರು ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT