ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಶಾಲೆ: ಮಕ್ಕಳ ಆತಂಕ

Last Updated 5 ಜುಲೈ 2012, 8:05 IST
ಅಕ್ಷರ ಗಾತ್ರ

ಯಲಬುರ್ಗಾ:  ಮಕ್ಕಳ ಶಿಕ್ಷಣ ಹಕ್ಕು ಅನುಷ್ಠಾನ, 6ರಿಂದ 14ವರ್ಷ ವಯೋಮಾನದ ಮಕ್ಕಳಿಗೆ ಕಡ್ಡಾಯ ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಒಂದಲ್ಲ, ಎರಡಲ್ಲ, ಹತ್ತು ಹಲವು.

ಆದರೆ ತಾಲ್ಲೂಕಿನ ಚಿಕ್ಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ ಬಹುತೇಕ ಯಾವೊಂದು ಯೋಜನೆಗಳು ಇಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ, ಬದಲಾಗಿ ಅವುಗಳು ಬರೀ ಕಾಗದದಲ್ಲಿ ಮಾತ್ರ ಜಾರಿಗೊಂಡಿವೆ ಎಂಬುದು ಮಾತ್ರ ಸ್ಪಷ್ಟವಾಗುತ್ತದೆ.

ಹೌದು!, ಹೊರ ನೋಟದಲ್ಲಿ ಉತ್ತಮ ಶಾಲೆ ಎಂದು ಕಾಣಿಸಿಕೊಳ್ಳುತ್ತಿದ್ದರೂ ಒಳಗಡೆ ಮಾತ್ರ ಯಾವುದು ಸರಿಯಲ್ಲ ಎಂಬುದು ಎದ್ದು ಕಾಣುತ್ತವೆ. ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅವಲೋಕಿಸಿದರೆ ಮಕ್ಕಳು ನಿತ್ಯ ತೊಂದರೆ ಅನುಭವಿಸುವುದರ   ಜೊತೆಗೆ ಆತಂಕದಲ್ಲಿಯೇ ಕಾಲ ಕಳೆಯುತ್ತಿರುವುದು ಕಂಡು               ಬರುತ್ತದೆ.

ಮಕ್ಕಳ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕ, ಹೆಚ್ಚುವರಿ ಕೊಠಡಿಗಳ ಮಂಜೂರು, ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ನೀರು ಶುದ್ಧೀಕರಣ ಯಂತ್ರ ವಿತರಣೆ, ಅಲ್ಲದೇ ಪಂಚ ಸೌಲಭ್ಯಗಳ ಅಡಿಯಲ್ಲಿ ಪೀಠೋಪಕರಣ ವಿತರಣೆ ಹೀಗೆ ಮಕ್ಕಳ ಕಲಿಕೆಗೆ   ಯಾವುದೇ ರೀತಿ ತೊಂದರೆ ಯಾಗದಿರಲಿ ಹಾಗೂ ಅಭ್ಯಾಸಕ್ಕೆ ವ್ಯತಿರಿಕ್ತ ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಲೇ ಇದೆ.

 ಆದರೆ ಶಾಲೆಗಳಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಎಷ್ಟರ ಮಟ್ಟಿಗೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬಲ್ಲರು, ಇಂತಹ ವಾತಾವರಣದ ನಡುವೆ ಮಕ್ಕಳು ಎಷ್ಟರ ಮಟ್ಟಿಗೆ ಉತ್ತಮ ಕಲಿಕಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಹೀಗೆ ಗ್ರಾಮಸ್ಥರಲ್ಲಿ ಹಲವು ಯಕ್ಷ ಪ್ರಶ್ನೆಗಳಿಗೆ ಮೂಡಲಾರಂಭಿಸಿವೆ.

ಶಾಲಾ ಉಸ್ತುವಾರಿಯ ನೆಪದಲ್ಲಿಯೇ ಹೊತ್ತು ಕಳೆಯುವ ಇಲ್ಲಿಯ ಕೆಲ ಶಿಕ್ಷಕರು ಇದ್ದು ಇಲ್ಲದಂತಿದ್ದಾರೆ. ಕೊಠಡಿಗಳ ಕೊರತೆ ಜೊತೆಗೆ ಲಭ್ಯವಿರುವ ಕೊಠಡಿಯ ಬಹುಭಾಗ ಬಿರುಕು ಕಾಣಸಿಕೊಂಡು ಮಕ್ಕಳಲ್ಲಿ ಆಂತಕಕ್ಕೆ ಕಾರಣವಾಗಿದೆ.

 ನೀರು ಶುದ್ದೀಕರಣ ಯಂತ್ರವನ್ನು ಬಳಕೆ ಮಾಡಿಕೊಳ್ಳದೇ ಮೂಲೆ ಸೇರಿಸುವ ಮೂಲಕ ಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ.ಮಕ್ಕಳು ಕುಳಿತುಕೊಳ್ಳುವ ಆಸನಗಳು ಹಾಗೂ ಇನ್ನಿತರ ಪೀಠೋಪಕರಣಗಳು ಸಂಪೂರ್ಣ ಹಾಳಾಗಿದ್ದು, ಕುಳಿತುಕೊಳ್ಳುವ ಭಾಗ ನಗ್ಗಿ ತುಂಡಾಗಿದ್ದರೂ ಅದಕ್ಕೆ ಕಲ್ಲು, ಇಟ್ಟಿಗೆಗಳ ಆಧಾರವಾಗಿಟ್ಟುಕೊಂಡು ಅಂತಹದರಲ್ಲಿಯೇ ಕುಳಿತು ಪಾಠ ಕೇಳುವ ಅನಿವಾರ್ಯ ಪರಿಸ್ಥಿತಿ ಮಕ್ಕಳಿಗೆ ಬಂದೊದಗಿದೆ ಎಂದು ಪಾಲಕರು ಬೇಸರ      ವ್ಯಕ್ತಪಡಿಸಿದ್ದಾರೆ.

ಶಾಲೆಯ ಆವರಣದಲ್ಲಿಯೂ ಕೂಡಾ ಮಕ್ಕಳಿಗೆ ಆಟೋಟಕ್ಕೆ ಸರಿಯಾದ ಜಾಗ ಇಲ್ಲದಾಗಿದೆ. ಶೌಚಾಲಯ ನಿರ್ಮಾಣಗೊಂಡಿದ್ದರೂ ಕೇವಲ ಹೆಸರಿಗೆ ಮಾತ್ರ ಇದ್ದಂತಿದೆ. ಹೀಗೆ ಇದ್ದು ಇಲ್ಲದಂತಿರುವ ಈ ಚಿಕ್ಕೊಪ್ಪ ಗ್ರಾಮದ ಶಾಲೆ ಕಾಯಕಲ್ಪಕ್ಕೆ ಎದುರು             ನೋಡುತ್ತಿದೆ.

 ಶಾಲೆಯ ಹಾಗೂ ಮಕ್ಕಳ ಅಭಿವೃದ್ಧಿ ಬಗ್ಗೆ ಚಿಂತಿಸುವ, ವಾತಾವರಣವನ್ನು ಉತ್ತಮಗೊಳಿಸುವ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉತ್ತಮ                ಶಿಕ್ಷಕ ವೃಂದ ಹಾಗೂ ಒಳ್ಳೆಯ ಪೀಠೋಪಕರಣಗಳನ್ನು ಶಾಲೆಗೆ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು    ಆಗ್ರಹಿಸಿದ್ದಾರೆ.

ಇದೇ ಜುಲೈ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಆಚರಣೆಗೊಳ್ಳುವ `ಶಾಲೆಗಾಗಿ ನಾವು ನೀವು~ ಎಂಬ ಮಹತ್ವದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ತಂಡ ಸದ್ರಿ ಶಾಲೆ ಎಷ್ಟರ ಮಟ್ಟಿಗೆ ಮೌಲ್ಯಮಾಪನಕ್ಕೆ ಒಳಪಡಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT