ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮೂಲ್‌ನಲ್ಲಿ ಹಾಲಿಗೆ ಬರ!

Last Updated 19 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ (ಶಿಮೂಲ್)ದಲ್ಲೂ ಹಾಲಿಗೆ ಬರ!?ಕಳೆದ ಕೆಲದಿನಗಳಿಂದ ಶಿಮೂಲ್‌ಗೆ ಸರಾಗವಾಗಿ ಹಾಲು ಹರಿದು ಬರುತ್ತಿಲ್ಲ. ಪರಿಣಾಮ ಮಾರುಕಟ್ಟೆಯಲ್ಲಿ ನಂದಿನಿಯ ‘ಸ್ಟ್ಯಾಂಡರ್ಡ್’ (ಶೇ. 4.5 ಫ್ಯಾಟ್ ಹೊಂದಿದ ಹಾಲು) ಹಾಲಿಗೆ ಹಾಹಾಕಾರ ಉಂಟಾಗಿದೆ. ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ಶಿಮೂಲ್‌ಗೆ ಸರಾಸರಿ2 ಲಕ್ಷ ಲೀ. ಹಾಲು ಹರಿದು ಬರುತ್ತದೆ. ಆದರೆ, ಕಳೆದ ಒಂದು ತಿಂಗಳಿಂದ ಇದು ಕೇವಲ 1.75 ಲಕ್ಷ ಲೀ.ಗೆ ಕುಸಿದಿದೆ. ಇದರಿಂದ ‘ಸ್ಟ್ಯಾಂಡರ್ಡ್’ ಹಾಲಿಗೆ ಬೇಕಾಗುವಷ್ಟು ಕೆನೆ ಸಂಗ್ರಹವಾಗುತ್ತಿಲ್ಲ. ಹಾಗಾಗಿ, ಒಕ್ಕೂಟ ವ್ಯಾಪ್ತಿಯ ಸ್ಟ್ಯಾಂಡರ್ಡ್ ಹಾಲು ಈಗ ಗ್ರಾಹಕರಿಗೆ ಅಪರೂಪ. ಇದೇ ಕಾರಣಕ್ಕೆ ‘ಎಫ್‌ಸಿಎಂ’ (ಕೆನೆಭರಿತ ಹಾಲು) ಹಾಲಿನ ಪೂರೈಕೆಯನ್ನು ವರ್ಷದ ಹಿಂದೆಯೇ ಸ್ಥಗಿತಗೊಳಿಸಲಾಗಿದೆ.

ಪೂರೈಕೆಯಲ್ಲಿ ಕುಸಿತ: ಕಳೆದ ಒಂದು ವಾರದಿಂದ ಸ್ಟ್ಯಾಂಡರ್ಡ್ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಆಗಿದೆ. ಪ್ರತಿದಿನ ಶಿಮೂಲ್‌ನಿಂದ 1.64 ಲಕ್ಷ ಲೀ. ಹಾಲು ಮಾರುಕಟ್ಟೆಗೆ ಬರುತ್ತದೆ. ಇದರಲ್ಲಿ ಶೇ. 40ರಷ್ಟು ಅಂದರೆ 50ರಿಂದ 60ಸಾವಿರ ಲೀ. ‘ಸ್ಟ್ಯಾಂಡರ್ಡ್’ ಹಾಲು. ಇದರ ಅರ್ಧದಷ್ಟೂ ಈಗಪೂರೈಕೆಯಾಗುತ್ತಿಲ್ಲ!
ಹಳ್ಳಿಗಳಿಂದ ಬರುವ ಹಾಲಿನಲ್ಲಿ ನಿರೀಕ್ಷಿತ ಪ್ರಮಾಣದ ಕೆನೆ (ಫ್ಯಾಟ್) ಅಂಶ ಇರುವುದಿಲ್ಲ. ಹಾಗಾಗಿ, ಸ್ಟ್ಯಾಂಡರ್ಡ್ ಹಾಲಿಗೆ ಹೆಚ್ಚುವರಿ ಹಾಲು ಬೇಕಾಗುತ್ತದೆ. ಈ ಮಧ್ಯೆ ಹಾಲು ಪೂರೈಕೆ ಕಡಿಮೆಯಾಗಿರುವುದರಿಂದ ಒಂದು ವಾರದಿಂದ ಕೊರತೆ ಉಂಟಾಗಿದೆ ಎನ್ನುತ್ತಾರೆ ಶಿಮೂಲ್ ಮಾರುಕಟ್ಟೆ ವಿಭಾಗದ ಅಧಿಕಾರಿಗಳು.ಪ್ರೋತ್ಸಾಹಧನದ ಜತೆಗೆ, ಈಚೆಗೆ ಹಾಲಿನ ದರ ಹೆಚ್ಚಿಸಿದರೂ ಹಾಲಿನ ಪೂರೈಕೆಯಲ್ಲಿ ಖೋತಾ ಆಗಲು ಹಲವು ಕಾರಣಗಳಿವೆ. ಕಾರ್ಮಿಕರ ಕೊರತೆಯಿಂದ ರೈತರು ಹೈನುಗಾರಿಕೆಗೆ ಹಿಂದೇಟು ಹಾಕುತ್ತಿರುವುದು, ಚಳಿಗಾಲ, ಹವಾಮಾನ ವೈಪರೀತ್ಯ ಆಗುತ್ತಿರುವುದರಿಂದ ಸಾಮಾನ್ಯವಾಗಿ ಹಾಲಿನ ಪೂರೈಕೆ ಕಡಿಮೆ. ಜತೆಗೆ ಕಳೆದೆರಡು ತಿಂಗಳಲ್ಲಿ ಸಮಾರಂಭಗಳೂ ಹೆಚ್ಚಾಗಿದ್ದರಿಂದ ಬೇಡಿಕೆಯೂ ಹೆಚ್ಚಾಗಿದೆ ಎಂದು ಅವರು ಸಮಜಾಯಿಷಿ ನೀಡುತ್ತಾರೆ.

ಪ್ರೋತ್ಸಾಹಧನ ಬಾಕಿ:  2 ಪ್ರೋತ್ಸಾಹಧನ ಇದೆ. ಆದರೆ, ಅದು ಹೆಸರಿಗೆ ಮಾತ್ರ. ಕಳೆದ ಮೂರು ತಿಂಗಳಿಂದ ಸರ್ಕಾರದಿಂದ ಪ್ರೋತ್ಸಾಹಧನ ಬಂದಿಲ್ಲ. ಹೀಗಾದರೆ, ಹೈನುಗಾರಿಕೆ ನಿರ್ವಹಣೆ ಹೇಗೆ? ಎಂಬುದು ಹೈನುಗಾರರ ಪ್ರಶ್ನೆ. ಈ ಮಧ್ಯೆ ಕಾರ್ಮಿಕರ ಸಮಸ್ಯೆ, ಮೇವಿನ ಕೊರತೆ ಇರುವುದರಿಂದ ಹೈನುಗಾರಿಕೆ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಕುಂಸಿಯ ರೈತ ವಾಗೇಶಪ್ಪ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳ ಪ್ರೋತ್ಸಾಹಧನಸರ್ಕಾರದಿಂದ ಬರಬೇಕಿದೆ. ಇದರ ಒಟ್ಟಾರೆ ಮೊತ್ತ ಅಂದಾಜು 4.5 ಕೋಟಿ ಆಗುತ್ತದೆ. ಸರ್ಕಾರಿ ಮಟ್ಟದಲ್ಲಿ ಸ್ವಲ್ಪ ವಿಳಂಬವಾಗುವುದು ಸಹಜ. ಶೀಘ್ರದಲ್ಲಿಯೇ ಹಣ ಬಿಡುಗಡೆಯಾಗಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT