ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದ ಮಾಯಾಲೋಕದಲ್ಲಿ ಮಾಮಾ–ಮೋದಿ!

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲೊಂದು ವಿಚಿತ್ರ ಸ್ಥಿತಿ ಇದೆ. ಸಾಮಾನ್ಯವಾಗಿ ಚುನಾವಣೆಗೆ ಸ್ಪರ್ಧಿ­ಸಿದವರು ತಮಗೆ ಮತ ನೀಡಿ ಎಂದು ಕೇಳುವುದು ವಾಡಿಕೆ. ಆದರೆ ಇಲ್ಲಿ ತುರುಸಿನ ಸ್ಪರ್ಧೆ ಎದುರಿಸುತ್ತಿರುವ ಇಬ್ಬರು ಅಭ್ಯರ್ಥಿಗಳೂ ತಮಗೆ ಮತ ಕೇಳುತ್ತಿಲ್ಲ.

ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಯಡಿ­ಯೂ­­ರಪ್ಪ ‘ಮೋದಿ ಪ್ರಧಾನಿಯಾಗಲು ಮತ ನೀಡಿ’ ಎಂದರೆ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ‘ಬಂಗಾ­ರಪ್ಪ ಅವರ ಮಗಳು ನಾನು. ಬಂಗಾರಪ್ಪ ಅವರ ಕೆಲಸ ಮುಂದುವರಿಸಲು ಮತ ನೀಡಿ’ ಎಂದು ಕೇಳುತ್ತಿದ್ದಾರೆ.

ಸಮಾಜವಾದದ ಈ ಕ್ಷೇತ್ರದಲ್ಲಿ ಈಗ ನಡೆ­ದಿರುವುದು ಮಾಮಾ–ಮೋದಿ ಜುಗಲ್‌­­­ಬಂದಿ. ಮೋದಿ ಗೊತ್ತು. ಮಾಮಾ ಯಾರು?
‘ಮಾಮಾ’ ಎಂದರೆ ಬಂಗಾರಪ್ಪ ಎಂಬ ಉತ್ತರ ಅವರ ಪುತ್ರಿ ಗೀತಾ ಅವರಿಂದ ಬರುತ್ತದೆ. ‘ನಾವೆಲ್ಲಾ ಅವರನ್ನು ಹಾಗೆಯೇ ಕರೆಯುತ್ತಿದ್ದೆವು. ನಮ್ಮ ಮನೆಯಲ್ಲಿ ಅಪ್ಪನ ಅಕ್ಕನ ಮಕ್ಕಳು ಇದ್ದರು. ಅವರು ಅಪ್ಪನನ್ನು ಮಾಮಾ ಎಂದು ಕರೆಯುತ್ತಿದ್ದರು. ಹಾಗಾಗಿ ನಮಗೂ ಅದೇ ರೂಢಿ­ಯಾ­ಯಿತು. ಈಗಲೂ ಮನೆಯಲ್ಲಿ ಮಾಮಾ ಎಂದರೆ ಅದು ಅಪ್ಪನ ಕುರಿತೇ ಆಗಿರು­ತ್ತದೆ. ಮುಂಚೆ ಅಮ್ಮನನ್ನೂ ಅತ್ತೆ ಎಂದು ಕರೆಯುತ್ತಿದ್ದೆವು. ಆದರೆ ಸುಜಾತಕ್ಕ  (ಹಿರಿಯ ಸೋದರಿ) ನಮಗೆಲ್ಲಾ ಬುದ್ಧಿ ಹೇಳಿ ಅಮ್ಮನನ್ನು ಅತ್ತೆ ಎಂದು ಕರೆಯುವುದನ್ನು ನಿಲ್ಲಿಸಿದರು’ ಎಂದು ಅವರು ಮಾಹಿತಿ ನೀಡುತ್ತಾರೆ.

ರಾಜ್ಯದ ಇತರೆಡೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿಗೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಪ್ರಮುಖ ನಾಯಕರು. ಅವರ ಸಾಧನೆ­ಗಳನ್ನು ಮುಂದಿಟ್ಟುಕೊಂಡೇ ಅಲ್ಲಿ ಮತ ಯಾಚನೆ ಮಾಡಲಾಗುತ್ತದೆ. ಆದರೆ ಇಲ್ಲಿ ಜೆಡಿಎಸ್‌ನ ಈ ಇಬ್ಬರೂ ನಾಯಕರು ಗೌಣ. ಬಂಗಾರಪ್ಪ ಹೆಸರೇ ಮುಖ್ಯ.

ಬದಲಾದ ಬಿಎಸ್‌ವೈ: ಯಡಿಯೂ­ರಪ್ಪ ಅವರು ಸಂಪೂರ್ಣ ಬದಲಾಗಿದ್ದಾರೆ. ಬಹುತೇಕ ಸಭೆಗಳಲ್ಲಿ ಅವರು ಬೇರೆ­ಯವರನ್ನು ಟೀಕಿಸುತ್ತಿಲ್ಲ. ಆರೋಪ ಮಾಡು­­ತ್ತಿಲ್ಲ. ಸಿಟ್ಟು ಸೆಡವು ಇಲ್ಲ. ಮಾತಿ­ನಲ್ಲಿ ಮೊದಲಿನ ಆರ್ಭಟವೂ ಇಲ್ಲ. ಭ್ರಷ್ಟಾಚಾರದ ವಿಷಯ ಪ್ರಸ್ತಾಪಿ­ಸು­ತ್ತಿಲ್ಲ. ‘ದೇಶಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಅಗತ್ಯವಾಗಿದೆ’ ಅದಕ್ಕೆ ತಮ್ಮನ್ನು ಗೆಲ್ಲಿಸಿ ಎಂದು ಕೋರುತ್ತಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳ ಬಗ್ಗೆ ಕೂಡ ಅವರು ಹೆಚ್ಚಾಗಿ ಪ್ರಸ್ತಾಪಿಸುತ್ತಿಲ್ಲ. ಅವರ ಪ್ರಚಾರ ಇರುವುದು ಕೇವಲ ನರೇಂದ್ರ ಮೋದಿ ಅವರ ಬಗ್ಗೆ ಮಾತ್ರ. ಯಡಿ­ಯೂ­­­ರಪ್ಪ ಗೆದ್ದರೆ ಕೇಂದ್ರದಲ್ಲಿ       ಸಚಿವ­ರಾಗುತ್ತಾರೆ ಎಂದೂ ಬಿಜೆಪಿ ಕಾರ್ಯ­ಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ.

‘ಯಡಿಯೂರಪ್ಪ ತಮ್ಮ ಕಾಲದ ಅಭಿವೃದ್ಧಿಯನ್ನು ಪ್ರಸ್ತಾಪಿಸದೇ ಇರಲು ಕಾರಣ ಇದೆ. ಇಡೀ ಶಿವಮೊಗ್ಗದಲ್ಲಿ ಅವರ ಆಸ್ತಿ ಎಲ್ಲರಿಗೂ ಕಣ್ಣುಕುಕ್ಕುವಂತೆ  ಕಾಣು­ತ್ತಿದೆ. ಅದು ಜನರಿಗೆ ಹೇಸಿಗೆ ಹುಟ್ಟಿಸಿದೆ’ ಎಂದು ಲೇಖಕ ಸರ್ಜಾಶಂಕರ ಹರಳಿಮಠ ಹೇಳುತ್ತಾರೆ.

ಗೀತಾ ಅವರಿಗೆ ‘ಮಾಮಾ’ನ ನಿಜವಾದ ಪರಿಚಯ ಈಗ ಆಗುತ್ತಿದೆ.  ‘ನಾನು ಎಲ್ಲಿಯೇ ಹೋದರೂ ಜನರು ಮಾಮಾನ ಭಾವಚಿತ್ರ ತೆಗೆದುಕೊಂಡು ಬಂದು ತೋರಿಸುತ್ತಾರೆ. ಮಾಮಾ ಇಲ್ಲಿಯೇ ಕುಳಿತುಕೊಳ್ಳುತ್ತಿದ್ದರು ಎನ್ನು­ತ್ತಾರೆ. ಮಾಡಿದ ಸಹಾಯವನ್ನು ನೆನ­ಪಿ­ಸಿ­­­ಕೊಳ್ಳುತ್ತಾರೆ. ಜೊತೆಗೆ ಬಹಳ ಗ್ರಾಮ­ಗಳಲ್ಲಿ ಬಂಗಾರಪ್ಪ ಈ ಗ್ರಾಮ­ವನ್ನು ತಮ್ಮ ತವರೂರು ಎನ್ನುತ್ತಿದ್ದರು ಎಂದು ಸ್ಮರಣೆ ಮಾಡಿಕೊಳ್ಳುತ್ತಾರೆ. ನನ್ನ ತಂದೆ ಹೀಗೆಲ್ಲಾ ಇದ್ದರಾ ಎಂದು ನಾನು ಅಚ್ಚರಿಗೊಳ್ಳುವಂತೆ ಆಗಿದೆ. ನಾನು ಅವರ ರಾಜಕೀಯವನ್ನು ಬಲ್ಲೆ.   ಅವರು ಜೊತೆ ಸಾಕಷ್ಟು ಕಡೆ ತಿರುಗಾಡಿ­ದ್ದೇನೆ. ಆದರೂ ಅವರ ಸಾಮಾಜಿಕ ಕಾರ್ಯ­ಗಳು ಈಗ ನನಗೆ ಅರ್ಥ­ವಾಗುತ್ತಿವೆ’ ಎಂದು ಅವರು ಸಂಭ್ರಮಪಡುತ್ತಾರೆ.

‘ನಾನು ಬಂಗಾರಪ್ಪ ಅವರ ಪುತ್ರಿ. ಡಾ.ರಾಜ್‌ಕುಮಾರ್‌ ಅವರ ಸೊಸೆ. ಅದಕ್ಕಿಂತ ಮುಖ್ಯವಾಗಿ ಶಿವರಾಜ್‌­ಕುಮಾರ್‌ ಅವರ ಪತ್ನಿ. ಈಗ ಚುನಾ­   ವ­ಣೆಗೆ ನಿಂತಿರುವುದು ಬಂಗಾರಪ್ಪ ಅವರ ಪುತ್ರಿಯಾಗಿ. ನನಗೆ ರಾಜಕೀಯ ಹೊಸ­ದಲ್ಲ. ಆದರೆ ಭಾಷಣ ಮಾಡು­ವುದು ಹೊಸತು. ಮೈಕ್‌ ನೋಡಿದರೇ ಭಯ­ವಾಗು­ತ್ತಿತ್ತು. ಆದರೆ ಈಗ ಎಲ್ಲ ಭಯ ಹೋಗಿದೆ’ ಎಂದು ಅವರು ಹೇಳುತ್ತಾರೆ.

‘ಶಿವರಾಜ್‌ಕುಮಾರ್‌ ನನ್ನ ಜೊತೆ ಇಲ್ಲದಿದ್ದರೂ ಜನರು ಭಾರೀ ಸಂಖ್ಯೆ­ಯಲ್ಲಿ ಸೇರುತ್ತಾರೆ. ಶಿವರಾಜ್‌­ಕುಮಾರ್‌ ಇದ್ದರೆ ಹಾಡು ಹೇಳಲು, ಸಿನಿಮಾದ ಡೈಲಾಗ್‌ ಹೇಳುವಂತೆ ಒತ್ತಾ­ಯಿ­ಸು­ತ್ತಾರೆ. ಆದರೆ ನಾನೊಬ್ಬಳೇ ಇದ್ದರೆ ಈ ಬೇಡಿಕೆ ಇರುವುದಿಲ್ಲ’ ಎಂದು ಚಟಾಕಿ ಹಾರಿಸುತ್ತಾರೆ.

ಲೋಕಸಭೆ ಸದಸ್ಯರಾಗಿ ಆಯ್ಕೆ­ಯಾದ ಮೇಲೆ ನೀವು ಬೆಂಗಳೂರಿ­ನಲ್ಲಿರುತ್ತೀರಿ. ಡಾ.ರಾಜ್‌ ಮನೆಗೆ ಸಾಮಾನ್ಯ ಜನರು ಬರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರೆ ‘ರಾಜ್‌ ಮನೆ ಬಾಗಿಲು ಸಾಮಾನ್ಯ ಜನರಿಗೆ ತೆರೆದಿ­ರುತ್ತದೆ. ನೀವು ಯಾವಾಗಲಾದರೂ ಬಂದು ನೋಡಿದ್ದೀರಾ? ನೀವು ಬಂದು ನೋಡಿ’ ಎಂದು ಆಹ್ವಾನ ನೀಡುತ್ತಾರೆ.

‘ಗೀತಕ್ಕ ನನಗಿಂತ ದೊಡ್ಡ ನಾಯಕಿ’ ಎಂದೇ ಹೇಳುವ ಮಧು ಬಂಗಾರಪ್ಪ ‘ಬಂಗಾ­ರಪ್ಪ ಅವರ ಸಾಧನೆಗಳನ್ನು ಹೇಳಿಕೊಳ್ಳಲು ನಮಗೆ ಮಾತ್ರ ಹಕ್ಕು ಇದೆ’ ಎನ್ನುತ್ತಾರೆ.

‘ಈಗ ಗೆಲ್ಲೋದು ಅಷ್ಟೇ ಮುಖ್ಯ ಅಲ್ಲ. ಮುಂದಿನ ಐದು ವರ್ಷ ಸಂಸದ­ರಾಗಿ ಕೆಲಸ ಮಾಡುವುದೂ ಮುಖ್ಯ. ಅದಕ್ಕೆ ಗೀತಾ ಸರಿಯಾದ ಅಭ್ಯರ್ಥಿ. ಜನರೇ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಮಧು ಹೇಳುತ್ತಾರೆ.

ಕೌಟುಂಬಿಕ ಕಲಹಕ್ಕೂ ಚುನಾ­ವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಗೀತಾ, ಮಧು ಇಬ್ಬರೂ ಸ್ಪಷ್ಟನೆ ನೀಡುತ್ತಾರೆ. ಹೀಗೆ ಹೇಳುವಾಗ ಅವರ ಮಾತಿನ ಹಿಂದೆ ಸೋದರ ಕುಮಾರ್‌ ಬಂಗಾರಪ್ಪ ಅವರ ಟೀಕೆ ಟಿಪ್ಪಣಿಗೆ ಉತ್ತರಿಸುವ ಧಾವಂತ ಕಾಣುತ್ತದೆ. 

ಬಗರ್‌ಹುಕುಂ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಅರಣ್ಯಭೂಮಿ ಒತ್ತುವರಿ ತೆರವು ಮುಂತಾದ ಗಂಭೀರ ಸಮಸ್ಯೆಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇದೆ. ಈ ಸಮಸ್ಯೆಗಳ ಬಗ್ಗೆ ತನಗೆ ಅರಿವು ಇದೆ ಎಂದು ಗೀತಾ ಹೇಳಿದರೆ ಯಡಿಯೂರಪ್ಪ ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ನೀಡುತ್ತಾರೆ.

ದೆಹಲಿಯಲ್ಲಿ ಕೇಜ್ರಿ, ಇಲ್ಲಿ ಕೇಜಿ! ಆಮ್‌ ಆದ್ಮಿ ಪಕ್ಷದ ಕೆ.ಜಿ.ಶ್ರೀಧರ್‌ 14 ಭರವಸೆಗಳನ್ನು ನೀಡುತ್ತಿದ್ದಾರೆ. ‘ದೆಹಲಿ­ಯಲ್ಲಿ ಕೇಜ್ರಿವಾಲ, ಶಿವಮೊಗ್ಗದಲ್ಲಿ ಕೇಜಿ ಶ್ರೀಧರ’ ಎನ್ನುವುದು ಅವರ ಪ್ರಚಾರದ ಸ್ಲೋಗನ್‌.

ಅಡಿಕೆ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆ­ಯು­ತ್ತಿದ್ದು ಅವರ ವಿರುದ್ಧ ಹೋರಾಟ, ಬಗರ್‌ಹುಕುಂ ಸಮಸ್ಯೆ ವಿರುದ್ಧ ಹೋರಾಟ, ವೈಜ್ಞಾನಿಕ ಬೆಲೆ ನೀತಿ ಮತ್ತು ವೈಜ್ಞಾನಿಕ ಕೂಲಿ ನೀತಿ ಜಾರಿಗೆ ಒತ್ತಾಯ ಮಾಡುವುದಾಗಿ ಅವರು ಹೇಳುತ್ತಾರೆ.

ಶಿವಮೊಗ್ಗ ಕ್ಷೇತ್ರದ ಬಹುತೇಕ ಕಡೆ ಬಸ್‌ ನಿಲ್ದಾಣ, ಕುಡಿಯುವ ನೀರಿನ ಸೌಲಭ್ಯ, ಶಾಲಾ ಕಟ್ಟಡಗಳ ಮೇಲೆ ಲೋಕಸಭಾ ಸದಸ್ಯರ ಹೆಸರು ರಾರಾಜಿ­ಸು­ತ್ತಿದೆ. ಈಗ ಚುನಾವಣೆಯ ಸಮಯ­ವಾಗಿದ್ದರಿಂದ ಸದಸ್ಯರ ಹೆಸರನ್ನು ಮುಚ್ಚ­ಲಾಗಿದೆ. ಶ್ರೀಧರ್‌ ಅವರು ಇದನ್ನೇ ಪ್ರಚಾರದ ವಿಷಯವನ್ನಾಗಿ ಮಾಡಿ­ಕೊಂಡಿ­ದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿ ತನ್ನ ಹೆಸರನ್ನು ಸರ್ಕಾರಿ ಕಟ್ಟಡದ ಮೇಲೆ ಬರೆಸಿಕೊಳ್ಳುವುದು ಅಪರಾಧ ಎಂದು ಅವರು ಪ್ರಚಾರ ಮಾಡುತ್ತಿದ್ದಾರೆ.

ಆದರೂ ಜಿಲ್ಲೆಯ ಸಮಸ್ಯೆಗಳಿಗಿಂತ ಇಲ್ಲಿ ಮಾಮಾ–ಮೋದಿಯೇ ಮುಖ್ಯ. ಮಾಮಾ ಗೆಲ್ಲುತ್ತಾರೋ, ಮೋದಿ ಗೆಲ್ಲುತ್ತಾರೋ ಎನ್ನುವುದೇ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT