ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಗುಣಮಟ್ಟ ಅವಶ್ಯ

Last Updated 2 ಫೆಬ್ರುವರಿ 2011, 15:45 IST
ಅಕ್ಷರ ಗಾತ್ರ


ನಲವತ್ತಾರು ವರ್ಷಗಳಷ್ಟು ಹಳೆಯದಾದ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸುವ ಹಲವು ವರ್ಷಗಳ ಪ್ರಸ್ತಾವ ಈಗ ಒಂದು ತಾರ್ಕಿಕ ಅಂತ್ಯ ಕಾಣುತ್ತಿದೆ. ಬೆಂಗಳೂರು ದಕ್ಷಿಣ ವಿವಿ ಹೆಸರಿನಲ್ಲಿ ಈಗಿರುವ ವಿವಿಯನ್ನೇ ವಿಭಾಗಿಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ತೀರ್ಮಾನ ಕೈಗೊಂಡಿದೆ. ಈ ವಿಶ್ವವಿದ್ಯಾಲಯವನ್ನು ವಿಭಜಿಸುವ ಸಂಬಂಧ ಗುಲ್ಬರ್ಗ ವಿವಿಯ ಮಾಜಿ ಕುಲಪತಿ ಡಾ. ಎನ್. ರುದ್ರಯ್ಯ ನೇತೃತ್ವದ ಸಮಿತಿಯು ಸಾಧಕ ಬಾಧಕಗಳನ್ನೆಲ್ಲ ಅಧ್ಯಯನ ಮಾಡಿ ವರದಿಯೊಂದನ್ನು ನೀಡಿದೆ. ಈ ವರದಿಯಂತೆ ಬೆಂಗಳೂರು ವಿವಿಯನ್ನು ಮೂರು ವಿವಿಗಳನ್ನಾಗಿ ವಿಭಜಿಸಬೇಕು. ಆದರೆ ಉನ್ನತ ಶಿಕ್ಷಣ ಪರಿಷತ್ ಸದ್ಯಕ್ಕೆ ಎರಡು ವಿವಿಯನ್ನಾಗಿ ಮಾಡಲು ನಿರ್ಧರಿಸಿದೆ. ಅಂದರೆ ಈಗಿರುವ ವಿವಿಯನ್ನೇ ವಿಭಾಗಿಸಿ ಮತ್ತೊಂದು ವಿವಿಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ವಿಶ್ವವಿದ್ಯಾಲಯವೊಂದು ಉನ್ನತ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಅದರ ವ್ಯಾಪ್ತಿಯಲ್ಲಿ 200 ಕಾಲೇಜುಗಳಿದ್ದರೆ ಸಾಕು.

ಇದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ನಿಯಮ. ಬೆಂಗಳೂರು ವಿವಿಯ ವ್ಯಾಪ್ತಿಯಲ್ಲಿದ್ದ ಹಲವು ಕಾಲೇಜುಗಳನ್ನು ಸೇರಿಸಿಕೊಂಡು 5 ವರ್ಷಗಳ ಹಿಂದೆ ತುಮಕೂರು ವಿವಿಯನ್ನು ಪ್ರಾರಂಭಿಸಲಾಯಿತು. ಆದರೂ, ಈಗಿನ ಬೆಂಗಳೂರು ವಿವಿ ತೆಕ್ಕೆಯಲ್ಲಿ 654 ಕಾಲೇಜುಗಳಿವೆ. ಎರಡು ವರ್ಷಗಳ ಹಿಂದೆ ರಚನೆಯಾದ ಈ ಉನ್ನತ ಶಿಕ್ಷಣ ಪರಿಷತ್, ತನ್ನ ಮೊದಲ ಸಭೆಯಲ್ಲಿಯೇ ಜಿಲ್ಲೆಗೊಂದು ವಿವಿ ಸ್ಥಾಪಿಸುವ ನಿರ್ಧಾರ ಕೈ ಗೊಂಡಿತ್ತು. ರಾಜ್ಯದಲ್ಲಿ ಈಗಾಗಲೇ 23 ವಿವಿಗಳಿವೆ. ಹೆಚ್ಚು ಹೆಚ್ಚು ವಿಶ್ವವಿದ್ಯಾಲಯಗಳನ್ನು ಮಾಡುವುದು ಮುಖ್ಯವಲ್ಲ. ಪ್ರತಿಯೊಂದು ವಿವಿಯನ್ನೂ ಉನ್ನತ ಶೈಕ್ಷಣಿಕ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಉತ್ತಮ ಶೈಕ್ಷಣಿಕ ಮತ್ತು ಸಂಶೋಧನೆಗೆ ಪೂರಕವಾಗಿರುವಂತಹ ವಾತಾವರಣವನ್ನು ಸೃಷ್ಟಿಸುವುದು ಮುಖ್ಯ. ಈಗಾಗಲೇ ಕುಲಪತಿಗಳ ಮತ್ತು ಪ್ರಾಧ್ಯಾಪಕರ ನೇಮಕಗಳಲ್ಲಿ ರಾಜಕೀಯ ಮತ್ತು ಜಾತೀಯತೆಯ ಗಬ್ಬುವಾಸನೆ ಇದೆ. ವಿವಿಗಳ ಬಹತೇಕ ವಿಭಾಗಗಳಲ್ಲಿನ ಅಧ್ಯಾಪಕ ಸಿಬ್ಬಂದಿಯಲ್ಲೇ ಅಶಿಸ್ತು ಮತ್ತು ಗುಂಪುಗಾರಿಕೆ ತಾಂಡವವಾಡುತ್ತಿದೆ. ಪರೀಕ್ಷಾ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಆದ್ದರಿಂದ ಹೆಚ್ಚು ವಿವಿಗಳನ್ನು ಸ್ಥಾಪಿಸುವುದಕ್ಕಿಂತ ಹೆಸರಿಗಷ್ಟೇ ನೀಡಿರುವ ಸ್ವಾಯತ್ತತೆಯನ್ನು ಅಕ್ಷರಶಃ ಜಾರಿಗೆ ಬರುವಂತೆ ಸ್ವಾತಂತ್ರ್ಯ ನೀಡಬೇಕು. ಹಾಗೆ ಮಾಡಬೇಕಾದರೆ ರಾಜಕೀಯ ಹಸ್ತಕ್ಷೇಪ ತಪ್ಪಬೇಕು. ವಿಶ್ವವಿದ್ಯಾಲಯಗಳ ಆಡಳಿತ ಪಾರದರ್ಶಕ ಮತ್ತು ಉತ್ತರದಾಯಿಯಾಗಿರಬೇಕು. ಬಹುತೇಕ ವಿವಿಗಳಲ್ಲಿ ಉಪನ್ಯಾಸಕ ಮತ್ತು ಇತರೆ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಈ ಎಲ್ಲಾ ನ್ಯೂನತೆಯನ್ನು ಗಮನದಲ್ಲಿಟ್ಟುಕೊಂಡು ಹೊಸದೊಂದು ವಿವಿಯನ್ನು ಆರಂಭಿಸುವಾಗ ಮೂಲಭೂತ ಸೌಕರ್ಯವನ್ನು ಸೃಷ್ಟಿಸುವ ಜೊತೆಗೆ ಉನ್ನತ ಶೈಕ್ಷಣಿಕ ಗುಣಮಟ್ಟ ಕಾಪಾಡುವತ್ತ ಆಸಕ್ತಿವಹಿಸುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT