ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿಸುವ ಎನ್‌ಆರ್‌ಐ ಗಂಡಂದಿರಿಗೆ ಕಡಿವಾಣ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಚಂಡೀಗಡ: ಅನಿವಾಸಿ ಭಾರತೀಯ (ಎನ್‌ಆರ್‌ಐ) ಗಂಡಂದಿರಿಂದ ಶೋಷಣೆಗೆ ಒಳಗಾದ ಭಾರತೀಯ ಮಹಿಳೆಯರ ನೋವನ್ನು ಆಲಿಸಲು ಪಂಜಾಬ್ ಸರ್ಕಾರ ಆರಂಭಿಸಿದ ಸಹಾಯವಾಣಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎನ್‌ಆರ್‌ಐಗಳ ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಇದು ನಾಂದಿ ಹಾಡಿದೆ.

ಡಾಲರ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ ಹತ್ತಾರು ಕನಸುಗಳೊಂದಿಗೆ ಎನ್‌ಆರ್‌ಐ ಹುಡುಗರ ಕೈಹಿಡಿದು ವಿದೇಶಗಳಿಗೆ ಹಾರಿ, ಅಲ್ಲಿ ಅನುಭವಿಸಲಾರದ ಯಾತನೆ ಅನುಭವಿಸಿ ತಾಯ್ನಾಡಿಗೆ ಮರಳುತ್ತಿರುವ ವಧುಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಈ ಆತಂಕಕಾರಿ ಬೆಳವಣಿಗೆಗೆ ಕಡಿವಾಣ ಹಾಕಲೆಂದೇ ಸರ್ಕಾರ ಈ ಮಹತ್ವಾಕಾಂಕ್ಷೆಯ ಸಹಾಯವಾಣಿಯನ್ನು ಆರಂಭಿಸಿದೆ.

ಪತ್ನಿಯರನ್ನು ಶೋಷಿಸಿದ ಆರೋಪದ ಮೇಲೆ ಕಳೆದ ಒಂದು ವರ್ಷದಲ್ಲಿ ಜಲಂಧರ್ ಪಾಸ್‌ಪೋರ್ಟ್ ಕಚೇರಿ ಒಟ್ಟು 94 ಎನ್‌ಆರ್‌ಐಗಳ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಬಹುತೇಕ ಎನ್‌ಆರ್‌ಐಗಳು ತಮ್ಮ ಪತ್ನಿಯರ ಜತೆ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಜೈಲು ಪಾಲಾಗುವ ಭೀತಿಯಿಂದ ಹಲವರು ಈಗಾಗಲೇ ಒಂದೇ ಬಾರಿಗೆ ನ್ಯಾಯ ಇತ್ಯರ್ಥ ವ್ಯವಸ್ಥೆಯ ಮೊರೆ ಹೋಗುತ್ತಿದ್ದಾರೆ.

ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪ್ರಕಟಿಸಿರುವ ಅಂಕಿ-ಅಂಶಗಳು ಇನ್ನೂ ದಿಗಿಲು ಹುಟ್ಟಿಸುವಂತಿವೆ. ಎನ್‌ಆರ್‌ಐಗಳನ್ನು ಕೈಹಿಡಿದ ಸುಮಾರು 30 ಸಾವಿರ ಭಾರತೀಯ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಆ ಪೈಕಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಪಂಜಾಬ್‌ನ ದೋಅಬ್ ಪ್ರದೇಶಕ್ಕೆ ಸೇರಿದವರು. 

ರಾಷ್ಟ್ರೀಯ ಮಹಿಳಾ ಆಯೋಗ 2009ರಲ್ಲಿ ತೆರೆದಿರುವ ಎನ್‌ಆರ್‌ಐ ಘಟಕದಲ್ಲಿ 532 ದೂರುಗಳು ದಾಖಲಾಗಿವೆ. ಸಾಗರೋತ್ತರ ವ್ಯವಹಾರಗಳ ಸಚಿವಾಲಯಕ್ಕೂ 381 ಇಂಥ ದೂರುಗಳು ಬಂದಿವೆ. ಅವುಗಳಲ್ಲಿ ಬಹುತೇಕ ದೂರುಗಳು ಪಂಜಾಬಿ ಮಹಿಳೆಯರದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT