ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದಾನದ ಮೂಲಕ ರಸ್ತೆ ರಿಪೇರಿ!

Last Updated 10 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಹೊನ್ನಾಳಿ: ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಬೇಸತ್ತ ಆಟೋರಿಕ್ಷಾ ಚಾಲಕರು, ಕ್ಲೀನರ್‌ಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಶ್ರಮದಾನದ ಮೂಲಕ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಿಕೊಂಡ ಘಟನೆ ಈಚೆಗೆ ಪಟ್ಟಣದ ಅಗ್ನಿಶಾಮಕ ಠಾಣೆ ಸಮೀಪ ನಡೆದಿದೆ.

ಪಟ್ಟಣದಿಂದ ಪ್ರತಿನಿತ್ಯ ಮಾರಿಕೊಪ್ಪ, ಹತ್ತೂರು, ಎರೇಹಳ್ಳಿ ಗ್ರಾಮಗಳಿಗೆ ಸಂಚರಿಸುವ ಪ್ರಯಾಣಿಕರು ಸಾಕಷ್ಟು ಸಮಯದಿಂದ ರಿಪೇರಿ ಕಾಣದ ರಸ್ತೆಯಿಂದಾಗಿ ಬೇಸತ್ತಿದ್ದರು. ಪ್ರತಿನಿತ್ಯ ಆಟೋರಿಕ್ಷಾ ಚಾಲಕರ ಜತೆ ಜಗಳವಾಡುತ್ತಿದ್ದರು. ರಸ್ತೆ ರಿಪೇರಿ ಮಾಡುವಂತೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

ಇದರಿಂದಾಗಿ ತೀವ್ರ ನೊಂದ ಆಟೋರಿಕ್ಷಾ ಚಾಲಕರು, ಕ್ಲೀನರ್‌ಗಳು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಮುಂದಾದರು. ಈ ಕಾರ್ಯಕ್ಕೆ ಕಾಲೇಜು ವಿದ್ಯಾರ್ಥಿಗಳೂ ಕೈಜೋಡಿಸಿದರು.

`ಪತ್ರಿಕೆ~ಯೊಂದಿಗೆ ಮಾತನಾಡಿದ ಆಟೋರಿಕ್ಷಾ ಚಾಲಕ ಮಾರಿಕೊಪ್ಪದ ಮಂಜುನಾಥ್, ಕೆಟ್ಟ ರಸ್ತೆಯಿಂದಾಗಿ ನಮ್ಮ ದುಡಿಮೆಯ ಶೇ 80ರಷ್ಟು ಭಾಗವನ್ನು ವಾಹನಗಳ ರಿಪೇರಿಗೇ ಸುರಿಯಬೇಕಾಗುತ್ತದೆ. ಪ್ರಯಾಣಿಕರು ಚಲಿಸುವ ವಾಹನಗಳಿಂದ ಬಿದ್ದು ಕೈ, ಕಾಲು ಮುರಿದುಕೊಂಡಿದ್ದಾರೆ. ಆದ್ದರಿಂದ, ನಾವೇ ರಸ್ತೆ ರಿಪೇರಿಗೆ ಮುಂದಾಗಿದ್ದೇವೆ ಎಂದರು.

ಹೊನ್ನಾಳಿಯಿಂದ ಎರೇಹಳ್ಳಿವರೆಗಿನ 12ಕಿ.ಮೀ. ರಸ್ತೆ ರಿಪೇರಿ ಕಾರ್ಯದಲ್ಲಿ ಚಾಲಕರಾದ ಚಂದ್ರು, ಕುಮಾರ, ಯೋಗಿಶ್, ಹರೀಶ್, ಬಸವರಾಜ, ದೇವರಾಜ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಭರವಸೆ: ಧರಣಿ ವಾಪಸ್
ಪಟ್ಟಣದ ಎಸ್‌ಬಿಎಂ ಶಾಖೆಯ ವ್ಯವಸ್ಥಾಪಕ, ಲೆಕ್ಕಾಧಿಕಾರಿ, ಕ್ಷೇತ್ರಾಧಿಕಾರಿಗಳ ಸೇವಾ ನ್ಯೂನತೆ ವಿರುದ್ಧ  ಅ. 10ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಬ್ಯಾಂಕ್ ಎದುರು ಹಮ್ಮಿಕೊಂಡ ಧರಣಿಯನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಜಾಗೃತ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಎಂ. ಗುರುಪಾದಯ್ಯ ಹೇಳಿದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಕರ್ತವ್ಯ ನಿರ್ವಹಿಸುವುದಾಗಿ ಹಾಗೂ ಗ್ರಾಹಕರ ಯಾವುದೇ ಸಮಸ್ಯೆಗೆ ಶೀಘ್ರ ಸ್ಪಂದಿಸುವುದಾಗಿ ಶಾಖಾ ವ್ಯವಸ್ಥಾಪಕ ಡಿ. ಪೆರೂರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದುಕೊಳ್ಳಲಾಗಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ಗ್ರಾಹಕರು, ವಿದ್ಯಾರ್ಥಿಗಳು ಬ್ಯಾಂಕ್‌ನ ಕಾರ್ಯವೈಖರಿ ಸರಿ ಇಲ್ಲ ಎಂದು ದೂರು ನೀಡಿದರೆ ಮತ್ತೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಎಸ್‌ಬಿಎಂ ವ್ಯವಸ್ಥಾಪಕ ಡಿ. ಪೆರೂರ್ ಮಾತನಾಡಿ, ಇನ್ನು ಮುಂದೆ ಗ್ರಾಹಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕ್ಷೇತ್ರಾಧಿಕಾರಿ ಬಾಲಕೃಷ್ಣಯ್ಯ, ವಿದ್ಯಾರ್ಥಿ ಮುಖಂಡರಾದ ಅಜಿತ್‌ಕುಮಾರ್, ಬಾಷಾ, ಜಬೀವುಲ್ಲಾ, ಫಾಜಿಲ್ ಅಹಮ್ಮದ್, ನರಸಿಂಹಪ್ಪ, ಕಲ್ಕೇರಿ ಚನ್ನೇಶ್, ಅಶೋಕ್, ಅರುಣ್, ಸೊರಟೂರು ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT