ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದಿಂದ ಹೊಸ ವರ್ಷಕ್ಕೆ ಸ್ವಾಗತ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹೊಸ ವರ್ಷವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. 

31ರ ರಾತ್ರಿ ಹಾಗೂ ಜನವರಿ 1ರಂದು ಕಾಲೇಜಿನ ಆವರಣದಲ್ಲಿ ಶ್ರಮದಾನ ಮಾಡುವ ಮತ್ತು ಸಸಿಗಳನ್ನು ನೆಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು.

ನಂತರ ಮಾತನಾಡಿದ ವಿದ್ಯಾರ್ಥಿಗಳಾದ ಅಮಿತ್ ರಾಜ್, ಶಾಂತ ಕುಮಾರ್ ಹೊಸ ವರ್ಷ ಆಚರಣೆ ನೆಪದಲ್ಲಿ ಮದ್ಯಾರಾಧನೆ, ಮೋಜು- ಮಸ್ತಿ ಹೆಚ್ಚುತ್ತಿದೆ.  ಇಂತಹ ಹವ್ಯಾಸಗಳು ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಸಮಯವೂ ವ್ಯರ್ಥ. ಉಪನ್ಯಾಸಕರ ಸಲಹೆ ಮೇರೆಗೆ ರಾತ್ರಿಯಿಡಿ 125 ಸಸಿಗಳನ್ನು ನೆಟ್ಟು, ಕಾಲೇಜಿನ ಹೊರ ಮತ್ತು ಒಳ ಆವರಣವನ್ನು ಶುಚಿಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಉಪನ್ಯಾಸಕ ಜಿ.ಎಂ. ನಂಜಪ್ಪ, ಹೊಸ ವರ್ಷಾಚರಣೆ ವಿದೇಶಿ ಸಂಸ್ಕೃತಿ. ಭಾರತೀಯ ಸಂಸ್ಕೃತಿಯೊಂದಿಗೆ  ಹೋಲಿಕೆ ಸಾಧ್ಯ ಇಲ್ಲ.  ಕೇಕ್ ಕತ್ತರಿಸುವ ಸಂಸ್ಕೃತಿ  ಸೇರಿದಂತೆ ಅನ್ಯ ಆಚರಣೆಗಳು ನಮ್ಮ  ಸಂಸ್ಕೃತಿಗೆ ಮಾರಕವಾಗಿದೆ. ಆದ್ದರಿಂದ  ಶಿಕ್ಷಕರು, ಬುದ್ದಿ ಜೀವಿಗಳು ಮತ್ತು ಪೋಷಕರು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಹಿರಿಯ ಉಪನ್ಯಾಸಕ ಪಿ. ಶ್ರಿನಿವಾಸ್ ಮತ್ತು ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

`ರಚನಾತ್ಮಕ ಕಾರ್ಯದಲ್ಲಿ ತೊಡಗಿ~
ಆನೇಕಲ್:  ಯುವಕರು ಸಾಮಾಜಿಕ ಕಾಳಜಿಯುಳ್ಳ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ವಣಕನಹಳ್ಳಿ ಗ್ರಾ.ಪಂ ಅಧ್ಯಕ್ಷ ಎಂ.ರಘುನಾಥ ನುಡಿದರು.   ತಾಲ್ಲೂಕಿನ ಸೋಲೂರು ವಿನೋಬಭಾವೆ ಪ್ರೌಢಶಾಲೆಯ ಆವರಣದಲ್ಲಿ ಭಗತ್ ಸಿಂಗ್ ಯುವ ಸೇನೆಯ ವತಿಯಿಂದ ಹೊಸ ವರ್ಷದ ಪ್ರಯುಕ್ತ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರದ ಬಗ್ಗೆ ಯುವಕರಲ್ಲಿ ಕಾಳಜಿ ಬೆಳೆಸುವ ಕಾರ್ಯಕ್ರಮದಲ್ಲಿ ಸಂಘಟನೆಯು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ನಾಗವೇಣಿ ಅವರು ಮಾತನಾಡಿ ಹೊಸ ವರ್ಷದ ದಿನದಂದು ಯುವಕರು ವಿಭಿನ್ನ ಚಿಂತನೆಯ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ಮೂಲಕ ಹೊಸ ಸಂದೇಶ ಹಾಗೂ ಚಿಂತನೆಗೆ ದಾರಿಯಾಗಿದೆ. ಯುವ ಪೀಳಿಗೆ ದೇಶದ ಸಂಪತ್ತಾಗಿದ್ದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. 
  
ವಿನೋಬ ಭಾವೆ ಪ್ರೌಢಶಾಲೆ ಕಾರ್ಯದರ್ಶಿ ಸೀನಪ್ಪ,  ಭಗತ್ ಸಿಂಗ್ ಯುವ ಸೇನೆ ರಾಜ್ಯ ಘಟಕದ  ಬಳ್ಳೂರು ಬಾಬು,ಮುಖಂಡರಾದ ರಾವಣ, ಮಾಜಿ ಉಪಾಧ್ಯಕ್ಷ ಮುನಿರಾಜು, ಸೇನೆ ಕಾರ್ಯದರ್ಶಿ ಮುರಳಿ ಮೋಹನ ರೆಡ್ಡಿ, ಅತ್ತಿಬೆಲೆ ಮುನಿರಾಜು, ಮುಖ್ಯ ಶಿಕ್ಷಕ ಮುನಿವೀರಪ್ಪ, ಬಾಬು ರೆಡ್ಡಿ,  ಹೀಲಲಿಗೆ ತಿಮ್ಮರಾಯಪ್ಪ ಜೆಡಿಎಸ್‌ನ ಲಕ್ಷ್ಮೀನಾರಾಯಣ, ಶಂಕರ್ ನಾಗ್, ಅತ್ತಿಬೆಲೆಯ ಸಾಯಿ ಸುರೇಶ್, ಆನಂದ್, ಅನಿಲ್, ಕೃಷ್ಣಪ್ಪ, ನಾರಾಯಣ (ನಾಣಿ) ಸರ್ಜಾಪುರ ಆನಂದ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT