ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 6 ಜನವರಿ 2012, 8:40 IST
ಅಕ್ಷರ ಗಾತ್ರ

ವಿಜಾಪುರ: ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶ್ರೀರಾಮ ಸೇನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರೆದಿವೆ.

ಫೆಡಿನಾ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ರಾಜ್ಯ ಗೋಂಧಳಿ ಸಮಾಜ, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯವರು ಗುರುವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, `ಸಿಂದಗಿ ಪಟ್ಟಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ರಾಜ್ಯಾದ್ಯಂತ ಕೋಮು-ಗಲಭೆ ಹಬ್ಬಿಸಲು ಸಂಚು ಮಾಡಿದ ದೇಶದ್ರೋಹಿ ಶ್ರಿರಾಮ ಸೇನೆ ಸಂಘಟನೆಯನ್ನು ನಿಷೇಧಿಸಬೇಕು~ ಎಂದು ಒತ್ತಾಯಿಸಿದರು.

ಕ್ಷತ್ರಿಯ ಮಹಾಸಭಾದ ಮುಖಂಡ ಗುರುಸಿಂಗ್ ತೊನಶ್ಯಾಳ, ಎಂ.ಎಂ. ಸುತಾರ, ಫೆಡಿನಾ ಸಂಸ್ಥೆಯ ಮುಖ್ಯಸ್ಥ ಪ್ರಭುಗೌಡ ಪಾಟೀಲ, ಡಿ.ಎಸ್.ಎಸ್. ಮುಖಂಡ ಸುರೇಶ ಮಣೂರ, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಘಾಟಗೆ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕು ಎಂದರು. ಪ್ರಕರಣ ಪತ್ತೆ ಹಚ್ಚಿದ ಪೊಲೀಸರನ್ನು ಅಭಿನಂದಿಸಿದರು.

ಗೋಂಧಳಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಭೀಸೆ, ಡಿ.ಎಸ್. ಮುಲ್ಲಾ, ಸಮದ್ ಸುತಾರ, ಸುರೇಶ ಗೊಣಸಗಿ, ಭೀಮನಗೌಡ ಪಾಟೀಲ, ಸುಲೋಚನಾ ತಿಕೋಟಾ, ಜಹಾಂಗೀರ ಮಿರ್ಜಿ, ಬಸವರಾಜ ಕಟ್ಟಿಮನಿ, ಅಬ್ದುಲರಜಾಕ್ ಸಂಖ, ರಿಯಾನಾ ರಾಮದುರ್ಗ, ಕಮರುನ್ನಿಸಾ ತಾಳಿಕೋಟ, ಹನೀಫಾ ಮಕಾನದಾರ, ಮದಸ್ಸರ ವಾಲಿಕಾರ ಇತರರು ಈ ಸಂದರ್ಭದಲ್ಲಿದ್ದರು.

ದಲಿತ ವಿದ್ಯಾರ್ಥಿ ಪರಿಷತ್: ಸಿಂದಗಿ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಪಾಕ್ ಧ್ವಜ ಹಾರಿಸಿ, ಸಮಾಜದಲ್ಲಿ ಶಾಂತಿ ಕದಡಿದ ಶ್ರಿರಾಮ ಸೇನೆಯನ್ನು ನಿಷೇಧಿಸಬೇಕು ಎಂದು ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

`ಶ್ರಿರಾಮ ಸೇನೆಯವರು ಬುಧವಾರ ವಿಜಾಪುರ ಬಂದ್‌ಗೆ ಕರೆ ನೀಡಿ, ರಸ್ತೆಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಜನರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಂಥ ಹೀನ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿರುವ ಸಂಘಟನೆಯನ್ನು ನಿಷೇಧಿಸಬೇಕು~ ಎಂದು ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯಾ ಘಟಕದ ಅಧ್ಯಕ್ಷ ಶ್ರಿನಾಥ ಪೂಜಾರಿ, ಸಚಿನ್ ಸವನಳ್ಳಿ, ವೆಂಕಟೇಶ ವಗ್ಗೆನವರ, ಎಸ್.ಪಿ. ಯಂಬತ್ನಾಳ, ರಫೀಕ್ ನದಾಫ್ ಇತರರು ಒತ್ತಾಯಿಸಿದರು.

ಎಸ್‌ಯುಸಿಐ: `ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಕೃತ್ಯವನ್ನು ಜಿಲ್ಲೆಯ ಜನತೆ ಖಂಡಿಸಬೇಕು. ಈ ಮೂಲಕ ಸುಳ್ಳು ಸಮಸ್ಯೆಗಳನ್ನು ಸೃಷ್ಟಿಸಿ, ಸಾಮಾನ್ಯ ಜನತೆಯನ್ನು ಮತಾಂಧತೆಯ ಕೂಪಕ್ಕೆ ತಳ್ಳುತ್ತಿರುವ ಕಾರ್ಯವನ್ನು ತಡೆಗಟ್ಟಬೇಕು~ ಎಂದು ಎಸ್.ಯು.ಸಿ.ಐ. ನ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಹೇಳಿದ್ದಾರೆ.

ಸಮಾಜದ ಸಾಹಿತಿಗಳು, ಬುದ್ದಿ ಜೀವಿಗಳು ಈ ಕುರಿತು ಗಂಭೀರವಾಗಿ ಚಿಂತಿಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಗಳಿಗೆ ಭಾವನಾತ್ಮಕವಾಗಿ ಬಲಿಯಾಗದೆ ಜನತೆ ಬಲಿಷ್ಠ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು  ಮನವಿ ಮಾಡಿದ್ದಾರೆ.

ಜೈ ಭವಾನಿ ಮಂಡಳ: ಸಿಂದಗಿಯಲ್ಲಿ ನಡೆದ ಘಟನೆ ಖಂಡನೀಯ. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಇಲ್ಲಿಯ ಜೈ ಭವಾನಿ ತರುಣ ಮಂಡಳಿಯ ಅಧ್ಯಕ್ಷ ಮಾಣಿಕ ಗೋಲಾಂಡೆ ಆಗ್ರಹಿಸಿದ್ದಾರೆ.

ಬಿ.ಎಸ್.ಪಿ. ಆಗ್ರಹ: `ಸಿಂದಗಿಯಲ್ಲಿ ಪಾಕ್ ಧ್ವಜಾರೋಹಣ ಮಾಡಿದ ಶ್ರಿರಾಮ ಸೇನೆಯ ಕೃತ್ಯ ಖಂಡನೀಯ. ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದರಿಂದ ಶ್ರಿರಾಮ ಸೇನೆಯ ಬಣ್ಣ ಬಯಲಾಗಿದೆ. ಈ ಸಂಘಟನೆಯನ್ನು ನಿಷೇಧಿಸಬೇಕು~ ಎಂದು ಬಿ.ಎಸ್.ಪಿ. ಮುಖಂಡ ಬಿ.ಎಚ್. ಮಹಾಬರಿ ಒತ್ತಾಯಿಸಿದ್ದಾರೆ.

`ತಪ್ಪಿತಸ್ಥರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಈ ಘಟನೆಯಿಂದ ಜಿಲ್ಲೆಯ ಎಲ್ಲೆಡೆ ಜನತೆ ಭಯ ಭೀತರಾಗಿದ್ದರು. ಆದರೆ, ಶಾಂತಿಯ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸಿದ ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಸಿ. ರಾಜಪ್ಪ ಮತ್ತಿತರರು ಅಭಿನಂದನಾರ್ಹರು~ ಎಂದು ಹೇಳಿದ್ದಾರೆ.

ಮತಕ್ಕಾಗಿ ದೇಶದ್ರೋಹ ಸಲ್ಲ: `ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿರುವ ಶ್ರೀರಾಮ ಸೇನೆ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು~ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಎಸ್.ಆರ್. ಪಾಟೀಲ ಒತ್ತಾಯಿಸಿದರು.

ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿರುವುದು ಹಿಂದೂ-ಮುಸ್ಲಿಂ ರಲ್ಲಿಯ ಭಾವೈಕ್ಯತೆಗೆ ಧಕ್ಕೆಯ ನ್ನುಂಟು ಮಾಡುವ ಯತ್ನವಾಗಿದೆ. ರಾಷ್ಟ್ರದ್ರೋಹ ಮಾಡಿದವರನ್ನು ಉಗ್ರವಾಗಿ ಶಿಕ್ಷಿಸಬೇಕು. ಮತದ ಮೇಲೆ ಕಣ್ಣಿಟ್ಟು ಇಂಥ ರಾಷ್ಟ್ರದ್ರೋಹಿ ಕೆಲಸ ಮಾಡುವುದು ಸರಿಯಲ್ಲ. ಸರ್ಕಾರ ಅವರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.

ಸೌಹಾರ್ದ ವೇದಿಕೆ: ಸಿಂದಗಿ ಘಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕು. ಕೋಮು ಭಾವನೆ ಕೆರಳಿಸುತ್ತಿರುವವರನ್ನು ಗಡಿಪಾರು ಮಾಡಬೇಕು. ಬಂಧಿತರನ್ನು ಉಗ್ರ ಶಿಕ್ಷೆಗೊಳಪಡಿಸಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡರಾದ ಸದಾನಂದ ಮೋದಿ, ಬಸಲಿಂಗಪ್ಪ ಬಿದರಕುಂದಿ, ಮಹಾದೇವಿ ಇಂಡಿ, ಸವಿತಾ ಬಜಂತ್ರಿ, ಸಾಬು ಸಿದ್ದರಡ್ಡಿ, ಪರಶುರಾಮ ಗರಸಂಗಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT