ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಾಭಿಲಾಷೆ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಈ ಸಲ ಎಲ್ಲೆಲ್ಲಿಯೂ ಶೀಲಾ ಕಿ ಜವಾನಿಯ ಧೂಂ ಜೋರಾಗಿತ್ತು. ಅದರ ಸದ್ದಡಗಿಸಿದ್ದು, ಮತ್ತೊಮ್ಮೆ ಕತ್ರಿನಾ. ಅಗ್ನಿಪಥ್ ಚಿತ್ರದ `ಚಿಕನಿ ಚಮೇಲಿ~ ಹಾಡಿನಿಂದ.

ಪ್ರೀತಿಯ ನವಿರು ಭಾವಗಳಿಗೆ ಇನ್ನಷ್ಟು ಕೋಮಲ ಸ್ಪರ್ಶ ನೀಡುವ ಶ್ರೇಯಾ ಘೋಶಾಲ್ ಈ ಹಾಡು ಹಾಡಿದ್ದರು. ಹಾಡಿನ ಒಳಧ್ವನಿಯಾದ ತುಂಟತನ, ಚಾಂಚಲ್ಯದ ಲಾಲಿತ್ಯ, ಲಜ್ಜೆಯ ಸ್ಪರ್ಶ ಎಲ್ಲವೂ ಈ ಹಾಡಿನಲ್ಲಿತ್ತು.

ಕತ್ರಿನಾ ಸಹ ಮಹಾರಾಷ್ಟ್ರದ ಕಲೆ `ತಮಾಸಾ~ದಂತೆ ಬಿಡುಬೀಸಾಗಿ ಹೆಜ್ಜೆ ಹಾಕಿದರು. ಆದರೆ ಇಲ್ಲಿ ಕತ್ರಿನಾಳ ಥಳಕು ಬಳಕಿಗಿಂತ ಮೇಲುಗೈ ಸಾಧಿಸಿದ್ದು, ಶ್ರೇಯಾ ಘೋಶಾಲ್ `ಚಿಕನಿ.... ಚಮೇಲಿ~ ಎಂದು ವೈಯ್ಯಾರದಿಂದ ಉಲಿದಿದ್ದು.

ಶ್ರೇಯಾ ಘೋಶಾಲ್ ಎಂದರೆ ಕನ್ನಡಿಗರಿಗೆ ನೆನಪಾಗುವುದು `ಮುಂಗಾರು ಮಳೆ~ ಚಿತ್ರದ `ಅರಳುತಿರು ಜೀವದ ಗೆಳೆಯ~ ಹಾಡು. ಆದರೆ ಶ್ರೇಯಾ ಎಂಬ ಗಾಯಕಿ ಬೆಳಕಿ ಬಂದಿದ್ದು 2003ರಲ್ಲಿ.

ದೇವದಾಸ್ ಚಿತ್ರ ಬಿಡುಗಡೆಯಾದಾಗ `ಬೈರಿ ಪಿಯಾ.... ಬಡಾ ಬೇದರ್ದಿ...~ (ವೈರಿ, ಪ್ರಿಯ... ಬಲು ನಿಷ್ಕರುಣಿ)  ಎಲ್ಲ ಹುಡುಗಿಯರೂ ಈ ಹಾಡನ್ನು ಗುನುಗುತ್ತಿದ್ದರು.
ಆ ಹಾಡಿಗೆ ಭಾವದುಂಬಿ, ಧ್ವನಿಯನ್ನು ನೀರಿನಂತೆ ಹರಿಬಿಟ್ಟಿದ್ದು ಬಂಗಾಳಿ ಬಾಲೆ ಶ್ರೇಯಾ ಘೋಷಾಲ್. ಹಿಂದಿ ಟೀವಿ ವೀಕ್ಷಕರಿಗೆಲ್ಲ ಅಷ್ಟೊತ್ತಿಗಾಗಲೇ ಶ್ರೇಯಾ ಚಿರಪರಿಚಿತ ಹೆಸರಾಗಿತ್ತು.

`ಸರೆಗಮ~ ರಿಯಾಲಿಟಿ ಶೋನಲ್ಲಿ ಮಕ್ಕಳ ವಿಭಾಗದಲ್ಲಿ ವಿಜೇತೆಯಾಗಿದ್ದ ಶ್ರೇಯಾ, ನಂತರ `ಸರೆಗಮಪ~ ರಿಯಾಲ್ಟಿ ಶೋದ ವಿಜೇತೆಯೂ ಆದರು.

ಶ್ರೇಯಾಗೆ ಹಿನ್ನೆಲೆ ಗಾಯಕಿಯ ವೇದಿಕೆ ಸಜ್ಜಾಗಿದ್ದು ಇದೇ ಸಂದರ್ಭದಲ್ಲಿ. ಸಂಜಯ್ ಲೀಲಾ ಬನ್ಸಾಲಿ ವಿರಹಿ ಪಾರೋಗೆ ಧ್ವನಿಯಾಗಲು ಕೋರಿದ್ದರು.

ದೇವದಾಸ್‌ನಷ್ಟೇ ಖ್ಯಾತಿಯನ್ನು ಪಾರೊ ಸಹ ಪಡೆಯಲು ಈ ಹಾಡು ಸಾಕಾಯಿತು. ಅಲ್ಲಿಂದ ಮುಂದಿನದ್ದು ಇತಿಹಾಸ. ದೇಶದ ಪಶ್ಚಿಮ ಭಾಗದಲ್ಲಿ ಹುಟ್ಟಿ, ಬೆಳೆದ ಶ್ರೇಯಾ ಮುಂಬೈಗೆ ಬಂದು ನೆಲೆಸಿದ್ದು, `ಸರೆಗಮ~ ಕಾರ್ಯಕ್ರಮದಲ್ಲಿ ವಿಜೇತೆಯಾದಾಗ ತೀರ್ಪುಗಾರ ಕಲ್ಯಾಣ್‌ಜಿ ಶ್ರೇಯಾ ಪಾಲಕರನ್ನು ಮುಂಬೈನಲ್ಲಿ ನೆಲೆಸಲು ಒಪ್ಪಿಸಿದ್ದರು.

ಸಂಗೀತ ನಿರ್ದೇಶಕ ಕಲ್ಯಾಣ್‌ಜಿ ಬಳಿ 18 ತಿಂಗಳು ಸಂಗೀತ ತರಬೇತಿ ಪಡೆದ ಶ್ರೇಯಾ ಮುಂಬೈನಲ್ಲಿ ಹಿಂದೂಸ್ತಾನಿ ಗಾಯನದಲ್ಲಿ ತೊಡಗಿಸಿಕೊಂಡರು. ಗಜಲ್ ಹಾಗೂ ಠುಮ್ರಿಯನ್ನು ಅಭ್ಯಸಿಸಿದರು.

ಇದೇ ಕಾರಣಕ್ಕೆ ಇವರಿಗೆ ಸಂಗೀತ ಎನ್ನುವುದು ಕೇವಲ ಹಾಡುಗಾರಿಕೆ ಆಗಲಿಲ್ಲ. ವೃತ್ತಿಯೂ ಆಗಲಿಲ್ಲ. ಸಂಗೀತವೇ ತಪವಾಯಿತು.

ಬಂಗಾಲಿ ಬಾಲೆಯೊಬ್ಬಳು, ಹಿಂದಿ, ಉರ್ದುವಿನ ಕಠಿಣ ಉಚ್ಚಾರಗಳನ್ನೂ ಸ್ಪಷ್ಟವಾಗಿ ಹೃದ್ಯವಾಗುವಂತೆ ಹಾಡಲು ಇದೇ ಕಾರಣವಾಯಿತು. ಕೇವಲ ಹಿಂದಿ- ಉರ್ದುಗಳಾದರೆ ಹಿಂದೂಸ್ತಾನಿ ಕಲಿಕೆಯಲ್ಲಿ ಅದು ಸಹಜ ಎನ್ನಬಹುದು. ಆದರೆ ದಕ್ಷಿಣದ ಮಲಯಾಳಂ ಭಾಷೆಯನ್ನೂ ಭಾವದುಂಬಿ ಹಾಡಿದರು.

ಕನ್ನಡದಲ್ಲಿಯೂ `ಅರಳುತಿರು ಜೀವದ ಗೆಳೆಯ...~ ಮೂಲಕ ನಾದಲೋಕದಲ್ಲಿ ಕಾಲಿರಿಸಿದಾಗ, ಇದು ಕನ್ನಡದ್ದೇ ಹುಡುಗಿ ಎನ್ನುವಂತೆ ಹಾಡಿದರು.

ಶ್ರೇಯಾಳ ಶ್ರೇಯದ ಗುಟ್ಟು ಇದೇನೆ. ಭಾಷೆ ಯಾವುದೇ ಆಗಿರಲಿ, ಆ ಭಾಷಿಗರನ್ನು, ಭಾಷೆಯನ್ನು ಗೌರವಿಸಬೇಕು ಎಂಬುದು ಅವರ ಮೂಲ ಮಂತ್ರ. ಅದೇ ಕಾರಣಕ್ಕೆ ಪ್ರತಿಯೊಂದು ಭಾಷೆಯನ್ನೂ ಪರಿಣತರಿಂದ ಹಿಂದಿಯಲ್ಲಿ ಸ್ಪಷ್ಟವಾಗಿ ಬರೆಯಿಸಿಕೊಂಡು, ಅರ್ಥೈಸಿಕೊಂಡು ನಂತರ ಹಾಡಲು ಮುಂದಾಗುತ್ತಾರೆ.

ಈ ತಪದ ಫಲ ಇಂದು ದಕ್ಷಿಣ ಭಾರತದಲ್ಲಿಯೂ ಶ್ರೇಯಾ ಘೋಷಾಲ್ ತಮ್ಮ ಹೆಸರನ್ನು ಸ್ಥಾಯಿಯಾಗಿಸಿದ್ದಾರೆ. ಸಂಗೀತ ನಿರ್ದೇಶಕ ಮನೋಮೂರ್ತಿ, ಹರಿಕೃಷ್ಣ ಮುಂತಾದವರಿಗೆಲ್ಲ ಹಿನ್ನೆಲೆ ಗಾಯಕಿ ಎಂದರೆ `ಶ್ರೇಯಾ~ ಎಂಬಷ್ಟು ಅಚ್ಚುಮೆಚ್ಚು ಆಗಿದ್ದಾರೆ.

`ಎಕ್ಸ್ ಫ್ಯಾಕ್ಟರ್~ ಕಾರ್ಯಕ್ರಮವೊಂದರಲ್ಲಿ ಸಂಜಯ್ ಲೀಲಾ ಬನ್ಸಾಲಿ ಶ್ರೇಯಾಗೆ ನಟಿಸಬಾರದೇಕೆ? ಎಂದು ಇನ್ನೊಂದು ಅವಕಾಶವನ್ನೂ ತೆರೆದಿದ್ದರು. ಆದರೆ ನಟನೆಗೆ ಅಗತ್ಯವಿರುವಂತೆ ಶ್ರೇಯಾ ತಯಾರುಗೊಳ್ಳಲು ಬೇಕಿರುವ ಸಮಯ, ಅವರ ಸಂಗೀತ ಶ್ರಮವನ್ನು ಕಸಿಯುವ ಆತಂಕ ಶ್ರೇಯಾಗೂ ಇದೆ. ಬನ್ಸಾಲಿ ಅವರಿಗೂ ಇದೆ.

`ನನ್ನ ಅಭಿವ್ಯಕ್ತಿ ಮಾಧ್ಯಮ ಏನಿದ್ದರೂ ಶಾರೀರದಿಂದ ಮಾತ್ರ. ನಟನೆಯೇ ಮಹಾಸಾಧನೆ ಎಂದು ಭಾವಿಸಿದವರಿಗೆ ಸಮರ್ಥ ಉತ್ತರ ನೀಡಬೇಕಿದೆ~ ಎಂಬುದು ಶ್ರೇಯಾ ಅಭಿಪ್ರಾಯ.
ಬಾಲಿವುಡ್ ಸೇರಿದಂತೆ ದಕ್ಷಿಣದ ಹೆಸರುವಾಸಿ ಸಂಗೀತ ನಿರ್ದೇಶಕರೊಂದಿಗೆ ಹಾಡಿದ ಅನುಭವ ಶ್ರೇಯಾಗಿದೆ. ಆದರೆ ಅವರು ಹಾಡಬಯಸುವ ನಿರ್ದೇಶಕರ ಬಗ್ಗೆ ಕೇಳಿದರೆ, ವಿಷಾದವೊಂದು ಅವರಲ್ಲಿ ಸುಳಿದು ಹೋಗುತ್ತದೆ.

ಕಾರಣ ದಿ. ಲಕ್ಷ್ಮಿಕಾಂತ್ ಪ್ಯಾರೆಲಾಲ್, ಮದನ್ ಮೋಹನ್, ಎಸ್.ಡಿ.ಬರ್ಮನ್, ಆರ್.ಡಿ ಬರ್ಮನ್ ಮುಂತಾದವರೊಂದಿಗೆ ಕೆಲಸ ಮಾಡುವ ಅನುಭವ ದೊರೆಯಲಿಲ್ಲವಲ್ಲ ಎಂಬ ವ್ಯಥೆ ಶ್ರೇಯಾರದ್ದು.

ಮುಂಗಾರು ಮಳೆಯ `ಅರಳುತಿರು ಜೀವದ ಗೆಳೆಯ~ ಹಾಡು ತಮ್ಮ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದು ಎಂದು ಹೇಳುವ ಶ್ರೇಯಾ ಕನ್ನಡಿಗರೆಂದರೆ ಸಂಗೀತ ಹಾಗೂ ಆಹಾರ ಪ್ರಿಯರು ಎಂದೇ ಬಣ್ಣಿಸುತ್ತಾರೆ.

`ಮುಂಬರುವ ಐದು ವರ್ಷಗಳ ಬಗ್ಗೆ ಸ್ಪಷ್ಟ ಯೋಜನೆ ಹಾಕಿಕೊಳ್ಳುವ ಇರಾದೆ ಇದೆ. ಅದರಂತೆ ಬದುಕನ್ನು ರೂಪಿಸಿಕೊಳ್ಳುವ ಬಯಕೆ ಇದೆ~ ಎನ್ನುತ್ತಾರೆ ಶ್ರೇಯಾ. ಸ್ಫುರದ್ರೂಪಿ ಶ್ರೇಯಾ ಮದುವೆಯ ಬಗ್ಗೆ ಕೇಳಿದರೆ ಮಾತ್ರ  ಈವರೆಗೆ ಯೋಚಿಸಿಲ್ಲ ಆದರೆ, ಈ ಯೋಜನೆಗಳಲ್ಲಿ ಅದೂ ಒಂದಾಗಿರಬಹುದೇನೋ ಎಂದು ತುಂಟ ನಗೆ ಚಿಮ್ಮಿಸುತ್ತಾರೆ.

`ಧ್ವನಿ ನೀರಿದ್ದಂತೆ. ಯಾವ ಭಾಷೆಗೆ ಬಳಸಿದರೂ ಅದರಂತೆಯೇ ರೂಪತಾಳಬೇಕು. ನಾದನದಿಯಂತೆ ಹರಿವು ಇರಬೇಕು~ ಅಂತ  ಉಷಾ ಉತ್ತಪ್ ಒಂದೆಡೆ ಹೇಳಿದ್ದರು. ಶ್ರೇಯಾ ಅದನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದಾರೆ.

ಸಂಗೀತಕ್ಕೆ ಭಾಷೆ ಇಲ್ಲ ಎಂಬುದನ್ನು ಅಲ್ಲಗಳೆದು, ಭಾಷೆಯನ್ನು ಗೌರವಿಸುತ್ತಲೇ, ಸಂಗೀತಕ್ಕೆ ಯಾವುದೇ ಎಲ್ಲೆ ಇಲ್ಲ ಎಂಬುದನ್ನು ದೃಢಪಡಿಸುತ್ತಿದ್ದಾರೆ ಶ್ರೇಯಾ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT