ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಅಮೆರಿಕ ಬಜೆಟ್ ಭೀತಿ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕ ಬಜೆಟ್‌ಗೆ ಸಂಬಂಧಿಸಿದಂತೆ ಜಾಗತಿಕ ಷೇರುಪೇಟೆಗಳಲ್ಲಿ ಮೂಡಿರುವ ಆತಂಕವು ಈ ವಾರದ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

60,000 ಕೋಟಿ ಡಾಲರ್ ಮೌಲ್ಯದ ಈ ಬಜೆಟ್‌ನಲ್ಲಿ ತೆರಿಗೆ ಹೆಚ್ಚಿಸಲಾಗುತ್ತದೆ ಎಂಬ ಸುದ್ದಿ ಈಗಾಗಲೇ ಷೇರುಪೇಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಪ್ರಭಾವದಿಂದ ಕಳೆದ ವಾರಾಂತ್ಯದಲ್ಲಿ `ಡವ್‌ಜೋನ್ಸ್' ಕೈಗಾರಿಕಾ ಸರಾಸರಿ ಸೂಚ್ಯಂಕ 121 ಅಂಶಗಳಷ್ಟು ಕುಸಿತ ಕಂಡಿದೆ.

ಅಮೆರಿಕ ಬಜೆಟ್ ಪ್ರಭಾವ ಅಲ್ಪಾವಧಿಯಾಗಿದ್ದರೂ, ಸೂಚ್ಯಂಕ ದಿಢೀರ್ ಏರಿಳಿತ ಕಾಣಬಹುದು. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ಎರಡು ವಾರಗಳಲ್ಲಿ ವಹಿವಾಟು ಮಂದಗತಿಯಲ್ಲಿ ಇರುತ್ತದೆ. ಇದು ಕೂಡ ಹೂಡಿಕೆದಾರರ ಲಾಭ ಗಳಿಕೆ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಚಟುವಟಿಕೆ ತಗ್ಗಿದೆ ಎಂದು `ಕೊಟೆಕ್ ಸೆಕ್ಯುರಿಟೀಸ್' ಮುಖ್ಯಸ್ಥ ದಿಪಿನ್ ಷಾ ವಿಶ್ಲೇಷಿಸಿದ್ದಾರೆ.

ಜನವರಿ ಎರಡನೇ ವಾರದಿಂದ ಕಾರ್ಪೊರೇಟ್ ಕಂಪೆನಿಗಳ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಗೊಳ್ಳಲಿದ್ದು, ಪೇಟೆಗೆ ಮತ್ತೆ ಉತ್ತೇಜನ ಲಭಿಸಬಹುದು ಎಂದು `ಏಂಜೆಲ್ ಬ್ರೊಕಿಂಗ್' ಸಂಸ್ಥೆ ಅಭಿಪ್ರಾಯಪಟ್ಟಿದೆ.   
ಕ್ರಿಸ್‌ಮಸ್ ನಿಮಿತ್ತ ಮಂಗಳವಾರ ಷೇರುಪೇಟೆಗೆ ರಜೆ.

ಹೊಸ ಚೆಕ್ ಗಡುವು
ನವದೆಹಲಿ (ಪಿಟಿಐ):
ಬ್ಯಾಂಕೇತರ ಹಣಕಾಸು ಸಂಸ್ಥೆಗಳ(ಎನ್‌ಬಿಎಫ್‌ಸಿ) ಗ್ರಾಹಕರು 2013ರ ಮಾರ್ಚ್‌ವರೆಗೂ ಸಾಲದ ಮಾಸಿಕ ಕಂತು (ಇಎಂಐ) ಪಾವತಿಗೆ ಸದ್ಯ ಚಾಲ್ತಿಯಲ್ಲಿರುವ ಚೆಕ್‌ಗಳನ್ನೇ ಬಳಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಹೊಸ ಚಿಹ್ನೆ-ಸಂಕೇತ ಮೊದಲಾದ ಭದ್ರತಾ ಅಂಶಗಳಿರುವ `ಸಿಟಿಎಸ್-2010' ಮಾದರಿ ಚೆಕ್ ಬಳಕೆ ಜಾರಿಗೆ ತರಲು ಬ್ಯಾಂಕ್‌ಗಳಿಗೆ ನೀಡಿದ ಗಡುವನ್ನು ಈಗಾಗಲೇ ವಿಸ್ತರಿಸಿರುವುದರಿಂದ `ಎನ್‌ಬಿಎಫ್‌ಸಿ' ಗ್ರಾಹಕರಿಗೂ ಈ ವಿನಾಯ್ತಿ ವಿಸ್ತರಿಸಲಾಗಿದೆ. `ಸಿಟಿಎಸ್-2010' ಮಾದರಿ ಬಳಕೆಗೆ ಬಂದ ನಂತರ ಹೊಸ ಚೆಕ್‌ಗಳನ್ನೇ ಸ್ವೀಕರಿಸಬೇಕು ಎಂದು `ಆರ್‌ಬಿಐ' ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT