ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕುಚಿತ ಭಾವನೆಯಿಂದ ಹೊರಬನ್ನಿ

Last Updated 13 ಜೂನ್ 2011, 8:10 IST
ಅಕ್ಷರ ಗಾತ್ರ

ಶಿವಮೊಗ್ಗ: ಮನುಷ್ಯ ವಿದ್ಯಾವಂತನಾದರೂ ಜಾತಿ, ಧರ್ಮ, ಭಾಷೆಯ ಸಂಕುಚಿತ ಭಾವನೆಯಿಂದ ಹೊರಬರುತ್ತಿಲ್ಲ ಎಂದು ಚಿತ್ರನಟ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಜಗ್ಗೇಶ್ ವಿಷಾದಿಸಿದರು.

ತಮಿಳು ಯುವಕರ ಸೇವಾ ಸಂಘ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಕ್ತದಾನ ಮತ್ತು ರಕ್ತ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ  ಭಾರತೀಯರು ಚೆನ್ನಾಗಿರಬಾರದೆಂಬ ಉದ್ದೇಶದಿಂದ ಬ್ರಿಟಿಷರು ಭಾರತೀಯರಲ್ಲಿ ಜಾತಿ, ಧರ್ಮ, ಭಾಷೆಯ ವಿಷ ಬೀಜ ಬಿತ್ತಿದರು. ಆದರೆ ನಾವು ಇಂದು ವಿದ್ಯಾವಂತರಾದರೂ ಈ ಭಾವನೆಗಳಿಂದ ಹೊರಬರಲು ಸಾಧ್ಯವಾಗಿಲ್ಲ ಎಂದರು.

ಇಡೀ ವಿಶ್ವದಲ್ಲಿ ಕಲಾವಿದ ಮಾತ್ರ ಜಾತಿ ಇಲ್ಲದ ಮನುಷ್ಯ. ಆತ ತನ್ನ ನಟನೆಯಿಂದ ಜಾತಿ, ಮತ, ಭಾಷೆಯ ಅಡೆತಡೆ ಇಲ್ಲದೆ ಎಲ್ಲರನ್ನೂ ಆರ್ಕಷಿಸುವ ಶಕ್ತಿ ಹೊಂದಿದ್ದಾನೆ ಎಂದರು.

ಚಿತ್ರಮಂದಿರಗಳು ಜಾತ್ಯತೀತ ಕೇಂದ್ರಗಳಾಗಿದ್ದು, ಇಂದು ಜನರು ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ನಾವು ಕಲೆಯನ್ನು ಪ್ರೋತ್ಸಾಹಿಸದೇ ಮುಂದಿನ ಪೀಳಿಗೆಗೆ ಮೋಸ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಿಶ್ವಾಸ ಮತ್ತು ಪರಿಶ್ರಮಕ್ಕೆ ಮತ್ತೊಂದು ಹೆಸರು ತಮಿಳು ಸಮಾಜ. ತಮಿಳು ಸಂಘ ಸದಾ ಕ್ರಿಯಾಶೀಲವಾಗಿರಲಿ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳರು ಹಾಗೂ ಕನ್ನಡಿಗರ ನಡುವೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಕರ್ನಾಟಕದಲ್ಲಿ ತಿರುವಳ್ಳರ್ ಪ್ರತಿಮೆಯನ್ನು, ತಮಿಳುನಾಡಿನಲ್ಲಿ ಸರ್ವಜ್ಞನ ಪ್ರತಿಮೆ ಪ್ರತಿಷ್ಠಾಪನೆಗೆ ಕಾರಣರಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗುಡ್ಡೇಕಲ್‌ನಲ್ಲಿ ಇರುವ ಬಾಲಸುಬ್ರಹ್ಮಣ್ಯಸ್ವಾಮಿ ದೇವಾಲಯದ ನಾಲ್ಕುವರೆ ಎಕರೆ ಭೂಮಿಯನ್ನು ತಮಿಳು ಸಮಾಜಕ್ಕೆ ನೀಡಲಾಗಿದೆ. ಅಲ್ಲದೇ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ ರೂ ಗಳ ಅನುದಾನ ನೀಡಲಾಗಿದೆ ಎಂದರು.

ತಮಿಳು ಕಲಿಯುತ್ತೇನೆ: ತಮಿಳು ಸಮಾಜದ ಮುಂದಿನ ಕಾರ್ಯಕ್ರಮಕ್ಕೆ ಬರುವುದರ ಒಳಗೆ ತಮಿಳು ಭಾಷೆ ಕಲಿತು, ಮುಂದಿನ ಸಮಾರಂಭದಲ್ಲಿ ತಮಿಳು ಭಾಷೆಯಲ್ಲಿಯೇ ಮಾತನಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ರಾಘವೇಂದ್ರ ಘೋಷಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಮಿಳುನಾಡಿನ ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪೊಗಳಂಜಿ, ತಮಿಳು ಚಿತ್ರರಂಗದ ಹಾಸ್ಯನಟ ಚಿನ್ನಿ ಜಯಂತ್, ಜಿಲ್ಲಾ ತಮಿಳ್ ತಾಯ್ ಸಂಘದ ಅಧ್ಯಕ್ಷ ಡಿ. ರಾಜಶೇಖರಪ್ಪ, ತಮಿಳು ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಎಂ.ಪಿ. ಸಂಪತ್, ಪದಾಧಿಕಾರಿಗಳಾದ ಎಸ್. ಮಂಜುನಾಥ್, ಡಿ. ರಮೇಶ್, ಕೆ. ಮರುಗನ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಂ.ಪಿ. ಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT