ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕ್ಷೇತ್ರಕ್ಕೆ ಹವ್ಯಾಸಿಗಳ ಕೊಡುಗೆ

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

ಸಂಗೀತ ಕ್ಷೇತ್ರದಲ್ಲಿ ವೃತ್ತಿನಿರತ ಕಲಾವಿದರು ಬೆಳಗುತ್ತಿರುವಂತೆಯೇ ಹವ್ಯಾಸಿ ಕಲಾವಿದರ ದೊಡ್ಡ ಬಳಗವೇ ಇದೆ. ಎಂಜಿನಿಯರ್, ವೈದ್ಯಕೀಯ, ನ್ಯಾಯಾಂಗ, ಪೊಲೀಸ್, ವಿಜ್ಞಾನ, ವ್ಯಾಪಾರ, ವಾಣಿಜ್ಯ, ಪತ್ರಿಕೋದ್ಯಮ - ಹೀಗೆ ಭಿನ್ನ ಕ್ಷೇತ್ರಗಳಲ್ಲಿ ಇರುವವರು ಸಂಗೀತ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ.

ವೃತ್ತಿಯಲ್ಲಿ ವೈದ್ಯರಾದ ಬಿ.ಆರ್. ಪದ್ಮನಾಭರಾವ್ ಪ್ರವೃತ್ತಿಯಲ್ಲಿ ಸಂಗೀತಗಾರರೇ! ನೇತ್ರ ತಜ್ಞರಾಗಿ ಮಲ್ಲೇಶ್ವರದ ತಮ್ಮ ಇಂದಿರಾ ಕ್ಲಿನಿಕ್‌ನಲ್ಲಿ ಸರ್ಜನ್‌ರಾಗಿ ಚಿಕಿತ್ಸೆ ಮಾಡುತ್ತಿರುವರಲ್ಲದೆ ಹಿಂದುಳಿದವರಿಗೆ ಉಚಿತ ಶುಶ್ರೂಷೆಯನ್ನೂ ಮಾಡುತ್ತಿರುವರು. ಅಲ್ಲದೆ ಆರೋಗ್ಯ ಶಿಬಿರ, ಉಚಿತ ತಪಾಸಣೆ   ಮುಂತಾದವುಗಳ ಮೂಲಕ ಅವಿರತ ಸಮಾಜ ಸೇವೆ ಮಾಡುವ ಅವರು ನಿಷ್ಠಾವಂತ ಸರಳ ಸಮಾಜ ಸೇವಕರು.

ಬಾಲ್ಯದಿಂದಲೂ ಪದ್ಮನಾಭರಾಯರಿಗೆ ಸಂಗೀತದ ಗೀಳು. ಪ್ರಾರಂಭಿಕ ಶಿಕ್ಷಣವನ್ನು ದಿವಂಗತ ಚಿಂತಲಪಲ್ಲಿ ಸೂರ್ಯನಾರಾಯಣ ಅವರಲ್ಲಿ ಪಡೆದರು. ಎಸ್.ಬಿ. ಕೇಶವಮೂರ್ತಿ ಎಂ. ರಾಘವೇಂದ್ರ, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಸಿ.ಕೆ. ತಾರ, ಡಾ. ನಟರಾಜಮೂರ್ತಿ   ಮುಂತಾದವರ ಬಳಿ ಮುಂದುವರಿಸಿದರು.

ಹೀಗಾಗಿ ಶಾಸ್ತ್ರೀಯ ಸಂಗೀತವಲ್ಲದೆ ದೇವರನಾಮ ಹಾಗೂ ಭಾವಗೀತೆಗಳ ಗಾಯನದಲ್ಲೂ ನಿಷ್ಣಾತರಾಗಿದ್ದಾರೆ. ಈಗ ಕೆಲ ಕಾಲದಿಂದ ರುದ್ರಪಟ್ಟಣ ಸಹೋದರರಲ್ಲಿ ಒಬ್ಬರಾದ ಆರ್.ಎನ್. ತ್ಯಾಗರಾಜನ್ ಅವರಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿದ್ದಾರೆ. ಸಂಗೀತ ಕಛೇರಿಗಳು ಅವರಿಗೆ ಹೊಸದೇನಲ್ಲ! 

ಡಾ. ಪದ್ಮನಾಭರಾವ್ ಕಳೆದ ಶುಕ್ರವಾರ ಬೆಂಗಳೂರು ಲಲಿತಕಲಾ ಪರಿಷತ್ತಿನ ಆಶ್ರಯದಲ್ಲಿ, ಡಾ. ಎಚ್. ನರಸಿಂಹಯ್ಯ ಕಲಾಕ್ಷೇತ್ರದಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಅವರೊಂದಿಗೆ ಪಿಟೀಲಿನಲ್ಲಿ ಮೈಸೂರು ದಯಾಕರ್, ಮೃದಂಗದಲ್ಲಿ ಜಿ.ಎಲ್. ರಮೇಶ್ ಹಾಗೂ ಘಟದಲ್ಲಿ ಆರ್. ಸತ್ಯಕುಮಾರ್ ಭಾಗಿಯಾದರು. ಸುಪರಿಚಿತ ವರ್ಣ  `ನಿನ್ನುಕೋರಿ~ಯನ್ನು ಎರಡು ಕಾಲದಲ್ಲಿ ಹಾಡಿ, ಕಾರ್ಯಕ್ರಮಕ್ಕೆ ಸುಭದ್ರ ಚಾಲನೆ ನೀಡಿದರು. ಮಾಮೂಲಿ ಗಣೇಶನ ಮೇಲಿನ ರಚನೆಗಳ ಬದಲು ತ್ಯಾಗರಾಜರ `ಶಶಿವದನ ಭಕ್ತಜನಾವನ~  ಆಯ್ದದ್ದೇ ಸ್ವಾಗತಾರ್ಹ. `ವರಮುಲ~ ಮತ್ತು  `ಸರೋಜ ದಳನೇತ್ರಿ~ ಎರಡೂ ಕೃತಿಗಳು ಹಿಂದಿನ ಮಧುರ ನೆನಪುಗಳನ್ನು ತಂದವು. `ವಾಣಿ   ನೀಲವೇಣಿ - ಸರಸ್ವತಿ~ ಮೇಲಿನ ರಚನೆಯು ಕಿರುರಾಗ ಹಾಗೂ ಚಿಟ್ಟೆ ಸ್ವರಗಳಿಂದ ಬೆಳಗಿತು.  ಅನ್ನಪೂರ್ಣೆ ವಿಶಾಲಾಕ್ಷಿ ರಾಗಭಾವ ಹೊಮ್ಮುವಂತೆ ವಿಳಂಬದಲ್ಲಿ ಮೂಡಿತು.
ಹಿಂದಿನಿಂದಲೂ ಪ್ರಸಿದ್ಧವಾಗಿರುವ ದೇವರನಾಮ `ಏನು ಧನ್ಯಳೊ ಲಕುಮಿ ಎಂಥ ಮಾನ್ಯಳೊ~ ಎಂದೂ ಶಂಕರಾಭರಣ ರಾಗವನ್ನು ಹಿತಮಿತವಾಗಿ ಆಲಾಪಿಸಿ, ಶ್ಯಾಮಾಶಾಸ್ತ್ರಿಗಳ ಘನವಾದ ಕೃತಿ  `ಸರೋಜ ದಳನೇತ್ರಿ ಹಿಮಗಿರಿ ಪುತ್ರೀ~ ಆಯ್ದರು.
ನೆರವಲ್‌ನಿಂದ (ಸಾಮಗಾನ ವಿನೋದಿನಿ ಗುಣಧಾಮ ಶ್ಯಾಮ ಖೃಷ್ಣನುತೇ) ಕೀರ್ತನೆಯ ಗಾಢತೆಯನ್ನು ವೃದ್ಧಿಸುವ ಪ್ರಯತ್ನ ಮಾಡಿ, ಸ್ವರ ಪ್ರಸ್ತಾರಕ್ಕೆ ಸರಿದರು. ಯಾವುದನ್ನೂ ಅತಿಯಾಗಿಸದೆ, ಮಿತ ಚೌಕಟ್ಟಿನಲ್ಲಿ ಶ್ರದ್ಧೆಯಿಂದ ಹಾಡಿದ ಡಾ. ಪದ್ಮನಾಭರಾವ್ ಅವರ ಸಂಗೀತ ಭವಿಷ್ಯ ಆಶಾದಾಯಕವಾಗಿದೆ.

ಕೊನೆಯಲ್ಲಿ ಇನ್ನೊಂದು ದೇವರನಾಮ (ಹರಿಯ ದರುಶನಕ್ಕಾಗಿ) ಮತ್ತು ಕನ್ನಡ ಮಂಗಳದೊಂದಿಗೆ (ಮಂಗಳಂ ಜಯ ಮಂಗಳಂ) ಮುಕ್ತಾಯ ಮಾಡಿದರು.

ಭಿನ್ನರುಚಿಯ ಲಯತರಂಗ
ಲಯವಾದ್ಯಗಳ ಸ್ವಂತಿಕೆ ವ್ಯಕ್ತಿತ್ವಗಳನ್ನು ಬಿಂಬಿಸುವ ಲಯವಾದ್ಯ ಗೋಷ್ಠಿಗಳು ವೃದ್ಧಿಸುತ್ತಿರುವುದು ಸಂತೋಷದ ವಿಷಯ. ಮೃದಂಗ, ಘಟಗಳಂಥ ಭಾರತೀಯ ಸಾಂಪ್ರದಾಯಿಕ ವಾದ್ಯಗಳ ಜೊತೆ ಜಾಸ್ ಡ್ರಂಸ್ ಮತ್ತು ಹ್ಯಾಂಡ್ ಪರ್ಕಷನ್ ವಾದ್ಯಗಳನ್ನು ಮೇಳೈಸಿ ಲಯ ತರಂಗದವರು ಒಂದು ಹೊಸ ವಾದ್ಯಗೋಷ್ಠಿಯನ್ನು ತಾಳ ವಾದ್ಯೋತ್ಸವದಲ್ಲಿ ಸಾದರ ಪಡಿಸಿದರು. ನಮ್ಮ ಲಯ ವಾದ್ಯಗಳಲ್ಲಿ ವೆಸ್ಟರ್ನ್ ಪಾರ್ಟ್ಸ್ ಹಾಗೂ ಅದಕ್ಕೆ ಹೊಂದುವಂಥ ಮುಕ್ತಾಯಗಳ ಜೋಡಣೆ; ಹಿಂದುಸ್ತಾನಿಯ ಬೋಲ್, ತಿಹಾಯ್‌ಗಳನ್ನು ಆಧರಿಸಿದ ವಿನಿಕೆ; ಲ್ಯಾಟಿನ್ ಲಯವಾದ್ಯಗಳ ಸೊಂಪು. ಹಾಗೆಯೇ ಕರ್ನಾಟಕ ಸಂಗೀತ ಶೈಲಿಯ ವಾದನ ಹಾಗೂ ಅದಕ್ಕೆ ಹೊಂದುವ ಕೊನಕೋಲು; ಎಲ್ಲಾ ಸೇರಿ ಮೊಹರ ಮುಕ್ತಾಯ.  ಉದ್ದಕ್ಕೂ ಕುತೂಹಲ ಮೂಡಿಸಿದ ಲಯ ವಾದ್ಯಗೋಷ್ಠಿ ಅಲ್ಲಲ್ಲಿ ಅಬ್ಬರ ಎನಿಸಿದರೂ ರೋಚಕವೂ ರಂಜನೀಯವೂ ಆಗಿತ್ತು. ಕೆ.ಯು. ಜಯಚಂದ್ರ ರಾವ್, ಉಳ್ಳೂರು ಗಿರಿಧರ ಉಡುಪ, ಅರುಣ್ ಕುಮಾರ್ ಮತ್ತು ಪ್ರಮಥ್ ಕಿರಣ್ ತಮ್ಮ ಅನುಭವಪೂರಿತ ಕೈಚಳಕದಿಂದ ಗಮನ ಸೆಳೆದುಕೊಂಡರು.

2012ರ ತಾಳವಾದ್ಯೋತ್ಸವಕ್ಕೆ ಲಯತರಂಗದ ವಾದನ ಔಚಿತ್ಯಪೂರ್ಣ ಮುಕ್ತಾಯವನ್ನು ತಂದಿತು. ಸದಸ್ಸಿನಲ್ಲಿ ತಿರುವನಂತಪುರಂ ವಿ. ಸುರೇಂದ್ರನ್  ಮೃದಂಗ ಕಲಾ ಶಿರೋಮಣಿ ಬಿರುದನ್ನು, ತಿರುಚಿ ಜೆ. ವೆಂಕಟರಾಮನ್ ಲಯ ಕಲಾನಿಪುಣ , ಸೀತಾಲಕ್ಷ್ಮಿ ವೆಂಕಟೇಶನ್ ಸಂಗೀತ ಕಲಾಭಿಜ್ಞ, ಎಂ. ಗುರುರರಾಜ್ ಲಯಕಲಾ ಪ್ರತಿಭಾಮಣಿ  ಹಾಗೂ ಮೈಸೂರು ಎಂ. ರಾಧೇಶ್ ಸಿ.ಎಂ.ಎ.ಎನ್.ಎ. ದತ್ತಿ ಬಹುಮಾನವನ್ನು ಸ್ವೀಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT