ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್ ಜೋಶಿಗೆ ಜೀವ ಬೆದರಿಕೆ?

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಾಜಕೀಯ ಕಡುವೈರಿ ಮತ್ತು ಬಿಜೆಪಿ ತ್ಯಜಿಸಿದ ಆರ್‌ಎಸ್‌ಎಸ್ ನಾಯಕ ಸಂಜಯ್ ಜೋಶಿ ತಮಗೆ ಜೀವಭಯವಿದ್ದು, ಅಗತ್ಯ ರಕ್ಷಣೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಪತ್ರ ಬರೆದಿದ್ದಾರೆ.

ಆ ಮೂಲಕ ತಮ್ಮ ಮತ್ತು ಮೋದಿ ನಡುವಿನ ಹೋರಾಟಕ್ಕೆ ಮತ್ತೊಂದು ಹೊಸ ತಿರುವು ನೀಡಿದ್ದಾರೆ.
ಕಳೆದ ಕೆಲವು ವಾರಗಳಿಂದ ತಮ್ಮ ಮೊಬೈಲ್‌ಗೆ ಅನಾಮಧೇಯ ವ್ಯಕ್ತಿಗಳಿಂದ ನಿರಂತರವಾಗಿ ಜೀವಬೆದರಿಕೆಯ ಕರೆಗಳು ಬರುತ್ತಿವೆ.
 
ಮೂರು ಬೇರೆ ಬೇರೆ ದೂರವಾಣಿ ಸಂಖ್ಯೆಗಳಿಂದ ಈ ಕರೆಗಳು ಬರುತ್ತಿದ್ದು, ಜೊತೆಯಲ್ಲಿಯೇ ಬೆದರಿಕೆ  ಪತ್ರಗಳು  ಬಂದಿವೆ. ತಮ್ಮ ಪ್ರಾಣಕ್ಕೆ ಅಪಾಯವಿದ್ದು ಸೂಕ್ತ ರಕ್ಷಣೆ ನೀಡುವಂತೆ ಕೋರಿ ಅವರು ಚಿದಂಬರಂಗೆ ಪತ್ರ ಬರೆದಿದ್ದಾರೆ. ಜೂನ್ 14ರಂದು ಬರೆದಿರುವ ಈ ಪತ್ರವನ್ನು ಅವರ ಬೆಂಬಲಿಗರು ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕೈಬರಹದ ಬೆದರಿಕೆ ಪತ್ರದಲ್ಲಿ ರಸೂಲ್ ಖಾನ್ ಎಂಬ ಹೆಸರಿದೆ. ಸಾವಿಗೆ ಸಿದ್ಧನಾಗಿರುವಂತೆ ಎಚ್ಚರಿಸಲಾಗಿದೆ. ಈ ಮೊದಲು ಸುರಕ್ಷಿತ ಭಾವನೆ ಮೂಡಿದ್ದ ತಮಗೆ ಈ ಹೊಸ ಬೆದರಿಕೆ ಹಿನ್ನೆಲೆಯಲ್ಲಿ ಜೀವಭಯ ಆರಂಭವಾಗಿದೆ. ದೆಹಲಿಯಲ್ಲಿ ಮಾತ್ರವಲ್ಲ, ಅದರ ಹೊರಗೂ ಹೆಚ್ಚಿನ ರಕ್ಷಣೆ ನೀಡುವಂತೆ ಅವರು ಕೋರಿದ್ದಾರೆ.    

ತಮ್ಮ ರಾಜಕೀಯ ಕಡುವೈರಿ ಜೋಶಿ ರಾಜೀನಾಮೆ ನೀಡದ ಹೊರತು ಮುಂಬೈನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಹಾಜರಾಗುವುದಿಲ್ಲ ಎಂದು ನರೇಂದ್ರ ಮೋದಿ ಪಟ್ಟು ಹಿಡಿದಿದ್ದರು. ಮೋದಿ ಜೊತೆಗಿನ ಸಂಘರ್ಷದಲ್ಲಿ ಜೋಶಿ ತಲೆದಂಡ ತೆರಬೇಕಾಗಿತ್ತು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಪಡೆದ ನಂತರ ಬೇಸತ್ತ ಅವರು ಜೂನ್ 8ರಂದು ಬಿಜೆಪಿಯನ್ನೂ ತೊರೆದಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT