ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ಬಿಆರ್‌ಟಿಎಸ್ ಯೋಜನೆ: ಸಾಧಕ–ಬಾಧಕಗಳ ಚರ್ಚೆ
Last Updated 10 ಜನವರಿ 2014, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ನಡುವೆ ಅನು­ಷ್ಠಾನಗೊಳ್ಳುತ್ತಿರುವ ಬಿಆರ್‌ಟಿಎಸ್‌ ಯೋಜನೆ­ಗಾಗಿ ಜಮೀನು ಹಾಗೂ ಆಸ್ತಿ ಕಳೆದು­ಕೊಳ್ಳಲಿರುವ ಸಂತ್ರಸ್ತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಲೋಪ­ವಾಗದಂತೆ ಯೋಜನೆ ಜಾರಿ­ಗೊಳಿಸಬೇಕು’ ಎಂದು ಸಾರ್ವಜನಿಕರು ಬಿಆರ್‌ಟಿಎಸ್ ಅಧಿ­ಕಾರಿಗಳನ್ನು ಒತ್ತಾಯಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಬಸ್ ರ್‍ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ ಯೋಜನೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅಧಿಕಾರಿಗಳು ಹಾಗೂ ಸಾರ್ವ­ಜನಿಕರ ನಡುವೆ ಚರ್ಚೆ ನಡೆಯಿತು. ‘ಪ್ರಸ್ತುತ ದೇಶದ ನಾಲ್ಕು ನಗರಗಳಲ್ಲಿ ಮಾತ್ರ ಬಿಆರ್‌­ಟಿಎಸ್‌ ಬಳಕೆಯಲ್ಲಿದೆ. ದೆಹಲಿ, ಪುಣೆಯಲ್ಲಿ ಯೋಜನೆಯು ವಿಫಲವಾಗಿದೆ.

ಹೀಗಾಗಿ ಯೋಜನೆ ಜಾರಿಗೊಳಿಸುವ ಮುನ್ನ ಚಿಂತನೆ ನಡೆಯಬೇಕು. ಪರ್ಯಾಯ ಮಾರ್ಗ­ಗಳತ್ತಲೂ ಯೋಚಿಸಬೇಕು. ಸದ್ಯದ ಯೋಜನೆ­ಯಂತೆ ಹು–ಧಾ ನಡುವೆ 18 ಜಂಕ್ಷನ್‌ಗಳು, 31 ನಿಲ್ದಾಣಗಳು ಬರಲಿದ್ದು, ಇದರಿಂದ ಪ್ರಯಾ­ಣದ ಅವಧಿ ಹೆಚ್ಚಲಿದೆ. ಇದಕ್ಕೆ ಏನು ಪರಿಹಾರ’ ಎಂದು ಅರವಿಂದ ಮೇಟಿ ಪ್ರಶ್ನಿಸಿದರು.

‘ಭೂ ಸಂತ್ರಸ್ತರು, ವ್ಯಾಪಾರಸ್ಥರನ್ನು ಸಭೆಗಳಿಗೆ ಕರೆಯುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಅಧಿ­ಕಾರಿಗಳು ಆಲಿಸುತ್ತಿಲ್ಲ’ ಎಂದು ಕಾಂತಿ­ಲಾಲ್‌ ಪುರೋಹಿತ್‌ ಆರೋಪಿಸಿದರು.

‘ಬಿಆರ್‌ಟಿಎಸ್‌ಗಾಗಿ ವಶಪಡಿಸಿ­ಕೊಳ್ಳು­ತ್ತಿರುವ ಜಮೀನಿನಲ್ಲಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನನ್ನು ಅತಿಕ್ರಮಣ ಮಾಡಿ­ಕೊಂಡವರದ್ದೂ ಸೇರಿದೆ. ನವಲೂರು ರೈಲು ಸೇತುವೆ ಬಳಿ 6.5 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಇಂತಹ ಅತಿ­ಕ್ರಮಿತ ಆಸ್ತಿಗಳಿಗೆ ಪರಿಹಾರ ನೀಡಬಾರದು. ತನಿಖೆ ಮಾಡಿ ಸಮಾನ ದೃಷ್ಟಿಯಿಂದ ವ್ಯಾಜ್ಯವನ್ನು ಪರಿಹರಿಸಿಕೊಳ್ಳಬೇಕು. ಜನರ ಶೋಷಣೆಯನ್ನೂ ಮಾಡಬಾರದು’ ಎಂದು ಚನ್ನಬಸಪ್ಪ ಜಾಫಣ್ಣನವರ ಸಲಹೆ ನೀಡಿದರು.

‘ಧಾರವಾಡ ಬಸ್‌ ನಿಲ್ದಾಣದ ಕಟ್ಟಡವನ್ನು ಕೇವಲ 4–5 ವರ್ಷಗಳ ಹಿಂದೆ ನಿರ್ಮಿಸ­ಲಾಗಿದೆ. ಹೊಸ ಯೋಜನೆಯ ಅಡಿ ಅದನ್ನು ಕೆಡ­ವಲು ಹೊರಟಿರುವುದು ಸರಿಯಲ್ಲ. ಹಿಂದಿನ ಯೋಜನೆಗಳನ್ನು ನಾಶಮಾಡದ ಹಾಗೆ ನೋಡಿ­ಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಅವಳಿನಗರದ ಅಭಿವೃದ್ಧಿಗೆ ಜನರ ವಿರೋಧ­ವಿಲ್ಲ. ಆದರೆ ಆತಂಕ ಇದೆ. ಭವಿಷ್ಯವನ್ನು ಗಮನ­ದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಆಸ್ತಿ ಕಳೆದುಕೊಳ್ಳುವವರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು’ ಎಂದು ಎಸ್‌.ಎಸ್‌. ಹಿರೇಮಠ ಒತ್ತಾಯಿಸಿದರು.

‘ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಯೋಜನೆಗಾಗಿ ಭೂಸ್ವಾಧೀನ ಪಡಿಸಿ­ಕೊಳ್ಳಲಾಗುತ್ತಿದೆ.  ಒಟ್ಟು 63 ಎಕರೆ ಪ್ರದೇಶ ಸ್ವಾಧೀನವಾಗಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಧಾನ ಸಮಿತಿ ಮೂಲಕ ಪರಿಹಾರ ನಿಗದಿಪಡಿಸಲಾಗುತ್ತಿದೆ. ಪ್ರತಿ ಭೂ ಮಾಲೀಕರ ಜೊತೆ ನೇರ ಮಾತುಕತೆ ಮೂಲಕ ದರ ನಿಗದಿಪಡಿಸಲಾಗುತ್ತಿದೆ.ಈ ಕುರಿತು ಈಗಾಗಲೇ 12 ಸಭೆಗಳು ನಡೆದಿವೆ. ಪರಿಹಾರ ನೀಡಿದ ಮೇಲಷ್ಟೇ ಭೂಮಿ ವಶಪಡಿಸಿಕೊಳ್ಳಲಾಗು­ವುದು’ ಎಂದು ಬಿಆರ್‌ಟಿಎಸ್ ಅಧಿಕಾರಿ ಕೊಟ್ರಯ್ಯ ಮಾಹಿತಿ ನೀಡಿದರು.

‘ಸಂತ್ರಸ್ತರ ಪೈಕಿ 319 ಬಾಡಿಗೆದಾರರು ಇದ್ದು, ಅವರಿಗೆ ಆರು ತಿಂಗಳ ಬಾಡಿಗೆ ಹಾಗೂ ರೂ. 20,000 ಪರಿಹಾರ ಧನ ನೀಡಲಾಗುತ್ತಿದೆ. 81 ಮಂದಿಗೆ ಉದ್ಯೋಗ ತರಬೇತಿ ನೀಡ­ಲಾಗಿದೆ’ ಎಂದು ತಿಳಿಸಿದರು.

‘ಅವಶ್ಯವಿರುವ ಕಡೆ ಜನಗಳ ಓಡಾಟಕ್ಕಾಗಿ ಜಂಕ್ಷನ್‌ಗಳನ್ನು ಮುಕ್ತಗೊಳಿಸಲಾಗುವುದು. ಯುರೋ–3 ಬಸ್‌ಗಳನ್ನು ಬಳಸಲಾಗುತ್ತಿದ್ದು, ಪ್ರಯಾಣ ದರವನ್ನು ಇನ್ನು ನಿಗದಿಪಡಿಸಿಲ್ಲ. ಗ್ರೀನ್ ಬಿಆರ್‌ಟಿಎಸ್‌ ಯೋಜನೆಯ ಅಡಿ 4,700 ಸಸಿ ನೆಡಲಾಗಿದ್ದು, ಇದರ ಬೆಳವಣಿಗೆ ಪ್ರಮಾಣವನ್ನು ಅಂದಾಜು ಮಾಡುವಂತೆ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಬಿಆರ್‌ಟಿಎಸ್‌ ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ ತಿಳಿಸಿದರು.

ಕೆಸಿಸಿಐ ಅಧ್ಯಕ್ಷ ವಸಂತ ಲದ್ವಾ, ರಮೇಶ ಪಾಟೀಲ, ವಿನಾಯಕ ಆಕಳವಾಡಿ ಇದ್ದರು.

‘ಸೆಟ್‌ ಬ್ಯಾಕ್‌ ಆಸ್ತಿಗಳಿಗೂ ಪರಿಹಾರ ನೀಡಿ’

ರಸ್ತೆಗಾಗಿ ವಶಪಡಿಸಿಕೊಳ್ಳಲಿರುವ ಸೆಟ್ ಬ್ಯಾಕ್‌ ಆಸ್ತಿಗಳಿಗೂ ಪರಿಹಾರ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಆಸ್ತಿ ಮಾಲೀಕರು ಅಧಿಕಾರಿಗಳನ್ನು ಒತ್ತಾಯಿಸಿದರು. ‘ಪುಣೆ–ಬೆಂಗಳೂರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿರುವ ಅದಕ್ಕೆ ಅವಶ್ಯವಾದಷ್ಟು ಜಾಗ ಬಿಟ್ಟು ಕಟ್ಟಡ ಕಟ್ಟಬೇಕಾಗುತ್ತದೆ. ಇಂತಹ ಭಾಗದಲ್ಲಿ ನಿರ್ಮಾಣವಾಗಿರುವ ಸೆಟ್‌ ಬ್ಯಾಕ್‌ ಆಸ್ತಿಗಳಿಗೆ ಪರಿಹಾರ ನೀಡುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ಆದರೆ ಇದಕ್ಕೆ ಆಸ್ತಿ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಂಧಾನ ಸಮಿತಿ ಸಭೆಯ ಸಂದರ್ಭ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT