ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂದೇಶವಾಹಕ'ನಿಗೆ ಅಂತಿಮ ವಿದಾಯ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನೂರ ಅರವತ್ತ ಮೂರು ವರ್ಷಗಳ ಕಾಲ ದೇಶದುದ್ದಕ್ಕೂ ಸಿಹಿ- ಕಹಿ ಸಂದೇಶಗಳನ್ನು ರವಾನಿಸಿದ ತಾರು (ತಂತಿ ಸಂದೇಶ) ಸೇವೆಗೆ ಭಾನುವಾರ ಅಂತಿಮ ತೆರೆ ಬಿತ್ತು.

ಒಂದೊಮ್ಮೆ ತುರ್ತು ಸಂವಹನದ ದಾರಿ ಎಂದೇ ಬಣ್ಣಿಸಲಾಗುತ್ತಿದ್ದ ಟೆಲಿಗ್ರಾಂ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಮಗ ನಿಯಮಿತವು (ಬಿಎಸ್‌ಎನ್‌ಎಲ್) ಸ್ಥಗಿತಗೊಳಿಸುವುದರೊಂದಿಗೆ, ಲಕ್ಷಾಂತರ ಭಾರತೀಯರ ಸಂದೇಶ ರವಾನೆ ವ್ಯವಸ್ಥೆಯೊಂದು ಶಾಶ್ವತವಾಗಿ ನಿಂತುಹೋಯಿತು.

ಕೊನೆಯ ಸಂದೇಶದ ಸಂರಕ್ಷಣೆ: ಈ ಸೇವಾ ವ್ಯವಸ್ಥೆಯನ್ನು ಸದಾ ಸ್ಮರಿಸುವ ಉದ್ದೇಶದೊಂದಿಗೆ, ಅಂತಿಮ ದಿನದಂದು ಕಳಿಸಲಾಗುವ ಕೊನೆಯ ಸಂದೇಶವನ್ನು ಸ್ಮರಣಿಕೆಯಂತೆ ಸಂರಕ್ಷಿಸಿ ಇಡುವ ಭರವಸೆ ಸರ್ಕಾರದಿಂದ ವ್ಯಕ್ತವಾಗಿದೆ.

`ತಾರು ಸೇವೆ'ಯ ಅಂತಿಮ ದಿನದಂದು ಇಲ್ಲಿನ ನಾಲ್ಕು ಟೆಲಿಗ್ರಾಫ್ ಕೇಂದ್ರಗಳ ಎದುರು ಸೇರಿದ ನೂರಾರು ಜನರ ಪೈಕಿ ಕೆಲವರು ತಮ್ಮ ಪ್ರೀತಿಪಾತ್ರರಿಗೆ ಟೆಲಿಗ್ರಾಂ ಸಂದೇಶ ಕಳಿಸಿ ಭಾವುಕರಾದರು. ಅವರಲ್ಲಿ ಸಾಕಷ್ಟು ಮಂದಿ ಇದೇ ಮೊದಲ ಬಾರಿಗೆ ಈ ಕೇಂದ್ರಕ್ಕೆ ಬಂದಿದ್ದರು!

`ತಿರುಚಿ ಸಮೀಪದ ಹಳ್ಳಿಯಲ್ಲಿರುವ 96 ವರ್ಷದ ನನ್ನ ಅಜ್ಜನಿಗೆ ನಾನು ಇದೇ ಮೊದಲ ಬಾರಿಗೆ ಟೆಲಿಗ್ರಾಂ ಕಳಿಸುತ್ತಿದ್ದೇನೆ' ಎಂದು ವಕೀಲ ಆನಂದ್ ಸತ್ಯಶೀಲನ್ ಹೇಳಿದರು.

ಬರೇಲಿಯಲ್ಲಿರುವ ತಮ್ಮ ತಂದೆ-ತಾಯಿಗೆ ಶುಭಾಶಯದ ತಾರು ಕಳಿಸಿದ ಕಂಪೆನಿಯೊಂದರ ಮ್ಯಾನೇಜರ್ ಅರವಿಂದ್, `ಈ ಟೆಲಿಗ್ರಾಂ ಅನ್ನು ಅವರು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳುತ್ತಾರೆ ಎಂಬ ಆಶಾಭಾವನೆ ನನ್ನದು' ಎಂದು ನುಡಿದರು.

ಇಂದು ಕಳಿಸಲಾದ ಸಂದೇಶಗಳ ಪೈಕಿ `ಹೋಪ್ ಆಲ್ ಈಸ್ ವೆಲ್' ಹಾಗೂ `ಆ್ಯನ್ ಐಕಾನಿಕ್ ಸರ್ವೀಸ್ ಕಮ್ಸ ಟು ಆ್ಯನ್ ಎಂಡ್' ಎಂಬ ತಾರ್‌ಗಳೇ ಅಧಿಕ ಸಂಖ್ಯೆಯಲ್ಲಿ ಇದ್ದವು.

`ಸೋಮವಾರದಿಂದ ಟೆಲಿಗ್ರಾಂ ಸೇವೆ ಲಭ್ಯ ಇರುವುದಿಲ್ಲ' ಎಂದು ಬಿಎಸ್‌ಎನ್‌ಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ಉಪಾಧ್ಯಾಯ ಅವರು ಭಾನುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು. ದೂರಸಂಪರ್ಕ ಸಚಿವ ಕಪಿಲ್ ಸಿಬಲ್, `ಟೆಲಿಗ್ರಾಂ ಸೇವೆಗೆ ಭಾವಪೂರ್ಣ ವಿದಾಯ ಕೋರುತ್ತೇವೆ. ಕೊನೆಯ ಟೆಲಿಗ್ರಾಂನ್ನು ಸ್ಮರಣಿಕೆ ರೂಪದಲ್ಲಿ ಸಂರಕ್ಷಿಸಿಡುವುದೇ ಈ ಅನುಪಮ ಸೇವಾ ವ್ಯವಸ್ಥೆಗೆ ನಾವು ಸಲ್ಲಿಸಬಹುದಾದ ಗೌರವಪೂರ್ವಕ ವಿದಾಯ' ಎಂದು ಕಳೆದ ತಿಂಗಳು ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT