ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆಗೆ ಅತೃಪ್ತರ ಒತ್ತಡ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟದಲ್ಲಿ ಸ್ಥಾನ ದೊರೆ­ಯದ ಕಾಂಗ್ರೆಸ್‌ನ ಅತೃಪ್ತ ಶಾಸಕರು ಭಾನುವಾರ ಎಐಸಿಸಿ ಪ್ರಧಾನ ಕಾರ್ಯ­ದರ್ಶಿ ದಿಗ್ವಿಜಯ್‌ ಸಿಂಗ್‌ ಅವರನ್ನು ಭೇಟಿ ಮಾಡಿ ನೇರವಾಗಿ ಅಸಮಾಧಾನ ಹೊರಹಾಕಿದ್ದು, ಲೋಕಸಭಾ ಚುನಾವ­ಣೆಗೂ ಮುನ್ನವೇ ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡ ಹೇರಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಗಾಗಿ ಭಾನುವಾರವೇ ನಗರಕ್ಕೆ ಬಂದಿರುವ ದಿಗ್ವಿಜಯ್‌ ಸಿಂಗ್‌ ಅವರು, ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿ­ದ್ದಾರೆ. ಅಲ್ಲಿಗೇ ತೆರಳಿ ದಿಗ್ವಿಜಯ್‌ ಅವ­ರನ್ನು ಭೇಟಿಮಾಡಿದ ಶಾಸಕರಾದ ಕೆ.ಬಿ.­ಕೋಳಿವಾಡ, ಡಾ.ಎ.ಬಿ.ಮಾಲಕ­ರೆಡ್ಡಿ, ಮಾಲೀಕಯ್ಯ ಗುತ್ತೇದಾರ್‌, ಸಿದ್ದು ನ್ಯಾಮ­ಗೌಡ, ಶಿವಾನಂದ ಪಾಟೀಲ ಮತ್ತಿ­ತರರು ಸಚಿವ ಸ್ಥಾನ ನೀಡದಿರು­ವು­ದಕ್ಕೆ ಅಸಮಾಧಾನ ಹೊರ­ಹಾಕಿ­ದ್ದಾರೆ. ಮಧುಗಿರಿ ಶಾಸಕ ಕೆ.ಎನ್‌.­ರಾಜಣ್ಣ ಸೇರಿದಂತೆ ಕೆಲವರು ಸೋಮ­ವಾರ ಭೇಟಿಮಾಡಲು ಸಮಯ ಕೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ನಾಯ­ಕನನ್ನು ಭೇಟಿಯಾದ ಎಲ್ಲ ಶಾಸಕರೂ, ತಮಗೆ ಹಿರಿತನಕ್ಕೆ ತಕ್ಕ ಮಾನ್ಯತೆ ದೊರೆತಿಲ್ಲ ಎಂದು ಅಳಲು ತೋಡಿ­ಕೊಂಡಿದ್ದಾರೆ. ಸಂಪುಟ ರಚನೆ­ಯಲ್ಲಿ ಜಿಲ್ಲೆ, ಜಾತಿ ಮತ್ತು ಹಿರಿತನ ಆಧರಿಸಿ ಪ್ರಾತಿನಿಧ್ಯ ನೀಡದಿ­ರುವ ಮೂಲಕ ತಮಗೆ ಅನ್ಯಾಯ ಮಾಡಲಾ­ಗಿದೆ ಎಂದು ದೂರಿದ್ದಾರೆ. ಲೋಕಸಭಾ ಚುನಾ­ವಣೆಗೂ ಮುನ್ನವೇ ತಮಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗ­ಬಹುದು ಎಂದು ಕೆಲವರು ಬೆದರಿಕೆಯ ಧಾಟಿಯಲ್ಲೂ ಮಾತನಾಡಿದ್ದಾರೆ.

ಸಂಪುಟದಲ್ಲಿ ಮೂರು ಸ್ಥಾನ ಮಾತ್ರ ಖಾಲಿ ಇರುವುದರಿಂದ ಎಲ್ಲ­ರಿಗೂ ಏಕ­ಕಾಲಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರಿಗೆ ಮನವರಿಕೆ ಮಾಡಲು ದಿಗ್ವಿಜಯ್‌ ಪ್ರಯ­ತ್ನಿಸಿದ್ದಾರೆ. ಆದರೆ, ಮೂರು ಸಚಿವ ಸ್ಥಾನ ತುಂಬು­ವ ಜೊತೆ­ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹುದ್ದೆ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಮುಖ್ಯಮಂತ್ರಿ ಸಂಸ­ದೀಯ ಕಾರ್ಯ­ದರ್ಶಿ ಮತ್ತು ರಾಜ­ಕೀಯ ಕಾರ್ಯ­ದರ್ಶಿ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಹಿರಿ­ಯರಿಗೆ ಸ್ಥಾನ­ಮಾನ ಕಲ್ಪಿಸಿ ಎಂಬುದಾಗಿ ಈ ಶಾಸಕರು ಒತ್ತಾ­ಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಯೊಳಗೆ...:‘ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮತ್ತು ನಾನು ಒಂದೇ ಅವಧಿಯಲ್ಲಿ ವಿಧಾನಸಭೆ ಪ್ರವೇ­ಶಿಸಿದವರು. ನಾನು ಈಗ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯ. ಹಾವೇರಿ ಜಿಲ್ಲೆಗೂ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆ­­­ತಿಲ್ಲ. ಲೋಕಸಭಾ ಚುನಾವ­ಣೆಗೂ ಮುನ್ನ ಸಂಪುಟದಲ್ಲಿ ಸ್ಥಾನ ನೀಡ­ದಿದ್ದರೆ ವ್ಯತಿರಿಕ್ತ ಪರಿಣಾಮ ಬೀರ­ಬಹುದು ಎಂದು ನೇರವಾಗಿ ಅವರಿಗೆ ಹೇಳಿದ್ದೇನೆ’ ಎಂದು ಕೆ.ಬಿ.­ಕೋಳಿವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ
ದಿಗ್ವಿಜಯ್‌ ಸಿಂಗ್‌ ಭೇಟಿಯ ಬಳಿಕ ‘ಪ್ರಜಾವಾಣಿ’ ಜೊತೆ ಮಾತ­ನಾಡಿದ ಮಾಲಕರೆಡ್ಡಿ, ‘ಸಂಪುಟ ರಚನೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ­ವಾ­ಗಿದೆ. ದೀರ್ಘಕಾಲ ಪಕ್ಷಕ್ಕಾಗಿ ದುಡಿದ ನಮ್ಮನ್ನು ಗೌರ­ವದಿಂದ ನಡೆಸಿ­ಕೊಳ್ಳು­ತ್ತಿಲ್ಲ. ಇದರಿಂದ ಉತ್ತರ ಕರ್ನಾ­ಟಕದ ಜನರಿಗೂ ನೋವಾಗಿದೆ’ ಎಂದರು.

‘ಉತ್ತರ ಕರ್ನಾಟಕದಲ್ಲಿ 2004­ರಲ್ಲಿ ಕಾಂಗ್ರೆಸ್‌ನ 24 ಶಾಸಕರು ಇದ್ದರು. 2008ರಲ್ಲಿ ಈ ಸಂಖ್ಯೆ 27 ಇತ್ತು. ಆದರೆ, ಕಳೆದ ಚುನಾ­ವಣೆ­ಯಲ್ಲಿ 58 ಶಾಸಕರು ಆರಿಸಿ ಬಂದಿ­ದ್ದೇವೆ. 12 ಮಂದಿಗೆ ಮಾತ್ರ ಸಂಪು­ಟದಲ್ಲಿ ಸ್ಥಾನ ನೀಡಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ 19 ಜನರು ಸಂಪುಟ­ದಲ್ಲಿದ್ದಾರೆ. ಈ ಅಸಮತೋಲನ ಸರಿ­ಪಡಿಸಲು ಖಾಲಿ ಇರುವ ಮೂರು ಸ್ಥಾನಗಳನ್ನೂ ಉತ್ತರ ಕರ್ನಾಟಕದ ಹಿರಿಯ ಶಾಸಕರಿಗೆ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

‘ನಾನು ಆರನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಿರಿತನ ಇದ್ದರೂ ಸಚಿವ ಸ್ಥಾನ ದೊರಕಿಲ್ಲ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನನಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕು. ನಿಮ್ಮಿಂದ ನಮಗೆ ನ್ಯಾಯ ದೊರಕಿಸಲು ಸಾಧ್ಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನೂ ದಿಗ್ವಿಜಯ್‌ ಸಿಂಗ್‌ ಅವರ ಗಮನಕ್ಕೆ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಮಾಲೀಕಯ್ಯ ಗುತ್ತೇದಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT