ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಜಾತ್ರೆಗೆ ಕಮಠಾಣ ಸಜ್ಜು

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ವಿವಿಧ ಧರ್ಮಗಳು ಬೀಡು, ದೇವಾಲಯಗಳು, ಮಸೀದಿ, ಗುರುದ್ವಾರಗಳನ್ನು ಹೊಂದಿದ ಬೀದರ ಜಿಲ್ಲೆಯ ಹುಮನಾಬಾದ, ಭಾಲ್ಕಿ, ಔರಾದ, ಬೀದರ ತಾಲ್ಲೂಕುಗಳಲ್ಲಿ, ಬಸವಕಲ್ಯಾಣ ಹಾಗೂ ಅದರ ನೆರೆಯ ಮಿರಖಲ್, ಚಿಟಗುಪ್ಪಗಳಲ್ಲಿ ಶಿಥಿಲ ಜಿನಾಲಯಗಳು ಕಂಡು ಬರುತ್ತಿವೆ.

ಬೀದರದಿಂದ 9 ಕಿಮೀ ದೂರ, ಊರ ಸುತ್ತಲೂ ಜೋಡು ಕಂದಕಗಳನ್ನು ಹೊಂದಿದ ಕಮಠಾಣಕ್ಕೆ ವಿಶೇಷ ಸ್ಥಾನವಿದೆ. ಏಕೆಂದರೆ ಇಲ್ಲಿ ಜೈನರ 23ನೇ ತೀರ್ಥಂಕರ ಭಗವಾನ ಪಾರ್ಶ್ವನಾಥರ ಮಂದಿರವಿದೆ. ರಟ್ಟ ಅರಸರ ಕಾಲದಲ್ಲಿ ಪಾರ್ಶ್ವನಾಥರ ಕಪ್ಪು ಶಿಲೆಯ ತಪೋನಿರತ ಸುಂದರವಾದ 4.5 ಅಡಿಗಳಷ್ಟು ಎತ್ತರದ ಮೂರ್ತಿ ನಿರ್ಮಾಣವಾಯಿತು ಎನ್ನಲಾಗಿದ್ದು ಸುಮಾರು 1 ಸಾವಿರ ವರ್ಷಗಳ ಇತಿಹಾಸ ಇದಕ್ಕಿದೆ. ಈ ಜಿನಾಲಯಕ್ಕೆ 1.5 ಎಕರೆಗಳಷ್ಟು ವಿಶಾಲವಾದ ಭೂಮಿಯಿದ್ದು ಪೂರ್ವ ಮತ್ತು ದಕ್ಷಿಣ ಮಹಾದ್ವಾರಗಳು ಇವೆ.

ಈ ಗ್ರಾಮದಲ್ಲಿ ಪದ್ಮಣ್ಣ ಬೆಳಕೀರೆ ಂಬುವವರ ಮಕ್ಕಳ ಎರಡು ಕುಟುಂಬ ಬಿಟ್ಟರೆ ಬೇರೆ ಜೈನರಿಲ್ಲ. ಆದರೂ ಇವರು ಗ್ರಾಮಸ್ಥರ ಸಹಕಾರದಿಂದ  ಜಿನಾಲಯದ ರಕ್ಷಣೆ ಮಾಡುತ್ತ ಬಂದಿದ್ದಾರೆ.

1989ರಲ್ಲಿ ಜಿನಾಲಯದ ನೆಲಮಾಳಿಗೆಯಲ್ಲಿದ್ದ ಮೂರ್ತಿಯನ್ನು ಆಚಾರ್ಯ ಶ್ರೀ ಶ್ರುತಸಾಗರ ಮುನಿಗಳು ಎತ್ತರದ ವೇದಿಕೆಯ ಮೇಲೆ ಪ್ರತಿಷ್ಠಾಪನೆ ಮಾಡಿಸಿದರು.

ಇಲ್ಲಿ ಪ್ರತಿ ವರ್ಷ ಮಾಘ ಶುದ್ಧ ಪಂಚಮಿಯಿಂದ ಸಪ್ತಮಿ ವರೆಗೆ ರಥೋತ್ಸವ.ಈ ಸಂದರ್ಭದಲ್ಲಿ 108 ಕಲಶಗಳ ಪೂಜೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸುತ್ತಮುತ್ತಲ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುತ್ತಾರೆ.

 ಈ ಕ್ಷೇತ್ರದಲ್ಲಿ ಆಧುನಿಕ ಪಾಕಶಾಲೆ, ಊಟದ ಮನೆ, ಶೌಚಾಲಯ, ಸ್ನಾನಗೃಹ, `ಮುನಿ ಆರ್ಯ ನಂದಿ ಸ್ಮೃತಿ ಭವನ~ ಪ್ರವಚನ ಮಂದಿರ, ಆಚಾರ್ಯ ಶ್ರೀ ಶ್ರುತಸಾಗರ ಪ್ರವಚನ ಮಂದಿರ~ಗಳಿವೆ. ಮಂದಿರದ ಎದುರು ಸುಮಾರು 2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 35 ಅಡಿ ಎತ್ತರದ ಸುಂದರ ಮಾನಸ್ತಂಭ ಕಣ್ಮನ ಸೆಳೆಯುತ್ತದೆ.

ಹಿಂದೆ ಇಲ್ಲಿ ಗುರುಕುಲವಿತ್ತೆಂದು ಇಲ್ಲಿ ಶಿಕ್ಷಣ ಪಡೆದ ಹಿರಿಯರು ಹೇಳುತ್ತಾರೆ. ಅದನ್ನೇ ಈಗ ಪುನಃ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗಿದೆ.

ಭಗವಾನ್ ಪಾರ್ಶ್ವನಾಥರ ವಿಗ್ರಹದ ವೇದಿಕೆಯ ಕೆಳಗೆ ಒಂದು ನೆಲ ಮಾಳಿಗೆಯಿದ್ದು ಇದು ಧ್ಯಾನ ಮಾಡಲು ಹೇಳಿ ಮಾಡಿಸಿದಂತ ಸ್ಥಳ. ಅಲ್ಲಿನ ಸುಂದರ ಗಾಜಿನ ಕುಸುರಿ ಕೆಲಸ ನೋಡುಗರನ್ನು ಸೆಳೆಯುತ್ತದೆ. ಕಮಠಾಣದ ಜಿನಾಲಯ ಬೀದರ - ಮನ್ನಾ ಎಖೆಳ್ಳಿಯ ಹೆದ್ದಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT