ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಕಲಾಪಕ್ಕೆ`ಕಲ್ಲಿದ್ದಲ ಮಸಿ'

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಲ್ಪಕಾಲದ ಬಿಡುವಿನ ನಂತರ ಸೋಮವಾರ ಪುನರಾರಂಭಗೊಂಡ ಸಂಸತ್ತಿನ ಬಜೆಟ್ ಅಧಿವೇಶನ ಬಿಸಿ ಚರ್ಚೆ ಮತ್ತು ತೀವ್ರ ಕೋಲಾಹಲಕ್ಕೆ ಸಾಕ್ಷಿಯಾಯಿತು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ, ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಮತ್ತಿತರ ಪ್ರಕರಣಗಳನ್ನು ಕೈಗೆತ್ತಿಕೊಂಡ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿ ಗದ್ದಲ ಎಬ್ಬಿಸಿದವು. ಹೀಗಾಗಿ ಲೋಕಸಭೆ ಕಲಾಪ ಪೂರೈಸಲು ಸಾಧ್ಯವಾಗದೆ ಮಂಗಳವಾರಕ್ಕೆ ಮುಂದೂಡಲಾಯಿತು.

ಈಚೆಗೆ ನವದೆಹಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯ ನಂತರ ಆ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗಳ ವಿಷಯಗಳು ಲೋಕಸಭೆಯಲ್ಲಿ ಬಿಸಿ ಚರ್ಚೆಗೆ ಕಾರಣದವು.

ಇತ್ತ ರಾಜ್ಯಸಭೆಯಲ್ಲೂ ಕಲ್ಲಿದ್ದಲು ಹಗರಣ ಗದ್ದಲಕ್ಕೆ ಕಾರಣವಾಯಿತು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಿದ್ಧಪಡಿಸುತ್ತಿರುವ ಸಿಬಿಐ ಮೇಲೆ ಸರ್ಕಾರ ಪ್ರಭಾವ ಬೀರುತ್ತಿದ್ದು, ಈ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿ ರದ್ದುಪಡಿಸಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಮತ್ತಿತರ ಪಕ್ಷಗಳು ಪಟ್ಟುಹಿಡಿದವು.

ಶೂನ್ಯ ವೇಳೆಯಲ್ಲೂ ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಹೀಗಾಗಿ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು.

ವಿರೋಧಪಕ್ಷಗಳ ಪ್ರತಿಭಟನೆಗೆ ಮಣಿದ ಸರ್ಕಾರ ಈ ಕುರಿತು ಚರ್ಚೆಗೆ ಸಮ್ಮತಿ ನೀಡಿತು. ಆದರೆ ಕಾನೂನು ಸಚಿವ ಅಶ್ವನಿ ಕುಮಾರ್ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರು ಖುದ್ದಾಗಿ ಸದನದಲ್ಲಿ ಹಾಜರಾಗಿ ಸ್ವಇಚ್ಛೆಯ ಹೇಳಿಕೆ ನೀಡಲು ವಿರೋಧಪಕ್ಷಗಳು ಪಟ್ಟುಹಿಡಿದಿದ್ದರಿಂದ ಕೋಲಾಹಲ ನಿಲ್ಲಲಿಲ್ಲ.

ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿ ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಪಾತ್ರದ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿ ಎಐಎಡಿಎಂಕೆಯ ವಿ. ಮೈತ್ರೇಯನ್ ನಿಲುವಳಿ ಸೂಚನೆಗೆ ಮುಂದಾದರೂ, ಈ ವಿಷಯ ಮಧ್ಯಾಹ್ನ 12ಕ್ಕೆ ಪ್ರಶ್ನೋತ್ತರ ಅವಧಿಯೊಂದಿಗೆ ಮುಗಿದುಹೋಗಿದೆ ಎಂದು ಉಪ ಸಭಾಪತಿ ಪಿ.ಜೆ. ಕುರಿಯನ್ ತಿಳಿಸಿದರು.

ಪ್ರತಿಭಟನಾನಿರತ ಬಿಜೆಪಿ ಹಾಗೂ ಎಐಎಡಿಎಂಕೆ ಸದಸ್ಯರು ಸಭಾಪತಿ ಪೀಠದತ್ತ ಮುನ್ನುಗ್ಗಿದಾಗ `ದಯವಿಟ್ಟು ಶಾಂತಿ ಕಾಯ್ದುಕೊಳ್ಳಿ, ಗದ್ದಲದಲ್ಲಿ ಗೊತ್ತುವಳಿಯನ್ನು ಮತಕ್ಕೆ ಹಾಕಲಾಗದು' ಎಂದು ಮನವಿ ಮಾಡಿಕೊಂಡರು.

ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ ಹೇಳಿಕೆ ನೀಡಿ, ಕಲ್ಲಿದ್ದಲು ಪ್ರಕರಣ ಚರ್ಚೆಗೆ ಸರ್ಕಾರ ಸಿದ್ಧವಿದೆಯಾದರೂ ಸಭಾಪತಿ ಅನುಮತಿ ನೀಡಿದಂತೆ ಮೊದಲು ಮಹಿಳೆಯರ ಮೇಲಿನ ದೌರ್ಜನ್ಯ ವಿಷಯ ಚರ್ಚೆಗೆ ತೆಗೆದುಕೊಳ್ಳೊಣ ಎಂದರು.

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಬಿಜೆಪಿ, ಎಡ ಪಕ್ಷ, ತೃಣಮೂಲ ಕಾಂಗ್ರೆಸ್, ಎಸ್‌ಪಿ ಹಾಗೂ ಟಿಡಿಪಿ ಪಕ್ಷಗಳ ಸದಸ್ಯರು ಸಭಾಪತಿಗಳ ಪೀಠದತ್ತ ಮುನ್ನುಗ್ಗಿದರು. ಆಂಧ್ರದ ತೆಲಂಗಾಣ ಭಾಗಕ್ಕೆ ಸೇರಿದ ಕಾಂಗ್ರೆಸ್ ಸದಸ್ಯರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿದರು.

`ಎಲ್ಲ ವಿಷಯಗಳೂ ಪ್ರಮುಖವಾಗಿದ್ದು, ಸಭಾಪತಿ ಸೂಚಿಸಿದಂತೆ ಚರ್ಚೆ ನಡೆಯಲಿ' ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ತಿಳಿಸಿದರು. ಆದರೆ ಶುಕ್ಲಾ ಹೇಳಿಕೆಯನ್ನು ಆಕ್ಷೇಪಿಸಿದ ಬಿಜೆಪಿಯ ರವಿಶಂಕರ ಪ್ರಸಾದ್ ಹಾಗೂ ಎಐಎಡಿಎಂಕೆ ಸದಸ್ಯರು ಮೊದಲು `ಗಂಭೀರ' ವಿಷಯಗಳ ಬಗ್ಗೆ ಚರ್ಚೆಯಾಗಲಿ ಎಂದರು. `ನಮಗೆ ನ್ಯಾಯ ಬೇಕು, ಚರ್ಚೆ ಇಲ್ಲದೆ ಸರ್ಕಾರ ಓಡಿ ಹೋಗಿದೆ' ಎಂದು ಘೋಷಣೆ ಕೂಗಿದರು.

ಸಂಸತ್ ನಡೆಯಲು ಬಿಡಿ: ಪ್ರಧಾನಿ ಮನವಿ

ನವದೆಹಲಿ (ಪಿಟಿಐ): 2ಜಿ ಹಗರಣದ ಜೆಪಿಸಿ ವರದಿ ಸೇರಿದಂತೆ ಹಲವು ವಿಷಯಗಳ ಮೇಲಿನ ವಿರೋಧ ಪಕ್ಷಗಳ ತೀವ್ರ ದಾಳಿ ಎದುರಿಸಿದ ಪ್ರಧಾನಿ ಡಾ. ಮನಮೋಹನ ಸಿಂಗ್ ಸೋಮವಾರ ಹೇಳಿಕೆ ನೀಡಿ, `ಕಲಾಪ ಸುಗಮವಾಗಿ ನಡೆಯಲು ಸಹಕರಿಸಿ' ಎಂದು ವಿರೋಧ ಪಕ್ಷಗಳಲ್ಲಿ ಮನವಿ ಮಾಡಿಕೊಂಡರು.

ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸಿಂಗ್, `ವಿರೋಧ ಪಕ್ಷಗಳ ಬೇಡಿಕೆಯಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದ ಉಳಿದ ಅವಧಿ `ಅತಿ ಪ್ರಮುಖ ಭಾಗ' ಎನಿಸಿದ್ದು ಆಹಾರ ಭದ್ರತೆ ಮಸೂದೆ, ಭೂಸ್ವಾಧೀನ ಮಸೂದೆಯಂತಹ ಮಹತ್ವದ ಮಸೂದೆಗಳಿಗೆ ಅಂಗೀಕಾರ ಸಿಗಬೇಕಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT