ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಾಮರಸ್ಯದ ಸಮುದಾಯ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಸಾಮಾಜಿಕ ಬದಲಾವಣೆ ನಿಟ್ಟಿನಲ್ಲಿ ಪರಿಣಾಮಕಾರಿ ಮಾಧ್ಯಮವಾಗಿ `ರಂಗಭೂಮಿ~ ನಿರಂತರವಾಗಿ ಬಳಕೆಯಾಗುತ್ತಿದೆ. ಸಹಮನಸ್ಕ ಗೆಳೆಯರು ಒಟ್ಟಾಗಿ ದುಡಿಯಲೂ ರಂಗಭೂಮಿ ಅದ್ಭುತ ವೇದಿಕೆ. ಇದಕ್ಕೆ ಒಳ್ಳೆಯ ಉದಾಹರಣೆ, `ಸಮುದಾಯ~.

1975ರ ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಇಡೀ ದೇಶ ಜೈಲಾಗಿ ರೂಪಾಂತರ ಹೊಂದಿತ್ತಷ್ಟೇ. ಆ ಸಂದರ್ಭದಲ್ಲಿ ಎಲ್ಲ  ಜನವರ್ಗಗಳೂ ತಂತಮ್ಮ ವ್ಯಾಪ್ತಿಯಲ್ಲಿ, ತಮ್ಮದೇ ರೀತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿದವು.

ಅನೇಕರು ಬಂಧನಕ್ಕೂ ಒಳಗಾದರು. ಸರ್ಕಾರದ ದಬ್ಬಾಳಿಕೆ ವಿರುದ್ಧ ಸಾಂಸ್ಕೃತಿಕ ರಂಗದಲ್ಲೂ ಪ್ರತಿಭಟನೆಗಳು ನಡೆದವು. ಅಂಥದೊಂದು ಪ್ರತಿರೋಧದ ಪ್ರಯತ್ನವಾಗಿ, ಬೆಂಗಳೂರು ನಗರದ ಹುಲ್ಲುಹಾಸಿನ ಮೇಲೆ ಕೂತ ಕೆಲವು ಸಹಮನಸ್ಕರು ಸಂಘಟನೆಯ ಕನಸು ಕಂಡರು. ಅವರ ಕನಸಿನ ಸಾಕಾರವೇ `ಸಮುದಾಯ~.

`ಸಮುದಾಯ~ ತನ್ನ ಪ್ರತಿಭಟನೆಯ ಮಾರ್ಗವನ್ನಾಗಿ ರಂಗ ನಾಟಕಗಳನ್ನು ಆರಿಸಿಕೊಂಡಿತು. ಸಂಸರ `ವಿಗಡ ವಿಕ್ರಮರಾಯ~ ನಾಟಕ  `ಹುತ್ತವ ಬಡಿದರೆ~ ಎಂಬ ಹೊಸ ರೂಪ ತಳೆದು ಪ್ರದರ್ಶನ ಕಂಡಿತು. ದುಷ್ಟ ರಾಜನ ಕೊಂದರೆ ದುಷ್ಟ ವ್ಯವಸ್ಥೆ ಬದಲಾಗುವುದಿಲ್ಲ ಹಾಗೂ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯಷ್ಟೇ ಜನರ ಬದುಕಿನಲ್ಲಿ ಸುಧಾರಣೆ ತರಬಲ್ಲುದು ಎನ್ನುವ ಧ್ವನಿ ನಾಟಕದಲ್ಲಿತ್ತು.

ನೆಚ್ಚಿನ ಕನಸುಗಳ ಬಿತ್ತುವ ಹಾದಿಯಲ್ಲಿ `ಸಮುದಾಯ~ ಹಿಂತಿರುಗಿ ನೋಡಲಿಲ್ಲ. ನಿರಂತರವಾಗಿ ರಂಗ ಚಟುವಟಿಕೆಗಳ ಮೂಲಕ ತನ್ನ ಆಶಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿರುವ `ಸಮುದಾಯ~ಕ್ಕೀಗ ಮೂವ್ವತ್ತಾರರ ಪ್ರೌಢತೆ. ಈಗ ರಾಜ್ಯಾದ್ಯಂತ ತನ್ನ ಘಟಕಗಳನ್ನು ಹೊಂದಿರುವ ಸಂಸ್ಥೆ, ನಾಟಕ-ಬೀದಿನಾಟಕ ಮಾತ್ರವಲ್ಲದೆ ವಿಚಾರ ಸಂಕಿರಣ, ಕವಿಗೋಷ್ಠಿ, ವರ್ಣಚಿತ್ರ ಪ್ರದರ್ಶನ, ಚಲನಚಿತ್ರ ಪ್ರದರ್ಶನ ಸೇರಿದಂತೆ ಹಲವು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ವಿಸ್ತರಿಸಿಕೊಂಡಿದೆ.

ಈ ಎಲ್ಲ ಚಟುವಟಿಕೆಗಳ ಉದ್ದೇಶ ಇಷ್ಟೇ- ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತುವುದು, ದೇಶದ ಸ್ವಾತಂತ್ರ್ಯ, ಸಮಗ್ರತೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದು.

ಚಿಕ್ಕಮಗಳೂರಿನ ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾಗಾಂಧಿ ಸ್ಪರ್ಧಿಸಿದಾಗ ಸರ್ವಾಧಿಕಾರದ ವಿರುದ್ಧ ಸಾಂಸ್ಕೃತಿಕ ಮನಸ್ಸುಗಳನ್ನು ಒಟ್ಟುಗೂಡಿಸಿದ್ದು `ಸಮುದಾಯ~ ಹಾದಿಯಲ್ಲಿನ ಮಹತ್ವದ ಘಟ್ಟ. ಹದಿನೈದು ದಿನಗಳ ಕಾಲ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಜಾಥಾ ನಡೆಸಲಾಗಿತ್ತು.
 
ಬಿಹಾರದ ಬೆಲ್ಚಿಯಲ್ಲಿ ನಡೆದ ದಲಿತರ ಸಜೀವ ದಹನ ಮತ್ತು ಪತ್ರೆ ಸಂಗಪ್ಪನ ಕೊಲೆಯ ವಿರುದ್ಧದ ಪ್ರತಿಭಟನೆಯಾಗಿ ಸಮುದಾಯ ರಾಜ್ಯದ ಹಲವು ಭಾಗಗಳಲ್ಲಿ ಬೀದಿ ನಾಟಕ ನಡೆಸಿತು. ಬಂಡಾಯ, ದಲಿತ-ಸಂಘರ್ಷ ಸಮಿತಿಗಳು ಮತ್ತು ಕರ್ನಾಟಕದ ಇತರ ಪ್ರಗತಿಪರ ಚಳವಳಿ ಬೆಳವಣಿಗೆಗಳ ಜೊತೆ ಸಮುದಾಯದ ಹೆಸರು ಸಹಜವಾಗಿಯೇ ಬೆರೆತುಕೊಂಡಿದೆ. 

1981ರಲ್ಲಿ ರೈತನೆಡೆಗೆ ಘೋಷಣೆಯೊಂದಿಗೆ ನಡೆದ ಸಾಂಸ್ಕೃತಿಕ ಜಾಥಾ ಹತ್ತು ಜಿಲ್ಲೆಗಳಲ್ಲಿ 15 ದಿನ ನಡೆಯಿತು. ಈ ಜಾಥಾ ಅಗಾಧ ಪರಿಣಾಮ ಬೀರಿತು. ನರಗುಂದದಿಂದ ಬೆಂಗಳೂರಿಗೆ ಸಾಗರೋಪಾದಿಯಲ್ಲಿ ಕಾಲ್ನಡಿಗೆಯಲ್ಲಿ ಬಂದ ರೈತರ ಜಾಥಾಕ್ಕೆ ಕಾರ್ಮಿಕ ವರ್ಗ ಅಭೂತಪೂರ್ವ ಸ್ವಾಗತ ನೀಡಿತು. ಮನೆ ಮನೆಗಳಿಂದ ಸಂಗ್ರಹಿಸಿದ ರೊಟ್ಟಿ, ಊಟಗಳು ಅನ್ನದಾತರ ಹಸಿವು ತಣಿಸಿದವು. ಆಳುವವರ ದಬ್ಬಾಳಿಕೆಗೆ ಉತ್ತರವಾಗಿ ರೈತ ಕಾರ್ಮಿಕರು ಒಂದಾಗಿ ನಿಂತ ಅವಿಸ್ಮರಣೀಯ ಗಳಿಗೆಯದು.

ಸಮುದಾಯದ ಜಾಥಾ ಕೇವಲ ಬೀದಿ ನಾಟಕಗಳಿಗೆ ಸೀಮಿತವಾಗದೇ ಪ್ರಗತಿಪರ ಸಾಹಿತ್ಯವನ್ನು ಜನರಿಗೆ ತಲುಪಿಸುವ ನೆಲೆಯಲ್ಲೂ ನಡೆದಿದೆ. ಆ ಮೂಲಕ ಲಕ್ಷಾಂತರ ಜನರ ವೈಚಾರಿಕ ಚಿಂತನೆಯ ಒಳತೋಟಿಗಳನ್ನು ಸಾಣೆ ಹಿಡಿಯಲು ಪ್ರಯತ್ನಿಸಲಾಗಿದೆ. `ಕಲೆಗಾಗಿ ಕಲೆ ಅಲ್ಲ, ಬದುಕಿಗಾಗಿ ಕಲೆ~ ಎನ್ನುವ ಚಿಂತನೆ ಅದರದು.

ಜಾತ್ಯತೀತ-ಪ್ರಜಾಪ್ರಭುತ್ವ ಮೌಲ್ಯಗಳು ತಲ್ಲಣಕ್ಕೆ ಒಳಗಾಗಿರುವ ಇಂದಿನ ಸಂದರ್ಭದಲ್ಲಿ `ಸಮುದಾಯ~ದಂಥ ಸಂಘಟನೆಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಇದರ ಅರಿವು `ಸಮುದಾಯ~ಕ್ಕಿದೆ. ಸಮುದಾಯ, 2012ರ ತನ್ನ ಸಾಂಸ್ಕೃತಿಕ ಉತ್ಸವವನ್ನು ಸಂಸ್ಕೃತಿ ಸಾಮರಸ್ಯಕ್ಕೆ ಮುಡಿಪಾಗಿಟ್ಟಿದೆ. `ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗ ಸಂಗಮ~ ಕಾರ್ಯಕ್ರಮ ಜನವರಿ 21ರಿಂದ ಆರಂಭವಾಗಿದ್ದು, 25ರವರೆಗೂ ನಡೆಯಲಿದೆ. ಸಮುದಾಯದ ಗ್ರಾಮೀಣ ಘಟಕಗಳು ರಂಗ ನಾಟಕಗಳನ್ನು ಪ್ರದರ್ಶಿಸಲಿರುವ ಈ ಉತ್ಸವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ.                                                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT