ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಾತ್ಮಕ ಸ್ವಗತದ ಶಕ್ತಿ...

Last Updated 25 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕಲ್ಲೊಂದು ಧ್ಯಾನ ಮಾಡಿದಲ್ಲಿ ಗುಲಾಬಿಯಾಗಿ ಬದಲಾಗುವುದಿಲ್ಲ. ಆದರೆ, ಅದರೊಳಗೆ ಸುಗಂಧಭರಿತ ಉದ್ಯಾನವೊಂದು ಅರಳಿರುತ್ತದೆ. ಧ್ಯಾನ ನಮ್ಮೊಳಗಿನ ಹೊರೆಯನ್ನು ಇಳಿಸುತ್ತದೆ. ಖಿನ್ನತೆಯ, ಒತ್ತಡದ ಬದುಕು ಮೌನವಾದ ಸುಂದರ ಕಾವ್ಯವಾಗುತ್ತದೆ. ಬದುಕು ನಿಧಾನವಾಗಿ ಸಾಗಿದಂತೆ ಕಾಣುತ್ತದೆ.  ಚೆಂಡೊಂದು ನಿಧಾನವಾಗಿ ಬರುತ್ತಿದ್ದಲ್ಲಿ ನೀವು ಸುಲಭವಾಗಿ ಕ್ಯಾಚ್ ಹಿಡಿಯಬಹುದು.

ಆದರೆ, ಅದು ಭಾರಿ ವೇಗದಿಂದ ನಿಮ್ಮತ್ತ ಧಾವಿಸಿ ಬರುತ್ತಿದ್ದಲ್ಲಿ ಕೈಜಾರಿ ನಿಮ್ಮ ಹಿಂದಿರುವ ಕಿಟಕಿಯ ಗಾಜಿಗೆ ಅಪ್ಪಳಿಸುತ್ತದೆ. ಮೊದಲಿಗೆ ಇದು ಆಶ್ಚರ್ಯ ತರುತ್ತದೆ. ಹಿಂದೊಮ್ಮೆ ಮಹತ್ವದ್ದಾಗಿ ಕಾಣಿಸುತ್ತಿದ್ದ ಸಂಗತಿಗಳೆಲ್ಲ ಈಗ ಯಕಃಶ್ಚಿತ ಸಂಗತಿಯಂತೆ ಭಾಸವಾಗುತ್ತದೆ. ಇದು ಪ್ರಬುದ್ಧವಾಗುತ್ತಿರುವ ಲಕ್ಷಣ, ನೀವು ಬೆಳೆಯುತ್ತಿರುವ ಲಕ್ಷಣ. ಮಗುವಿಗೆ ಆಟಿಕೆಯೊಂದೇ ಮಹತ್ವದ್ದಾಗಿರುತ್ತದೆ. ಅದು, ಅದರ ಪ್ರಪಂಚವಾಗಿರುತ್ತದೆ. ಆದರೆ, ದೊಡ್ಡವರಿಗೆ ಅದು ಆಟಿಕೆ ಮಾತ್ರ. ನೀವು ಚಿಂತೆ ಮಾಡುತ್ತಿಲ್ಲ ಅಂದರೆ ಯಾವುದರ ಕುರಿತೂ ಗಮನ ಹರಿಸುತ್ತಿಲ್ಲ ಎಂದು ಅರ್ಥವಲ್ಲ. ಚಿಂತೆ ಮಾಯವಾದಾಗ ಪ್ರೀತಿ, ಕಾಳಜಿ ನಿಮ್ಮಲ್ಲಿ ತುಂಬುತ್ತದೆ. ಅದು ನಿಮ್ಮನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ.

ನೀವು ಧ್ಯಾನಕ್ಕಾಗಿ ಸಮಯ ಹೊಂದಿಸಿಕೊಳ್ಳಬೇಕಿಲ್ಲ. ಅದನ್ನು ನಿಮ್ಮ ದಿನಚರಿಯ, ಕರ್ತವ್ಯದ, ಓಡಾಟದ ಭಾಗವಾಗಿಸಿಕೊಳ್ಳಿ. ನೀವು ಈ ಅಂಕಣ ಓದುತ್ತಿದ್ದೀರಿ. ಈಗ ನಿಧಾನವಾಗಿ ಉಸಿರಾಡುತ್ತ ಮುಂದಿನ ಪ್ಯಾರಾಗಳನ್ನು ಓದಿ. ‘ನನ್ನ ದೇಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ನನ್ನ ಬದುಕಿಗೆ ಯಾವುದೇ ತೊಂದರೆಯಾಗುವುದಿಲ್ಲ’.

ಮೃದುವಾದ ಹೂವನ್ನು ಎತ್ತಿಕೊಳ್ಳುವಂತೆ ಈ ಭಾವವನ್ನು ನಿಮ್ಮ ಹೃದಯದಲ್ಲಿ ಜೋಪಾನ ಮಾಡಿ. ‘ನನಗೆ ನಂಬಿಕೆಯಿದೆ. ನಾನು ಸತ್ಯದಿಂದ ನಡೆದುಕೊಳ್ಳುತ್ತಿದ್ದಲ್ಲಿ ನನ್ನ ಮತ್ತು ನನ್ನ ಪ್ರೀತಿ ಪಾತ್ರರಿಗೆ ಒಳ್ಳೆಯದೇ ಆಗುತ್ತದೆ. ಯಾವುದೇ ಸನ್ನಿವೇಶ ಇದ್ದರೂ ಚಿಂತಿಸಬೇಕಿಲ್ಲ. ನಾನು ಸರಿಯಾಗಿ ಉಸಿರಾಡಬೇಕು. ನಾನೀಗ ಅದನ್ನೇ ಮಾಡುತ್ತಿದ್ದೇನೆ’ ಅಂದುಕೊಳ್ಳುತ್ತ ನಿಧಾನವಾಗಿ ಉಸಿರು ಬಿಡಿ. ಇದು ಬುದ್ಧನ, ಕ್ರಿಸ್ತನ, ಸಾಯಿಬಾಬಾರ ಉಸಿರು. ಪ್ರೀತಿ, ಆಶಾಭಾವ, ಸ್ವಾತಂತ್ರ್ಯ, ಸ್ಥಿರತೆ, ಭದ್ರತೆ, ಶಾಂತಿ ಮತ್ತು ಆರೋಗ್ಯ ತರುವ ಉಸಿರು. ನಿಧಾನವಾಗಿ ಉಸಿರಾಡುತ್ತಿದ್ದಂತೆ  ನನ್ನ ನರವ್ಯೆಹ, ಮಿದುಳು ಶಾಂತಿಯನ್ನು ಅನುಭವಿಸುತ್ತವೆ.

ಓದುವುದು, ಕುಳಿತುಕೊಳ್ಳುವುದು, ನಡೆದಾಡುವುದು ಎಲ್ಲವೂ ಮ್ಯಾಜಿಕ್. ಇದು ಉಸಿರಾಡುತ್ತಿರುವುದರ ಫಲ, ನಮ್ಮೊಳಗಿರುವ ಜೀವ ಚೈತನ್ಯದ ದ್ಯೋತಕ. ಓ ಬೆಳಕೇ ಉಸಿರು ನೀಡಿದ್ದಕ್ಕಾಗಿ ನಿನಗೆ ಧನ್ಯವಾದ. ಈ ಪ್ಯಾರಾವನ್ನು ನೀವು ಓದುತ್ತಿರುವಾಗ ನಿಮ್ಮ ಉಸಿರಾಟದ ಓಘ ಕಡಿಮೆಯಾಗಿತ್ತು.  ಆ ಕ್ಷಣದಲ್ಲಿ ನಿಮ್ಮೊಳಗೆ ಬೇರೆ ಯಾವ ಭಾವವೂ ಇರಲಿಲ್ಲ. ಅದು ಧ್ಯಾನಸ್ಥ ಓದು. ನೀವು ಯಾವುದೇ ಕೆಲಸ ಮಾಡುತ್ತಿರಲಿ ನಿಮ್ಮ ಉಸಿರಿನ ಅರಿವು ನಿಮಗಿರಲಿ. 

ನಾನು ಬಸ್‌ಸ್ಟಾಪಿನಲ್ಲಿ ನಿಂತಾಗ ನಿಧಾನವಾಗಿ ಉಸಿರಾಡುತ್ತೇನೆ. ಆಗ ಬಿಸಿಲು ನನಗೆ ಚುಚ್ಚುವುದಿಲ್ಲ. ನನ್ನ ಭುಜವನ್ನು ಬೆಚ್ಚಗಾಗಿಸುತ್ತದೆ. ನಾನು ಊಟ ಮಾಡುವುದಕ್ಕಿಂತ ಮುಂಚೆ ಕೃತಜ್ಞತೆಯಿಂದ ಉಸಿರಾಡುತ್ತೇನೆ. ನಾನು ತಿನ್ನುತ್ತಿರುವ ಅನ್ನ ಮತ್ತು ದಾಲ್ ನನ್ನಲ್ಲಿ ಶಕ್ತಿ ತುಂಬುತ್ತವೆ ಅಂದುಕೊಳ್ಳುತ್ತೇನೆ. ನಾನು ಕಚೇರಿಯಲ್ಲಿ ಕೆಲಸ ಮಾಡುವ ಮುನ್ನ ಸಂತೋಷದ ಉಸಿರಾಡುತ್ತೇನೆ. ನನ್ನ ಕೆಲಸದಿಂದ ಯಾರಿಗೋ ಪ್ರಯೋಜನವಾಗುತ್ತದೆ ಎಂಬ ಭಾವ ತುಂಬಿಕೊಳ್ಳುತ್ತೇನೆ.

ನನ್ನಲ್ಲಿ ಕಿರಿಕಿರಿಯ ಭಾವ ಉದ್ಭವಿಸಿದಾಗಲೆಲ್ಲ ಅದನ್ನು ತೊಡೆಯಲು ನಿಧಾನವಾಗಿ ಉಸಿರಾಡುತ್ತೇನೆ.  ಈ ರೀತಿಯಾಗಿ ಪ್ರತಿನಿತ್ಯ ನಿಧಾನವಾಗಿ ಉಸಿರಾಡುತ್ತ ನಿಮ್ಮೊಳಗೆ ನೀವು ಮಾತನಾಡಿಕೊಳ್ಳಿ. ನಿಮ್ಮ ಮನಕ್ಕೆ ಸಾಂತ್ವನ ಹೇಳಿ. ನಾವು ಯಾವಾಗಲೂ ನಮ್ಮ ಮಕ್ಕಳಲ್ಲಿ, ಸ್ನೇಹಿತರಲ್ಲಿ ಭರವಸೆ ತುಂಬುತ್ತಿರುತ್ತೇವೆ. ಆದರೆ, ನಮಗೆ ನಾವು ಸಮಾಧಾನ ಹೇಳಿಕೊಳ್ಳುವುದಿಲ್ಲ. ನಮಗೆ ನಾವೇ ಸಕಾರಾತ್ಮಕ ಮಾತುಗಳನ್ನು ಹೇಳಿಕೊಂಡಾಗ ಮನಸ್ಸು ಪ್ರಬುದ್ಧವಾಗುತ್ತದೆ. ದೇಹ ಆರೋಗ್ಯದಿಂದ ನಳನಳಿಸುತ್ತದೆ. ಶಾಂತಿಯ ಈ ಸುಗಂಧದಲ್ಲಿ ಕಲ್ಲು ಸಹ ನಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT