ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತಿ ಲೀಲಾವತಿ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಣ್ಣ ಸೆರೆ ಕುಡಿದು ಹಲ್ಲೆಗೈದು ಸೆರೆಮನೆ ಸೇರಿದ್ದರೆ ಅದು 24*7 ಸುದ್ದಿಯಾಗುತ್ತಿತ್ತು. ಉರಿಯುವ ಸಿಗರೇಟನ್ನು ಹೊಕ್ಕುಳ ಮೇಲೆ ಇಟ್ಟಿದ್ದರೆ ಕ್ಯಾಮೆರಾ ಕಣ್ಣಿಗೆ ಹೊಕ್ಕುಳ್ ಮಸಾಲೆಯಾಗುತ್ತಿತ್ತು.

ಪಾಪ! ಸರ್ಕಾರಿ ಪ್ರಾಥಮಿಕ ಶಾಲೆಗೆ ಹಾಡೇ ಹಗಲು ನುಗ್ಗಿ ಹಲ್ಲಿ ಬಿದ್ದ ಬಿಸಿಯೂಟ ಮೆದ್ದು ಆಸ್ಪತ್ರೆ ಸೇರಿದ. ಇದು ಆತ್ಮಹತ್ಯೆಯ ಪ್ರಯತ್ನ ಅಂತ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಸುದ್ದಿ ಪತ್ರಿಕೆಗಳಲ್ಲಿ ಬರಲಿಲ್ಲ. ಕಿರುತೆರೆಯಲ್ಲಿ ಕಾಣಲಿಲ್ಲ. `ಹಾಯ್ ಮುಳ್ಳೂರ್~ನಲ್ಲಿ ಸುದ್ದಿ ಬಾರದಂತೆ ಸ್ಥಳೀಕರು ಲಾಬಿ ನಡೆಸಿದರೆಂಬುದೇ ಸುದ್ದಿ.

ರಾಯ, ತನ್ನ ಹಾಸಿಗೆಯ ಬಳಿ ಹಾದು ಹೋಗುತ್ತಿದ್ದ ಕೈರಳಿ ನರ್ಸ್‌ನ ಕೈ ಹಿಡಿದೆಳೆದು `ಏ! ಚೆಲುವೆ! ನೀ ಯಾವ ವಾರ್ಡ್‌ನಲ್ಲಿ ಡ್ಯೂಟಿ ಮಾಡ್ತೀ ಹೇಳು. ನಾನಲ್ಲೆ ಬಂದು ಮಲಗ್ತೀನಿ.

ನೀ ಆರೈಕೆ ಮಾಡು~ ಎಂದು ಅಂಗಲಾಚಿದ. ಆ ಚಕೋರಿ - `ಎಂಡೆ ಡ್ಯೂಟಿ ಮೆಟರ್ನಿಟಿ ವಾರ್ಡ್‌ಲೆ ಸೋರ್‌ಉ~ ಎಂದು ಕೈಕೊಡವಿಕೊಂಡು ಹೋದದ್ದೆ ರಾಯ ಕೋಮಾಗೆ ಹೋದವ ನಿನ್ನೆಯಷ್ಟೆ ಎದ್ದ. ದಾದಿಯನ್ನು ಬಲಾತ್ಕರಿಸಿದನೆಂದಾಗಲಿ ಪತ್ರಿಕೆಗಳು ಸುದ್ದಿ ಮಾಡಬಹುದಿತ್ತು. ಅದೂ ಆಗಲಿಲ್ಲ. ಇತ್ತ `ಪೊರ್ಕಿ~ ನೆಪವೊಡ್ಡಿ, ಸ್ತ್ರೀವಾದಿಗಳು ನಮ್ಮನ್ನು ಇಸ್ತ್ರಿ ಮಾಡಿಬಿಟ್ಟರೆಂದು ಹಲುಬಿದ ಮಾದೇವೂಗೆ ಕ್ರೈಂನ `ಆ ಮುಖ~ ತೋರಿಸಬೇಕೆಂಬ ಛಲ.

 ನನಗೆ ಪತ್ರ ಬರೆದ- `ರಾಯಣ್ಣ ಡಿಸ್‌ಛಾರ್ಜ್ ಆಗಿ ಇವತ್ತು ಮನೆಗೆ ಬಂದ. ಹತ್ತಿದ ಮಂಚದಿಂದ ಇನ್ನೂ ಇಳಿದಿಲ್ಲ. ಇದೇ ಸಮಯ. ನೀವಿಲ್ಲಿಗೆ ಬಂದರೆ ಅವನನ್ನು ಕುಂಡ್ರಿಸಿಕೊಂಡು ಒಂದು ಭರ್ಜರಿ ಕ್ರೈಂ ಸ್ಟೋರಿ ಮಾಡಬಹುದು. `ಹಾಯ್ ಮುಳ್ಳೂರ್~ ನಲ್ಲಿ ನಾನು ಹಾಕಿಸ್ತೀನಿ. ಒಳ್ಳೆ ಮೈಲೇಜ್ ಸಿಕ್ಕೀತು. ನನಗೂ ಸರಿ ಎನಿಸಿತು. ಹೋದೆ.

ಸಾಯುವುದಿದ್ದರೆ ಶಾಲೆಗೇ ಹೋಗಬೇಕಿತ್ತೆ? ಮುಳ್ಳೂರಿನಲ್ಲೆ `ಭಗವಾನ್ ಸತ್ಯಸಾಯಿ ಮಿಲಿಟರಿ ಹೋಟೆಲ್~ ಇರಲಿಲ್ಲವೆ? ಶುದ್ಧ ಸಾತ್ವಿಕ ಮಾಂಸಾಹಾರಿ ಹೋಟೆಲ್ ಅದು. ಅಲ್ಲಿ ಹಲ್ಲಿಗಳಿಗೇನು ಬರ. ಪ್ರಾಯಶಃ ಶಾಲೆಯ ಅಡುಗೆ ಭಟ್ಟನೊಡನೆ ಡೀಲ್ ಮಾಡಿಕೊಂಡಿರಬಹುದು.

ಮೊದಲು ರಾಯಣ್ಣ: ಆಮೇಲೆ ಭಟ್ಟ. ಒಂದು ಹೆಣ್ಣಿನ ಕಾಣದ ಕೈ ರಾಯನನ್ನು ಸೂಸೈಡ್ ಅಂಚಿಗೆ ನೂಕಿರಬಹುದೆಂದು ಊರೆಲ್ಲ ಗುಸುಗುಸು. ಇಷ್ಟಕ್ಕೂ ರಾಯ ಬಡತನದ ಬೇಗೆಯಲ್ಲಿ ಬೆಂದು ಬಸವಳಿದು ಬೆಂಡಾದವ. ಈಗಷ್ಟೆ ಒಂದು ಮಿನಿಬಜೆಟ್ ಚಿತ್ರದ ಅಪ್‌ಕಮಿಂಗ್ ಹೀರೋ. ಈಗಲೆ ಡೌನ್ ಗೋಯಿಂಗ್ ಆದರೆ ಹೇಗೆ?

 ಮುಳ್ಳೂರಿಗೆ ಹೋಗಿ ನೇರ ರಾಯಣ್ಣನ ಹಾಸಿಗೆಯ ಬಳಿಯೇ ಲಗೇಜ್ ಇಳಿಸಿ ಕೇಳಿದೆ- `ರಾಯ! ನಿನ್ನ `ರಣವೀರ ಶುಂಠಿರವ~ದ ರಷಸ್ ನೋಡಿದೆ. ಆ ಹೀರೋಯಿಣಿ `ರಜನಿ ಪಾನೀಪೂರಿ~ ಮುಂಬೈಯವಳಂತೆ! ಬಿಂದಾಸ್ ಹುಡುಗಿ. ಒಳ್ಳೆ ಫೀಚರ್ ಐತೆ. ಫ್ಯೂಚರೂ ಐತೆ. ಹೋಗಲಿ, ಏನು ನಿನ್ನ ಕತೆ? ಅವರವ್ವ ಬಂದಳು.

`ಆಚಾರ‌್ರೆ ಏನಾರಾ ಒಸಿ ಹಾಟ್ ಡ್ರಿಂಕ್ಸ್ ತಗಂತೀರಾ? ಕಾಫಿ ? ಟೀ? ಈ ಹಳ್ಳಿ ಅವ್ದೀರ್ಗೆ ಅರೆಬರೆ ಇಂಗ್ಲಿಷ್ ಬಂದರೆ ಅದು ಬಳಕೆಯಾಗುವುದು ಹೀಗೆಯೇ. ಹಿಂದೆಯೇ ಅವಳ `ಅಂಟಿ~ ಬಂದು ಅಂಟಿಕೊಂಡಳು- `ಸೂಟಿಂಗ್‌ಗೆ ಓದವ್ನ. ಹ್ವಾದವಾರ ಇದ್ಕಿಂದಂಗೆ ವಾಪಸ್ ಬಂದವ್ನೆ. ಮಾರ‌್ನೆ ಜಿಣ ಆಸ್ಪತ್ರೆ ಸೇರ್ಕಂಡ. ಅಷ್ಟೀಯ~ ಎಂದಳು.

 ಇಲ್ಲಿ ರಾಯ ಅಂಟಿಯ ಎದುರು ಹೇಳಬಾರದ್ದು ಏನೋ ಇದೆ ಎಂದು ಊಹಿಸಿ, ಅವಳನ್ನು ಕೊಟ್ಟಿಗೆಗೆ ಅಟ್ಟಿದೆ. ರಾಯ ಕೊನೆಗೂ ಬಾಯಿಬಿಟ್ಟ `ಆಚಾರ‌್ರೆ! `ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ~ ಅಂತ ಅಲಮೇಲಮ್ಮ ಸಾಪ ಆಕಿದ ದಿನದಿಂದ ಇದುವರೆಗೂ ಒಂದು ಉಡ್ಗೀನೂ ಆ ಮಡುವಿನಲ್ಲಿ ಈಜು ಹೊಡೆದದ್ದು ನೋಡಿಲ್ಲ, ಕೇಳಿಲ್ಲ.
 
ಈ ಉಡ್ಗಿ-ಯಾರು, ನನ್ನ ಈಗಿನ ಎಂಡ್ರು ಲೀಲಾವತಿ ಅಂತ-ಈಜು ಉಡುಪಿನಲ್ಲಿ ಮಡುವಿಗೆ ಡೈವ್ ಒಡೆದದ್ದು ನೋಡಿ ನನ್ನೆದೆ ಧಡಕ್ ಅಂತು ಸಿವಾ, ಇದು ಹೆಣ್ಣಲ್ಲ, ಗಜನಿಂಬೆ ಹಣ್ಣು, ಮಾಡ್ಕಂಡ್ರೆ ಇವ್ಳೀಯೆ ನಗ್ಣ ಮಾಡ್ಕಂಬೇಕು ಅಂತ ಅವರಪ್ಪನ ಹತ್ತಿರ ಹೋದೆ. ಅವ ಕಲಿಯೂರು ಜೋಡಿದಾರ.

ಉರಿ ಮೀಸೆ ಸರದಾರ. ಕೈಲಿ ಹಂಟರ್‌ವಾಲಿ ಹಿಡ್ಕಂಡ್ ಕೇಳ್ತವ್ನೆ- `ಏನ್ ಜೂರತ್ತಿದ್ರೆ ನನ್ ಮಗಳ್ನ ಕೇಳೀವಿ ನೀನು! ನನ್ ಎಂಡ್ರನ್ ನೋಡಿದ್ಯೇನಲಾ? ಎಂಗವ್ಳೆ? ಉಲಿ! ಉಲಿ!~ ಎಂದ. ನಾನು ಸೆಟೆದು ನಿಂತು `ನಿನ್ ಎಂಡ್ರನ್ನೂ ನೋಡಿವ್ನಿ. ನಿನ್ ಮಗಳ್ನೂ ನೋಡಿವ್ನಿ, ಆದ್ರೂನೂಯ ನಿನ್ ಮಗಳೇ ಪಸಂದಾಗವ್ಳೆ. ಕೊಡ್ತೀಯಾ ಎಂಗೆ?~ ಅಂದೆ. ಕೊಟ್ಟ.

 ಅನಿಮೂನ್‌ಗೆ ಓಗಾಕಿದ್ವಿ. ಸೂಟಿಂಗ್ ಅಡ್ಡ ಬಂತು. ಓದೆ. ಯಾಕೋ ಆ ಡೈರೆಕ್ಟರ್ ಎಲ್ಕಡೇನೂ ಅರ್ದಕ್ಕೇ ಷ್ಟಾಪ್ ಮಾಡಿ ಪ್ಯಾಕ್ ಅಪ್ ಅಂತವ್ನೆ, ಎಂಡ್ರ ಮೇಲೆ ಗುಮಾನಿ.
 
ಎಂಗಾರ ಓಗ್ಲಿ ಅಂತ ನನ್ನ ಎಂಡ್ತೀಗೆ `ನಾ ಬರೋದು ತಡರಾತ್ರಿ. ಎಚ್ಚರವಾಗಿರು~ ಅಂತ ಮೆಸೇಜ್ ಕೊಟ್ಟು ಕಡದೊಂಟ್ ಬಂದೆ ಸಿವಾ. ಬತ್ತೀನಿ. ಕಿಟಿಕಿತಾವ ಬಗ್ಗಿ ನೋಡ್ತೀನಿ. ನನ್ ಎಂಡ್ರ ಪಕ್ಕದಲ್ಲಿ ಯಾವನೋ ಅವ್ನೆ. ಕೆಟ್ನಲ್ಲಪೋ ಅಂತ ಅಂಗಿದಂಗೇನೇ ಓಗಿ ನಮ್ಮಾವನ್ನ ಎಬ್ಸಿ `ಲೇ ಮಾವ! ನನ್ಗೆ ಡೈವರ್ಸ್ ಬೇಕು~ ಅಂದೆ. ನಡೆದದ್ದು ತಪ್‌ಸೀಲಾಗಿ ಏಳಿದೆ. ಅವ `ಟೆನ್ಸನ್ ತಗಬೇಡಾ ರಾಯ. ಇಲ್ಲೇ ಮನಿಕ್ಕ. ನಾ ಓಗಿಬತ್ತೀನಿ~ ಅಂತ ನಮ್ಮ ಮನೆಗೆ ಓದವ ಮಾರನೆ ಜಿಣ ಬಂದು ಏಳ್ತವ್ನೆ `ನಿನ್ ಮೆಸೇಜ್ ಬರಾದು ತಡವಾಗೈತೆ ಕಣ್ಲಾ. ನನ್ನ ಉಡ್ಗಿ ಮರ‌್ವಾದಸ್ಥಳು. ಅಂಗೆಲ್ಲ ಆದಿ ತಪ್ಪಲ್ಲ~ ಅಂತ.

 ನಾನು ನೇರ ಮನೆಗೆ ಬಂದವ್ನೆ ಅವಳ್ನ ಕರೆಸಿ ಏಳಿದೆ- `ಮದ್ಲು ಆ ಕಾರ್ ಡ್ರೈವರ‌್ನ ಕಿತ್ತಾಕು. ತಿಂಗ್ಳ ತಿಂಗ್ಳ 4 ಸಾವಿರ ಸಂಬಳ ಕೊಡಾಕೆ ಆಗಾಕಿಲ್ಲ~ ಅಂತ. ಅಂಗಾರಾ ದಾರಿಗೆ ಬತ್ತಾಳೇನೋ ಅಂತ ಅನ್ಕಂಡೆ. ಆ ಮಿಟಕಲಾಡಿ ಅಂತವ್ಳೆ `ಡ್ರೈವರ್ ಒಬ್ನೆ ಯಾಕ. ಆ ಭಟ್ಟ, ಮಾಲ, ಮನೆಗೆಲಸದವ, ಅವರ‌್ನೂ ಕಿತ್ತಾಕು.
 

ಹನ್ನೇಲ್ಡ ಸಾವಿರ ಉಳೀತೈತೆ~ ಅಂತ. ಓ! ಅಂಗಾರೆ ಡ್ರೈವರ್ ಒಬ್ನೆ ಅಲ್ಲ, ಇನ್ನಾ ಮೂವರು ಅವ್ರೆ. ಇವಳು ಸತೀ ಲೀಲಾವತಿ ಅಂತ, ಅನ್ಕಂಡೆ-ತೆಪ್ಪಾಯ್ತು. ಇವಳು ಪತಿಗಳೈವರಸತಿ. ಲೈಫು ಬೋರಾಯ್ತು. ಸೊಸೈಟಿಗೆ ಓದೆ. ಎಂಡೋಸಲ್ಫೇಟ್ ಐತಾ ಅಂತ ಕೇಳಿದೆ. ಬ್ಯಾನ್ ಆಗೈತೆ ಅಂದ್ರು. ಇಲಿ ಪಾಷಾಣಕ್ಕೆ ಪವರ್ ಕಮ್ಮಿ. ಅದ್ಕೆ ಸೂಲಿಗೆ ಓದವ, ಬಂದ್ ಅಲ್ಲಿ ಎತ್ತಾಕ್ಕಂಡ್ ಓಗಿ, ಸಾಂಬಾರ್‌ಗೆ ಆಕಿದೆ. ಅಲ್ಲಿ ಸತ್ತು, ನಾನು ಆಸ್ಪತ್ರೆ ಸೇರಿದೆ. ಸಾಕು ಜೀವ್ಣ! ಅಂದ.

ಕತೆ ಕೇಳಿ, ನಾನು ಒಂದು ಪಿ.ಐ.ಎಲ್. ದಾಖಲಿಸಿದೆ. ಇದು ಸ್ತ್ರೀ ದೌರ್ಜನ್ಯ ಅಂದರೆ ಹೆಣ್ಣಿನಿಂದ ಗಂಡಿನ ಮೇಲಣ ದುರಾಕ್ರಮಣ! ಇದನ್ನು ಸಿ.ಬಿ.ಐ.ಗೆ ಒಪ್ಪಿಸಬೇಕು ಅಂತ ಕೋರ್ಟಿಗೆ ಮನವಿ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT