ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ನಿವಾರಣೆಗೆ ಪುರಸಭೆ ಪ್ರವಾಸ

Last Updated 19 ಜನವರಿ 2011, 11:10 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ನಿವಾಸಿಗಳ ಕುಂದುಕೊರತೆ ಆಲಿಸಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಮಂಗಳವಾರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿದರು.ಪುರಸಭೆಯ 5ನೇ ವಾರ್ಡ್ ವ್ಯಾಪ್ತಿಗೆ ಬರುವ ಕೊಬ್ಬರಿಪೇಟೆ ಬಡಾವಣೆಯಲ್ಲಿ ಪ್ರವಾಸ ಕೈಗೊಂಡ ಪುರ ಪಿತೃಗಳಿಗೆ ವಾರ್ಡ್ ನಿವಾಸಿಗಳು ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಬಡಾವಣೆಯಲ್ಲಿ ಅನೇಕ ದಿನಗಳಿಂದ ಸ್ವಚ್ಛಗೊಳಿಸದೇ ಇದ್ದ ಚರಂಡಿ, ಮಣ್ಣಿನಿಂದ ತುಂಬಿದ್ದ ರಸ್ತೆಗಳನ್ನು ಪುರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ಕಂದಾಯ ವಸೂಲಾತಿ ವಿಭಾಗದ ಸಿಬ್ಬಂದಿ ನೀರು ಹಾಗೂ ಮನೆ ಕಂದಾಯ ವಸೂಲಿಯಲ್ಲಿ ನಿರತರಾಗಿದ್ದರು. ಮನೆ ಮನೆಗೂ ತೆರಳಿದ ಅಧ್ಯಕ್ಷ ಎಚ್.ಬಿ. ಮಂಜುನಾಥ್ ಹಾಗೂ ಉಪಾಧ್ಯಕ್ಷ ವಿಜಯ ಶಿವಲಿಂಗಪ್ಪ ನಿವಾಸಿಗಳ ಸಮಸ್ಯೆಗಳನ್ನು ಖುದ್ದು ಆಲಿಸಿ, ಅವಕಾಶ ಇದ್ದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕೆಲವು ದೂರುಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಕೊಬ್ಬರಿ ಪೇಟೆ ಬಡಾವಣೆಯಲ್ಲಿ ಅನೇಕ ಮಂದಿ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿರುವುದರಿಂದ ಸ್ವಚ್ಛತೆಗೆ ತೊಂದರೆಯಾಗಿದೆ. ಒತ್ತುವರಿ ಮಾಡಿಕೊಂಡವರು ಆದಷ್ಟು ಬೇಗ ಕಟ್ಟಡ ಹಾಗೂ ಗೋಡೆಗಳನ್ನು ತೆರವುಗೊಳಿಸಿ ಕೊಡಬೇಕು ಎಂದು ಮನವಿ ಮಾಡಲಾಯಿತು.ವಾರ್ಡ್ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಪಟ್ಟಣದಲ್ಲಿ ಜನತೆ ಸಹಕಾರ ನೀಡಿದಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಮನೆ ಬಾಗಲಿಗೆ ಬರುವಂತೆ ತಳ್ಳುವ ಗಾಡಿ ವ್ಯವಸ್ಥೆ  ಮಾಡುವ ಯೋಜನೆ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಕೊರತೆ ಇರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಪಟ್ಟಣದ ಪ್ರತಿಯೊಂದು ಮನೆ ಬಾಗಿಲಿಗೆ ಪುರಸಭೆಯ ಸಹಾಯವಾಣಿ ಸಂಖ್ಯೆ (0819 923266) ನಮೂದಿಸಲಾಗುತ್ತಿದ್ದು ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಸಹಾಯವಾಣಿಯಲ್ಲಿ ದಾಖಲಿಸಬಹುದು ಎಂದು ಮಾಹಿತಿ ನೀಡಿದರು.ಸದಸ್ಯರಾದ ಜಬಿವುಲ್ಲಾ, ವೆಂಕಟೇಶ್, ವಜೀರ್, ಖುತೇಜಾಬಿ, ಹೇಮಾವತಿ ಸೇರಿದಂತೆ ಪುರಸಭೆಯ 40ಕ್ಕೆ ಹೆಚ್ಚು ಸಿಬ್ಬಂದಿ ವಾರ್ಡ್ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT