ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಗದ್ರಟಗಿ ಗ್ರಾಮ

Last Updated 4 ಆಗಸ್ಟ್ 2011, 9:30 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಬಪ್ಪೂರು ಹೋಬಳಿ ವ್ಯಾಪ್ತಿಯ ಗದ್ರಟಗಿ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಮಹಿಳಾ ಶೌಚಾಲಯ, ಅಸಮರ್ಪಕ ಕುಡಿಯುವ ನೀರಿನ ಪೂರೈಕೆ, ರಸ್ತೆಗಳಲ್ಲಿ ಗುಂಡಿ, ಚರಂಡಿಗಳಿಲ್ಲದಿರುವುದು ಹತ್ತು ಹಲವು ಸಮಸ್ಯೆಗಳು ಇಲ್ಲಿನವರನ್ನು ಕಾಡುತ್ತಿವೆ.

ತಾಲ್ಲೂಕು ಕೇಂದ್ರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಯದ್ವತದ್ವಾ ಇದೆ. ಮಳೆಗಾಲದಲ್ಲಿ ವಾಹನ ಸಂಚಾರ ದುಸ್ತರ. ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನಗಳನ್ನು ಗ್ರಾಮಸ್ಥರು ನೆಚ್ಚಿಕೊಳ್ಳಬೇಕಿದೆ. ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಪಟ್ಟಣಕ್ಕೆ ತೆರಳಲು ಹರಸಾಹಸಪಡುವುದು ಸಾಮಾನ್ಯ. ಟಾಂಟಾಂ ವಾಹನಗಳ ಓಡಾಟ ಹೆಚ್ಚಿದ್ದು ಪ್ರಯಾಣಿಕರು ಅಂಗೈಯಲ್ಲಿ ಜೀವವಿಡಿದು ಸಂಚರಿಸುವಂತಾಗಿದೆ.

ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಸೋರುತ್ತಿದೆ. ಬಸ್ ನಿಲ್ದಾಣ ಶಿಥಿಲಾವಸ್ಥೆಯಲಿದ್ದು, ಕುಳಿತುಕೊಳ್ಳಲು ಜನರು ಭಯಪಡುತ್ತಾರೆ. ಕಳಪೆ ಕಾಮಗಾರಿಯಿಂದ ಅಂಗನವಾಡಿ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ದುರಸ್ತಿ ಕಾರ್ಯ ನಡೆದಿಲ್ಲ. ಸಣ್ಣ ಮಳೆಯಾದರೆ ಸಾಕು ಗ್ರಾಮದ ಓಣಿಗಳಲ್ಲಿ ರಾಡಿ ವಾತಾವರಣ ನಿರ್ಮಾಣವಾಗಿ ಪಾದಾಚಾರಿಗಳು ನಡೆದಾಡಲು ಆಗದಂತಹ ಪರಿಸ್ಥಿತಿ ಉಂಟಾಗುತ್ತದೆ. ಚರಂಡಿಗಳ ನಿರ್ಮಾಣ ಮಾಡದಿರುವುದರಿಂದ ಹೊಲಸು ನೀರು ರಸ್ತೆ ಮೇಲೆ ಹರಿಯುತ್ತದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆಯ ಹೂಳೆತ್ತಲು ಸರ್ಕಾರದಿಂದ 10 ಲಕ್ಷ ಹಣ ಈ ಹಿಂದೆ ಮಂಜೂರಾಗಿತ್ತು. ಮಷಿನ್‌ಗಳ ಮೂಲಕ ಕೆಲಸ ನಿರ್ವಹಿಸಿ ಗುತ್ತಿಗೆದಾರರು ಹಣ ಸ್ವಾಹ ಮಾಡಿದ್ದಾರೆನ್ನುವುದು ಗ್ರಾಮಸ್ಥರ ಆರೋಪ.

ಇತ್ತ ಕೆಲಸವೂ ಅಸಮರ್ಪಕವಾಗಿರುವುದಲ್ಲದೇ, ಕೂಲಿಕಾರರನ್ನು ಕೆಲಸದಿಂದ ವಂಚಿಸಲಾಗಿದೆ. ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಂದ ಹಣವನ್ನು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಗ್ರಾಮಸ್ಥರು ನೇರವಾಗಿ ದೂರುತ್ತಾರೆ.

ಗ್ರಾಮದಲ್ಲಿ ಏಳನೇ ತರಗತಿವರೆಗೆ ಶಾಲೆಯಿದ್ದು 4 ಜನ ಶಿಕ್ಷಕರಿದ್ದಾರೆ. ಬಿಸಿಯೂಟ ಕೋಣೆ, ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಕಂಪೌಂಡ್ ವ್ಯವಸ್ಥೆಯಿಲ್ಲ. ಸರ್ಕಾರದಿಂದ ಕಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ಹಣ ಮಂಜೂರಾಗಿತ್ತು. ಆದರೆ ಈ ಕೆಲಸ ಅರ್ಧಕ್ಕೆ ನಿಂತಿದೆ. ಶಿಕ್ಷಕರ ಕೊರತೆಯ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನಾನುಕೂಲ ಉಂಟಾಗುತ್ತಿದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿದ್ಯುತ್ ಪರಿವರ್ತಕ ಗ್ರಾಮದ ಮಧ್ಯ ಭಾಗದಲ್ಲಿದ್ದು ಅಪಾಯಕ್ಕೆ ಅಹ್ವಾನ ನೀಡುವಂತಿದೆ. ವಿದ್ಯುತ್ ತಂತಿಗಳು ಇಳಿಬಿದ್ದಿರುವುದರಿಂದ ಯಾವಾಗ ಏನಾಗುತ್ತದೋ ಎನ್ನುವ ಭೀತಿ ಜನರದು. ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ, ಮಹಿಳಾ ಶೌಚಾಲಯ ನಿರ್ಮಾಣ, ಡಾಂಬರ್ ರಸ್ತೆ ನಿರ್ಮಾಣ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳದಿರುವುದರಿಂದ ಜನರು ದಿನವೂ ನರಕಯಾತನೆ ಪಡುತ್ತಿದ್ದಾರೆ.

ಬಾಗಲವಾಡ, ವಕ್ರಾಣಿ, ತಲೇಖಾನ್ ಗ್ರಾಮಗಳ ಮಾರ್ಗದ ರಸ್ತೆ ಕಡೆಗೆ ಗದ್ರಟಗಿ ಗ್ರಾಮದ ರೈತರ ನೂರಾರು ಎಕರೆ ಜಮೀನಿದ್ದು ನಡುವೆ ಹಳ್ಳಕ್ಕೆ ಸಂಪರ್ಕ ಸೇತುವೆ ನಿರ್ಮಿಸದ ಕಾರಣ ಹೊಲಗಳಿಗೆ ತೆರಳಲು ಅಸಾಧ್ಯವಾಗಿದೆ. ಹಲವುಬಾರಿ ಸೇತುವೆ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಗ್ರಾಮದ ರೈತರೊಬ್ಬರು ನೊಂದು ನುಡಿಯುತ್ತಾರೆ.

ಗ್ರಾಮ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದ್ದರೂ ಸ್ವಗ್ರಾಮದವರೇ ಆದ ಗ್ರಾ.ಪಂ.ಉಪಾಧ್ಯಕ್ಷ ಚನ್ನನಗೌಡ, ಸದಸ್ಯರಾದ ಈರಪ್ಪ ಹಡಪದ, ಹನುಮಂತ ನಾಯಕ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯೆ ಬಸಮ್ಮ ಕುಂಟೋಜಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ದ್ಯಾಮನಗೌಡ ಬಪ್ಪೂರು ಅದೇ ದಾರಿ ತುಳಿದಿದ್ದಾರೆ ಎಂದು ಗ್ರಾಮಸ್ಥರು ಬಲವಾಗಿ ಆರೋಪಿಸುತ್ತಾರೆ.
 
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೂಲಭೂತ ಸಮಸ್ಯೆಗಳನ್ನು ನಿವಾರಿಸಿ ಅನುಕೂಲ ಕಲ್ಪಿಸಿಕೊಡಬೇಕೆನ್ನುವುದು ಗ್ರಾಮದ ಬಸವರಾಜ ನಾಯಕ, ವೀರೇಶ ಕುಲಕರ್ಣಿ, ಹನುಮೇಶ ನಾಯಕ, ರವಿಕುಮಾರ, ಶ್ಯಾಮಮ್ಮ ಮತ್ತಿತರರ ಒಕ್ಕೊರಲಿನ ಧ್ವನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT