ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಸನ್ನಿ @ ಬೆಂಗಳೂರು

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮೊನ್ನೆ ಶುಕ್ರವಾರ ಸೂರ್ಯನೂ ಕಾಣದಷ್ಟು ದಟ್ಟವಾದ ಮೋಡ. ಮಧ್ಯಾಹ್ನವಾದರೂ ಆತನ ಶಾಖ ಸೋಕದಷ್ಟು ಚಳಿ. ಆದರೂ ಬೆಂಗಳೂರಿಗರ ಮೈಬಿಸಿ ಏರುವಂಥಾ ಸುದ್ದಿಯೊಂದು ಹೊರಬಿದ್ದಿತ್ತು. ನೀಲಿ ಚಿತ್ರಗಳ ಚೆಲುವೆ, ಬಾಲಿವುಡ್‌ನ ಸದ್ಯದ ಹಾಟ್‌ ಬೆಡಗಿ ಸನ್ನಿ ಲಿಯಾನ್‌ ಬೆಂಗಳೂರಿಗೆ ಬರುವ ಸುದ್ದಿ ದಟ್ಟವಾಗಿತ್ತು.

ಮೊಬೈಲ್‌ ಪರದೆಗಳಲ್ಲೋ, ಲ್ಯಾಪ್‌ಟಾಪ್‌ಗಳಲ್ಲೋ ಕದ್ದು ಕದ್ದು ನೋಡಿದ ಕಾಮದಾಟದ ಬೆಡಗಿಯನ್ನು ನೇರವಾಗಿ ಕಣ್ತುಂಬಿಕೊಳ್ಳುವ ತವಕ ಪಡ್ಡೆ ಹೈಕಳದ್ದು. ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದ ಸನ್ನಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಹುರುಪು ಛಾಯಾಗ್ರಾಹಕರದ್ದು. ಆಕೆಯನ್ನು ಮಾತನಾಡಿಸಿ ಬರೆಯುವ ಕಾತರ ಸುದ್ದಿಮಿತ್ರರದ್ದು. ಸನ್ನಿಯ ಈ ಮೊದಲ ಭೇಟಿಯನ್ನೇ ತಮ್ಮ ವ್ಯಾಪಾರ ಉತ್ತೇಜನಕ್ಕೆ ಬಳಸಿಕೊಳ್ಳುವ ಹಂಬಲ ಮಾಲ್‌, ಹೋಟೆಲ್‌ಗಳದ್ದು.

ಆದರೂ ವಾರಾಂತ್ಯದ ಒತ್ತಡದಲ್ಲಿದ್ದ ಬೆಂಗಳೂರಿನ ಟ್ರಾಫಿಕ್‌ನಲ್ಲೇ ಸನ್ನಿ ಅಲ್ಲಿ ಇಲ್ಲಿ ಓಡಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಮೊಬೈಲ್‌ಗಳ ಮೂಲಕ ಹರಿದಾಡುತ್ತಿತ್ತು. ಅಷ್ಟಕ್ಕೂ ಸನ್ನಿ ಲಿಯಾನ್‌ ಬಂದಿದ್ದು ತಮ್ಮ ಅಭಿನಯದ ‘ಜಾಕ್‌ಪಾಟ್‌’ ಹಿಂದಿ ಚಿತ್ರದ ಪ್ರಚಾರಕ್ಕಾಗಿ. ಈ ಸಂಬಂಧ ವೈಟ್‌ಫೀಲ್ಡ್‌ ಬಳಿಯ ಇನ್‌ಆರ್ಬಿಟ್‌ ಮಾಲ್‌ನಲ್ಲೂ ಆಕೆಯ ಬರುವಿಕೆಯ ಹಾದಿ ಕಾಯುತ್ತ ಮಧ್ಯಾಹ್ನ 1 ಗಂಟೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು.

ಸನ್ನಿಗಾಗಿ ಮಾಲ್‌ ಮಧ್ಯದಲ್ಲಿ ವೇದಿಕೆ ಸಿದ್ಧಗೊಂಡಿತ್ತು. ಮೂರು ಅಂತಸ್ತಿನ ಮಾಲ್‌ನ ಸರಳುಗಳಿಗೆ ಒರಗಿ ಕಾದು ಕುಳಿತವರ ಸಂಖ್ಯೆ ನಿಧಾನವಾಗಿ ಏರುತ್ತಿತ್ತು. ಕಂಪ್ಯೂಟರ್‌ ಮುಂದೆಯೇ ದಿನದ ಬಹುಪಾಲು ಕಳೆಯುವ ಐಟಿ ಮಂದಿಯೂ ಮುಂದಿರುವ ವಾರಾಂತ್ಯವನ್ನು ಅವಿಸ್ಮರಣೀಯವಾಗಿಸುವ ಸಲುವಾಗಿ ಸನ್ನಿಯನ್ನು ನೋಡಿಯೇ ಹೊರಡುವ ಹುಮ್ಮಸ್ಸಿನಲ್ಲಿದ್ದರು.

ಎದೆಯುಬ್ಬಿಸಿ ಮಲಗಿದ್ದ ಸನ್ನಿಯ ಪೋಸ್ಟರ್‌ಗಳು ಮಾಲ್‌ನ ಮೂಲೆ ಮೂಲೆಯಲ್ಲಿದ್ದವು. ಸಾಕ್ಷಾತ್ ಅವಳನ್ನೇ ನೋಡುವಂತೆ ತದೇಕಚಿತ್ತದಿಂದ ಚಿತ್ರಗಳನ್ನು ನೋಡುತ್ತಾ ಕುಳಿತವರನ್ನು ‘ಸನ್ನಿ ಇನ್ನೇನು ಬಂದೇ ಬಿಟ್ಟರು’ ಎಂಬ ನಿರೂಪಕಿಯ ಹಸಿ ಸುಳ್ಳು ಬಡಿದೆಬ್ಬಿಸುತ್ತಿತ್ತು. ಎಲ್ಲರೂ ಒಂದೇ ಸಮನೆ ಕೂಗಿಕೊಳ್ಳುತ್ತಿದ್ದರು.

ಸನ್ನಿಯ ಬರುವಿಕೆಗಾಗಿ ಕಾದವರಲ್ಲಿ ಕೇವಲ ಹುಡುಗರೇ ಇರುತ್ತಾರೆ ಎಂದುಕೊಂಡೀರಾ ಮತ್ತೆ. ಸನ್ನಿಯ ಸಮೂಹ ಸನ್ನಿಗೆ ಒಳಗಾದವರಲ್ಲಿ  ಯುವತಿಯರೂ ಇದ್ದಾರೆ! ಗಂಟೆ 3 ಆಯಿತು, ನಂತರ ನಾಲ್ಕು, ಐದು ಹೀಗೆ ಗಂಟೆ ಏರಿದರೂ ಸನ್ನಿಯ ಆಗಮನದ ಸೂಚನೆಯೇ ಇರಲಿಲ್ಲ. ಆದರೆ ಜನ ಜಮಾಯಿಸುತ್ತಲೇ ಇದ್ದರು.

ಝಡ್‌ ಶ್ರೇಣಿ ಭದ್ರತೆ ಇಲ್ಲದಿದ್ದರೂ ಖಾಸಗಿ ಭದ್ರತಾ ಸಿಬ್ಬಂದಿಯೇ ಸನ್ನಿಗಾಗಿ ಆ ಪರಿಯ ಭದ್ರತೆಯನ್ನು ಸೃಷ್ಟಿಸಿದ್ದರು. ಸಂಜೆ 5ರಿಂದಲೇ ಮಾಲ್‌ನ ನೆಲ ಮಾಳಿಗೆಗೆ ಬರುವ ವಾಹನಗಳ ತಪಾಸಣೆ ಆರಂಭವಾಗಿತ್ತು. ಭದ್ರತಾ ಸಿಬ್ಬಂದಿಯ ತಾಲೀಮು ಕೂಡ ನಡೆಯುತ್ತಿತ್ತು. ಸನ್ನಿಯ ವಾಹನ ನಿಲ್ಲುವ ಸ್ಥಳ, ಹೋಗುವ ಮಾರ್ಗ, ವೇದಿಕೆ ಇತ್ಯಾದಿ ಕಡೆಯಲ್ಲಿ ತಪಾಸಣೆಯೂ ನಡೆಯಿತು. ಸನ್ನಿ ಬಂದಾಗ ಭದ್ರತಾ ಸಿಬ್ಬಂದಿ ನಡೆದುಕೊಳ್ಳಬೇಕಾದ ರೀತಿ ಕುರಿತು ಮಾಲ್‌ನ ಭದ್ರತೆಯ ಮುಖ್ಯಸ್ಥರು ಹಾಗೂ ಸನ್ನಿಯ ಖಾಸಗಿ ಭದ್ರತೆ ಒದಗಿಸುತ್ತಿದ್ದವರು ಜಂಟಿಯಾಗಿ ಸಮಾಲೋಚನೆ ನಡೆಸುತ್ತಿದ್ದರು.

ಇತ್ತ ಬೆಂಗಳೂರಿನ ಸೂರ್ಯ ಮುಳುಗುತ್ತಿದ್ದರೂ ಮಾಲ್‌ನ ದೀಪದ ಬೆಳಕಿನಲ್ಲಿ ಸೂರ್ಯಾಸ್ತವೂ ಕಾಣದಂಥ ಪರಿಸ್ಥಿತಿ. ಆದರೂ ಎಲ್ಲರದ್ದೂ ಒಂದೇ ಧ್ಯೇಯ. ಸನ್ನಿಯನ್ನು ಕಂಡೇ ಮನೆಯತ್ತ ಹೆಜ್ಜೆ ಹಾಕುವ ಹಠ. ಐದು ನಿಮಿಷ ದೂರದಲ್ಲಿದ್ದಾರೆ ಎಂಬ ಮಾಹಿತಿ ಆಗಾಗ ನಿರೂಪಕರಿಂದ ಹಾಗೂ ಮಾಲ್‌ನ ಸಿಬ್ಬಂದಿಯಿಂದ ಬರುತ್ತಲೇ ಇತ್ತು.

ಗಂಟೆ ಆರು. ಸನ್ನಿ ಬರುವ ಸುದ್ದಿ ಈ ಬಾರಿಯಾದರೂ ಹುಸಿಯಾಗದಿರಲಿ ಎಂಬ ಆಸೆ ಅಭಿಮಾನಿಗಳದ್ದು. ಇನ್ನಾದರೂ ಬರಲಿ ಎಂಬುದು ಮಾಧ್ಯಮದವರ ಪಾಡು. ಅಗೋ ಬಂದರು... ಎನ್ನುತ್ತಲೇ ಭದ್ರತಾ ಸಿಬ್ಬಂದಿ ಸಜ್ಜಾದರು. ಟೊಯೊಟಾ ಫಾರ್ಚೂನರ್‌ ಕಾರು ರೊಂಯ್ಯನೇ ಬಂದಿತು. ಕ್ಯಾಮೆರಾ ಹೊತ್ತ ಛಾಯಾಗ್ರಾಹಕರು ಸೈನಿಕರಂತೆ ಸಜ್ಜಾದರು. ಭದ್ರತಾ ಮುಖ್ಯಸ್ಥರು ಹೇಳಿಕೊಟ್ಟಂತೆ ವಾಹನವನ್ನು ಸುರಕ್ಷಿತವಾಗಿ ಒಂದೆಡೆ ನಿಲ್ಲಿಸುವಂತೆ ಮಾರ್ಗ ಸೂಚಿಸಲಾಯಿತು.

ಅದರತ್ತ ಎಲ್ಲರ ಧಾವಂತದ ಹೆಜ್ಜೆ. ಕಾರಿನ ಬಾಗಿಲು ತೆಗೆಯುವುದನ್ನೇ ಕಾಯುತ್ತಿದ್ದ ಕ್ಯಾಮೆರಾ ಇನ್ನೇನು ಕ್ಲಿಕ್ ಅನ್ನಬೇಕು. ಅಷ್ಟರಲ್ಲಿ ಕಾರಿನೊಳಗೆ ಎತ್ತ ಕಣ್ಣಾಡಿಸಿದರೂ ಸನ್ನಿಯ ಸುಳಿವೇ ಇಲ್ಲ. ಅತ್ತ ಕಾರಿನೊಳಗಿಂದ ಇಳಿದ ದಂಪತಿಗೂ ಏನು ನಡೆಯುತ್ತಿದೆ ಎಂಬ ಆತಂಕ. ನಿರಾಶರಾಗಿ ಎಲ್ಲರೂ ‘ಓ... ಯಾರೋ ಮಾಲ್‌ಗೆ ಬಂದವರು’ ಎನುತ್ತ ತಾವು ಮೋಸ ಹೋದ ಬಗೆಯನ್ನು ಪರಸ್ಪರ ನಗುತ್ತ ಹಂಚಿಕೊಂಡು ಮತ್ತೊಮ್ಮೆ ಸಜ್ಜಾದರು.

ಆಗೊಂದು ಮರ್ಸಿಡಿಸ್‌ ಬೆಂಜ್‌ ಸಿ-ಕ್ಲಾಸ್‌ ಬಂದಿತು. ಅದರ ಹಿಂದೆ ಆಡಿ ಕ್ಯೂ 3. ಇದರಲ್ಲಾದರೂ ಸನ್ನಿ ಇರಬಹುದು ಎಂಬ ಶಂಕೆ ಎಲ್ಲರದ್ದು. ಅದರತ್ತ ಓಡುತ್ತಿದ್ದಂತೆ ಆಡಿಯಲ್ಲಿದ್ದ ಕಪ್ಪು ವಸ್ತ್ರಧಾರಿ ಬೌನ್ಸರ್‌ಗಳು ಬಂದು ಮರ್ಸಿಡೀಸ್‌ ಬೆಂಜ್‌ ಸುತ್ತುವರಿದರು. ಅದರ ಕಪ್ಪು ಗಾಜಿನ ಒಳಗಿಂದ ಮೊಬೈಲ್‌ ಬೆಳಕಿನಲ್ಲಿ ಯಾರದ್ದೋ ಮುಖ. ಹತ್ತಿರ ಹೋಗದಂತೆ ತಡೆಯಲು ಬೌನ್ಸರ್‌ಗಳ ಸರ್ಪಗಾವಲು.

ಮಾಲ್‌ಗೆ ಪ್ರವೇಶ ಎಲ್ಲಿಂದ ಎಂದು ಕೇಳಿದ ಆ ತಂಡದ ನಾಯಕ ಹೋಗುವ ಮಾರ್ಗವನ್ನು ಒಮ್ಮೆ ಪರಿಶೀಲಿಸಿದ. ಎಷ್ಟು ಹೊತ್ತಾದರೂ ಕಾರಿನಿಂದ ಇಳಿಯದ್ದರ ಬೇಸರ ಒಂದೆಡೆಯಾದರೆ, ಜತೆಗಿದ್ದ ಮತ್ತೊಂದು ಕಾರು ಎಲ್ಲಿ ಎಂಬ ಗುಸುಗುಸು ಮತ್ತೊಂದೆಡೆ. ಬೆಂಜ್‌ ಕಾರಿನಲ್ಲಿ ಕೂತ ವ್ಯಕ್ತಿಯ ಮುಖದ ಮೇಲೆ ಬಿದ್ದ ಮೊಬೈಲ್ ಬೆಳಕಿನಲ್ಲಿ ಕಂಡ ಕುರುಚಲು ಗಡ್ಡ ಸನ್ನಿ ಅಲ್ಲ ಎಂಬುದನ್ನು ದೃಢಪಡಿಸಿತು. ಆ ನಂಬಿಕೆಯೂ ಹುಸಿಯಾಯಿತು.

ಅಬ್ಬಾ... ಸನ್ನಿ ಬಂದರು!

ಆ ನಂತರ ಮತ್ತೊಂದು ಐಷಾರಾಮಿ ಕಾರಿನ ಆಗಮನ. ಅದರೊಳಗೂ ದಡೂತಿ ಬೌನ್ಸರ್‌ಗಳು. ಅದರ ಹಿಂದೆಯೇ ಸನ್ನಿಯನ್ನು ಹೊತ್ತ ಆ ಕಾರಿನ ಆಗಮನವೂ ಆಯಿತು. ಬರೋಬ್ಬರಿ ಆರು ಗಂಟೆ ಕಾದು ಸುಸ್ತಾಗಿದ್ದವರ ಮೊಗದಲ್ಲಿ ಒಮ್ಮೆಲೇ ಸಂತಸದ ಹೊನಲು. ಕತ್ತಲಲ್ಲಿ ರವಿ ಮೂಡಿದಂಥ ಪ್ರಕಾಶ. ಹಾಲು ಕೂಡ ಮಂಕೆನಿಸುವ ಬಿಳಿ ಬಣ್ಣದ ಸನ್ನಿಯನ್ನು ಬಿಗಿದಪ್ಪಿದ್ದ ಕಪ್ಪು ತುಂಡು ಲಂಗವನ್ನೊಮ್ಮೆ ಸರಿಪಡಿಸುತ್ತಾ ಸನ್ನಿ ಕಾರಿನಿಂದ ಇಳಿದರು.

ತುಸು ತೆರೆದಿದ್ದ ಎದೆಯ ಭಾಗವನ್ನು ಆಕೆಯ ಕೆಂಪು ಮಿಶ್ರಿತ ಕಪ್ಪು ಕೂದಲು ಮುಚ್ಚಿದ್ದವು. ಹೊಳೆವ ಹಲ್ಲುಗಳಿಂದ ಹೈವೋಲ್ಟೇಜ್‌ ನಗು ಚಿಮ್ಮಿತು. ಅದನ್ನು ಸೆರೆ ಹಿಡಿಯುವ ಸರದಿ ಈಗ ಕ್ಯಾಮೆರಾಗಳದ್ದಾಗಿತ್ತು. ಮಾಲ್‌ನ ಛಾವಣಿಯೇ ಹಾರಿಹೋಗುವಂತೆ ಅಭಿಮಾನಿಗಳ ಕೂಗು. ಕೈ ಚಾಚಿ ಅವರನ್ನೊನೊಮ್ಮೆ ಮುಟ್ಟಲು ಅಭಿಮಾನಿಗಳು ಬೇಡಿಕೆ ಸಲ್ಲಿಸುತ್ತಿದ್ದರು.

ಅವರೆಲ್ಲರತ್ತ ಕೈ ಬೀಸುತ್ತಾ ಬಂದ ಸನ್ನಿ ‘ಹಲೋ ಬ್ಯಾಂಗಲೋರ್‌, ಐ ಲವ್‌ ಯೂ’ ಎಂದ ಕೂಡಲೇ ಹುಡುಗರ ಎದೆ ಒಡೆದೇ ಹೋಯಿತೇನೋ ಎಂಬಂಥ ಕೂಗು. ‘ಬ್ಯಾಂಗಲೂರ್‌ ಈಸ್‌ ಮೈ ಜಾಕ್‌ಪಾಟ್‌’ ಎಂದ ಸನ್ನಿ, ‘ಐ ವಾಂಟ್‌ ಟು ಮೀಟ್‌ ಯು’ ಎಂದಾಗ ತಮಗೇ ಸಿಕ್ಕ ಆಹ್ವಾನ ಎಂದು ಎಲ್ಲರೂ ಕೈ ಚಾಚಿದರು. ಮರು ಕ್ಷಣವೇ, ‘ಇನ್‌ ದ ಥಿಯೇಟರ್‌‘ ಎಂದು ಅವರಾಸೆಗೆ ಸನ್ನಿ ತಣ್ಣೀರೆರಚಿದ ಅನುಭವ.

ಬಿಸ್ಕೆಟ್‌ ಎಸೆದಂತೆ ಟೀ ಶರ್ಟ್‌, ಚಿತ್ರದ ಸಿ.ಡಿ. ಹಾಗೂ ಮೌಸ್‌ಪ್ಯಾಡ್‌ ಗಳನ್ನು ಅಭಿಮಾನಿಗಳತ್ತ ಸನ್ನಿ ತೂರಲು ಆರಂಭಿಸಿದರು. ‘ಸನ್ನಿ ನನಗೆ ನನಗೆ...’ ಎಂದು ಮೊರೆಯಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಮ್ಮೆ ಅಭಿಮಾನಿಗಳತ್ತ ಕೈ ಬೀಸಿದ ಸನ್ನಿ, ವೇದಿಕೆ ಬಳಿ ಇದ್ದವರೆಲ್ಲರಿಗೂ ಹಸ್ತಲಾಘವ ಮಾಡುತ್ತಾ ಕಾರಿನತ್ತ ಹೆಜ್ಜೆ ಹಾಕಿದರು. ಸನ್ನಿಯನ್ನು ಮುಟ್ಟಿದ ಧನ್ಯತೆ ಅಲ್ಲಿದ್ದ ಕೆಲವರದ್ದು.

ಸನ್ನಿ ಲಿಯಾನ್‌ ಇದ್ದ ಆ ಹದಿನೈದು ನಿಮಿಷಗಳಿಗಾಗಿ ಬರೋಬ್ಬರಿ ನಾಲ್ಕೈದು ಗಂಟೆ ಕಾದಿದ್ದ ಅಪಾರ ಜನಸ್ತೋಮ ಮೊಗದಲ್ಲೊಂದು ನಗುವಿಟ್ಟುಕೊಂಡು ಮನೆಯತ್ತ ಹೆಜ್ಜೆ ಹಾಕಿದರು.

ನಿದ್ದೆ ಬಂದಿಲ್ಲ...
‘ಆಸಂ, ಶೀ ಈಸ್‌ ಸೋ ಹಾಟ್‌, ಸೋ ಸೆಕ್ಸಿ. ಆಕೆಯನ್ನು ಇಷ್ಟು ಹತ್ತಿರದಿಂದ ನೋಡುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ಜಿಸ್ಮ್‌ 2, ಬಿಗ್‌ ಬಾಸ್‌ಗಳಲ್ಲಿ ಆಕೆಯನ್ನು ನೋಡಿದ್ದೆ. ನಿಜವಾಗಿಯೂ ಆಕೆ ಹಾಟ್‌. ಅವಳ ಬರುವಿಕೆಯನ್ನು ಎದುರು ನೋಡುತ್ತಿದ್ದ ನನಗೆ ನಿನ್ನೆ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ.
- –ಪ್ರಿಯಾಂಕಾ.

ಹಾರ್ಡ್ ವರ್ಕರ್‌
ಆಕೆ ಹಾರ್ಡ್‌ ವರ್ಕರ್‌ ಎಂದು ಕೇಳಿದ್ದೆ. ನಿಜಕ್ಕೂ ಅಂಥ ಒಬ್ಬ ಪ್ರತಿಭಾವಂತ ನಟಿಯನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸಿದ್ದು ನಿಜಕ್ಕೂ ನನಗೆ ಸಂತಸ ತಂದಿದೆ.
- –ಮೊಹಮ್ಮದ್‌ ಹನೀಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT