ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಕ್ಕೂ ರಸ್ತೆಗಳಿಗೆ ಅರೆಬರೆ ತೇಪೆ!

Last Updated 15 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಗಂಗಾವತಿ: ನಗರದ ವಿವಿಧ ಭಾಗದಲ್ಲಿ ದುರಸ್ತಿಗೀಡಾಗಿ ವಾಹನ ಸಂಚಾರಕ್ಕೆ ನಿರುಪಯುಕ್ತವಾದ ರಸ್ತೆಗಳಿಗೆ ಇದೀಗ ಮರು ದುರಸ್ತಿ ಭಾಗ್ಯ ದೊರೆತಿದೆ. ಆದರೆ ಆಳೆತ್ತರದ ಗುಂಡಿಗಳಿಗೆ ಶಾಶ್ವತ ದುರಸ್ತಿ ಮಾಡದೇ ಕೇವಲ ಅರೆಕಾಲಿಕ ಶಮನ ಎಂಬಂತೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ.

ಹೀಗಾಗಿ ದುರಸ್ತಿ ಮಾಡಲಾದ ರಸ್ತೆಯ ಆಯಸ್ಸು ಎಷ್ಟು ಎಂಬ ಸಂದೇಹ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅದ್ವಾನಗೊಂಡ ನಗರದ ಪ್ರಮುಖ ರಸ್ತೆಗಳ ಬಗ್ಗೆ `ಪ್ರಜಾವಾಣಿ~ ವಿಸ್ತೃತ ವರದಿ ಮಾಡಿ ಸಂಬಂಧಿತ ಇಲಾಖೆಯ ಗಮನ ಸೆಳೆದಿತ್ತು.

ದುರಸ್ತಿ ಭಾಗ್ಯ: ಸಂಪೂರ್ಣ ಹಾಳಾಗಿರುವ ಜುಲೈನಗರ ವೃತ್ತದಲ್ಲಿ ರಸ್ತೆಗಳನ್ನು ದುರಸ್ತಿ ಮಾಡುವತ್ತ ಹೆಚ್ಚು ದೃಷ್ಟಿಹಾಯಿಸಲಾಗಿದೆ. ವೃತ್ತದಿಂದ ಕಂಪ್ಲಿ, ರಾಯಚೂರು ಮಾರ್ಗದ ರಸ್ತೆ ದುರಸ್ತಿ ಕಾರ್ಯ ಶುಕ್ರವಾರ ಮತ್ತು ಶನಿವಾರ ನಡೆಯಿತು.

ನಗರದ ಒಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ಮತ್ತು ಗಾಂಧಿ ವೃತ್ತಕ್ಕೆ ಹೋಗುವ ಮಾರ್ಗದ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ನಿರ್ಮಾಣವಾಗಿವೆ. ಆದರೆ ಕೇವಲ ಮೊರಂ ಮತ್ತು ಕಲ್ಲಿನ ಜಲ್ಲಿ ಮಾತ್ರ ತುಂಬಿ ಗುಂಡಿ ಮುಚ್ಚಲಾಗುತ್ತಿದೆ.

ರಸ್ತೆ ದುರಸ್ತಿಗೆ ಇದು ಕೇವಲ ತಾತ್ಕಾಲಿಕ ಶಮನ ನೀಡಲಿದ್ದು, ಮತ್ತೊಂದು ಮಳೆ ಬಂದರೆ ಯಥಾರೀತಿ ಮತ್ತೆ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಲಿದೆ ಎಂದು ನಗರದ ನಿವಾಸಿ ಯಮನೂರಪ್ಪ ನಾಯಕ್, ಸಿರಾಜುದ್ದೀನ್, ತಸ್ಲೀನಾ ಮೊದಲಾದವರು ಆತಂಕ ವ್ಯಕ್ತಪಡಿಸಿದರು.    ನಗರದಲ್ಲಿ ಮುಂದಿನ ನವೆಂಬರ್ ತಿಂಗಳಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಷ್ಟರೊಳಗೆ ನಗರದ ಎಲ್ಲ ರಸ್ತೆಗಳು ದುರಸ್ತಿಯಾಗಬೇಕಿದೆ. ಅದಕ್ಕಾಗಿ ಯುದ್ಧೋಪಾದಿಯಲ್ಲಿ ಕಾರ್ಯ ನಡೆಯಬೇಕಿದೆ.

ಗಮನ ಹರಿಸಬೇಕು: ಆದರೆ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ನಿಧಾನಗತಿಯ ಕಾರ್ಯವೈಖರಿ ಗಮನಿಸಿದರೆ, ನಿಗದಿತ ಅವಧಿಯೊಳಗೆ ರಸ್ತೆ ದುರಸ್ತಿ ಕಾರ್ಯ ಕೈಗೂಡುವ ಸೂಚನೆ ಕಾಣುತ್ತಿಲ್ಲ. ಈ ಬಗ್ಗೆ ಶಾಸಕ ಪರಣ್ಣ ಮುನವಳ್ಳಿ ಹೆಚ್ಚು ಗಮನ ನೀಡಬೇಕಾಗುತ್ತದೆ.

ಇಲ್ಲವಾದಲ್ಲಿ ರಾಜ್ಯದ ನಾನಾ ಮೂಲೆಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುವ ಜನರಿಗೆ ನಗರದ ನರಕ ಸಾದೃಶ್ಯ ರಸ್ತೆ ದರ್ಶನವಾದರೆ, ಗಂಗಾವತಿಯ ಐತಿಹಾಸಕ್ಕೆ ಕಪ್ಪುಚುಕ್ಕೆ ಮೂಡಲಿರುವುದಂತೂ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT