ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿದ ಕಸ: ಬೆಳಕಿಗೆ ಬಂತು ನಾಗರಕುಂಟೆ

Last Updated 9 ಆಗಸ್ಟ್ 2012, 10:15 IST
ಅಕ್ಷರ ಗಾತ್ರ

ಕೋಲಾರ: ಸುತ್ತಲೂ ಸುರಿದ ಕಟ್ಟಡ ತ್ಯಾಜ್ಯದ ರಾಶಿ, ಕಸದ ರಾಶಿ, ಬೃಹತ್ತಾಗಿ ಬೆಳೆದ ಪೊದೆಗಳ ನಡುವೆ ಮರೆಯಾಗಿದ್ದ, ಮುಚ್ಚಿಹೋಗುತ್ತಿದ್ದ ನಗರದ ಕಠಾರಿಪಾಳ್ಯದ ವೆಂಕಟರಮಣಸ್ವಾಮಿ ದೇವಾಲಯದ ನಾಗರಕುಂಟೆ ಕಲ್ಯಾಣಿಗೆ ಬುಧವಾರ ಬೆಳಿಗ್ಗೆ ಶುಕ್ರದೆಸೆ ಒದಗಿತ್ತು. ಕಲ್ಯಾಣಿ ಮಧ್ಯದಲ್ಲಿ ಪಳೆಯುಳಿಕೆಯಂತೆ ಕಾಣುತ್ತಿದ್ದ ಗೋಪುರ ಸೇರಿದಂತೆ ಬೃಹತ್ತಾದ ಕಲ್ಯಾಣಿಯ ಹಳೆಯ ರೂಪ ಮತ್ತೆ ಮೈ ಪಡೆಯುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದ್ದರ ಪರಿಣಾಮ ಇದು.

ಜಿಲ್ಲಾಡಳಿತ ಆಂದೋಲನದ ರೀತಿಯಲ್ಲಿ ಮಾಡುತ್ತಿರುವ ಕಲ್ಯಾಣಿಗಳ ಪುನಃಶ್ಚೇತನ-ಶ್ರಮದಾನ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಬೆಳಿಗ್ಗೆಯಿಂದಲೇ ಶ್ರಮದಾನ ಆರಂಭವಾಗಿತ್ತು.

ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಆಗಮನ ತಡವಾದ ಹಿನ್ನೆಲೆಯಲ್ಲಿ ಶ್ರಮದಾನವೂ ತಡವಾಯಿತು. ಜಿಲ್ಲಾಧಿಕಾರಿ ಆಗಮನಕ್ಕೆ ಕಾಯದೆ ಹಲವು ಅಧಿಕಾರಿಗಳು ಕಲ್ಯಾಣಿ ಗೋಪುರದ ಸ್ವಚ್ಛತೆಗೆ ಮುಂದಾದರು.
ಪೌರಕಾರ್ಮಿಕರು ಕಲ್ಯಾಣಿಯಲ್ಲಿ ಮರೆಯಾಗಿದ್ದ ಮೆಟ್ಟಿಲುಗಳ ಮೇಲಿನ ಕಸ ತೆರವಿಗೆ ಮುಂದಾದರು.

ನಂತರ ಬಂದ ಜಿಲ್ಲಾಧಿಕಾರಿ ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಸೇರಿದಂತೆ ಹಲವು ಪ್ರಮುಖರು ಒಟ್ಟಿಗೇ ನಿಂತು ಶ್ರಮದಾನ ಮಾಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೂ ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.

ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಅಂಕಿಅಂಶಗಳ ಇಲಾಖೆ ವಾಹನ ಚಾಲಕ ದೇವರಾಜ್ ಎಂಬುವವರು ಹೃದಯಾಘಾತದ ಹಿನ್ನೆಲೆಯಲ್ಲಿ ಕುಸಿದು ಬಿದ್ದ ಘಟನೆಯೂ ನಡೆಯಿತು. ನಂತರ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಅಧೀಕ್ಷಕ ಡಾ.ಲಕ್ಷ್ಮಯ್ಯ ಅವರನ್ನು ಮೂಲಕ ಸಂಪರ್ಕಿಸಿದ ಜಿಲ್ಲಾಧಿಕಾರಿ ಸೂಕ್ತ ಚಿಕಿತ್ಸೆ ನೀಡುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT