ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಎನ್‌ಡಿಎ ತಂತ್ರ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿನ ಹಲವು ಅಧಿವೇಶನಗಳು ವ್ಯರ್ಥವಾಗಿರುವುದನ್ನು ಮನಗಂಡಿರುವ ಪ್ರತಿಪಕ್ಷ ಬಿಜೆಪಿ ಮತ್ತು ಅದರ ಪಾಲುದಾರ ಎನ್‌ಡಿಎ, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಣಕಾಸು ಮಸೂದೆಗಳಿಗೆ ಅಂಗೀಕಾರವಾಗಲು ಬಿಡುವುದರೊಂದಿಗೆ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದೆ.

ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಭಾನುವಾರ ಇಲ್ಲಿ ಸಭೆ ಸೇರಿದ ಸಂಸತ್‌ನ ಉಭಯ ಸದನಗಳ ಬಿಜೆಪಿ ಮತ್ತು ಎನ್‌ಡಿಎ ನಾಯಕರು ಕಲಾಪ ಸುಸೂತ್ರವಾಗಿ ನಡೆಯಲು ಈ ನಿರ್ಧಾರ ಕೈಗೊಂಡಿದ್ದಾರೆ.

ವಿರೋಧ ಪಕ್ಷಗಳಿಗೆ ಪ್ರಮುಖವಾದ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಪಡೆದುಕೊಂಡು, ಸರ್ಕಾರಕ್ಕೆ ಮಹತ್ವದ್ದಾಗಿರುವ ಹಣಕಾಸು ಮಸೂದೆಗಳು ಅಂಗೀಕಾರವಾಗಲು ಬಿಡುವ ತೀರ್ಮಾನ ಕೈಗೊಂಡಿರುವುದಾಗಿ ಸಭೆಯ ನಂತರ ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ಎನ್‌ಡಿಎನಲ್ಲಿ ಬಿಜೆಪಿ, ಶಿವಸೇನಾ, ಶಿರೋಮಣಿ ಅಕಾಲಿದಳ ಹಾಗೂ ಹರಿಯಾಣ ಜನಹಿತ ಕಾಂಗ್ರೆಸ್ ಪ್ರಮುಖ ಅಂಗಪಕ್ಷಗಳಾಗಿವೆ. 17 ವರ್ಷಗಳ ಕಾಲ ಎನ್‌ಡಿಎ ಪಾಲುದಾರ ಪಕ್ಷವಾಗಿದ್ದ ಜೆಡಿಯು ಈಗಾಗಲೇ ಹೊರಹೋಗಿರುವುದನ್ನು ಸ್ಮರಿಸಬಹುದು. ಭಾನುವಾರದ ಸಭೆಯಲ್ಲಿ ಹೊಸ ಎನ್‌ಡಿಎ ಸಂಚಾಲಕರನ್ನು ನೇಮಿಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪವಾಗಿರುವುದಾಗಿ ತಿಳಿದುಬಂದಿದೆ.

ಮುಖ್ಯವಾಗಿ, ಸಿಬಿಐ ದುರುಪಯೋಗ ಸೇರಿದಂತೆ ಹಲವಾರು ವಿಷಯಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳನ್ನು ಎನ್‌ಡಿಎ ಹೆಣೆದಿದೆ. ತೆಲಂಗಾಣ, ಉತ್ತರಾಖಂಡ ಪ್ರವಾಹ, ಸಿಬಿಐ ದುರ್ಬಳಕೆ, ಆಹಾರ ಭದ್ರತಾ ಮಸೂದೆ, ರೂಪಾಯಿ ಅಪಮೌಲ್ಯ ಮತ್ತಿತರ ಅನೇಕ ವಿಷಯಗಳನ್ನು ಅಧಿವೇಶನದಲ್ಲಿ ಎನ್‌ಡಿಎ ಪ್ರಸ್ತಾಪಿಸಲಿದೆ. ಈ ಎಲ್ಲದರಲ್ಲೂ ಸರ್ಕಾರದ ವೈಫಲ್ಯವನ್ನು ಅದು ಎತ್ತಿ ತೋರಿಸಲಿದೆ.

ಮೂಲಗಳ ಪ್ರಕಾರ, ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡಿರುವ ಮನಮೋಹನ್ ಸಿಂಗ್ ಸರ್ಕಾರದ ಮೇಲೆ ಎನ್‌ಡಿಎ ವಾಗ್ಬಾಣಗಳನ್ನು ಬಿಡಲಿದೆ. ಜೊತೆಗೆ, ರೈಲ್ವೆ ನೇಮಕಾತಿಯಲ್ಲಿ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರನ್ನು ಆರೋಪಿಯನ್ನಾಗಿ ಮಾಡುವಂತೆಯೂ ಒತ್ತಾಯಿಸುವ ಮೂಲಕ ಸರ್ಕಾರಕ್ಕೆ ಇರುಸುಮುರುಸು ಉಂಟು ಮಾಡಲಿದೆ. ರೂಪಾಯಿ ಅಪಮೌಲ್ಯ ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಚರ್ಚಿಸಲಿದೆ.

ಬಿಜೆಪಿ ಹಿರಿಯ ನಾಯಕ ಮತ್ತು ಎನ್‌ಡಿಎ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರ ಅಧ್ಯಕ್ಷತೆಯಲ್ಲಿ ಎರಡು ತಾಸು ನಡೆದ ಈ ಸಭೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಮತ್ತಿತರರು ಪ್ರಮುಖವಾಗಿ ಭಾಗವಹಿಸಿದ್ದರು.

ಎಸ್‌ಪಿ ತಕರಾರು: ಈ ಮಧ್ಯೆ, ಕೇಂದ್ರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಗೆ ಈಗಿನ ಸ್ವರೂಪದಲ್ಲಿ ಬೆಂಬಲ ನೀಡುವುದೇ ಸಾಧ್ಯವೇ ಇಲ್ಲ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಸ್ಪಷ್ಟಪಡಿಸಿದೆ. ಯುಪಿಎಗೆ ಹೊರಗಿನಿಂದ ಬೆಂಬಲ ನೀಡಿರುವ ಎಸ್‌ಪಿ ಬೆಂಬಲವಿಲ್ಲದೆ ಈ ಮಸೂದೆ ಅಂಗೀಕಾರವಾಗಲು ಸಾಧ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ಐಎಎಸ್ ಮಹಿಳಾ ಅಧಿಕಾರಿ ದುರ್ಗಾಶಕ್ತಿ ಅವರ ಅಮಾನತಿನಿಂದಾಗಿ ಈ ಎರಡು ಪಕ್ಷಗಳ ಸಂಬಂಧ ಬಿಗಡಾಯಿಸಿರುವುದೇ ಎಸ್‌ಪಿ ಕಠಿಣ ನಿಲುವಿಗೆ ಕಾರಣ ಎನ್ನಲಾಗಿದೆ. ಆದರೆ ಎಸ್‌ಪಿ ಮಾತ್ರ, ಆ ಪ್ರಕರಣಕ್ಕೂ ತನ್ನ ಕಠಿಣ ನಿಲುವಿಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT