ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕ್ರಮಕ್ಕೆ ಸಾಹಿತಿಗಳ ಆಕ್ರೋಶ

ಬೆಂಗಳೂರು ಪುಸ್ತಕೋತ್ಸವಕ್ಕೆ ಅರಮನೆ ಮೈದಾನ ನೀಡಲು ನಕಾರ
Last Updated 4 ಡಿಸೆಂಬರ್ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ತುಂಬಾ ಪುಸ್ತಕ ಸಂಸ್ಕೃತಿ ಯನ್ನು ಬೆಳೆಸುವ ಬೆಂಗಳೂರು ಪುಸ್ತಕೋತ್ಸವಕ್ಕೆ ಅರಮನೆ ಮೈದಾನವನ್ನು ನೀಡಲು ನಿರಾಕರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸಾಹಿತ್ಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಿರ್ಧಾರ  ಆಘಾತ ತಂದಿದ್ದು, ಮನಸ್ಸು ಬದಲಾಯಿಸಿ ಪುಸ್ತಕೋತ್ಸವಕ್ಕೆ ಅನುವು ಮಾಡಿಕೊಡಬೇಕು ಎಂದು ಸಾಹಿತಿಗಳು ಒಕ್ಕೊರಲ ಆಗ್ರಹ ಮಾಡಿದ್ದಾರೆ.

‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡ ಹಲವು ಸಾಹಿತಿಗಳ ಅಭಿಪ್ರಾಯ ಇಲ್ಲಿದೆ:
ವಾಣಿಜ್ಯ ಚಟುವಟಿಕೆ ಅಲ್ಲ
ಪುಸ್ತಕೋದ್ಯಮವನ್ನು ಶುದ್ಧ ವಾಣಿಜ್ಯ ಚಟು ವಟಿಕೆಯನ್ನಾಗಿ ನೋಡಲು ಸಾಧ್ಯವಿಲ್ಲ. ಮಾರ್ಗ ಸೂಚಿಯನ್ನು ಸಿದ್ಧಪಡಿಸಿದ್ದು ಸರ್ಕಾರವೇ ಅಲ್ಲವೆ? ಅದರ ನಿಲುವು ಇಂತಹ ಸಾಂಸ್ಕೃತಿಕ ಮೇಳಕ್ಕೆ ತಾಂತ್ರಿಕ ವಾಗಿ ತೊಡಕು ಉಂಟು ಮಾಡಿದರೆ ಹೇಗೆ? ಪುಸ್ತಕ ೋದ್ಯಮವನ್ನು ವ್ಯಾಪಾರವೇ ಅಂದು ಕೊಂಡರೂ ಪುಸ್ತಕ ಗಳು ಮಾರಾಟವಾದಷ್ಟು ಒಳ್ಳೆಯದೇ ಬಿಡಿ. ಇಂತಹ ಮೇಳಕ್ಕೆ ಅಡ್ಡಿಪಡಿಸುವ ಮೂಲಕ ಸರ್ಕಾರ ಸಾಂಸ್ಕೃತಿಕ ಆಘಾತವನ್ನು ಉಂಟು ಮಾಡಿದೆ.

ಪ್ರತಿವರ್ಷದ ಮೇಳದಲ್ಲಿ ಲಕ್ಷಾಂತರ ಜನ ಓದುಗರು ಪಾಲ್ಗೊಳ್ಳುತ್ತಿದ್ದರು. ದೇಶದ ಎಲ್ಲ ಕಡೆಗಳಿಂದ ಪ್ರಕಾಶಕರು ಬರುತ್ತಿದ್ದರು. ಕನ್ನಡದ ಪ್ರಕಾಶಕರಿಗೆ ಸಂಘಟಕರು ಮಳಿಗೆಗಳ ಬಾಡಿಗೆಯಲ್ಲಿ ರಿಯಾಯಿತಿಯನ್ನೂ ಕೊಡುತ್ತಿದ್ದರು. ಇದರಿಂದ ಕನ್ನಡ ಕೃತಿಗಳ ಮಾರಾಟಕ್ಕೆ ಉತ್ತೇಜನ ಸಹ ಸಿಗುತ್ತಿತ್ತು. ನಾನು ಒಂದು ಬಾರಿಯೂ ಪುಸ್ತಕೋತ್ಸವವನ್ನು ತಪ್ಪಿಸಿಕೊಂಡಿಲ್ಲ. ಎಷ್ಟೊಂದು ಒಳ್ಳೆಯ ಪುಸ್ತಕಗಳು ಮಾರಾಟಕ್ಕೆ ಲಭ್ಯವಿರುತ್ತಿದ್ದವು. ಪುಸ್ತಕ ಸಂಸ್ಕೃತಿ ಬೆಳೆಯಬೇಕು. ಸರ್ಕಾರ ಈಗಲಾದರೂ ಮನಸ್ಸು ಬದಲಾಯಿಸಬೇಕು.
-ಡಾ. ಸಿದ್ದಲಿಂಗಯ್ಯ.

ವಿಷಾದದ ಸಂಗತಿ
ಪುಸ್ತಕೋತ್ಸವ ನಡೆಯದಿದ್ದರೆ ಪುಸ್ತಕ ಸಂಸ್ಕೃತಿ ಬೆಳೆಯುವುದಾದರೂ ಹೇಗೆ? ಸರ್ಕಾರದ ನಿಲುವು ವಿಷಾದದ ಸಂಗತಿ ಎನ್ನದೆ ವಿಧಿಯಿಲ್ಲ. ಒಂದೇ ಕಡೆ ಎಲ್ಲ ಪುಸ್ತಕಗಳು ಸಿಗುವಂತಹ ವ್ಯವಸ್ಥೆ ಮೇಲೆ ಯಾಕೆ ಈ ವಕ್ರನೋಟ? ಜನರಿಗೆ ಅನುಕೂಲ ಉಂಟು ಮಾಡುವ ಇಂತಹ ಮೇಳಗಳಿಗೆ ತಡೆ ಒಡ್ಡುವುದು ಸರಿಯಲ್ಲ.
-ಡಾ. ಪ್ರಧಾನ ಗುರುದತ್ತ.

ಅಡ್ಡಗಾಲು ಏಕೆ?
ಸರ್ಕಾರವೇ ಮುಂದೆ ನಿಂತು ನಡೆಸಬೇಕಾದ ಉತ್ಸವವನ್ನು ಖಾಸಗಿಯವರು ಮಾಡಿದಾಗಲೂ ಅಡ್ಡಗಾಲು ಹಾಕುವುದೇ? ಅಧಿಕಾರಿಗಳು ಸಂಪೂರ್ಣ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ಅವರ ನಿಲುವು ಖಂಡನಾರ್ಹ. ಪುಸ್ತಕ ಸಂಸ್ಕೃತಿ ಬೆಳೆಯಲು ಸಹಾಯಹಸ್ತ ಚಾಚಬೇಕಾದ ಸರ್ಕಾರವೇ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ತರವಲ್ಲ. ಅಧಿಕಾರಿಗಳು ಎಸಗುವ ಪ್ರಮಾದದಿಂದ ಸರ್ಕಾರದ ಮೇಲೂ ಕಪ್ಪು ನೆರಳು ಬೀಳುತ್ತದೆ. ಅಂಥವರಿಗೆ ತಪ್ಪು ತಿದ್ದಿಕೊಳ್ಳುವಂತೆ ಸೂಕ್ತ ತಿಳಿವಳಿಕೆ ನೀಡುವುದು ಒಳ್ಳೆಯದು.
-ಡಾ. ಹಂ.ಪ. ನಾಗರಾಜಯ್ಯ.

ಮಾರ್ಗಸೂಚಿ ಬದಲಾಯಿಸಿ
ಪುಸ್ತಕೋತ್ಸವಕ್ಕೆ ಅದೆಂತಹ ನಿಯಮದ ಅಡೆತಡೆ? ಒಂದುವೇಳೆ ಅಡೆತಡೆ ಉಂಟು ಮಾಡುವಂತಿದ್ದರೂ ನಿಯಮ ಸಡಿಲಿಕೆ ಮಾಡಬೇಕು. ಅಧಿಕಾರಿಗಳು ನಿರ್ಧಾರ ಕೈಗೊಳ್ಳುವ ಮುನ್ನ ಪೂರ್ವಾಪರ ವಿಚಾರ ಮಾಡಬೇಕಿತ್ತು. ಅಷ್ಟೊಂದು ಒಳ್ಳೆಯ ಪುಸ್ತಕೋತ್ಸವ ನಗರದ ಬೇರೆ ಎಲ್ಲೂ ನಡೆಯುವುದಿಲ್ಲ. ಸಂಸ್ಕೃತಿ ಬೆಳವಣಿಗೆಗೆ ಪೂರಕವಾಗುವಂತೆ ಮಾರ್ಗಸೂಚಿಗೆ ತಿದ್ದುಪಡಿ ತರಲೇಬೇಕು.
-ಮಲ್ಲೇಪುರಂ ಜಿ. ವೆಂಕಟೇಶ.

ಪ್ರೀತಿಯೇ ಇಲ್ಲವಾಯಿತೇ?

ನೆಗಡಿಯಾದರೆ ಮೂಗು ಕತ್ತರಿಸುವಂತಿದೆ ಅಧಿಕಾರಿಗಳ ನಿಲುವು. ಮೋಜು– ಮಸ್ತಿಗಳಿಗೆ ಯಾವ ನಿಯಮವೂ ಅಡ್ಡಿ ಆಗುವುದಿಲ್ಲ. ಪುಸ್ತಕ ಸಂಸ್ಕೃತಿ ಹರಡಲು ಮಾತ್ರ ಏನೇನೋ ಅಡ್ಡಗಾಲು. ಇದು ಪುಸ್ತಕ ಸಂಸ್ಕೃತಿ ಕತ್ತು ಹಿಸುಕುವ ಯತ್ನವಲ್ಲದೆ ಬೇರೇನಲ್ಲ. ಹಿಂದಿನ ಯಾವ ವರ್ಷಗಳಲ್ಲೂ ಇಲ್ಲದ ನಿಯಮ ಈಗೇಕೆ? ಸರ್ಕಾರಕ್ಕೆ ಪುಸ್ತಕದ ಮೇಲೆ ಪ್ರೀತಿಯೇ ಇಲ್ಲವಾಯಿತೇ? ಸರ್ಕಾರದ ನಿರ್ಧಾರದಿಂದ ತುಂಬಾ ನೋವಾಗಿದೆ.
-ನಲ್ಲೂರು ಪ್ರಸಾದ್‌.

ಜನರ ಹಬ್ಬ

ಪುಸ್ತಕೋತ್ಸವ ಎಂದರೆ ಜನಸಾಮಾನ್ಯರ ಹಬ್ಬ. ಓದುಗರ ಹಬ್ಬ. ಕೋಲ್ಕತ್ತ, ದೆಹಲಿ, ಮುಂಬೈಗಳಲ್ಲೂ ಪುಸ್ತಕೋತ್ಸವಗಳು ನಡೆಯುತ್ತವೆ. ಎಲ್ಲಿಯೂ ಇಂತಹ ಅಡ್ಡಿಗಳು ಉಂಟಾಗಿಲ್ಲ. ಬೆಂಗಳೂರಿನ ಈ ಹೆಮ್ಮೆಯ ಉತ್ಸವ ಕೂಡ ರದ್ದಾಗಬಾರದು. ಉತ್ಸವ ಅರಮನೆ ಮೈದಾನದಲ್ಲಿ ನಡೆದರೂ ಅದರ ಹವಾ ನಗರದ ತುಂಬಾ ಹರಡುತ್ತದೆ.

ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ಸಂಪೂರ್ಣವಾಗಿ ಬಂದಂತಿಲ್ಲ. ಗುರುವಾರ ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ. ಪುಸ್ತಕೋತ್ಸವ ನಡೆಯಲಿದೆ ಎನ್ನುವ ಆಶಾವಾದವೂ ಇದೆ.
-ಕೆ.ಇ. ರಾಧಾಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT