ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸಾಧನೆ ಕಾಂಗ್ರೆಸ್‌ಗೆ ವರ

ಕಾಂಗ್ರೆಸ್‌ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ
Last Updated 12 ಏಪ್ರಿಲ್ 2014, 5:17 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 17ರ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆ ಪ್ರಚಾರದ ಭರಾಟೆ ಜೋರಾಗಿದೆ. ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಿ ಪ್ರಬಲ ನೆಲೆ ಹೊಂದಿದ್ದವು. 1977ರಿಂದ 2009ರವರೆಗೆ ನಡೆದ 10 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಗೆಲುವು ಕಂಡಿವೆ. 1996ಕ್ಕೂ ಮೊದಲು ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1996ರ ನಂತರ ನಡೆದ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆಲುವು ಕಂಡಿದೆ. 

ಸತತ ಮೂರನೇ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಶಾಮನೂರು ಎಸ್‌.ಮಲ್ಲಿಕಾರ್ಜುನ ಅವರು ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಸ್ವಲ್ಪದರಲ್ಲೇ ಸೋತ ಅವರು ಈ ಬಾರಿ ಕುಟುಂಬ ಸಮೇತ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ. ತಂದೆ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಮನೂರು ಶಿವಶಂಕರಪ್ಪ ಈ ಬಾರಿ ಪುತ್ರನ ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ.  ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಚಿವರೂ ಪ್ರಚಾರ ಮಾಡಿ ಹೋಗಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರೂ ಆಗಿರುವ ಮಲ್ಲಿಕಾರ್ಜುನ ಅವರದು ಈಗ ಬಿಡುವಿಲ್ಲದ ದಿನಚರಿ. ಅದರ ಮಧ್ಯೆ ಅವರು ಕಿರು ಸಂದರ್ಶನ ನೀಡಿದರು.

* ಈ ಬಾರಿ ಗೆಲ್ಲುತ್ತೀರೆಂದು ಯಾವ ಆಧಾರದಲ್ಲಿ ಹೇಳುತ್ತೀರಿ?
ಕಳೆದ 10 ವರ್ಷಗಳಿಂದ ಈ (ದಾವಣಗೆರೆ) ಕ್ಷೇತ್ರದಲ್ಲಿ ಏನೂ ಕೆಲಸ ಆಗಿಲ್ಲ. ಚುನಾವಣೆ ಪ್ರವಾಸದ ವೇಳೆ ಇದು ಅನುಭವಕ್ಕೆ ಬಂದಿದೆ. ಜಿಲ್ಲೆಗೆ ಒಳ್ಳೆಯ ಯೋಜನೆಗಳು, ನೀರಾವರಿ, ಉದ್ಯೋಗ ನೀಡುವ ಉದ್ಯಮಗಳು ಬಂದಿಲ್ಲ. ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಯೋಜನೆ ರೂಪಿಸಿಲ್ಲ. ಈ ನಿಟ್ಟಿನಲ್ಲಿ ಕೆಲಸಗಳಾಗಬೇಕು. ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಹೈನುಗಾರರಿಗೆ ಸಬ್ಸಿಡಿ, ₨ 1 ರಂತೆ ತಿಂಗಳಿಗೆ 30 ಕೆ.ಜಿ. ಅಕ್ಕಿ, ಕ್ಷೀರಭಾಗ್ಯ ಮೊದಲಾದ ಒಳ್ಳೆಯ ಕೆಲಸ ಮಾಡುತ್ತಿದೆ.
ಸಂಸದರು ಕೊಟ್ಟೂರು– ಹರಿಹರ ರೈಲ್ವೆ ಸಂಚಾರ ತಮ್ಮ ಸಾಧನೆಯೆಂದು ಹೇಳಿಕೊಳ್ಳುತ್ತಾರೆ. ಆದರೆ, ಇದು ಹಳೆಯ ಯೋಜನೆ.  ಅವರು ಕೆಲವು ರೈತರನ್ನು ಎತ್ತಿಕಟ್ಟಿ ಯೋಜನೆ ವಿಳಂಬವಾಗುವಂತೆ ಮಾಡಿದ್ದಾರೆ. ಈಗ ಕ್ಷೇತ್ರ ವ್ಯಾಪ್ತಿಯಲ್ಲಿ ಆರು ಕ್ಷೇತ್ರಗಳಲ್ಲಿ (ನನ್ನನ್ನು ಬಿಟ್ಟು) ಕಾಂಗ್ರೆಸ್‌ ಶಾಸಕರಿದ್ದು ಅವರೆಲ್ಲ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ.

* ನಿಮ್ಮ ಪ್ರಕಾರ ಕ್ಷೇತ್ರಕ್ಕೆ ಪ್ರಮುಖವಾಗಿ ಆಗಬೇಕಾಗಿರುವುದು ಏನು?
ದಾವಣಗೆರೆ ಅಭಿವೃದ್ಧಿಗೆ ನನ್ನದೇ ಆದ ದೃಷ್ಟಿಕೋನ (ವಿಷನ್‌ 2020) ಹೊಂದಿದ್ದೇನೆ. ನೀರಾವರಿ ಕ್ಷೇತ್ರದಲ್ಲಿ ಕೆಲಸಗಳಾಗಬೇಕಾಗಿದೆ. ಈಗಾಗಲೇ ಚನ್ನಗಿರಿ, ಹರಪನಹಳ್ಳಿಯಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ರೂಪಿಸಲಾಗಿದೆ. 22 ಕೆರೆಗಳ ಏತ ನೀರಾವರಿ ಯೋಜನೆ ಕೂಡ ಅಂತಿಮ ಹಂತದಲ್ಲಿದೆ. ಈಗ ಹೊಳೆಯಲ್ಲಿ ನೀರು ಕಡಿಮೆಯಿದೆ. ಹೊಳೆಯಲ್ಲಿ ನೀರು ತುಂಬಿದ ಕೂಡಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಭದ್ರಾ ನೀರು ಕಾಲುವೆಯ ಕೊನೆಯ ಭಾಗದವರೆಗೆ ತಲುಪುವುದಿಲ್ಲ ಎಂಬ ದೂರುಗಳಿವೆ. ಅಲ್ಲಿಗೆ ನೀರು ತಲುಪುವಂತೆ ನೋಡಿಕೊಳ್ಳಲಾಗುವುದು.

* ಮಹಿಮ ಪಟೇಲ್‌ ಜೆಡಿಎಸ್‌ ಸೇರಿ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್‌ ಸಾಧ್ಯತೆ ಮೇಲೆ ಪರಿಣಾಮ ಬೀರುವುದೇ?
ನನಗೆ ಹಾಗೆ ಕಾಣುತ್ತಿಲ್ಲ. ಅವರವರ ಪಕ್ಷದ ವೋಟು ಅವರವರು ತಗೊಳ್ಳುತ್ತಾರೆ.

* ದಾವಣಗೆರೆ ಉತ್ತರ ಶಾಸಕನಾಗಿ ಮಾಡಿರುವ ಕೆಲಸವೇನು?
ಶಾಸಕನಾಗಿ 10 ತಿಂಗಳ ಅವಧಿಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಮತ್ತು ಶಾಮನೂರು ಶಿವಶಂಕರಪ್ಪ ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸುಮಾರು ₨ 260 ಕೋಟಿ ಅನುದಾನ ತಂದಿದ್ದೇವೆ. 15–20 ಕಡೆ ಕೆಲಸಗಳು ಆರಂಭವಾಗಿವೆ. ಚುನಾವಣೆ ಬಂದಿರೋದ್ರಿಂದ ಕೆಲವು ನಿಂತುಹೋಗಿವೆ.

* ಶಾಸಕರಾಗಿದ್ದುಕೊಂಡು ಸಂಸತ್‌ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ರಾಜ್ಯ ರಾಜ್ಯಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಯಕೆಯೇ?
ಬಿಜೆಪಿ ಎದುರು ನಾನೇ ಸಮರ್ಥ ಅಭ್ಯರ್ಥಿ ಎಂದು ಪಕ್ಷದ ಹೈಕಮಾಂಡ್‌ ಪರಿಗಣಿಸಿದೆ. ಹೀಗಾಗಿ ನಾನು ಕಣಕ್ಕಿಳಿದಿದ್ದೇನೆ. ನಾನು ತ್ಯಾಗ ಮನೋಭಾವದಿಂದಲೇ ಕೆಲಸ ಮಾಡುತ್ತಿದ್ದೇನೆ. ಆಸೆಪಟ್ಟು ಎಲ್ಲೂ ಹೋಗಿಲ್ಲ.

* ಕ್ಷೇತ್ರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇದೆಯೇ?
ಕರ್ನಾಟಕದಲ್ಲಿ ಎಲ್ಲೂ ಮೋದಿ ಅಲೆ ಕಾಣುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT