ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದೊಂದಿಗೆ ಉಲ್ಫಾ ಮಾತುಕತೆ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸ ಬೆಳವಣಿಗೆಯೊಂದರಲ್ಲಿ ನಿಷೇಧಿತ ಉಲ್ಫಾ ಸಂಘಟನೆ ಅಸ್ಸಾಂನಲ್ಲಿನ ಬಗೆಹರಿಯದ ಮೂರು ದಶಕಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ  ಗುರುವಾರ ಸರ್ಕಾರದೊಂದಿಗೆ ಷರತ್ತು ರಹಿತ ಮುಖಾಮುಖಿ ಮಾತುಕತೆ ನಡೆಸಿತು. ಈ ಮಾತುಕತೆಗೆ ಮೂಲಕ ಅಸ್ಸಾಂ ಸಮಸ್ಯೆಗೆ ಶೀಘ್ರ ಮತ್ತು ಸರ್ವಸಮ್ಮತ ಪರಿಹಾರ ಕಂಡುಕೊಳ್ಳುವ ಭರವಸೆ ಹೊಂದಿರುವುದಾಗಿ ಉಲ್ಫಾ ತಿಳಿಸಿದೆ.

ಉಲ್ಫಾ ಮುಖ್ಯಸ್ಥ ಅರಬಿಂದಾ ರಾಜ್‌ಖೋವಾ ನೇತೃತ್ವದ ಎಂಟು ಸದಸ್ಯರ ನಿಯೋಗ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ನೇತೃತ್ವದ ಹಿರಿಯ ಅಧಿಕಾರಿಗಳ ಸಮತಿಯೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿತು. ಅಸ್ಸಾಂ ಗೃಹ ಕಾರ್ಯದರ್ಶಿ ಎನ್.ಕೆ.ದಾಸ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಖಾಗೆನ್ ಶರ್ಮಾ, ಅಸ್ಸಾಂ ಗೃಹ ಆಯುಕ್ತ ಜಿಷ್ನು ಬರುವಾ, ಕೇಂದ್ರದ ಸಂಧಾನಕಾರ ಪಿ.ಸಿ.ಹಲ್ದಾರ್, ಕಾರ್ಯದರ್ಶಿ (ಆಂತರಿಕ ಭದ್ರತೆ) ಯು.ಕೆ.ಬನ್ಸಾಲ್ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥ ಎನ್.ಸಂಧು ಸರ್ಕಾರದ ಪರ ಸಭೆಯಲ್ಲಿ ಹಾಜರಿದ್ದರು.

ಉಲ್ಫಾ ಮುಖಂಡರಾದ ಪ್ರದೀಪ್ ಗೊಗೊಯ್, ಭೀಮಕಾಂತ ಬುರಗೊಹಾನ್, ಸಾಶಾ ಚೌಧರಿ, ಚಿತ್ರಬಾನ್ ಹಜಾರಿಕಾ, ಪ್ರಣತಿ ದೇಕಾ, ಮಿತಿಂಗಾ ದಾಯ್ಮರಿ ಮತ್ತು ರಾಜು ಬರುವಾ ನಿಯೋಗದಲ್ಲಿದ್ದರು. ಇದುವರೆಗಿನ ಮಾತುಕತೆಗಳ ವಿಧಾನಗಳ್ಯಾವುದು ಫಲಪ್ರದವಾಗಿರಲಿಲ್ಲ. ಇನ್ನು ಮುಂದೆ ಇದು ಯಶಸ್ವಿಯಾಗಲಿದೆ ಎಂದು ರಾಜ್‌ಖೋವಾ ಆಶಯ ವ್ಯಕ್ತಪಡಿಸಿದರು.

ಉಲ್ಫಾ ಸಂಘಟನೆ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳೊಂದಿಗೆ ಷರತ್ತುರಹಿತ ಮಾತುಕತೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಮಾತುಕತೆ ಅರ್ಥಪೂರ್ಣವಾಗಿ ನಡೆಯಲಿದ್ದು,ಗೌರವಾರ್ಹ ಪರಿಹಾರ ದೊರಕಲಿದೆ ಎಂದು  ಮಾತುಕತೆಗೂ ಮುನ್ನ ತಮ್ಮನ್ನು ಭೇಟಿ ಮಾಡಿದ ಉಲ್ಫಾ ಮುಖಂಡರಿಗೆ ಭರವಸೆ ನೀಡಿರುವುದಾಗಿ ಗೃಹಸಚಿವ ಪಿ.ಚಿದಂಬರಂ ತಿಳಿಸಿದರು.

ವಿಶ್ವಾಸಾರ್ಹತೆ ಪ್ರತೀಕವಾಗಿ ಅವರು ನನ್ನನ್ನು ಭೇಟಿಯಾಗಿದ್ದರು ಎಂದು ಹೇಳಿದ ಚಿದಂಬರಂ, ಮಾತುಕತೆಯ ಮೂಲಕ ಪರಿಣಾಮಕಾರಿ ಪರಿಹಾರ ಪಡೆಯಲು ಮಾಧ್ಯಮಗಳೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕೇರಳ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಹಿಂದಿರುಗಿದ ಬಳಿಕ ಫೆ.13ರಂದು ಅವರೊಂದಿಗೂ ಉಲ್ಫಾ ನಿಯೋಗ ಮಾತುಕತೆ ನಡೆಸಲಿದೆ. ಬುಧವಾರ ಸಂಜೆಯೇ ದೆಹಲಿಗೆ ಆಗಮಿಸಿದ್ದ ಉಲ್ಫಾ ನಿಯೋಗವನ್ನು ಭದ್ರತಾ ಸಿಬ್ಬಂದಿ ರಹಸ್ಯ ತಾಣವೊಂದರಲ್ಲಿ ಇರಿಸಿದ್ದರು.

ಇದಕ್ಕೂ ಮುನ್ನ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರನ್ನು ಭೇಟಿ ಮಾಡಿದ್ದ ನಿಯೋಗ ಕೇಂದ್ರದೊಂದಿಗಿನ ಶಾಂತಿಯುತ ಮಾತುಕತೆಗೆ ಸಹಕಾರ ನೀಡುವಂತೆ ಕೋರಿತ್ತು. ಉಲ್ಫಾ ಆರಂಭವಾಗಿ 31 ವರ್ಷಗಳ ಅವಧಿಯಲ್ಲಿ ಸರ್ಕಾರದೊಂದಿಗೆ ನಡೆಸುತ್ತಿರುವ ಮೊದಲ ಷರತ್ತುರಹಿತ ಮಾತುಕತೆ ಇದಾಗಿದೆ. ಸರ್ಕಾರದೊಂದಿಗೆ ಷರತ್ತುರಹಿತ ಮಾತುಕತೆ ನಡೆಸಲು ಒಪ್ಪಿಕೊಂಡ ಬಳಿಕ ಬಂಧನದಲ್ಲಿದ್ದ ಉಲ್ಫಾ ಮುಖಂಡರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.

ಅಸ್ಸಾಂ ಜನತೆಯ ಆಶಯಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಷರತ್ತುರಹಿತ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಫೆ.5ರಂದು ಘೋಷಿಸಿದ್ದ ಉಲ್ಫಾ, ತಾನು ಅದುವರೆಗೆ ಎಸಗಿರುವ ಹಿಂಸಾಕೃತ್ಯಗಳಿಗೆ ಕ್ಷಮಾಪಣೆಯನ್ನೂ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT