ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿ ಮುಂದೆ ಸಸ್ಯಕಾಶಿ

Last Updated 13 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

 ನಗರದಲ್ಲೊಂದು ಸರ್ಕಾರಿ ಕಚೇರಿ ಇದೆ. ಅಲ್ಲಿಗೇ ಯಾರೇ ಹೋದರೂ ಕೆಲವು ಕ್ಷಣ ಆಹ್ಲಾದದ ಅನುಭವವಾಗುತ್ತದೆ. ಹಸಿರು ವಾತಾವರಣ ಇನ್ನಷ್ಟು ಹೊತ್ತು ಅಲ್ಲೆ ಇರಬೇಕೆಂಬ ಆಸೆ ಮೂಡಿಸುತ್ತದೆ. ವಾಹನಗಳಿಗೂ ಅಲ್ಲಿ ಹಸಿರು ಚಪ್ಪರದ ನೆರಳಿದೆ. ತಂಗಾಳಿಯ ತಂಪು. ನೆರಳು, ಹೂವಿನ ಮೋಹಕತೆ, ಮಾವಿನ ಚಿಗುರಿನ ಘಮಲು ಎಲ್ಲ ಸೇರಿ ಅಲ್ಲೊಂದು ಪುಟ್ಟ ಸಸ್ಯಕಾಶಿಯೇ ಮೈ ತಳೆದಿದೆ.

ಅದನ್ನು ನೋಡಬೇಕೆ? ಕೋಲಾರದ ಜಿಲ್ಲಾಧಿಕಾರಿ ಕಚೇರಿಯತ್ತ ಹೆಜ್ಜೆ ಹಾಕಲೇಬೇಕು. ಅಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ. ಎಲ್ಲಿ ಹೋಗುವುದೆಂಬ ಗೊಂದಲವೇ? ನೇರವಾಗಿ ತೋಟಗಾರಿಕ ಇಲಾಖೆ ಕಚೇರಿ ಆವರಣಕ್ಕೆ ಬಂದರೆ, ಕಚೇರಿಯ ಮುಂಭಾಗದಲ್ಲಿ ಅಳವಡಿಸಿದ ಫಲಕಕಕ್ಕೆ ಅಂಟಿಕೊಂಡ ತೆಂಗಿನ ಗರಿಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಎದುರಿಗೇ ಹಸಿರು ಚಪ್ಪರ ಕಾಣುತ್ತದೆ. ಅದು ಸಿಗ್ನಾನಿಯಾ ಎಲೆಬಳ್ಳಿ ಚಪ್ಪರ. ಬಳ್ಳಿಯನ್ನು ಕಂಬಗಳ ಮೇಲ್ಛಾವಣಿಗೆ ಅಳವಡಿಸಲಾಗಿದೆ. ಬಳ್ಳಿಗಳು ಛಾವಣಿಯನ್ನೆಲ್ಲ ಹರಡಿಕೊಂಡು, ಭೂಮಿಗೆ ನಮಿಸುವಂತೆ ತೊನೆದಾಡುತ್ತಿವೆ. ಚಪ್ಪರದ ಅಷ್ಟಗಲವೂ ತಂಪಾದ ನೆರಳು ನಿಮಗೆ ಕಾಣಿಸುತ್ತದೆ. ಅದಕ್ಕೆ ಅಂಟಿಕೊಂಡೇ ಪುಟ್ಟ ಗಿಡ ಎಲೆಗಳನ್ನು ಕತ್ತರಿಸಿ ಮಾಡಿದ ಚಿತ್ತಾರವೊಂದು ಸೆಳೆಯುತ್ತದೆ.

ಅಲ್ಲೆ ಒಂದಷ್ಟು ಕ್ಷಣ ನಿಂತರೆ ಈಗ ಮಾವಿನ ಹೂವುಗಳ ಘಮಲು ಮೂಗಿಗೆ ಅಡರುತ್ತದೆ. ಹೌದು, ಚಪ್ಪರದ ಸನಿಹದಲ್ಲೆ ಒಂದು ದೊಡ್ಡ ಮಾವಿನ ಮರವಿದೆ. ಇದು ಹೂ ಅರಳುವ ಕಾಲ. ಹೂವಿನ ಪರಿಮಳವನ್ನು ಎದೆಗೆ ತುಂಬಿಸಿಕೊಳ್ಳುತ್ತಲೇ ಅತ್ತಿತ್ತ ಕಣ್ಣಾಡಿಸಿದರೆ ಒಂದೆಡೆ ಕ್ರೋಟಾನ್ ಗಿಡಗಳು ಕಾಣಿಸುತ್ತವೆ. ಬಣ್ಣ ಬಣ್ಣದ ಎಲೆಗಳು ಮೈತುಂಬ ಹೊದ್ದುಕೊಂಡ ಗಿಡಗಳು ಖುಷಿ ಕೊಡುತ್ತವೆ. ಕಚೇರಿ ಹಿಂಭಾಗಕ್ಕೆ ಬನ್ನಿ ಅಲ್ಲಿ ಸಾಲು ಸಾಲು ಹೂವಿನ ಗಿಡಗಳು ಕಣ್ಸೆಳೆಯುತ್ತವೆ. ಅಲ್ಲೆ ನಿಂತಿರೋ ಸಮಯದ ಪರಿವೆ ಮರೆತುಹೋಗುತ್ತದೆ!
ಹೀಗಾಗಿ, ತೋಟಗಾರಿಕೆ ಉಪನಿರ್ದೇಶಕರ ಈ ಕಚೇರಿಯು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಎಲ್ಲ ಕಚೇರಿಗಳಿಗಿಂತಲೂ ಅನನ್ಯವಾಗಿ ಕಾಣುತ್ತದೆ. ಈ ತೋಟದ ನಿರ್ವಹಣೆಗೆ ಪ್ರತ್ಯೇಕ ಹಣವನ್ನೇನು ಖರ್ಚು ಮಾಡುತ್ತಿಲ್ಲ ಎಂಬುದು ಮತ್ತೊಂದು ವಿಶೇಷ. ಸಮೀಪದಲ್ಲೆ ಇರುವ ನರ್ಸರಿಯ ಸಿಬ್ಬಂದಿ ನಿಯಮಿತವಾಗಿ ಇಲ್ಲಿಗೆ ಬಂದು ಗಿಡಗಳನ್ನು ಒಪ್ಪವಾಗಿ ಕತ್ತರಿಸುತ್ತಾರೆ. ಸ್ವಚ್ಛಗೊಳಿಸುತ್ತಾರೆ. ನೀರು ಹಾಯಿಸುತ್ತಾರೆ.

ಸುಮಾರು ಎರಡು ಎಕರೆಯಷ್ಟಿರುವ ಈ ಕಚೇರಿಯ ಆವರಣವನ್ನು ಕೊಂಚವೂ ನಿರುಪಯುಕ್ತಗೊಳಿಸಿಲ್ಲ ಎಂಬುದು ಮೊದಲ ನೋಟಕ್ಕೆ ಎದ್ದುಕಾಣುವ ಅಂಶ. ತೋಟಗಾರಿಕೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶವನ್ನುಳ ಇಲಾಖೆಯ ಕಚೇರಿಯೇ ಅದಕ್ಕೆ ಮಾದರಿಯಾಗಿರಬೇಕು ಎಂಬ ಬದ್ಧತೆಯಿಂದ ಹೀಗೆ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT