ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಪುನರ್‌ರಚನೆ ಸದ್ಯದ ಅವಶ್ಯಕತೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಗುಣಾತ್ಮಕ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ನಿಜವಾಗಲು ಬದ್ಧವಾಗಿದ್ದರೆ ಸಮಾನತೆಯ ತತ್ವದ ಆಧಾರದಲ್ಲಿ ಸಾರ್ವತ್ರಿಕ   ಅವಕಾಶ ಒದಗಿಸುವುದು ಸಾರ್ವತ್ರೀಕರಣದ ಮೊದಲ ಹೆಜ್ಜೆಯಾಗಬೇಕಿತ್ತು. ಆದರೆ, ಸಾರ್ವತ್ರಿಕ ಅವಕಾಶಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದಲ್ಲಿ ಸ್ಪಷ್ಟ ಲಿಖಿತ ಮತ್ತು ಸಮಗ್ರ ನೀತಿ ಅಸ್ತಿತ್ವದಲ್ಲಿಲ್ಲ.

ಬದಲಿಗೆ, ಪ್ರತಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ, ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆರು ಕಿ.ಮೀ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಇರಬೇಕೆಂಬ ಒಂದು  ಒಮ್ಮತದ ಅಭಿಪ್ರಾಯವಾಗಿ ಜಾರಿಯಲ್ಲಿದೆ. ಈ ತಿಳುವಳಿಕೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಸ್ತಾವನೆಗಳನ್ನು ಸ್ವೀಕರಿಸಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರದ ಈ ಅಘೋಷಿತ ನೀತಿಯ ಫಲವಾಗಿ, ದೂರದೃಷ್ಟಿಯ ಆಧಾರದ ಮೇಲೆ ಉತ್ತಮ ಶಾಲೆ ಮತ್ತು ಆ ಮೂಲಕ  ಶಾಲಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಬದಲು ತಕ್ಷಣದ ರಾಜಕೀಯ ಲಾಭದ ಬೇಡಿಕೆಯಾಗಿ ಪ್ರಾರಂಭವಾಗುವ ಸರ್ಕಾರಿ ಶಾಲೆಗಳು ದೂರದೃಷ್ಟಿಯನ್ನು ಕಳೆದುಕೊಂಡಿವೆ.

ನಗರ ಪ್ರದೇಶಗಳಲ್ಲಿ ರಾಜಕೀಯ ಬೆಂಬಲಿತ ಖಾಸಗಿ ಸಂಸ್ಥೆಗಳ ಲಾಬಿ ಮತ್ತು ಹಣದ ಪ್ರಭಾವದ ಒತ್ತಡದಿಂದಾಗಿ `ಶಾಲೆ ಪ್ರಾರಂಭಿಸುವ~ ಈ ಅಘೋಷಿತ ನೀತಿಯನ್ನು ಕೂಡ ಗಾಳಿಗೆ ತೂರಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ನಗರ ಪ್ರದೇಶದ ಶಿಕ್ಷಣ ಕ್ಷೇತ್ರ ಮತ್ತು ಆಡಳಿತ ವಿಷಯದಲ್ಲಿ ಪ್ರಭಾವಿ ರಾಜಕೀಯ ಶಕ್ತಿ ಮತ್ತು ಹಣದ ಲಾಬಿ ಖಾಸಗಿ ಸಂಸ್ಥೆಗಳ ಪರವಾಗಿರುವುದರಿಂದ ಸರ್ಕಾರಿ ವಲಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದಿನೇ ದಿನೇ ತನ್ನ ಹಿಡಿತವನ್ನು ಕಳೆದುಕೊಂಡು ಖಾಸಗೀಕರಣದ ಹುನ್ನಾರಕ್ಕೆ ಬಲಿಯಾಗುತ್ತಿದೆ. ಹೀಗಾಗಿ, ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಹಲವು ಪ್ರಾಥಮಿಕ ಶಾಲೆಗಳು, ಮೂರು ಕಿ.ಮೀ ವ್ಯಾಪ್ತಿಯಲ್ಲಿ ಹಲವು ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಆರು ಕಿ.ಮೀ ವ್ಯಾಪ್ತಿಯಲ್ಲಿ ಅನೇಕ ಪ್ರೌಢಶಾಲೆಗಳಿಗೆ ಅನುಮತಿ ನೀಡಲಾಗಿದೆ. ಇದಿಷ್ಟು ಸಾಲದೆಂಬಂತೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಮಾದರಿಯ ಪಠ್ಯವಸ್ತು ಆಧಾರಿತ ಶಾಲೆಗಳಾದ ಸಿಬಿಎಸ್‌ಇ ಮತ್ತು ಐಸಿಎಸ್‌ಸಿಯ ಶಾಲೆಗಳನ್ನು ಪ್ರಾರಂಭಿಸಲು ಯಾವುದೇ ನಿಯಂತ್ರಣವಿಲ್ಲದೆ ನಿರಾಕ್ಷೇಪಣಾ ಪತ್ರಗಳನ್ನು ನೀಡಲಾಗುತ್ತಿದೆ. ಹೀಗಾಗಿ, ಸರ್ಕಾರಿ ಶಾಲೆಗಳ ಪಕ್ಕವೇ ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿ ನೀಡುವ ಸರ್ಕಾರ, ಸರ್ಕಾರಿ (ಸಾರ್ವಜನಿಕ) ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತರುವುದಕ್ಕೆ ಕಾರಣವಾಗಿದೆ. ಮತ್ತು ಈ ಕಾರಣಗಳಿಂದ ಕಳೆದ ಮೂರು ವರುಷಗಳಿಂದಲೂ ನಿರಂತರವಾಗಿ ಶಾಲೆಗಳನ್ನು ಮುಚ್ಚುತ್ತಿದೆ.

ಇದರ ಪರಿಣಾಮವಾಗಿ ಬಹುತೇಕ ನಗರ, ಪಟ್ಟಣ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸಾರ್ವತ್ರಿಕ ಅವಕಾಶದ ನಿಯಮವು ಸಂಪೂರ್ಣ ಉಲ್ಲಂಘನೆಯಾಗಿದ್ದು, ಗಲ್ಲಿಗಲ್ಲಿಗಳಲ್ಲಿ ಖಾಸಗಿ ಶಾಲೆಗಳು ಪ್ರಾರಂಭಗೊಂಡಿವೆ. ಎಷ್ಟೋ ಶಾಲೆಗಳಲ್ಲಿ ಸ್ನಾನದ ಮನೆ, ಅಡಿಗೆಮನೆ ತರಗತಿಯ ಕೋಣೆಗಳಾಗಿದ್ದರೆ ದೇವರಮನೆ ಆಡಳಿತ ನಡೆಸುವ ಕಚೇರಿಯಾಗಿದೆ! ಬಹುತೇಕ ಸಂದರ್ಭದಲ್ಲಿ ಈ ಶಾಲೆಗಳ ನಾಮಸೂಚಕವು ಅದರ ಉದ್ದೇಶ, ಅರ್ಥ ಮತ್ತು ಸೌಲಭ್ಯಗಳ ಕಲ್ಪನೆಗೆ ತದ್ವಿರುದ್ಧವಾಗಿವೆ. ಉದಾಹರಣೆಗೆ, ಹಿಂದೂ, ಮುಸಲ್ಮಾನರ ಆಡಳಿತ ವರ್ಗಗಳು ನಡೆಸುವ ಶಾಲೆಗಳು ಕೂಡ ಕ್ರಿಶ್ಚಿಯನ್ ಸಂತರ, ಸಹೋದರಿಯರ ಮತ್ತು ತಾಯಂದಿರ ಹೆಸರುಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದರೆ, ಉಳಿದ ಆಡಳಿತ ವರ್ಗಗಳು `ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸಾರ್ವಜನಿಕ ಶಾಲೆ~ಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿವೆ. ಈ ಶಾಲೆಗಳಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಯಾವ ಅಂಶಗಳೂ ಇರುವುದಿಲ್ಲ. ಇನ್ನೂ ಕೆಲವು ಸಂಸ್ಥೆಗಳು ದೇಶೀಯ ಸಂತ ಸಾಧುಗಳ ಮತ್ತು ಮಹಾಪುರುಷರ ಹೆಸರಿನಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಸುಲಿಗೆ ನಡೆಸುತ್ತಿವೆ. ಒಟ್ಟಾರೆ, ಈ ಶಾಲೆಗಳ ಒಂದು ಸಾಮಾನ್ಯ ತತ್ವವೆಂದರೆ ಶಿಕ್ಷಣದ ಹೆಸರಿನಲ್ಲಿ ಗರಿಷ್ಠ ಲಾಭ ಗಳಿಕೆಯಾಗಿದೆ. ಗರಿಷ್ಠ ಲಾಭದ ಖಾಸಗಿ ಮೌಲ್ಯಗಳನ್ನು ತನ್ನದಾಗಿರಿಸಿಕೊಂಡಿರುವ ಈ ಸಂಸ್ಥೆಗಳು `ಸಾರ್ವಜನಿಕ ಶಾಲೆ~ಯೆಂಬ ಹೆಸರಿನಲ್ಲಿ ಜನರನ್ನು ವಂಚಿಸುತ್ತಿವೆ.

ಈ ಕಾರಣಗಳಿಂದ ರಾಜ್ಯದಲ್ಲಿ ಇಂದು ಶಿಕ್ಷಣವು ವ್ಯಾಪಾರದ ವಸ್ತುವಾಗಿದ್ದು ತನ್ನ ನಿಜಮೌಲ್ಯವನ್ನು ಕಳೆದುಕೊಂಡಿದೆ. ಇಂದಿನ ಉದಾರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ಖರೀದಿಸಬಲ್ಲ ಆರ್ಥಿಕ ಪ್ರಬಲರು ತಮ್ಮ ಮಕ್ಕಳನ್ನು ಪ್ರತಿಷ್ಠೆಯ ಹೆಸರಿನಲ್ಲಿ ಹೆಚ್ಚು ಹಣ ವಸೂಲಿ ಮಾಡುವ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದು ಆರ್ಥಿಕವಾಗಿ ಹೆಚ್ಚು ಲಾಭ ಗಳಿಸುವ ಹುದ್ದೆಗಳನ್ನು ಪಡೆಯುವುದೇ ಶಿಕ್ಷಣದ ಅಂತಿಮಗುರಿ ಎಂದು ಪ್ರತಿಪಾದಿಸುತ್ತಿದ್ದಾರೆ. ಜೊತೆಗೆ ಇದೇ ಗುಣಾತ್ಮಕ ಶಿಕ್ಷಣವೆಂದು `ಬ್ರಾಂಡ್~ ಮಾಡಿ ಸರ್ಕಾರಿ ಶಾಲೆಗಳನ್ನು ಶಿಥಿಲಗೊಳಿಸುವ ಮತ್ತು ಕ್ರಮೇಣವಾಗಿ ಮುಚ್ಚುವಂತೆ ಮಾಡುವ ಸ್ವಾರ್ಥ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದ್ದಾರೆ. ಇನ್ನೊಂದೆಡೆ ಅತ್ಯಂತ ಬಡ ಸಮುದಾಯಗಳು ಅದರಲ್ಲೂ  ಪರಿಶಿಷ್ಟ ಜಾತಿ, ವರ್ಗ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ವರ್ಗದ ಜನರು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು ಅವಲಂಬಿಸಿದ್ದಾರೆ. ಅವರು ತಮ್ಮ ಮಕ್ಕಳಿಗೆ ಉತ್ತಮ ನಾಗರಿಕರಾಗಲು ಅವಶ್ಯಕವಾದ ಗುಣಾತ್ಮಕ ಶಿಕ್ಷಣದ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ, ಕೆಲವೊಮ್ಮೆ ಮಾರುಕಟ್ಟೆ ಆಧಾರಿತ ಖಾಸಗಿ ಶಾಲೆಗಳು ಸೃಷ್ಟಿಸುವ ಸುಳ್ಳು ಭ್ರಮೆಗಳ ನಿರಂತರ ಅಪಪ್ರಚಾರಕ್ಕೆ ಮರುಳಾಗಿ ಸರ್ಕಾರಿ ಶಾಲೆಗಳನ್ನು ದಿನದಿಂದ ದಿನಕ್ಕೆ ತೊರೆಯುತ್ತಿದ್ದಾರೆ.

ಇದಕ್ಕೆ ಉತ್ತರ, ಸಾಮಾಜಿಕ ಸಂಸ್ಥೆಗಳಾದ ಸರ್ಕಾರಿ ಶಾಲೆಗಳನ್ನು ಲಾಭಕೋರ ಖಾಸಗಿ ಶಾಲೆಗಳ  ಮಾದರಿಯಲ್ಲಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸುವುದರಲ್ಲಿಲ್ಲ. ಬದಲಾಗಿ, ಲಾಭಕ್ಕಾಗಿ ಶಾಲೆಗಳನ್ನು ತೆರೆದು ಹಗಲು ದರೋಡೆಗೆ ಮುಂದಾಗಿರುವ ಖಾಸಗಿ ಶಾಲೆಗಳನ್ನು ನಿಯಂತ್ರಿಸಿ ಸರ್ಕಾರಿ ಶಾಲೆಗಳನ್ನು ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಆಧಾರದ ಮೇಲೆ ಪುನರ್‌ರಚಿಸಿ ಸಬಲೀಕರಣಗೊಳಿಸಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿರುವ ಎಲ್ಲ ತಾರತಮ್ಯಗಳನ್ನು ತೊಡೆದು ಹಾಕಿ ಸಮಾನ ಅವಕಾಶ ಮತ್ತು ಸಮಾನತೆಯನ್ನು ಕಲ್ಪಿಸುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎರಡು ಪ್ರಸ್ತಾವನೆಗಳನ್ನು ಸರ್ಕಾರ ಪರಿಶೀಲಿಸಬಹುದಾಗಿದೆ.

ಎಲ್ಲ ಮಕ್ಕಳಿಗೆ ಸಮಾನ ಸಾರ್ವತ್ರಿಕ ಅವಕಾಶದ ಮೊದಲ ಭಾಗವಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಜನವಸತಿ ಪ್ರದೇಶದಲ್ಲಿ ಮತ್ತು ನಗರ ಪ್ರದೇಶ, ಪಟ್ಟಣಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ಸುಸಜ್ಜಿತ `ಸಾರ್ವಜನಿಕ ಪ್ರಾಥಮಿಕ ಶಾಲೆ~ಗೆ ಅವಕಾಶ ಕಲ್ಪಿಸಬೇಕು. ಇಂತಹ ಶಾಲೆಯು ಸರ್ಕಾರಿ, ಸರ್ಕಾರಿ ಅನುದಾನಿತ ಅಥವಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಾಗಿದ್ದು, ಆಡಳಿತ ಮಂಡಳಿ ಯಾವುದೇ ಆಗಿದ್ದರೂ ನಿಗದಿತ ಭೌಗೋಳಿಕ ಪ್ರದೇಶದ ವ್ಯಾಪ್ತಿಯಲ್ಲಿ (ಜನವಸತಿ ಅಥವಾ ವಾರ್ಡ್) ವಾಸವಾಗಿರುವ 3 ರಿಂದ 10 ವರ್ಷದ ಎಲ್ಲಾ ಮಕ್ಕಳಿಗೆ ನಾಲ್ಕನೆಯ ತರಗತಿಯವರೆಗೆ ಉಚಿತ ಗುಣಾತ್ಮಕ ಆರೈಕೆ ಮತ್ತು ಶಿಕ್ಷಣವನ್ನು ಒದಗಿಸುವ ಎಲ್ಲ ಸೌಲಭ್ಯಗಳನ್ನು ಹೊಂದಿರಬೇಕು. ಒಂದೇ ಭೌಗೋಳಿಕ ಪ್ರದೇಶದಲ್ಲಿ ಬೇರೆ ಬೇರೆ ಆಡಳಿತ ಮಂಡಳಿಯ ಶಾಲೆಗಳು ಅನಾರೋಗ್ಯಕರ ಪೈಪೋಟಿ ನಡೆಸುವ ಬದಲು ಆಡಳಿತ ಮಂಡಳಿ ಯಾವುದೇ ಆದರೂ ಸರ್ಕಾರದಿಂದ ಅಧಿಕೃತವಾಗಿ ಘೋಷಿಸಿದ `ನೆರೆಹೊರೆಯ ಸಾಮಾನ್ಯ ಶಾಲೆ~ಯಾಗಿ ಕೆಲಸ ನಿರ್ವಹಿಸಬೇಕು. ಇಂಥ  `ನೆರೆಹೊರೆಯ ಶಾಲೆ~ಗೆ ಸರ್ಕಾರವು ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು.

ಎಲ್ಲ ಮಕ್ಕಳಿಗೆ ಸಮಾನ ಸಾರ್ವತ್ರಿಕ ಅವಕಾಶದ ಎರಡನೆಯ ಭಾಗವಾಗಿ, ರಾಜ್ಯದಲ್ಲಿ ಈಗಿರುವ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರ್ ಸಂಘಟಿಸಿ ಗ್ರಾಮೀಣ ಪ್ರದೇಶದ ಪ್ರತಿ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಮತ್ತು ನಗರ, ಪಟ್ಟಣ ಪ್ರದೇಶದ ಪ್ರತಿಯೊಂದು ವಾರ್ಡ್ ಕೇಂದ್ರಸ್ಥಾನದಲ್ಲಿ ಸುಸಜ್ಜಿತ `ಸಾರ್ವಜನಿಕ ಮಾಧ್ಯಮಿಕ ಶಾಲೆ~ಯನ್ನಾಗಿ ಪರಿವರ್ತಿಸಬೇಕು. ಐದರಿಂದ ಹತ್ತನೇ ತರಗತಿಯವರೆಗೆ ಮಾಧ್ಯಮಿಕ ಶಾಲೆಯೆಂದು ಪರಿಗಣಿಸಿ ಉಚಿತ, ಕಡ್ಡಾಯ ಮತ್ತು ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕು. `ಸಾರ್ವಜನಿಕ ಪ್ರಾಥಮಿಕ ಶಾಲೆ~ಯಿಂದ ನಾಲ್ಕನೇ ತರಗತಿಯನ್ನು ಮುಗಿಸಿ ಬರುವ ಪ್ರತಿಯೊಂದು ಮಗುವು 10ನೆಯ ತರಗತಿಯವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. 

ಸರ್ಕಾರವು ಮೂಲವ್ಯವಸ್ಥೆಯಲ್ಲಿನ ದೋಷವನ್ನು ಸರಿಪಡಿಸದೆ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ತಿಳುವಳಿಕೆಯ ಅಭಾವವನ್ನು ಮಾತ್ರವಲ್ಲ, ವ್ಯವಸ್ಥೆಯ ಸಮಗ್ರ ಬದಲಾವಣೆಗೆ ಬೇಕಾದ ದೂರದೃಷ್ಟಿಯ ಕೊರತೆಯನ್ನೂ ತೋರಿಸುತ್ತದೆ. ಇಂತಹ ಕಾಲದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ ಒಂದು ಪ್ರಬಲ ಹೋರಾಟ ಮಾತ್ರ ಜನವಿರೋಧಿ ಸರ್ಕಾರವನ್ನು ಮಣಿಸಬಲ್ಲದು.

(ಲೇಖಕರು ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದಲ್ಲಿ ಫೆಲೋ)

(ನಿಮ್ಮ ಅನಿಸಿಕೆಗಳನ್ನು ಕಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT