ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಪ್ರವೇಶ: ಪಾಲಕರ ಮನವೊಲಿಕೆ

Last Updated 18 ಮೇ 2012, 20:10 IST
ಅಕ್ಷರ ಗಾತ್ರ

ಕೊಪ್ಪಳ: ಇನ್ನೇನು ಹೊಸ ಶೈಕ್ಷಣಿಕ ವರ್ಷ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಪಾಲಕರ ಹಾಗೂ ಮಕ್ಕಳ ಗಮನ ಸೆಳೆಯುವ ಸಲುವಾಗಿ ಖಾಸಗಿ ಶಾಲೆಗಳು ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿವೆ.

ಆದರೆ, ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆ ಏನೂ ಕಮ್ಮಿ ಇಲ್ಲ. ಸರ್ಕಾರಿ ಶಾಲೆಗೇ ಮಕ್ಕಳನ್ನು ಕಳಿಸಿ ಎಂದು  ಪಾಲಕರನ್ನುಮನವೊಲಿಸುವ ಆಂದೋಲನವನ್ನು ಆರಂಭಿಸುವ ಮೂಲಕ ನಗರದಲ್ಲಿರುವ ಸರ್ಕಾರಿ ಕೇಂದ್ರೀಯ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಗಮನ ಸೆಳೆದಿದ್ದಾರೆ.

ಈ ರೀತಿ ಮನೆ-ಮನೆಗೆ ಹೋಗಿ ಪ್ರಚಾರ ಮಾಡಬೇಕು ಎಂಬುದು ಈ ಶಾಲೆಯ ಮುಖ್ಯ ಶಿಕ್ಷಕ ಭರಮಪ್ಪ ಕಟ್ಟಿಮನಿ ಯೋಚನೆ. ಈ ಕುರಿತು ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ.

ಹೀಗಾಗಿ ಈ ಶಾಲೆಯ ಶಿಕ್ಷಕರ ಶ್ರಮದ ಫಲವಾಗಿ ಈಗಾಗಲೇ 60ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದಾರೆ.
ಮೂರು ವರ್ಷಗಳಿಂದ ಇಂತಹ ಪ್ರಚಾರ ಕಾರ್ಯ ಮಾಡುತ್ತಿದ್ದೇನೆ. ಈ ಹಿಂದಿನ ವರ್ಷಗಳಲ್ಲಿ ಸ್ಥಳೀಯ ಟಿ.ವಿ. ಚಾನೆಲ್‌ಗಳಲ್ಲಿ ಮಾತ್ರ ಜಾಹೀರಾತು ನೀಡಿ, ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸುವಂತೆ ಮನವಿ ಮಾಡಲಾಗುತ್ತಿತ್ತು ಎಂದು ಭರಮಪ್ಪ `ಪ್ರಜಾವಾಣಿ~ಗೆ ವಿವರಿಸುತ್ತಾರೆ.

ಪ್ರಚಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ದೃಷ್ಟಿಯಿಂದ ಈ ವರ್ಷ 2 ಸಾವಿರ ಪ್ರತಿ ಕರಪತ್ರಗಳನ್ನು ಮುದ್ರಿಸಿ, ಹಂಚಿ ಹೆಚ್ಚು ಪಾಲಕರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಕರಪತ್ರಗಳ ಮುದ್ರಣ ವೆಚ್ಚವನ್ನು ಎಲ್ಲ ಶಿಕ್ಷಕರು ಭರಿಸಿದ್ದೇವೆ ಎಂದು ವಿವರಿಸುತ್ತಾರೆ.

ಒಂದನೇ ತರಗತಿ ಸೇರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಶಾಲೆಯನ್ನು ಅರ್ಧಕ್ಕೆ ಬಿಟ್ಟು ಪುನಃ ಓದಲು ಇಚ್ಛಿಸುವ ಮಕ್ಕಳನ್ನು ಹುಡುಕಿ ಅವರನ್ನು ಶಾಲೆಗೆ ಸೇರಿಸುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಕ್ಕಳ ವಿದ್ಯಾಭ್ಯಾಸ ಮುಂದುವರಿಯುವಂತೆ ನೊಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ.

ಕರಪತ್ರದಲ್ಲಿ: ಅಕ್ಷರ ಫೌಂಡೇಷನ್‌ನಿಂದ ತರಬೇತಿ ಹೊಂದಿದ ಶಿಕ್ಷಕರಿಂದ 1-4ನೇ ತರಗತಿ ವರೆಗಿನ ಮಕ್ಕಳಿಗೆ ಇಂಗ್ಲಿಷ್ ಬೋಧನೆ. ಪ್ರತಿ 15 ದಿನಗಳಿಗೊಮ್ಮೆ ರಸಪ್ರಶ್ನೆ, ನಿಬಂಧ, ಚರ್ಚಾಸ್ಪರ್ಧೆ, ಮಗ್ಗಿ, ಕಾಗುಣಿತ, ಹಾಡುಗಳ, ವಚನ, ಭಾವಗೀತೆ, ದೇಶಭಕ್ತಿ ಗೀತೆ, ಕಥೆ ಹೇಳುವ, ರಾಷ್ಟ್ರ ನಾಯಕರ ಚರಿತ್ರೆ ಕುರಿತ ಸ್ಪರ್ಧೆ ಏರ್ಪಡಿಸಲಾಗುವುದು ಎಂಬಂತಹ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಬಿಸಿ ಊಟ, ಕೊಡಮಾಡುವ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನದಂತಹ ಸೌಲಭ್ಯಗಳ ಬಗ್ಗೆ ವಿವರಿಸಲಾಗಿದೆ.

ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಶಾಲೆಯಿಂದ ಹೊರಬಿದ್ದು, ಡಿಡಿಪಿಐ ಕಚೇರಿ, ಶಾಸಕರ ಕಾರ್ಯಾಲಯಗಳಲ್ಲಿ ಕಾಲಹರಣ ಮಾಡುವಂತಹ ಶಿಕ್ಷಕರೂ ಜಿಲ್ಲೆಯಲ್ಲಿದ್ದಾರೆ. ಇಂತಹ ಶಿಕ್ಷಕರ ನಡುವೆ ಭರಮಪ್ಪ ಕಟ್ಟಿಮನಿ ಹಾಗೂ ಅವರ ಸಹೋದ್ಯೋಗಿಗಳ ಈ ಪ್ರಯತ್ನ, ಸರ್ಕಾರಿ ಶಾಲೆ ಬಗೆಗಿನ ಕಾಳಜಿ ಅನುಕರಣೀಯ ಎಂದು ಕೆಲ ಪಾಲಕರು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT