ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ಧರ್ಮಗಳ ಪುಣ್ಯ ಸ್ಥಳ

Last Updated 9 ಫೆಬ್ರುವರಿ 2011, 12:35 IST
ಅಕ್ಷರ ಗಾತ್ರ

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸುಮಾರು ಇಪ್ಪತ್ತೈದು  ಕಿ.ಮೀ. ದೂರದಲ್ಲಿರುವ  ಹಸಿರುವನಕ್ಕೆ ಕಾಲಿಡುತ್ತಿದ್ದಂತೆ ಭಗವದ್ಗೀತೆ, ಮಹಾಪುರಾಣ, ಬೈಬಲ್, ಕುರಾನ್  ಗ್ರಂಥ ಸಾಹೀಬ್‌ಗಳಿಂದ ಆಯ್ದ ಮಂತ್ರಗಳ ಪಠಣ ಕೇಳಿ ಬರುತ್ತದೆ. ಅವನ್ನು ಕೇಳಿಸಿಕೊಳ್ಳುವುದು ರೋಮಾಂಚನವನ್ನು ಉಂಟು ಮಾಡುವ ಅನುಭವ. ಹಸಿರು ವನದ ಮಧ್ಯ ಕಂಗೊಳಿಸುವುದೇ ‘ಪುಣ್ಯ ಸ್ಥಳ’ ಅದರ ದ್ಯೋತಕ ಅಲ್ಲಿರುವ ವಿಶ್ವಧರ್ಮ ಸ್ತೂಪ.

ಎಷ್ಟೋ ಐತಿಹ್ಯಗಳು, ಪುರಾಣ ಪ್ರಸಿದ್ಧ ಸ್ಥಳಗಳು ಕಾಲಗರ್ಭದಲ್ಲಿ ಸೇರಿ ಹೋಗಿ ಗುರುತಿಸಲೂ ಆಗದು ಸ್ಥಿತಿಯಲ್ಲಿರುವಾಗ ‘ಕರಡಿ ಗುಡ್ಡ’ ಎಂಬ ಸ್ಥಳದಲ್ಲಿ ಒಂದು ಪುಣ್ಯ ಸ್ಥಳ ತಲೆ ಎತ್ತಿದೆ. ಅದೊಂದು ಕಾಡು. ಈಗದು ಮೂರ್ತ ಸ್ವರೂಪವನ್ನು ಪಡೆದುಕೊಂಡು ಪುಣ್ಯ ಸ್ಥಳವೆಂದು ಕರೆಯಲ್ಪಡಲು ಕಾರಣಪುರುಷರು ರಾಘವೇಂದ್ರ ಗುರೂಜಿ ಅವರು. ಅವರು ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರು. ಪತ್ರಿಕಾರಂಗವನ್ನು ಪ್ರವೇಶಿಸಿ ಮುಂದೆ ಮಂತ್ರಾಲಯದ ಶ್ರೀ ಗುರುಸಾರ್ವಭೌಮರ ಆಶೀರ್ವಾದದ ಫಲವಾಗಿ ಈ ಸ್ಥಳಕ್ಕೆ ಬಂದು ನೆಲೆ ನಿಂತು ಅದನ್ನು ಪುಣ್ಯ ಸ್ಥಳವನ್ನಾಗಿ ಮಾಡಿದರು.
ಈ ಪುಣ್ಯಸ್ಥಳ ಯಾವುದೇ ಒಂದು ಮತ, ಪಂಥ, ಜಾತಿ ಅಥವಾ ಧರ್ಮಕ್ಕೆ ಮೀಸಲಲ್ಲ. ಇದು ಧರ್ಮ ಸಮನ್ವಯದ ಕ್ಷೇತ್ರವಾಗಿದೆ. ಮುಸ್ಲಿಂ ಮಹಿಳೆಯೊಬ್ಬಳು ಕೊಡುಗೆಯಾಗಿ ನೀಡಿದ ‘ಷಹಜಾದ ಸಾಂಸ್ಕೃತಿಕ ಸಭಾಭವನ’ದಲ್ಲಿ ಇಲ್ಲಿಯ ಎಲ್ಲಾ ಧಾರ್ಮಿಕ ಸಮಾರಂಭಗಳು ನಡೆಯುತ್ತವೆ. ಇಲ್ಲಿ ದೇವತಾರಾಧನೆಯೂ ನಡೆಯುತ್ತದೆ.

ಪಂಚ ಪವಿತ್ರ ಗ್ರಂಥ ಮಂದಿರದಲ್ಲಿರುವ ಒಂದೇ ತೆರನಾದ ಐದು ಗರ್ಭಗುಡಿಗಳಲ್ಲಿ ಭಗವದ್ಗೀತೆ ಬೈಬಲ್ ಕುರಾನ್, ಜೈನಪುರಾಣ, ಗ್ರಂಥ ಸಾಹಿಬ್ ಗ್ರಂಥಗಳ ಮೂಲ ಭಾಷಾ ಪ್ರತಿಗಳನ್ನು ತಂದಿರಿಸಲಾಗಿದೆ. ನಿತ್ಯ ಅವುಗಳ ಪಠಣ ನಡೆಯುತ್ತದೆ. ಗೀತಾ ಜಯಂತಿ, ಮಹಾವೀರ ಜಯಂತಿ, ಕ್ರಿಸ್‌ಮಸ್, ಈದ್‌ಮಿಲಾದ್ ಮತ್ತು ಗುರುನಾನಕ್ ಜಯಂತಿಯಂದು ಆಯಾ ಗ್ರಂಥಗಳ ಪಠಣ ಹಾಗೂ ವಿಶೇಷ ಪ್ರಾರ್ಥನೆ ನಡೆಯುತ್ತದೆ.

ನೆಲದಿಂದ 350 ಅಡಿಗಳಿಗಿಂತ ಎತ್ತರದಲ್ಲಿ ವಿಶ್ವಧರ್ಮ ಸ್ತೂಪವನ್ನು 1977 ರಲ್ಲಿ ನಿರ್ಮಿಸಲಾಯಿತು. ಆಗ ನಡೆದ ಮಹಾಯಜ್ಞ ಮತ್ತು ಭಾರತೀಯ ಧರ್ಮ ಸಮ್ಮೇಳನದ ನೆನಪಿಗಾಗಿ ಸ್ತೂಪ ನಿರ್ಮಿಸಲಾಗಿದೆ. 108 ಅಡಿ ಎತ್ತರದ ಸ್ತೂಪವು ವಿಶ್ವದಲ್ಲಿ ಈಗ ಪ್ರಚಲಿತವಿರುವ ಒಂಬತ್ತು ಧರ್ಮಗಳನ್ನು ಪ್ರತಿನಿಧಿಸುತ್ತದೆ. ಧರ್ಮದ ಸಮನ್ವಯತೆಗಾಗಿ ಅಂದಿನಿಂದ ಪ್ರತಿ ವರ್ಷ ಭಾರತೀಯ ಧರ್ಮ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ.

‘ಪರರ ಧರ್ಮಾಚರಣೆಗೆ ಸಹಕರಿಸಿ. ಧರ್ಮ ಜಾತಿ ಸೂಚಕವಲ್ಲ. ನೀತಿ ಸೂಚಕ ಎಂದು ತಿಳಿಯಿರಿ. ಪರಧರ್ಮಿಯರನ್ನು ಮಿತ್ರರೆಂದು ಪರಿಗಣಿಸಿ. ಸರ್ವಧರ್ಮಿಯರೊಂದಿಗೆ ಸಹಕರಿಸಿ ಸಮಾಜಸೇವೆ ಮೂಲಕ ವಿಶ್ವಶಾಂತಿಗಾಗಿ ನಿಮ್ಮ ಕೈಲಾದಷ್ಟು ಶ್ರಮಿಸಿ ದೇವಮಾನವರಾಗಿರಿ ಎಂಬುದು ರಾಘವೇಂದ್ರ ಗುರೂಜಿ ಅವರು ಲೋಕಕ್ಕೆ ನೀಡಿದ ಸಂದೇಶ ಈ ಪುಣ್ಯಸ್ಥಳದಲ್ಲಿ ಅನುರಣನಗೊಳ್ಳುತ್ತಿದೆ. ಒಂದು ಕಾಲದಲ್ಲಿ ಕಾಡಾಗಿದ್ದ ಕರಡಿಗುಡ್ಡ  ಈಗ ಎಲ್ಲ ಧರ್ಮಿಯರ ಪುಣ್ಯ ಸ್ಥಳವಾಗಿದೆ.

ಈ ಪುಣ್ಯ ಕ್ಷೇತ್ರಕ್ಕೆ ಬರುವವರು ಉಳಿದುಕೊಳ್ಳಲು ಹತ್ತು ಕೋಣೆಗಳ ಸುಸಜ್ಜಿತ ವಿಶ್ರಾಂತಿ ಗೃಹವಿದೆ.  ರಾಘವೇಂದ್ರ ಕೃಪಾಶ್ರಮದ ದೂರವಾಣಿ ನಂಬರ್: 98441 17558.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT