ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಿಯ ಯುಗಾಂತ್ಯ; ಈಜಿಪ್ಟ್ ಜನಾಂದೋಲನಕ್ಕೆ ಜಯ

Last Updated 12 ಫೆಬ್ರುವರಿ 2011, 5:30 IST
ಅಕ್ಷರ ಗಾತ್ರ

‘ಸರ್ವಾಧಿಕಾರಿ’ಯ ಮೂರು ದಶಕಗಳ ‘ಅಧಿಕಾರ ದಾಹ’ಕ್ಕೆ ಅಂತ್ಯ ಕಾಣಿಸಿದ ಎರಡು ವಾರಕ್ಕೂ ಹೆಚ್ಚು ಕಾಲದ ತೀವ್ರ ಪ್ರತಿಭಟನೆಯ ಪ್ರಮುಖ ಘಟನಾವಳಿಗಳು ಇಲ್ಲಿವೆ:

ಜನವರಿ 25: ಅಧ್ಯಕ್ಷರ ವಿರುದ್ಧ ಅಂತರ್ಜಾಲ ಆಂದೋಲನದ ಬಳಿಕ ದೇಶದ ಹಲವು ನಗರಗಳಲ್ಲಿ ಬೀದಿಗಿಳಿದ ಜನ. ಬಡತನ, ಭ್ರಷ್ಟಾಚಾರ, ನಿರುದ್ಯೋಗದಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಹ್ರೀರ್ ಚೌಕದಲ್ಲಿ ಭುಗಿಲೆದ್ದ ಘರ್ಷಣೆ.

ಜನವರಿ 28: ವ್ಯಾಪಿಸಿದ ಹಿಂಸಾಚಾರ. ಕೈರೊ, ಅಲೆಕ್ಸಾಂಡ್ರಿಯಾ, ಸೂಯೆಜ್ ನಗರಗಳಲ್ಲಿ ಕರ್ಫ್ಯೂ ಘೋಷಣೆ, ಸೇನೆ ನಿಯೋಜನೆ. ಸಂಪುಟ ವಜಾಗೊಳಿಸಿದ ಮುಬಾರಕ್. ಪ್ರತಿಭಟನಾಕಾರರ ಕಷ್ಟ ನನಗರ್ಥವಾಗುತ್ತದೆ ಎಂದು ಹೇಳಿದ್ದರ ಜೊತೆಜೊತೆಗೇ ಅವರಿಂದ ಭದ್ರತಾ ಪಡೆಗಳ ನಿಯೋಜನೆಯ ಸಮರ್ಥನೆ.ಜನವರಿ 29: ಜಾಗೃತ ಪಡೆಯ ಮುಖ್ಯಸ್ಥ ಒಮರ್ ಸುಲೇಮಾನ್ ಉಪಾಧ್ಯಕ್ಷ, ನಾಗರಿಕ ವಿಮಾನಯಾನ ಸಚಿವ ಅಹ್ಮದ್ ಶಫೀಕ್ ಪ್ರಧಾನಿಯಾಗಿ ನೇಮಕ.

ಜನವರಿ 31: ಪ್ರತಿಭಟನಾಕಾರರ ವಿರುದ್ಧ ಬಲ ಪ್ರಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಜನರ ಪರ ನಿಂತ ಸೇನೆ.

ಫೆಬ್ರುವರಿ 1: ಪ್ರಮುಖ ನಾಯಕರ ಜನಾಂದೋಲನ ಕರೆಯ ಬಳಿಕ ಕೈರೊ ಸೇರಿದಂತೆ ಮುಖ್ಯ ನಗರಗಳಲ್ಲಿ ಬೃಹತ್ ರ್ಯಾಲಿ. ಮುಬಾರಕ್‌ರಿಂದ ಸಂವಿಧಾನಾತ್ಮಕ ಸುಧಾರಣೆ ಹಾಗೂ ಸೆಪ್ಟೆಂಬರ್‌ನ ಅಧ್ಯಕ್ಷೀಯ ಚುನಾವಣೆಯ ನಂತರ ಕೆಳಗಿಳಿಯುವ ಭರವಸೆ. ಅಧಿಕಾರ ತ್ಯಜಿಸಲು ಪ್ರತಿಭಟನಾಕಾರರಿಂದ ಫೆಬ್ರುವರಿ 4ರವರೆಗೆ ಗಡುವು.

ಫೆಬ್ರುವರಿ 2, 3: ಪ್ರಮುಖ ಪ್ರತಿಭಟನಾ ಸ್ಥಳ ತಹ್ರೀರ್ ಚೌಕದತ್ತ ಮುನ್ನುಗ್ಗಲೆತ್ನಿಸಿದ ಅಧ್ಯಕ್ಷರ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆ.

ಫೆಬ್ರುವರಿ 5: ಮುಬಾರಕ್ ಪುತ್ರ ಗಮಾಲ್ ಮುಬಾರಕ್ ಸೇರಿದಂತೆ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕರಿಂದ ಸಾಮೂಹಿಕ ರಾಜೀನಾಮೆ.

ಫೆಬ್ರುವರಿ 10: ಪಕ್ಷದ ನಾಯಕರಿಂದ ಅಧ್ಯಕ್ಷರ ಅಧಿಕಾರ ತ್ಯಾಗದ ಹೇಳಿಕೆ. ಕೆಲವೇ ಕ್ಷಣಗಳಲ್ಲಿ ಟೆಲಿವಿಷನ್ ಭಾಷಣದಲ್ಲಿ ಇದನ್ನು ಅಲ್ಲಗಳೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ ಮುಬಾರಕ್.

ಫೆಬ್ರುವರಿ 11: ಕೊನೆಗೂ ಪ್ರತಿಭಟನೆಯ 18ನೇ ದಿನ ಜನಾಂದೋಲನಕ್ಕೆ ಗೆಲುವು. ರಜಾದಿನದ ನೆಚ್ಚಿನ ತಾಣ ಶರ್ಮ್- ಅಲ್- ಶೇಖ್‌ನ ರೆಡ್‌ಸೀ ರೆಸಾರ್ಟ್‌ನತ್ತ ಮುಬಾರಕ್ ಪಲಾಯನ.

ಜನದನಿಗೆ ‘ಮುಬಾರಕ್’
ಸುದೀರ್ಘಾವಧಿಯ ‘ಸರ್ವಾ ಧಿಕಾರ’ದ ವಿರುದ್ಧ ದನಿ ಎತ್ತಿ  ಅಧ್ಯಕ್ಷ ಮುಬಾರಕ್ ಅವರ ಯುಗಾಂತ್ಯಕ್ಕೆ ಕಾರಣರಾದ ಈಜಿಪ್ಟ್‌ನ ಜನರಿಗೆ ಈಗ ಎಲ್ಲೆಡೆಯಿಂದ ‘ಮುಬಾರಕ್’ (ಶುಭಾಶಯ) ಹರಿದುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT