ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಸ್ತ್ರೀ-ದೋಷ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಬಹುಶಃ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಅವಧಿ ಹುಡುಗಿಯರ ಜೊತೆಗೆ ಥಳುಕು ಹಾಕಿಕೊಂಡೇ ಬೆಳೆದಿರುವ ಹೆಸರು ಸಲ್ಮಾನ್ ಖಾನ್. ಐಶ್ವರ್ಯಾ ರೈ, ಕತ್ರಿನಾ ಕೈಫ್ ತರಹದ ಚೆಲುವಾಂತ ಚೆಲುವೆಯರ ಜೊತೆಗೆ ಹೆಸರು ಜೋಡಿಸಿಕೊಂಡಾಗ ಸುದ್ದಿಯಾದ ಸಲ್ಮಾನ್ ಖಾನ್, ತಮ್ಮ ಹರಕತ್ತುಗಳಿಂದಲೂ ಸದ್ದು ಮಾಡಿದವರು.

ಈಗ ಸೋನಾಕ್ಷಿ ಸಿನ್ಹಾ ತರಹದ ಚಿಕ್ಕ ಪ್ರಾಯದ ನಟಿಯರ ಸಹವಾಸ ಅವರಿಗಿದೆ ಎಂಬ ಪುಗ್ಗ ಗಾಳಿಯಲ್ಲಿ ಹಾರಾಡುತ್ತಿದೆ. ಸಲ್ಮಾನ್ ಸ್ತ್ರೀಲೋಲ ಹೌದೋ, ಅಲ್ಲವೋ ಎಂದು ತೆರೆಮರೆಯಲ್ಲಿ ಅನೇಕರ ನಡುವೆ ಮಾತುಕತೆ ನಡೆಯುತ್ತಲೇ ಇತ್ತು. ಆದರೆ, ಖುದ್ದು ಅವರೇ ಈ ಪ್ರಶ್ನೆಗೆ ಕೊಟ್ಟಿರುವ ಉತ್ತರ ಮಜವಾಗಿದೆ. ಕೇಳಿ...

`ನನ್ನ ಹಣೆಬರಹವೇ ಹೀಗೆ. ನೋಡಲಷ್ಟೇ ಅಲ್ಲ, ಆಂತರಿಕವಾಗಿಯೂ ಸುಂದರವಾಗಿರುವ ಹುಡುಗಿಯರು ಮೊದಲು ನನ್ನನ್ನು ತುಂಬಾ ಇಷ್ಟಪಡುತ್ತಾರೆ.ಹಚ್ಚಿಕೊಳ್ಳುತ್ತಾ ಹೋದಂತೆ ನನ್ನಿಂದ ದೂರವಾಗುತ್ತಾರೆ.

ಬಹುಶಃ ನನ್ನಲ್ಲೇ ಏನೋ ತುಂದರೆ ಇರಬೇಕು. ಅದೇನು ಎಂಬುದನ್ನು ಹುಡುಕುತ್ತಲೇ ಇದ್ದೇನೆ. ಅಷ್ಟರಲ್ಲಿ ಆಗಲೇ ನನಗೆ ವಯಸ್ಸಾಗುತ್ತಿದೆ. ನಾನು ಹುಡುಗಿಯರಿಗೆ ಅನ್ಯಾಯವನ್ನಂತೂ ಮಾಡಿಲ್ಲ. ನನ್ನ ಸ್ವಭಾವದಲ್ಲೇ ಏನೋ ದೋಷ ಇದ್ದೀತು.

ಮನುಷ್ಯನ ಬದುಕೇ ಹೀಗೆ. ಕೆಲವು ಸಮಸ್ಯೆಗಳಿಗೆ ಪರಿಹಾರವೇ ಸಿಗುವುದಿಲ್ಲ. ಯಾಕೆಂದರೆ, ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳುವುದರಲ್ಲೇ ಆಯುಸ್ಸು ಮುಗಿದುಹೋಗುತ್ತದೆ. ಅದಕ್ಕೇ ನಾನೀಗ ತೀರ್ಮಾನಿಸಿದ್ದೇನೆ- ಮದುವೆಯಾಗಲು ನಾನು ಖಂಡಿತ ಯೋಗ್ಯನಲ್ಲ.
 
ಬಾಯ್‌ಫ್ರೆಂಡ್ ಆಗುವ ಮನಸ್ಥಿತಿ ಕೂಡ ಈಗ ಉಳಿದಿಲ್ಲ. ಜನ ಮೆಚ್ಚುವ ಇನ್ನಷ್ಟು ಸಿನಿಮಾ ಮಾಡಿಕೊಂಡು, ನನ್ನನ್ನು ಯಾರಾದರೂ ಮೆಚ್ಚಿಬಂದರೆ ಅವರ ಜೊತೆಗೆ ಒಂದಿಷ್ಟು ಒಳ್ಳೆಯ ಕ್ಷಣಗಳನ್ನು ಕಳೆದು ಬದುಕು ಮುಗಿಸುವ ಬಯಕೆ~.

ಸಲ್ಮಾನ್ ಖಾನ್ ಯಾಕೆ ಹೀಗೆ ಎಂದು ಅವರ ತಂದೆ ಸಲೀಮ್ ಖಾನ್ ಅವರನ್ನು ಕೇಳಿದರೆ, ಅವರೂ ಮೊದಮೊದಲು ಪೆಚ್ಚಾಗುತ್ತಾರೆ. ಆಮೇಲೆ ತಡವಾಗಿ ಉತ್ತರ ಹುಡುಕಲು ಯತ್ನಿಸುತ್ತಾರೆ:

`ಅವನು ಚಿಕ್ಕ ವಯಸ್ಸಿನಿಂದಲೂ ತುಂಟ. ಮಾಡಬೇಡ ಅಂದಿದ್ದನ್ನೇ ಮಾಡುತ್ತಿದ್ದ.ಈಗ ದೊಡ್ಡವನಾಗಿದ್ದಾನೆ. ಆದರೆ, ಬಾಲ್ಯದ ಆ ಗುಣ ಇನ್ನೂ ಹೋಗಿಲ್ಲ. ಮದುವೆಯ ವಿಷಯ ಬಂದಾಗಲೆಲ್ಲಾ ನನಗೇ ಮುಜುಗರವಾಗುತ್ತದೆ. ಯಾಕೆಂದರೆ, ಹೆಲೆನ್ ಜೊತೆ ನನಗೆ ಸಂಬಂಧವಿತ್ತು. ಅದು ನನ್ನ ಮೊದಲ ಹೆಂಡತಿಗೆ ಗೊತ್ತಾದದ್ದು ತಡವಾಗಿ.

ನಾನೇ ಹೇಳಬೇಕು ಎಂದುಕೊಂಡಿದ್ದರೂ ಬೇರೆಯವರಿಂದ ನನ್ನ ಹೆಂಡತಿಗೆ ಆ ಸಂಗತಿ ತಿಳಿಯಿತು. ಆ ಸಂದರ್ಭದಲ್ಲಿ ನಾನು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಹೆಣ್ಣಿನ ಆಕರ್ಷಣೆ ಪುರುಷನಿಗೆ ಸಹಜವಾದದ್ದೇ ಹೌದು. ಆದರೆ, ಮನಸ್ಸು ಮಾಗುತ್ತಾ ಹೋದಂತೆ ಹೆಣ್ಣಿನ ಜೊತೆಗಿನ ಸಂಬಂಧವನ್ನು ನಾವೇ ವಿಮರ್ಶೆ ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. ಈ ವಿಷಯದಲ್ಲಿ ಸಲ್ಮಾನ್ ಮನಸ್ಥಿತಿಯೂ ನನ್ನಂತೆಯೇ ಇರಬೇಕೋ ಏನೋ? ಇನ್ನು ನಾನು ಅವನನ್ನು ಮದುವೆಯ ಬಗ್ಗೆ ಒತ್ತಾಯಿಸಲಾರೆ~.

`ದಬಂಗ್~ ಚಿತ್ರಕ್ಕೀಗ ರಾಷ್ಟ್ರಪ್ರಶಸ್ತಿಯ ಗರಿ. ಈ ಬಗ್ಗೆ ಸಲ್ಮಾನ್‌ಗೆ ಅಂಥ ಹೆಮ್ಮೆಯೇನೂ ಇಲ್ಲ. `ಜನ ಸಿನಿಮಾ ನೋಡಿ ಗೆದ್ದರೆ ಅದೇ ಅವಾರ್ಡು. ಅಭಿನವ್ ಕಶ್ಯಪ್ ಸ್ಕ್ರಿಪ್ಟ್ ಹಿಡಿದುಕೊಂಡು ಓಡಾಡುತ್ತಿದ್ದಾಗ ನಾನು ಅವಕಾಶ ಕೊಟ್ಟೆ.

ಸಿನಿಮಾ ಮಾಡಿದ ನಂತರ ಅನುರಾಗ್ ಕಶ್ಯಪ್ ಟ್ವಿಟ್ಟರ್‌ನಲ್ಲಿ ನನ್ನ ತಮ್ಮನನ್ನೇ ಬಾಯಿಗೆ ಬಂದಂತೆ ಬೈದರು. ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡುವ ಬಯಕೆ ಇಟ್ಟುಕೊಂಡು ಅಭಿನವ್ ಬಂದದ್ದು. ನಾನು ಅದನ್ನು ದೊಡ್ಡ ಬಜೆಟ್‌ನ ಸಿನಿಮಾ ಆಗಿಸಿದೆ. ಈ ಬಗೆಗೂ ನಿರ್ದೇಶಕ ಅಭಿನವ್‌ಗೆ ಬೇಸರವಿತ್ತು.
 
ಅವನಿಗೆ ಸಲ್ಲಬೇಕಾದ ಸಂಭಾವನೆಯನ್ನು ನಾನು ಕೊಟ್ಟಿದ್ದೆ ಎಂಬ ಸಮಾಧಾನ ನನ್ನದು. ಆದರೂ ಒಬ್ಬ ನಿರ್ದೇಶಕ ತನ್ನ ಚಿತ್ರವನ್ನು ಅಷ್ಟು ಹಚ್ಚಿಕೊಳ್ಳುವುದು ನನಗೆ ಆಶ್ಚರ್ಯದ ಸಂಗತಿಯಾಗಿ ಕಾಣುತ್ತದೆ.

ದಬಂಗ್‌ನ ಎರಡನೇ ಭಾಗ ನಿರ್ದೇಶಿಸಲು ಅಭಿನವ್ ಒಪ್ಪಲಿಲ್ಲ. ಅದಕ್ಕೇ ಅರ್ಬಾಜ್ ಖಾನ್‌ಗೆ ಆ ಜವಾಬ್ದಾರಿ ಕೊಟ್ಟೆ. ರಾಷ್ಟ್ರಪ್ರಶಸ್ತಿಯಿಂದ ನನಗಿಂತ ಅಭಿನವ್‌ಗೆ ಹೆಚ್ಚು ಖುಷಿಯಾಗಿರಬೇಕು~ ಅಂತಾರೆ ಸಲ್ಮಾನ್.

ಅಂದಹಾಗೆ, ಜೂನ್ ಮೊದಲ ವಾರ ಸಲ್ಮಾನ್ ಅಭಿನಯದ `ರೆಡಿ~ ರೀಮೇಕ್ ಚಿತ್ರ ತೆರೆಕಂಡಿದೆ. `ದಬಂಗ್~ಗೆ ಎದ್ದಿದ್ದ ಅಲೆಯೇ ಈ ಚಿತ್ರದತ್ತಲೂ ವಾಲಿಕೊಂಡು ಬರಲಿದೆ ಎಂಬುದು ಅವರ ನಂಬುಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT