ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಹಬ್ಬದ ಸಂತಸ...

Last Updated 4 ಜನವರಿ 2011, 13:45 IST
ಅಕ್ಷರ ಗಾತ್ರ

ಹಬ್ಬಗಳೆಂದರೆ ಎಲ್ಲರಲ್ಲೂ ಹಿಗ್ಗು. ಹಿರಿಯರಿಂದ ಹಡಿದು ಕಿರಿಯರವರೆಗೂ ಉತ್ಸಾಹ. ಹಬ್ಬಗಳು ನಮ್ಮ ಸಂಸ್ಕೃತಿಯ ಸಂಕೇತ ಮಾತ್ರವಲ್ಲ, ಮನಸ್ಸುಗಳನ್ನು ಒಗ್ಗೂಡಿಸುವ ಒಂದು ಸುಂದರ ಗಳಿಗೆ. ಈ ವಿಶೇಷ ಗಳಿಗೆಯನ್ನು ಶಾಲಾ ಕಾಲೇಜುಗಳಲ್ಲಿ ಯುವಜನತೆ ವೈವಿಧ್ಯಮಯವಾಗಿ ಆಚರಿಸುತ್ತಾರೆ. ಆಟ ಪಾಠಗಳೊಂದಿಗೆ ಒಂದಿಷ್ಟು ಮನರಂಜನೆ ಮತ್ತು ನಮ್ಮ ಸಂಸ್ಕೃತಿ  ಬಗೆಗಿನ ಗೌರವ ಪ್ರಸ್ತುತಪಡಿಸಲು ಇದೊಂದು ವಿಶೇಷ ಸಂದರ್ಭ. ಇಂತಹ ಹಬ್ಬಗಳ ಆಚರಣೆಯ ಸಮಯ ದೊರೆಯುವ ಕೆಲವು ಅನುಪಮ ಕ್ಷಣಗಳು ವಿದ್ಯಾರ್ಥಿ ಜೀವನದ ನೆನಪಿಗೆ ಒಂದು ಪುಟ್ಟ ಕಾಣಿಕೆ.

ಹಬ್ಬಗಳನ್ನು ಮನೆಗಳಲ್ಲಿ ಮಾತ್ರ ಆಚರಿಸುವ ಪರಿ ಬದಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೆಲವು ಹಬ್ಬಗಳನ್ನು ಎಲ್ಲರೂ ಸಡಗರದಿಂದ ಒಗ್ಗೂಡಿ ಆಚರಿಸುವುದು ಈಗ ಪ್ರಸ್ತುತ. ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ ಇಂತಹ ರಾಷ್ಟ್ರೀಯ ಹಬ್ಬಗಳು ಮಾತ್ರವಲ್ಲದೆ ಗಣೇಶ ಚತುರ್ಥಿ, ಆಯುಧಪೂಜೆ, ಕ್ರಿಸ್‌ಮಸ್... ಹೀಗೆ ಹಲವು ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವುದು ಈಗ ಪದ್ಧತಿ.

ಇಡೀ ಕಾಲೇಜನ್ನು ಅಲಂಕರಿಸಿ, ಪೂಜೆ, ಹಾಡು, ನೃತ್ಯ, ಲಘು ಭೋಜನ, ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಉಪಾಧ್ಯಾಯರು, ವಿದ್ಯಾರ್ಥಿಗಳು ಎಲ್ಲರೂ ಈ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲ ಭೇದಗಳನ್ನು ಮರೆತು ಸಿಹಿಯೊಂದಿಗೆ ಸಂತಸ ಹಂಚಿಕೊಳ್ಳುತ್ತಾರೆ.

ಇಂತಹ ಒಂದು ಹಬ್ಬದ ಆಚರಣೆ ನಗರದಲ್ಲಿ ಇತ್ತೀಚೆಗಷ್ಟೆ ನಡೆಯಿತು. ಚಳಿಗಾಲದ ರಜಾ ಆರಂಭಗೊಳ್ಳುವ ಮುನ್ನ ಕೆಲವು ಕಾಲೇಜುಗಳು ಕ್ರಿಸ್‌ಮಸ್ ಹಬ್ಬವನ್ನು  ಸಂಭ್ರಮದಿಂದ ಆಚರಿಸಿದವು. ಇಡೀ ಕಾಲೇಜಿಗೆ ಕಾಲೇಜನ್ನೇ ದೀಪಗಳು ಮತ್ತು ನಕ್ಷತ್ರಗಳಿಂದ ಸಿಂಗರಿಸಲಾಗಿತ್ತು. ಸಂತೋಷ ಕೂಟ   ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಗ್ಗೂಡಿ ಆಚರಿಸಿದರು. 
ಕ್ರೈಸ್ಟ್ ಕಾಲೇಜು, ಮೌಂಟ್ ಕಾರ್ಮೆಲ್‌ನಂತಹ ಕೆಲವು ಕಾಲೇಜುಗಳು ಕ್ರಿಸ್‌ಮಸ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದವು.

ಹಾಗೆಯೇ ಜ್ಯೋತಿ ನಿವಾಸ್ ಕಾಲೇಜಿನ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳು ಒಗ್ಗೂಡಿ ‘ಕ್ರಿಸ್ತನಮನ’ ಕಾರ್ಯಕ್ರಮ ಆಯೋಜಿಸಿದ್ದರು. ಅಷ್ಟೇ ಅಲ್ಲದೆ  ಕ್ರಿಸ್ತನ ಹಾಡುಗಳನ್ನು, ನೃತ್ಯಗಳನ್ನು ಮತ್ತು ಜೀವನ ಚರಿತ್ರೆಯ ದೃಶ್ಯದ ತುಣುಕುಗಳನ್ನು ಪ್ರದರ್ಶಿಸಿ ಕ್ರಿಸ್‌ಮಸ್ ಅನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಮೌಂಟ್ ಕಾರ್ಮೆಲ್ ಕಾಲೇಜಿನ ಪಿಯು ವಿದ್ಯಾರ್ಥಿಗಳು ಕ್ರಿಸ್ತನ ಕೆಲವು ಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನೂ ಕೂಡ ಅದರಲ್ಲಿ ಭಾಗಿಯಾಗುವಂತೆ ಮಾಡಿದರು. ಎಲ್ಲ ತರಗತಿಯ ವಿದ್ಯಾರ್ಥಿಗಳು ತಮ್ಮದೇ ಆದ ಸಂತೋಷ ಕೂಟಗಳನ್ನು ಏರ್ಪಡಿಸಿಕೊಂಡು ಸಿಹಿಯೊಂದಿಗೆ ಶುಭಾಶಯ ಹಂಚಿಕೊಂಡರು. ಕ್ರಿಸ್‌ಮಸ್ ಸಂಕೇತಿಸುವ ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಎಲ್ಲರೂ ತೊಟ್ಟು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ನಾವು ಏಸು ಕ್ರಿಸ್ತನ ಹಲವು ಹಾಡುಗಳನ್ನು ಹಾಡಿದೆವು, ನಮ್ಮ ಶಿಕ್ಷಕರನ್ನೂ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆವು, ಸಾಂಟಾ ಕ್ಲಾಸ್‌ನ ವೇಷವನ್ನೂ ಧರಿಸಿದೆವು ಎಂದು ಸಂತಸದಿಂದ ನುಡಿದರು ವಿದ್ಯಾರ್ಥಿನಿ ಸ್ಪೂರ್ತಿ.

ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಕ್ರಿಸ್‌ಮಸನ್ನು ಇನ್ನೂ ವೈವಿಧ್ಯಮವಾಗಿ ಆಚರಿಸಿದರು. ಕೇಕ್ ಮೇಕಿಂಗ್, ಕ್ರಿಬ್ ಮೇಕಿಂಗ್‌ನಂತಹ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿ ಇಡಿ  ದಿನವನ್ನು ಸಂತೋಷದಿಂದ ಕಳೆದರು. ಕೆಲವರು ಸಾಂಟಾ ಕ್ಲಾಸ್‌ನ ವೇಷ ಧರಿಸಿ ಕ್ಯಾಂಪಸ್‌ನ ಸುತ್ತ ಓಡಾಡುತ್ತ ಸಂಭ್ರಮಿಸಿದರು. ಕಾಲೇಜು ನಮಗೆ ಎಲ್ಲ ಹಬ್ಬಗಳನ್ನು ಆಚರಿಸಲು ಅವಕಾಶ ನೀಡುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ರಜೆಗಳಿಗೆ ತೆರಳುವ ಮುನ್ನ ಕ್ರಿಸ್‌ಮಸ್ ಹಬ್ಬವನ್ನು ಸಖತ್ತಾಗಿ ಆಚರಿಸಬೇಕೆಂದು ನಿರ್ಧರಿಸಿದ್ದೆವು ಅಂದುಕೊಂಡಂತೆ ಚೆನ್ನಾಗಿ ಆಚರಿಸಿದೆವು ಎಂದು ಎಸ್‌ಜೆಸಿಸಿ ಕಾಲೇಜಿನ ವಿದ್ಯಾರ್ಥಿನಿ ಗ್ಲೆನ್ ಹೇಳುತ್ತಾರೆ.

ಚೆಂದದ ದೀಪಗಳನ್ನು ಅಲಂಕರಿಸಿದ್ದರಿಂದ ಕಾಲೇಜು ಝಗಮಗಿಸುತ್ತಿದ್ದುದು ನೋಡಲು ತುಂಬಾ ಆಕರ್ಷಕವಾಗಿತ್ತು. ಕ್ರಿಸ್‌ಮಸ್ ಆಚರಣೆಯ ವಿಶೇಷ ಅನುಭವ ಇದಾಗಿತ್ತು ಎಂದರು ಕಾಲೇಜಿನ ವಿದ್ಯಾರ್ಥಿಗಳು. ಕ್ರಿಸ್‌ಮಸ್ ಎಂದರೆ ರಜ ಎಂದು ಭಾವಿಸದೆ ಈ ರೀತಿ ಹಬ್ಬದ ಆಚರಣೆಆಚರಣೆ ಮಾಡಿದ್ದು, ವಿಭಿನ್ನ ಸಂಸ್ಕೃತಿಯ ಪರಿಚಯ ಮಾಡಿಕೊಂಡಂತಾಯಿತು ಎಂದು ಕ್ರೈಸ್ಟ್‌ಕಾಲೇಜಿನ ಜೋತ್ಸ್ನಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT