ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ಕಾಯಿದೆಗೆ ತಿದ್ದುಪಡಿ: ರಾಜ್ಯಪಾಲ ಸಲಹೆ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು:  ಭಾರತೀಯ ಸಾಕ್ಷ್ಯ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ 86ನೇ ತಂಡದ ಪ್ರಶಿಕ್ಷಣಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರಧಾನ ಭಾಷಣ ಮಾಡಿದ ಅವರು ಈಗಿರುವ ಸಾಕ್ಷ್ಯ ಕಾಯಿದೆ 1872ರಷ್ಟು ಹಳೆಯದಾಗಿದೆ. ಈ ಕಾಯಿದೆಯಲ್ಲಿನ ಬಹುತೇಕ ಅಂಶಗಳು ಈಗಿನ ಪರಿಸ್ಥಿತಿಗೆ ಪ್ರಸ್ತುತವಾಗಿಲ್ಲ ಎಂದು ಹೇಳಿದರು.

ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಾಗ ಹೆಚ್ಚಿನ ಆಸಕ್ತಿ ವಹಿಸಬೇಕು. ಕಾಲ ಬದಲಾದಂತೆ ಸೈಬರ್ ಅಪರಾಧಗಳಂತಹ ಹೊಸ ಸವಾಲುಗಳು ಎದುರಾಗುತ್ತಿವೆ. ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇಂತಹ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಪೊಲೀಸರ ಕಾರ್ಯವೈಖರಿ, ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು, ಕೆಲವೊಂದು ರಾಜ್ಯಗಳಲ್ಲಿ ಪೊಲೀಸ್ ವ್ಯವಸ್ಥೆ ಗುಣಮಟ್ಟ ನಿರೀಕ್ಷಿತ ರೀತಿಯಲ್ಲಿ ಇಲ್ಲ. ರಾಷ್ಟ್ರದ ಎಲ್ಲ ರಾಜ್ಯಗಳಲ್ಲೂ ಏಕಪ್ರಕಾರದ ಉತ್ತಮ ಗುಣಮಟ್ಟ ಇರುವಂತಾಗಬೇಕು ಎಂದು ಅವರು ಆಶಿಸಿದರು.

ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ಡಾ. ಅಮಿತಾ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಈವರೆಗೆ ಮುಸ್ಸೋರಿಯಾ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆಯುತ್ತಿದ್ದ ಇಂತಹ ತರಬೇತಿಯನ್ನು ಇದೇ ಮೊದಲ ಬಾರಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ. ಈ ತರಬೇತಿಯಲ್ಲಿ 12 ರಾಜ್ಯಗಳ 65 ಐ.ಪಿ.ಎಸ್. ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದರು.

15 ವಾರಗಳ ಈ ತರಬೇತಿಯಲ್ಲಿ ಆಂಧ್ರ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಮತ್ತಿತರ ರಾಜ್ಯಗಳಿಗೆ ಹಂಚಿಕೆಯಾದ ಐಪಿಎಸ್ ಅಧಿಕಾರಿಗಳು ಇದ್ದಾರೆ. ಇ-ಲರ್ನಿಂಗ್‌ಗೆ ಸಂಬಂಧಿಸಿದ ತರಬೇತಿ ಸಿ.ಡಿ.ಗಳನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

ಪ್ರಫುಲ್ಲತಾ ಹಂಸರಾಜ್ ಭಾರದ್ವಾಜ್ , ದಕ್ಷಿಣ ವಲಯ ಐಜಿಪಿ ಎ.ಎನ್.ಎಸ್. ಮೂರ್ತಿ, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್, ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್, ಜಿಲ್ಲಾ ಪಂಚಾಯಿತಿ ಸಿಇಓ ಜಿ. ಸತ್ಯವತಿ,  ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT