ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಐಷಾರಾಮಿ ಸರ್ಕಾರಿ ಕಟ್ಟಡ

Last Updated 3 ಅಕ್ಟೋಬರ್ 2011, 6:05 IST
ಅಕ್ಷರ ಗಾತ್ರ

ಸಾಗರ: `ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ~ ಎಂಬ ಗಾದೆ ಮಾತು ಹಳೆಯದಾಗಿದ್ದರೂ ಅದನ್ನು ಈಗಲೂ ನಿಜ ಮಾಡುವಂತೆ ಸರ್ಕಾರದ ಅನೇಕ ಯೋಜನೆಗಳು ಜಾರಿಗೊಳ್ಳುತ್ತಲೇ ಇರುತ್ತವೆ. ಈ ಮಾತಿಗೆ ಪುಷ್ಟಿ ನೀಡುವಂತಹ ವಿದ್ಯಮಾನವೊಂದು ನಗರದಲ್ಲಿ ನಡೆಯುತ್ತಿದೆ.

ಇಲ್ಲಿನ ಭೀಮನಕೋಣೆ ರಸ್ತೆಯಲ್ಲಿ ಉಪವಿಭಾಗಾಧಿಕಾರಿ ಕುಟುಂಬದ ವಾಸಕ್ಕಾಗಿ ವಸತಿಗೃಹವೊಂದು ನಿರ್ಮಾಣವಾಗುತ್ತಿದೆ. ಇದರ ನಿರ್ಮಾಣದ ಒಟ್ಟು ವೆಚ್ಚ ಬರೋಬ್ಬರಿ  ್ಙ ಒಂದು ಕೋಟಿ!

ಯಾವ ತಾರಾ ಹೋಟೆಲ್‌ನ ಸೌಲಭ್ಯಕ್ಕೂ ಕಡಿಮೆ ಇಲ್ಲದಂತೆ ನಿರ್ಮಾಣವಾಗಿರುವ  ಈ ಐಷಾರಾಮಿ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ್ಙ 35 ಲಕ್ಷ  ವೆಚ್ಚ ಮಾಡಲಾಗುತ್ತಿದೆ.

ಇದುವರೆಗೆ ಉಪ ವಿಭಾಗಾಧಿಕಾರಿ ಆಗಿ, ತಹಶೀಲ್ದಾರ್ ಆಗಿ ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುವವರು ನೆಹರು ಮೈದಾನದಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬರುವ ಅಧಿಕಾರಿಗಳು ಈ ನಿವಾಸದ ಬಗ್ಗೆ ಅತೃಪ್ತಿ ಸೂಚಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹೊಸದಾಗಿ ವಸತಿ ಗೃಹ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು.

2010ನೇ ಸಾಲಿನ ಮಾರ್ಚ್ 1ರಂದು ಭೀಮನಕೋಣೆ ರಸ್ತೆಯಲ್ಲಿ ಉಪ ವಿಭಾಗಾಧಿಕಾರಿ ವಸತಿ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸುವ ಕಾಮಗಾರಿ ಆರಂಭಗೊಂಡಿತು. ಕಳೆದ ಜುಲೈ 31ಕ್ಕೆ ಕಟ್ಟಡ ನಿರ್ಮಾಣ ಮುಗಿದಿದ್ದು ಈಗ ಕಾಂಪೌಂಡ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಕರ್ನಾಟಕ ಗೃಹ ಮಂಡಳಿ ಈ ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ನಿರ್ವಹಿಸಿದ್ದರೆ ಲೋಕೋಪಯೋಗಿ ಇಲಾಖೆ ಕಾಂಪೌಂಡ್ ನಿರ್ಮಿಸುತ್ತಿದೆ. ಬೆಂಗಳೂರಿನ `ಹೈ ಡಿಸೈನ್~ ಎಂಬ ಸಂಸ್ಥೆ ಈ ಕಟ್ಟಡದ ವಿನ್ಯಾಸವನ್ನು ಮಾಡಿದೆ.

ವಸತಿಗೃಹ ನಿರ್ಮಿಸಿರುವ ಪ್ರದೇಶದ ಸುತ್ತಳತೆ ಸುಮಾರು ಎರಡು ಎಕರೆ! ಕಟ್ಟಡದ ಕೆಳ ಅಂತಸ್ತು 2,690 ಚದರ ಅಡಿ ಹೊಂದಿದ್ದರೆ ಮೊದಲ ಅಂತಸ್ತು 1,800 ಚದರ ಅಡಿ ಹೊಂದಿದೆ.

ಕೆಳ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ವಿಶಾಲವಾದ ಹಾಲ್, ಮಲಗುವ ಕೋಣೆಗಳು, ದೇವರಕೋಣೆ ಇವೆಲ್ಲದಕ್ಕೂ ಬೆಲೆ ಬಾಳುವ ಮರಗಳನ್ನು ಬಳಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಈ ವಸತಿ ಗೃಹ ಒಳಗೊಂಡಿದೆ.

ಕಳೆದ ಐದಾರು ವರ್ಷಗಳಿಂದ ತಾಲ್ಲೂಕಿನ ಅನೇಕ ಬಡ ಕುಟುಂಬಗಳು ತಮಗೆ ನಿವೇಶನ ಹಾಗೂ ಮನೆ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿ ಅದು ಯಾವಾಗ ಮಂಜೂರಾಗುವುದೊ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಬಗರ್‌ಹುಕುಂ ಜಮೀನು, ಆಶ್ರಯ ಮನೆಗಳಿಗೆ ಹಕ್ಕುಪತ್ರ ವಿತರಣೆ ಇವೇ ಮೊದಲಾದ ಕೆಲಸಗಳು ಒಂದಲ್ಲಾ ಒಂದು ನೆಪದಿಂದ ನೆನೆಗುದಿಗೆಬಿದ್ದಿವೆ.

ಇಂತಹ ಸನ್ನಿವೇಶದಲ್ಲಿ ಓರ್ವ ಅಧಿಕಾರಿ ಕುಟುಂಬದ ವಾಸಕ್ಕೆ ಸರ್ಕಾರ ್ಙ ಒಂದು ಕೋಟಿ ವೆಚ್ಚ ಮಾಡಿ ಮನೆ ನಿರ್ಮಿಸುವ ಔಚಿತ್ಯ ಏನಿತ್ತು ಎಂಬ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ರಾಜಕಾರಣಿಗಳ ಹಾಗೂ ಅಧಿಕಾರಿಗಳ ವಿಷಯ ಬಂದರೆ ಸರ್ಕಾರದ ಹಣ ಹೇಗೆ ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂಬುದು ಜನರ ಅನಿಸಿಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT