ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ ನೂರು: ಸೌಲಭ್ಯ ಮಾತ್ರ ಶೂನ್ಯ

Last Updated 15 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಹಾಸನ: ಕಳೆದ ವಾರವಿಡೀ ಹಾಸನದಲ್ಲಿ ಕ್ರೀಡಾ ಚಟುವಟಿಕೆಗಳ ಸುಗ್ಗಿ. ಒಂದೆಡೆ ಶಿಕ್ಷಣ ಇಲಾಖೆಯವರು ನಡೆಸುವ ಕ್ರೀಡಾ ಕೂಟಗಳು, ಇನ್ನೊಂದೆಡೆ ಜಿಲ್ಲೆಯಲ್ಲಿ ಮೊದಲ ಬಾರಿ ನಡೆದ ಮೈಸೂರು ವಿಭಾಗಮಟ್ಟದ ಕ್ರೀಡಾಕೂಟ. ಹಾಸನದ ಜಿಲ್ಲಾ ಕ್ರೀಡಾಂಗಣದ ಸುತ್ತ ಕ್ರೀಡಾಪಟುಗಳ ಓಡಾಟ ಕಳೆದವಾರ ಜೋರಾಗಿಯೇ ಇತ್ತು.

ಮೊದಲಬಾರಿ ಆಯೋಜಿಸಿದ್ದ ದಸರಾ ಕ್ರೀಡಾ ಕೂಟ ಯಶಸ್ವಿಯಾಗಬೇಕು ಎಂದು ಜಿಲ್ಲಾಡಳಿತ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಹಲವು ದಿನಗಳಿಂದ ಓಡಾಡಿದ್ದರು. ಅವರ ಪ್ರಯತ್ನ ಫಲನೀಡಿ, ಕ್ರೀಡಾಕೂಟ ಯಶಸ್ವಿಯಾಯಿತು. ಆದರೆ ನಮ್ಮ ಕ್ರೀಡಾ ಪ್ರೇಮದ ಬಗ್ಗೆ ಬೇಸರ ಮೂಡಿಸುವಂಥ ಒಂದೆಡರು ವಿಚಾರಗಳೂ ನಡೆದು ಹೋದವು.

ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ. ಜತೆಗೆ ಮಕ್ಕಳಲ್ಲಿ ಶಿಸ್ತು ಸಹ ಮೂಡಿಸುತ್ತದೆ ಎಂಬ ಮಾತಿದೆ. ನಾವು ಹಾಗೆ ನಂಬಿದ್ದೇವೆ. ಆದರೆ ಶಿಸ್ತು ಎಂಬುದು ಕ್ರೀಡಾಕೂಟದಲ್ಲಿ ಮಾಯವಾಗಿತ್ತು. ಇದಕ್ಕೆ ಕಾರಣ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಕ್ರೀಡಾಕೂಟದ ಮೊದಲ ದಿನ ನಡೆದ ಪಥಸಂಚಲನ ನಮ್ಮ ಕ್ರೀಡಾಪಟುಗಳು ಹಾಗೂ ವ್ಯವಸ್ಥೆಯಲ್ಲಿದ್ದ ಅಶಿಸ್ತು ಎತ್ತಿ ತೋರಿಸಿತು.

ಕೂಟದಲ್ಲಿ ಪಾಲ್ಗೊಂಡಿದ್ದ ಎಂಟು ಜಿಲ್ಲೆಗಳಲ್ಲಿ (ಹಾಸನ ಸೇರಿ) ಆರು ಜಿಲ್ಲೆಗಳ ಕ್ರೀಡಾಪಟುಗಳಲ್ಲಿ ಟ್ರ್ಯಾಕ್ ಸೂಟ್ ಇರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಕ್ರೀಡಾಪಟುಗಳು ಪೂರ್ತಿ ಟ್ರ್ಯಾಕ್‌ಸೂಟ್ ಧರಿಸಿ ಶಿಸ್ತಿನಿಂದ ಪಥಸಂಚಲನ ನಡೆಸಿದರೆ, ಬೇರೆ ಯಾರಲ್ಲೂ ಈ ಶಿಸ್ತು ಕಾಣಲಿಲ್ಲ. ವಿಭಾಗಮಟ್ಟದಲ್ಲಿ ಗೆದ್ದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಳೆ ಇವರಲ್ಲಿ ಕೆಲವರು ರಾಜ್ಯವನ್ನು ಪ್ರತಿನಿಧಿಸಬಹುದು.

ಇಂಥ ಕ್ರೀಡಾ ಪಟುಗಳಲ್ಲಿ ಕೆಲವರು ಬರ್ಮುಡಾ ಚಡ್ಡಿ ಹಾಗೂ ಹವಾಯಿ ಚಪ್ಪಲ್ ಧರಿಸಿ ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಸಿದರು. ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ ಕೆಲವು ಕ್ರೀಡಾಪಟುಗಳು ಪಥಸಂಚಲನಕ್ಕೂ ಬಂದಿಲ್ಲ. `ಮಾನ ಕಾಪಾಡಬೇಕಲ್ಲ ಎಂದು ಕೆಲವು ಶಾಲಾ ಮಕ್ಕಳನ್ನು ಕರೆಸಿ ಪಥ ಸಂಚಲನದಲ್ಲಿ ಸೇರಿಸಿದೆವು~ ಎಂದು ಇಲಾಖೆಯ ಅಧಿಕಾರಿಗಳು ನುಡಿಯುತ್ತಾರೆ. ಸಮಯಕ್ಕೆ ಸರಿಯಾಗಿ ಕ್ರೀಡಾಪಟುಗಳು ಬಾರದೆ ಅನೇಕ ಕ್ರೀಡೆಗಳು ಒಂದೆರಡು ತಾಸು ತಡವಾಗಿದ್ದೂ ಇದೆ. ಇದೆಂಥ ಶಿಸ್ತು?.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅನೇಕ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್, ಬೂಟುಗಳನ್ನು ಹೊಂದಿಸುವಷ್ಟು ದುಡ್ಡು ಇರುವುದಿಲ್ಲ. ಇದು ನಮ್ಮ ಕ್ರೀಡಾ ಕ್ಷೇತ್ರದ ಕಟು ವಾಸ್ತವ. ಆದರೆ ಜಿಲ್ಲಾ ಪಂಚಾಯಿತಿ, ನಗರಸಭೆಗಳಿಲ್ಲವೇ? ಅಲ್ಲಿ ಕ್ರೀಡೆಗಾಗಿಯೇ ಒಂದಿಷ್ಟು ಹಣ ಮೀಸಲಿಟ್ಟಿರುತ್ತಾರೆ. ಆ ಹಣವನ್ನೇಕೆ ಬಳಸಬಾರದು?

ದಕ್ಷಿಣ ಕನ್ನಡ ಜಿಲ್ಲೆಯವರು ಮಾಡಿದ್ದು ಇದನ್ನೇ. ಅಲ್ಲಿಯ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಇದನ್ನು ಸ್ಪಷ್ಟಪಡಿಸಿದ್ದಾರೆ. `ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಆಯ್ಕೆ ಮಾಡಿದ ಕೂಡಲೇ ನಾವು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದು ಕ್ರೀಡಾಪಟುಗಳಿಗೆ ಟ್ರ್ಯಾಕ್ ಸೂಟ್ ಹಾಗೂ ಬೂಟ್ ಕೊಡಿಸುವಂತೆ ಮನವಿ ಮಾಡಿದೆವು. ಮರುಮಾತಿಲ್ಲದೆ ಒಂದೇ ವಾರದಲ್ಲಿ ಜಿಲ್ಲಾ ಪಂಚಾಯಿತಿಯವರು ಈ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ~ ಎಂದು ಅವರು ನುಡಿದರು. ಹಾಸನದಲ್ಲಿ ಇದು ಅಸಾಧ್ಯವೇ ?

ಹೆಚ್ಚೆಂದರೆ ಒಂದು ಸಾವಿರ ರೂಪಾಯಿಯಲ್ಲಿ ಒಬ್ಬ ಕ್ರೀಡಾಪಟುವಿಗೆ ಟ್ರ್ಯಾಕ್ಸ್, ಶೂಸ್ ಒದಗಿಸಬಹುದು. ಇಷ್ಟು ಸಾಮರ್ಥ್ಯ ಹಾಸನ ಜಿಲ್ಲೆಗೆ ಇರಲಿಲ್ಲವೇ? `ಮುಂದಿನ ಬಾರಿ ನಮ್ಮ  ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ~ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ್ ಮೊದಲ ದಿನವೇ ನುಡಿದುಬಿಟ್ಟರು.

ನಗರಸಭೆಯಲ್ಲಿ ಕ್ರೀಡೆಗಾಗಿಯೇ ಒಂದಿಷ್ಟು ಬಜೆಟ್ ಇರುತ್ತದೆ. ಯಾವ್ಯಾವುದೋ ಸಂಘಟನೆಗಳು ಕ್ರೀಡಾಕೂಟ ಆಯೋಜಿಸುತ್ತೇವೆ ಎಂದು ಈ ಹಣ ಪಡೆಯುತ್ತವೆ. ನಮ್ಮ ಜಿಲ್ಲಾ ಪಂಚಾಯಿತಿ, ನಗರಸಭೆಗಳು ಯುವ, ಅರ್ಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.

ಪ್ಯಾರಾ ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದು ಬಂದ ಹಾಸನ ಜಿಲ್ಲೆಯ ಗಿರೀಶ್, ಲಂಡನ್‌ಗೆ ಹೋಗುವ ಮುಂಚೆ ನಗರದ ವಿವಿಧ ಶಾಲಾ ಕಾಲೇಜುಗಳಿಂದ ಆರ್ಥಿಕ ಸಹಾಯ ಪಡೆದು ಹೋಗಿದ್ದರು. ಮಕ್ಕಳು 10-20  ರೂಪಾಯಿ ನೀಡಿ ಶುಭ ಹಾರೈಸಿದ್ದರು. ಅನೇಕ ದಾನಿಗಳು ನೆರವು ನೀಡಿದ್ದರು. ಇಂಥ ಅನೇಕ ಕ್ರೀಡಾಪಟುಗಳಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಎಲ್ಲರೂ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT