ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಕನಸು ಸದಾ ಕಾಡುತ್ತಿರಲಿ

Last Updated 13 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಬೆಳಗಾವಿ: “ನೀವು ಕಾಣುವ `ಸಾಧನೆಯ ಕನಸು~ ಸದಾ ನಿಮ್ಮನ್ನು ಕಾಡುತ್ತಿರಬೇಕು. ಆಗ ಮಾತ್ರ ನೀವು ಗುರಿಯನ್ನು ತಲುಪಲು ಸಾಧ್ಯ” ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರದಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ `ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಟೆನಿಸ್ ಟೂರ್ನಿ~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

“ಯಾರೋ ನಿಮಗೆ ಪ್ರೇರಣೆ ನೀಡಬೇಕು ಎಂದು ಕಾಯಬಾರದು. ನಿಮಗೆ ನೀವೇ ಪ್ರೇರಣೆಯಾಗಬೇಕು. ಸಚಿನ್ ತೆಂಡೂಲ್ಕರ್ ಆಗುವುದು ನಿಮ್ಮ ಗುರಿ ಆಗಬಾರದು. ಸಚಿನ್‌ಗಿಂತಲೂ ಹೆಚ್ಚು ಸಾಧನೆ ಮಾಡುವುದೇ ನಿಮ್ಮ ಧ್ಯೇಯವಾಗಬೇಕು” ಎಂದು ಸಲಹೆ ನೀಡಿದರು.

“ಜೀವನದಲ್ಲಿ ಏಳು- ಬೀಳು ಸಹಜ. ಅದನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಪ್ರತಿಯೊಂದಕ್ಕೂ ಹಲವು ದಾರಿಗಳಿರುತ್ತವೆ. ಆದರೆ ಸರಿ ದಾರಿಯಲ್ಲಿ ಮುನ್ನಡೆಯುವುದು ಮುಖ್ಯ” ಎಂದು ಎಚ್ಚರಿಸಿದರು.

“ನಾನು ಹೀಗೆ ಮಾಡಿದ್ದೇನೆ ಎಂದು ಮಾತನಾಡಬೇಕಾಗಿಲ್ಲ. ಅದರ ಬದಲು ನಿಮ್ಮ ಸಾಧನೆಯೇ ಮಾತನಾಡಬೇಕು. ನೀವು ಪಠ್ಯ ಹಾಗೂ ಕ್ರೀಡೆ ಎರಡರಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು” ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಸಂಸದ ಸುರೇಶ ಅಂಗಡಿ, “ಯಾವುದೇ ರಾಜಕೀಯ ಮುಖಂಡರಿಂದ ದೇಶದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಎಂಜಿನಿಯರ್‌ಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ನೀವು ಕಲಿಯಲು ಅಗತ್ಯ ಬಿದ್ದರೆ ವಿದೇಶಗಳಿಗೆ ಹೋಗಿ. ಆದರೆ, ನಿಮ್ಮ ಸೇವೆ ಮಾತ್ರ ಮಾತೃ ದೇಶಕ್ಕೇ ಸಿಗಬೇಕು” ಎಂದು ಹೇಳಿದರು.

“ಕರ್ನಾಟಕವು `ಜ್ಞಾನ ಕೇಂದ್ರ~ ಎಂಬ ಖ್ಯಾತಿ ಪಡೆದಿದೆ. ಆದರೆ, ರಾಜಕೀಯ ನಾಯಕರ ಪರಸ್ಪರ ಕೆಸರು ಎರಚಾಟದಿಂದಾಗಿ ರಾಜ್ಯದ ಹೆಸರು ಹಾಳಾಗುತ್ತಿರುವುದು ದುರದೃಷ್ಟಕರ” ಎಂದು ಹೇಳಿದರು.

“ಆರೋಗ್ಯಪೂರ್ಣ ಯುವಕರಿಂದ ಸದೃಢ ರಾಷ್ಟ್ರ ನಿರ್ಮಾಣವಾಗುತ್ತದೆ. ನಾವು ಆರೋಗ್ಯದಿಂದ ಇದ್ದಾಗ ಮಾತ್ರ ನಮ್ಮ ಜ್ಞಾನ, ಸಂಪತ್ತು ಬಳಸಿಕೊಳ್ಳಲು ಸಾಧ್ಯ. ಕ್ರೀಡೆಯಿಂದ ನಮಗೆ ಉತ್ತಮ ಆರೋಗ್ಯ ಸಿಗುತ್ತದೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಚ್. ಮಹೇಶಪ್ಪ, ವಿಟಿಯು ಕ್ರೀಡಾ ಸಾಧನೆಗಳನ್ನು ವಿವರಿಸಿದರು. ಪ್ರೊ. ಎಂ.ಆರ್. ಹೊಳ್ಳ, ಕುಲಸಚಿವ (ಮೌಲ್ಯಮಾಪನ) ಡಾ. ಜೆ.ಎಂ. ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ರಾಮಚಂದ್ರ ಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಚ್. ರಂಗನಾಥ ಹಾಜರಿದ್ದರು. ಕುಲಸಚಿವ ಡಾ. ಎಸ್.ಎ. ಕೋರಿ ಸ್ವಾಗತಿಸಿದರು.

ಸತ್ಕಾರ: 2010-11ನೇ ಸಾಲಿನಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 93 ಕ್ರೀಡಾಪಟುಗಳಿಗೆ ಕ್ಯಾಶ್ ಪ್ರೈಸ್ ಹಾಗೂ 200 ಕ್ರೀಡಾಪಟುಗಳಿಗೆ ಬ್ಲೇಜರ್ (ಯುನಿವರ್ಸಿಟಿ ಬ್ಲೂ) ನೀಡಿ ಗೌರವಿಸಲಾಯಿತು. ಅಂತರ ವಿಶ್ವವಿದ್ಯಾಲಯಗಳ ಈಜು ಸ್ಪರ್ಧೆಯಲ್ಲಿ 9 ಚಿನ್ನ, 2 ಕಂಚಿನ ಪದಕ ಪಡೆದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪೂಜಾ ಆರ್. ಆಳ್ವ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದ ಮೊದಲ ಐದು ತಾಂತ್ರಿಕ ಕಾಲೇಜುಗಳಾದ ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಬೆಂಗಳೂರಿನ ಆರ್.ಎನ್.ಎಸ್. ತಾಂತ್ರಿಕ ಕಾಲೇಜು, ಬೆಂಗಳೂರಿನ ಎಸ್.ಜೆ.ಬಿ. ತಾಂತ್ರಿಕ ಕಾಲೇಜು, ಬೆಂಗಳೂರಿನ ಸಹ್ಯಾದ್ರಿ ತಾಂತ್ರಿಕ ಕಾಲೇಜು, ಬೆಂಗಳೂರಿನ ಬಿ.ಎನ್.ಎಂ. ತಾಂತ್ರಿಕ ಕಾಲೇಜುಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನವನ್ನು ವಿತರಿಸಲಾಯಿತು. ನಂತರದ ಐದು ತಾಂತ್ರಿಕ ಕಾಲೇಜುಗಳಿಗೆ ತಲಾ 50 ಸಾವಿರ ರೂಪಾಯಿ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT