ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಯಲ್ಲಿ...!

Last Updated 2 ಜನವರಿ 2012, 7:50 IST
ಅಕ್ಷರ ಗಾತ್ರ

`ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು~ ಎಂಬ ಗಾದೆಗೆ ಅನ್ವರ್ಥಕವಾಗುವಂಥ ಬಾಲಕಿ ಹುಬ್ಬಳ್ಳಿಯಲ್ಲಿದ್ದಾಳೆ. ಅಜ್ಜ ತಮ್ಮ ಮಗಳಿಗಾಗಿ ಕಟ್ಟಿಸಿದ ಈಜುಗೊಳದಲ್ಲಿ ಮೊಮ್ಮಗಳು ಸಾಧನೆ ಶಿಖರವನ್ನು ಏರುವುದನ್ನು ನೋಡಿದಾಗ ಅಜ್ಜನಿಗೆ ಭಾರಿ ಸಂಭ್ರಮ...!

ಹುಬ್ಬಳ್ಳಿ ಭೈರಿದೇವರಕೊಪ್ಪದ ಸನಾ ಕಾನ್ವೆಂಟ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ರುತ್ವಿಕಾ ಎಂ.ಹುಲ್ಲೂರ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡುತ್ತಿರುವ ಬಾಲಕಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಹಲವು ಸಾಧನೆಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾಳೆ.

ಮೈಸೂರು ದಸರಾದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಈಜುಕೂಟದಲ್ಲಿ ನಾಲ್ಕು ಬಾರಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಲ್ಲದೇ ಕಳೆದ       ನವೆಂಬರ್‌ನಲ್ಲಿ ಪಣಜಿಯಲ್ಲಿ ನಡೆದ ಅಖಿಲ ಭಾರತ ಶಾಲಾ ಮಕ್ಕಳ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ  400 ಮೀಟರ್ ಫ್ರೀಸ್ಟೈಲ್‌ನಲ್ಲಿ 5ನೇ ಹಾಗೂ 200 ಮೀ. ಬಟರ್‌ಫ್ಲೈನಲ್ಲಿ 6ನೇ ಸ್ಥಾನ ಪಡೆದಿದ್ದಾಳೆ.

ಈಕೆಯ ಸಾಧನೆಯ ಕಥೆ ಹೇಳುವುದಕ್ಕಿಂತ ಆಕೆ ಜಯಿಸಿದ ಪದಕಗಳೇ ಇದಕ್ಕೆ ಸಾಕ್ಷಿ ನುಡಿಯುತ್ತವೆ. ಇಲ್ಲಿಯವರೆಗೆ 124 ಚಿನ್ನ, 96 ಬೆಳ್ಳಿ ಹಾಗೂ 29 ಕಂಚಿನ ಪದಕ ಜಯಿಸಿರುವುದು ಈಕೆಯ ಶ್ರಮಕ್ಕೆ ಹಿಡಿದ ಕನ್ನಡಿ.

ಈ ಬಾಲಕಿ ಈಜಿನಲ್ಲಿ ಈ ಮಟ್ಟಕ್ಕೆ ಬರಲು ಒಂದು ಪ್ರಮುಖ ಕಾರಣವೂ ಇದೆ. ಅವರ ಅಜ್ಜ (ತಾಯಿಯ ತಂದೆ) ಶಿವಪ್ಪ ಕೋಟಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಯಾಗಿದ್ದರು. ಅವರಿಗೆ ಕ್ರೀಡೆಯೆಂದರೆ ವಿಪರೀತ ಆಸಕ್ತಿ.

ಆದ್ದರಿಂದಲೇ ಅವರ ಮಗಳು ಶೈಲಜಾ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಟ್ಟರು. ಅದನ್ನು ಸಮರ್ಥವಾಗಿ ಬಳಸಿಕೊಂಡ ಶೈಲಜಾ 1986ರಿಂದ 1996ರವರೆಗೆ ಹಲವು ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ನಂತರದ ಸರದಿ ಮೊಮ್ಮಗಳು ರುತಿಕಾಳದ್ದು. ಮಗಳಂತೆಯೇ ಮೊಮ್ಮಗಳೂ ಈಜುವಿನಲ್ಲಿ ಸಾಧನೆ ಮಾಡಬೇಕು ಎಂದು ಬಯಸಿದ ಶಿವಪ್ಪ ತಮ್ಮ ಮನೆಯ ಬಳಿ ಈಜುಗೊಳವನ್ನು ನಿರ್ಮಿಸಿದರು! 

ಇದಕ್ಕೆ ಶಿವಗಿರಿ ಸೋಷಿಯಲ್ ಕ್ಲಬ್ ಎಂದು ಹೆಸರಿಡಲಾಗಿದೆ. ಈಜುವಿನಲ್ಲಿ ಆಸಕ್ತಿ ಇರುವ ಇತರ ಮಕ್ಕಳಿಗೂ ಅವಕಾಶ ಕಲ್ಪಿಸಿದರು. ವಿಶೇಷವಾಗಿ ರುತ್ವಿಕಾಗೆ ಕೇರಳದಿಂದ ತರಬೇತುದಾರ ಎ.ಜಿ.ರಂಜಿತ್ ಅವರನ್ನು ಕೆರೆಯಿಸಿ ತರಬೇತಿ ಕೊಡಿಸಲಾಗುತ್ತಿದೆ. 

ಪ್ರತಿದಿನ ಬೆಳಿಗ್ಗೆ  ನಾಲ್ಕು ಹಾಗೂ ಸಂಜೆ ನಾಲ್ಕು ಗಂಟೆ ಈಜುಕೊಳದಲ್ಲಿ ಮೀನಿನಂತೆ ಈಜಾಡುತ್ತಾಳೆ. ಈ ಬಾಲಕಿಗೆ ಪ್ರೋತ್ಸಾಹ ನೀಡಿದವರು, ಇವರ ಸೋದರ ಮಾವ ದಯಾನಂದ ಕೋಟಿ ಹಾಗೂ ಸನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ಜಿ.ಚನ್ನಳ್ಳಿ.
ಸಾಧನೆಯ ಹಾದಿ:  `ಎಲ್‌ಕೆಜಿ ಓದುತ್ತಿರುವಾಗಲೇ ಅಂದರೆ ಐದನೇ ವಯಸ್ಸಿನಿಂದ ಈಜುವಿನಲ್ಲಿ ಆಸಕ್ತಿ ಬೆಳೆಸಿಕೊಂಡ ಈ ಬಾಲೆಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆದ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸಿದವು.

`ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯು 2009ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 35ನೇ ಮಹಿಳೆಯರ ರಾಷ್ಟ್ರೀಯ ಕ್ರೀಡಾ ಉತ್ಸವ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಖ್ಯಾತ ಅಂತರರಾಷ್ಟ್ರೀಯ ಈಜು ಪಟು ರಿಚಾ ಮಿಶ್ರಾ ಅವರೊಂದಿಗೆ ಈಜುವಿನಲ್ಲಿ ಭಾಗವಹಿಸಿದ್ದು ನೆನಪಿನ ಬುತ್ತಿಯಿಂದ ಎಂದಿಗೂ ಬತ್ತುವುದಿಲ್ಲ~ ಎಂದು ರುತ್ವಿಕಾ ನೆನಪಿಸಿಕೊಳ್ಳುತ್ತಾರೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದ ಪದಕಗಳ ಪಟ್ಟಿಯೂ ದೊಡ್ಡದೇ. ಕಳೆದ ಫೆಬ್ರುವರಿಯಲ್ಲಿ ಕೇರಳದಲ್ಲಿ ನಡೆದ 24ನೇ ದಕ್ಷಿಣ ವಲಯ ಮಟ್ಟದ ಈಜು ಚಾಂಪಿಯನ್‌ಷಿಪ್‌ನಲ್ಲಿ 4್ಡ50 ಮೀ. ಫ್ರೀಸ್ಟೈಲ್‌ನಲ್ಲಿ ಪ್ರಥಮ ಸ್ಥಾನ, 4್ಡ50 ಮೀ. ಮೆಡ್ಲೆ ರಿಲೇಯಲ್ಲಿ ದ್ವಿತೀಯ ಸ್ಥಾನ, ಬೆಂಗಳೂರಿನಲ್ಲಿ 2010ರ ಜುಲೈನಲ್ಲಿ ಭಾರತೀಯ ಈಜು ಫೆಡರೇಷನ್ ಹಮ್ಮಿಕೊಂಡಿದ್ದ 27ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ 50 ಮೀ. ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.

`ಕರ್ನಾಟಕ ರಾಜ್ಯ ಈಜು ಸಂಸ್ಥೆ~ ಆಯೋಜಿಸಿದ್ದ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ 100 ಮೀ. ಫ್ರೀಸ್ಟೈಲ್‌ನಲ್ಲಿ ಪ್ರಥಮ, 50 ಮೀ. ಬಟರ್‌ಫ್ಲೈನಲ್ಲಿ ದ್ವಿತೀಯ ಪಡೆದಿದ್ದಾಳೆ. ನಾಲ್ಕು ಸಲ ದಸರಾ ಕ್ರೀಡಾಕೂಟದ ಸ್ಪರ್ಧೆಯಲ್ಲಿ ತನ್ನ `ಖ್ಯಾತಿ~ಗೆ ತಕ್ಕ ಪ್ರದರ್ಶನವನ್ನೇ ನೀಡಿ ಸೈ ಎನಿಸಿಕೊಂಡಿದ್ದಾಳೆ. ಅಲ್ಲದೇ ಧಾರವಾಡದಲ್ಲಿ ನಡೆದ ವಿಭಾಗೀಯ ದಸರಾ ಸ್ಪರ್ಧೆಯಲ್ಲಿ 200 ಮೀ., 100 ಮೀ., 400 ಮೀ. ಫ್ರಿಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಈಜು ಚಾಂಪಿಯನ್‌ಷಿಪ್‌ಗಳಲ್ಲಿ 11 ಚಿನ್ನದ ಪದಕ ಹಾಗೂ ಜಿಲ್ಲಾ ಮಟ್ಟದ ದಸರಾ ಉತ್ಸವದಲ್ಲಿ 11 ಚಿನ್ನದ ಪದಕ ಜಯಿಸಿದ ರುತ್ವಿಕಾ ರಾಜ್ಯದ, ರಾಷ್ಟ್ರದ ಭರವಸೆಯ ಈಜುಗಾರ್ತಿಯಾಗುವತ್ತ  ಗಮನ ನೆಟ್ಟಿದ್ದಾರೆ.

`ಈಜುವಿನಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಗುರಿ ನನ್ನದು. ಇದರಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಬೇಕೆನ್ನುವುದು ಆಸೆ ಹೊಂದಿದ್ದೇನೆ~ ಎನ್ನುವ ಅಭಿಪ್ರಾಯವನ್ನು ರುತ್ವಿಕಾ ವ್ಯಕ್ತಪಡಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT