ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯ ಆಚರಣೆಗೆ ತರಲು ಸಲಹೆ

Last Updated 6 ಜನವರಿ 2012, 8:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಮಾಜಿಕ ಸಮಾನತೆ, ನ್ಯಾಯ ಆಚರಣೆಗೆ ತಂದರೆ ಮಾತ್ರ ನಿಜವಾದ ಅರ್ಥ ದೊರೆಯುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ ಅಭಿಪ್ರಾಯಪಟ್ಟರು.

ಬಸವ ಕೇಂದ್ರ, ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಒಂಬತ್ತು ಜೋಡಿ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯ ಮಾತಿನಿಂದ ದೊರೆಯುವುದಿಲ್ಲ. ಅದನ್ನು ಸ್ವತಃ ಆಚರಣೆಗೆ ತರಬೇಕು. ಸರ್ಕಾರ, ಕಾನೂನು, ನೀತಿ-ನಿಯಮಗಳನ್ನು ಈ ಬಗ್ಗೆ ಜಾರಿಗೆ ತಂದರೂ ಅದು ವ್ಯಕ್ತಿಗತವಾಗಿ ನಂತರ ಸಾಮೂಹಿಕವಾಗಿ ಕಾರ್ಯ ಸಾಧನೆಯಾದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಒಂದು ವರ್ಗಕ್ಕೆ, ಜಾತಿಗೆ ಸೀಮಿತವಾಗದೆ ಮುರುಘಾಮಠದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಎಲ್ಲವನ್ನು ಮೀರಿ ಜಾತ್ಯತೀತ ಮನೋಭಾವದಿಂದ ಎಲ್ಲರು ಒಂದಾಗಿ ಇಲ್ಲಿ ತಮ್ಮ ಬದುಕಿನ ಮಹತ್ತರ ಘಟ್ಟಕ್ಕೆ ಸಾಕ್ಷಿಯಾಗಿರುವುದು ಸಮಾನತೆಯ ಸಂಕೇತ.

ಶೋಷಿತ ಮತ್ತು ತಳಸಮುದಾಯಗಳಿಗೆ ಶರಣರು ಧಾರ್ಮಿಕ ನಾಯಕತ್ವವನ್ನು ನೀಡಿ ಅವರ ಏಳ್ಗೆಗೂ ಸಹ ಮುಂದಾಗಿರುವುದು ಬರೀ ಮಾತಲ್ಲ; ನಡೆಯೇ ಆಗಿದೆ. ಇದು ಇತಿಹಾಸ ಎಂದರೆ ತಪ್ಪಾಗಲಾರದು. ಬಡ ಕುಟುಂಬಗಳು ಇಂದು ಮದುವೆಗೆ ಹೆದರುತ್ತಿವೆ. ಅವರಿಗೆಲ್ಲ ಇದೊಂದು ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸ್ತ್ರೀಯರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಲೆ ಎತ್ತಿ ಬದುಕು ಸಾಗಿಸಲು ಇದುವರೆಗೂ ಆಗಿಲ್ಲ. ಲಿಂಗಬೇಧವಿಲ್ಲದೆ ಎಲ್ಲರೂ ಸಮನಾಗಿ ಬದುಕುವ ಅವಕಾಶ ಒದಗಿಸಬೇಕು ಎಂದರು.

ಪ್ರತಿಯೊಬ್ಬರೂ ಕಾಯಕಶೀಲರಾಗಿ ಪ್ರಗತಿ ಸಾಧಿಸಬೇಕು. ಸೋಮಾರಿತನದಿಂದ ನಾವು ದುರ್ಬಲರಾಗಿ ಅದು ಬೇಡುವ ಸ್ಥಿತಿಗೆ ತಳ್ಳುತ್ತದೆ. ಅದು ನಿರಭಿಮಾನವುಳ್ಳದ್ದು. 12ನೇ ಶತಮಾನದಲ್ಲಿ ದುಡಿಮೆ ನಂಬಿ ನಡೆದ ಕಾರಣ ಅಲ್ಲಿ ಬೇಡುವ ಪ್ರಸಂಗವಿರಲಿಲ್ಲ. ಅಲ್ಲಿ ಎಲ್ಲರೂ ಕೊಡುವವರೇ ಇದ್ದರು. ಕಾಯಕ ಸಂಸ್ಕತಿಯನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಕಾರಣಾರಾಗಬೇಕು ಎಂದು ಸಲಹೆ ನೀಡಿದರು.

ಕಡೂರು ಶಾಸಕರಾದ ಡಾ.ವೈ.ಸಿ. ವಿಶ್ವನಾಥ್ ಅವರು, ನೂರು ಅಡಿ ಬಸವೇಶ್ವರ ಏಕಶಿಲಾ ಮೂರ್ತಿಗೆ ಐವತ್ತು ಸಾವಿರ ರೂಪಾಯಿದೇಣಿಗೆ ನೀಡುವುದಾಗಿ ಪ್ರಕಟಿಸಿದರು.

ವೀರಶೈವ ಸಮಾಜದ ಅಧ್ಯಕ್ಷ ಕೆ.ಆರ್. ಶಿವಪ್ರಕಾಶ್, ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಸುಂ. ಶಿ. ಬದರಿನಾಥ್ ಅವರು ನೂತನ ದಂಪತಿಗಳಿಗೆ ಬಟ್ಟೆ ವಿತರಿಸಿದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಕರಿಸಿದ್ದೇಶ್ವರ ಸ್ವಾಮಿ ಸ್ವಾಗತಿಸಿದರು. ಡಾ. ಜಯಣ್ಣ ಕಾರ್ಯಕ್ರಮ ನಿರೂಪಿಸಿದರು.

ಜಿ.ಪಂ. ಉಪಾಧ್ಯಕ್ಷರ ರಾಜೀನಾಮೆ
ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವಿಜಯಮ್ಮ ಎಂ. ಜಯಣ್ಣ ಕೊನೆಗೂ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.

ವಿಜಯಮ್ಮ ಅವರು ಅಧ್ಯಕ್ಷ ಸಿ. ಮಹಾಲಿಂಗಪ್ಪ ಅವರಿಗೆ ಜ. 2ರಂದು ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಸ್ವಇಚ್ಛೆಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ವಿಜಯಮ್ಮ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT